AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IT Raid: ಖಾಸಗಿ ಆಸ್ಪತ್ರೆ ಮಾಲೀಕರಿಗೆ ಐಟಿ ಶಾಕ್​ ಟ್ರೀಟ್​ಮೆಂಟ್, ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ದಾಳಿ​

IT Department: ಹಲವು ಖಾಸಗಿ ಅಸ್ಪತ್ರೆ, ಮೆಡಿಕಲ್​ ಕಾಲೇಜ್​ ಮಾಲೀಕರು ತೆರಿಗೆ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದ್ದು, ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಮಾಲೀಕರ ಮನೆ, ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಕಡತ ಪರಿಶೀಲನೆ ನಡೆಸುತ್ತಿದ್ದಾರೆ.

IT Raid: ಖಾಸಗಿ ಆಸ್ಪತ್ರೆ ಮಾಲೀಕರಿಗೆ ಐಟಿ ಶಾಕ್​ ಟ್ರೀಟ್​ಮೆಂಟ್, ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ದಾಳಿ​
ಸಾಂದರ್ಭಿಕ ಚಿತ್ರ
Skanda
|

Updated on:Feb 17, 2021 | 1:03 PM

Share

ಕೊರೊನಾ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ಸಾಕಷ್ಟು ಅವ್ಯವಹಾರ ನಡೆಸಿವೆ, ಬೆಡ್​ ಲೆಕ್ಕಾಚಾರ, ಆಸ್ಪತ್ರೆ ಬಿಲ್​ ಲೆಕ್ಕಾಚಾರ ಎಲ್ಲದರಲ್ಲೂ ಭಾರೀ ವ್ಯತ್ಯಾಸ ಕಂಡುಬಂದಿದೆ ಜೊತೆಗೆ ಮೆಡಿಕಲ್​ ವಿದ್ಯಾರ್ಥಿಗಳಿಂದ ಹಣ ಪಡೆದಿರುವುದರಲ್ಲೂ ಗೋಲ್​ಮಾಲ್​ ಕಾಣಿಸಿದೆ ಎಂಬ ಕಾರಣಕ್ಕೆ ಐಟಿ ಅಧಿಕಾರಿಗಳು ರಾಜ್ಯದ ವಿವಿಧೆಡೆಯ ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್​ ಕಾಲೇಜುಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ತನಿಖೆ ನಡೆಸುತ್ತಿದ್ದಾರೆ. ಹಲವು ಖಾಸಗಿ ಅಸ್ಪತ್ರೆ, ಮೆಡಿಕಲ್​ ಕಾಲೇಜ್​ ಮಾಲೀಕರು ತೆರಿಗೆ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದ್ದು, ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಮಾಲೀಕರ ಮನೆ, ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಕಡತ ಪರಿಶೀಲನೆ ನಡೆಸುತ್ತಿದ್ದಾರೆ.

ಯಾವ ಯಾವ ಊರುಗಳಲ್ಲಿ ದಾಳಿ? ದಾವಣಗೆರೆ: ಆರು ಜನ ಇಡಿ ಅಧಿಕಾರಿಗಳ ತಂಡ ದಾವಣಗೆರೆಯ ಜೆಜೆಎಂ, ಎಸ್ಎಸ್ ಮೆಡಿಕಲ್ ಕಾಲೇಜ್ ಹಾಗೂ ಬಾಪೂಜಿ ಡೆಂಟಲ್ ಕಾಲೇಜ್​ಗಳಲ್ಲಿ ಕಡತ ಪರಿಶೀಲನೆ ನಡೆಸಿದೆ. ವಿದ್ಯಾರ್ಥಿಗಳು ಪಾವತಿಸಿದ ಪ್ರವೇಶ ಶುಲ್ಕ, ಕಾಲೇಜ್ ಆಡಳಿತ ಮಂಡಳಿ ಸಂಗ್ರಹಿಸಿದ ಶುಲ್ಕ ಮತ್ತು ಸರ್ಕಾರ ನಿಗದಿ‌ ಮಾಡಿದ ಶುಲ್ಕದ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಆದಾಯ ತೆರಿಗೆ ಅಧಿಕಾರಿಗಳು, ಕೆಲ ವಿದ್ಯಾರ್ಥಿಗಳನ್ನು ಅನಿರೀಕ್ಷಿತವಾಗಿ ಭೇಟಿ ಮಾಡಿ ವಿವರಣೆಯನ್ನೂ ಪಡೆದಿದ್ದಾರೆ. ಈ ತಂಡದಲ್ಲಿ ಗೋವಾ ಹಾಗೂ ಬೆಳಗಾವಿಯಿಂದ ಬಂದ ಇಡಿ ಅಧಿಕಾರಿಗಳಿದ್ದು, ಕಡತ ಪರಿಶೀಲನೆ ಮಾಡುತ್ತಿದ್ದಾರೆ.

ತುಮಕೂರು: ಇಲ್ಲಿನ ಎಂ.ಜಿ.ರಸ್ತೆಯಲ್ಲಿರುವ ಶ್ರೀದೇವಿ ಆಸ್ಪತ್ರೆ ಹಾಗೂ ಶ್ರೀದೇವಿ ಮೆಡಿಕಲ್ ಕಾಲೇಜಿನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೊತೆಗೆ ಸಂಸ್ಥೆಗಳ ಮಾಲೀಕ, ಬಿಜೆಪಿ ಮುಖಂಡ ಹುಲಿನಾಯ್ಕರ್‌ ಅವರ ಸೋಮೇಶ್ವರದ ನಿವಾಸ ಹಾಗೂ ಅವರ ಆಪ್ತರು, ವಕೀಲರು, ಸಂಬಂಧಿಕರ ಮನೆ ಸೇರಿದಂತೆ ಒಟ್ಟು 9 ಕಡೆ ಪರಿಶೀಲನೆ ನಡೆಸಿದ್ದಾರೆ. ಆಸ್ತಿ ಮೂಲಗಳ ಬಗ್ಗೆ ಕೆದಕಿರುವ ಅಧಿಕಾರಿಗಳು ಇಲ್ಲಿಯೂ ವಿದ್ಯಾರ್ಥಿಗಳು ಶುಲ್ಕ ಕಟ್ಟಿದ ದಾಖಲೆ ಪರಿಶೀಲಿಸಿದ್ದಾರೆ. ಮೆಡಿಕಲ್, ಪ್ಯಾರಮೆಡಿಕಲ್, ನರ್ಸಿಂಗ್, ಡಿಪ್ಲೊಮಾ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವಿದ್ಯಾರ್ಥಿಗಳ ಶುಲ್ಕದ ದಾಖಲೆಗಳನ್ನು ಪರಿಶೀಲಿಸಲಾಗಿದೆ.

ಬೆಂಗಳೂರು: ನೆಲಮಂಗಲದಲ್ಲಿರುವ ಸಪ್ತಗಿರಿ ಮೆಡಿಕಲ್ ಕಾಲೇಜು ಮಾಲೀಕ ದಯಾನಂದ್​ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಲ್ಲೇಶ್ವರಂನ 1ನೇ ಕ್ರಾಸ್​ನಲ್ಲಿರುವ ನಿವಾಸಕ್ಕೆ ಲಗ್ಗೆ ಇಟ್ಟಿರುವ ಅಧಿಕಾರಿಗಳು ಮನೆಯ ಇಂಚಿಂಚೂ ಪರಿಶೀಲಿಸಿದ್ದಾಗಿ ತಿಳಿದುಬಂದಿದೆ.

ದೇವನಹಳ್ಳಿಯಲ್ಲಿರುವ ಆಕಾಶ್ ಮೆಡಿಕಲ್ ಕಾಲೇಜು, ಆಸ್ಪತ್ರೆಗೆ 5 ಕಾರುಗಳಲ್ಲಿ ಬಂದಿರುವ 10 ಐಟಿ ಅಧಿಕಾರಿಗಳ ತಂಡ ಒಟ್ಟು 25 ಎಕರೆ ಪ್ರದೇಶದಲ್ಲಿರುವ ಆಕಾಶ್ ಆಸ್ಪತ್ರೆ, ಮೆಡಿಕಲ್ ಕಾಲೇಜು, ಶಾಲೆಯಲ್ಲಿ ಶೋಧಕಾರ್ಯ ಮುಂದುವರೆಸಿದ್ದಾರೆ. ಪೊಲೀಸ್ ಸಿಬ್ಬಂದಿಯನ್ನು ಕರೆದುಕೊಂಡು ಬಂದಿರುವ ಐಟಿ ಅಧಿಕಾರಿಗಳು ಆದಾಯದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ: ಕೆಂಗೇರಿ BGS ಶಿಕ್ಷಣ ಸಂಸ್ಥೆ, ಆಕಾಶ್​ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ

ಮಂಗಳೂರು: ನಗರದ ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜಿನ ಮೇಲೆ ಐಟಿ ದಾಳಿ ನಡೆದಿದೆ. ಕಣಚೂರು ಮೋನು ಮಾಲೀಕತ್ವದ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಪರಿಶೀಲಿಸಿರುವ ಅಧಿಕಾರಿಗಳು, ಅವರ ನಿವಾಸಕ್ಕೂ ತೆರಳಿ ತನಿಖೆ ಮಾಡಿದ್ದಾರೆ.

ಮಂಗಳೂರು ನಗರದ ಎ.ಜೆ.ಆಸ್ಪತ್ರೆಯ ಮಾಲೀಕ ಎ.ಜೆ.ಶೆಟ್ಟಿ ಅವರ ಮನೆಯ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು, ಬೆಂದೂರ್‌ವೆಲ್‌ನಲ್ಲಿರುವ ಮನೆಯಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಅಂತೆಯೇ, ಯೆನಪೋಯ ಆಸ್ಪತ್ರೆಯ ಮಾಲೀಕರ ಮನೆ ಮೇಲೆಯೂ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.

Published On - 12:51 pm, Wed, 17 February 21