AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರುಳಿನ ಕುಡಿಯನ್ನು ಬಟ್ಟೆಯಲ್ಲಿ ಸುತ್ತಿ.. ಗದಗ ಬಸ್​ ನಿಲ್ದಾಣದಲ್ಲಿ ಬಿಟ್ಟು ಹೋದ.. ಹೆತ್ತ ತಾಯಿ!

ಕರುಳಿನ ಕುಡಿಯನ್ನು ಬಟ್ಟೆಯಲ್ಲಿ ಸುತ್ತಿ.. ಗದಗ ಬಸ್​ ನಿಲ್ದಾಣದಲ್ಲಿ ಬಿಟ್ಟು ಹೋದ.. ಹೆತ್ತ ತಾಯಿ! ಈ ಮಗು ಅವಧಿಗಿಂತ ಒಂದು ತಿಂಗಳ ಮೊದಲು ಜನಿಸಿರಬಹುದು. ಹೀಗಾಗಿ ಮಗುವಿನ ತೂಕ ಸ್ವಲ್ಪ ಕಡಿಮೆ ಇದೆ. ಮಗು ಈಗ ಚೇತರಿಸಿಕೊಳ್ಳುತ್ತಿದೆ ಎಂದು ಜಿಮ್ಸ್ ನಿರ್ದೇಶಕ ಡಾ. ಪಿ. ಎಸ್. ಭೂಸರೆಡ್ಡಿ ಹೇಳಿದ್ದಾರೆ.

ಕರುಳಿನ ಕುಡಿಯನ್ನು ಬಟ್ಟೆಯಲ್ಲಿ ಸುತ್ತಿ.. ಗದಗ ಬಸ್​ ನಿಲ್ದಾಣದಲ್ಲಿ ಬಿಟ್ಟು ಹೋದ.. ಹೆತ್ತ ತಾಯಿ!
ಬಸ್​ ನಿಲ್ದಾಣದಲ್ಲಿ ಸಿಕ್ಕ ಮಗು
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Feb 17, 2021 | 12:35 PM

ಗದಗ: ಮಕ್ಕಳಿರಲವ್ವ ಮನೆ ತುಂಬ ಎನ್ನುವ ಗಾದೆ ಮಾತಿದೆ. ಮಕ್ಕಳಾಗದ ಅದೆಷ್ಟೋ ದಂಪತಿಗಳು ಮಕ್ಕಳಿಗಾಗಿ ಹತ್ತಾರು ದೇವರಿಗೆ ಹರಕೆ ಹೊತ್ತು ಮಕ್ಕಳು ಪಡೀತಾರೆ. ಆದರೆ ಈ ನಡುವೆ ಮಾನವೀಯತೆಯೇ ಇಲ್ಲದ ಕೆಲವರು ತಮ್ಮ ಕರುಳಿನ ಕುಡಿ ಎನ್ನುವ ಪರಿವೆಯೇ ಇಲ್ಲದಂತೆ ಬಟ್ಟೆಯಲ್ಲಿ ಕಂದನನ್ನು ಬೀದಿಯಲ್ಲಿ ಎಸೆದು ಹೋಗುತ್ತಾರೆ. ಇಂತಹದ್ದೇ ಒಂದು ಘಟನೆ ಸದ್ಯ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದ್ದು, ತಾನು ಹೆತ್ತ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಮೂಲೆಯಲ್ಲಿ ಎಸೆದು ಹೋಗಿದ್ದಾರೆ.

ಹುಟ್ಟಿದ ಎರಡು-ಮೂರು ದಿನದ ಮುದ್ದಾದ ಹಸುಗೂಸನ್ನು ಗಜೇಂದ್ರಗಡ ಬಸ್ ನಿಲ್ದಾಣದಲ್ಲಿ ಬೆಳಗಿನ ಜಾವ ಎಸೆದು ಹೋಗಿದ್ದು, ಕಂದಮ್ಮ ಬಿಕ್ಕಿ ಬಿಕ್ಕಿ ಅಳುವ ಕೂಗು ಕೇಳಿದ ಸ್ಥಳೀಯರು ಎಚ್ಚೆತ್ತುಕೊಂಡಿದ್ದಾರೆ. ಎಲ್ಲೋ ಮಗು ಅಳುವ ಶಬ್ದ ಕೇಳುತ್ತಿದೆ ಎಂದು ಹುಡುಕಾಟ ನಡೆಸಿದಾಗ ಮಗು ಬಸ್ ನಿಲ್ದಾಣದಲ್ಲಿ ಸಿಕ್ಕಿದ್ದು ಸದ್ಯ ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿದ್ದಾರೆ. ತಕ್ಷಣವೇ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬಟ್ಟೆಯಲ್ಲಿ ಗಟ್ಟಿಯಾಗಿ ಸುತ್ತಿದ್ದರಿಂದ ಮಗು ಉಸಿರಾಟದ ತೊಂದರೆ ಅನುಭವಿಸುತ್ತಿತ್ತು. ಆಗ ಪೊಲೀಸರು ತಕ್ಷಣ ಮಗುವನ್ನು ರಕ್ಷಣೆ ಮಾಡಿ ಗದಗದ ಜಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಜಿಮ್ಸ್ ಆಸ್ಪತ್ರೆಯಲ್ಲಿ ಮಗು ಈಗ ಚಿಕಿತ್ಸೆ ಪಡೆಯುತ್ತಿದೆ. ಕಾನೂನು ರೀತಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ ಎಂದು ಗೋಡಿಕಿಂಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅವಿನಾಶ್ ಹೇಳಿದ್ದಾರೆ.

baby bus stand

ಸ್ಥಳದ ಪರಿಶೀಲನೆ ನಡೆಸುತ್ತಿರುವ ಪೊಲೀಸರು

ಹೆಣ್ಣು ಮಗು ಆದರೆ ಸಾಕಷ್ಟು ಜನರು ಎಸೆಯುವ ಅಥವಾ ಎಲ್ಲೋ ದೇವಸ್ಥಾನದಲ್ಲಿ ಇಟ್ಟು ಹೋಗಿದ ಘಟನೆಗಳು ನಡೆದಿದೆ. ಆದರೆ ಗಂಡು ಮಗುವಾದರೂ ಏಕೆ ಎಸೆದು ಹೋಗಿದ್ದಾರೆ? ಎನ್ನುವ ಪ್ರಶ್ನೆ ಕಾಡುತ್ತಿದೆ. ಅನೈತಿಕ ಸಂಬಂಧಕ್ಕೆ ಏನಾದರೂ ಹುಟ್ಟಿದೆಯಾ? ಹೀಗಾಗಿ ಎಸೆದು ಹೋಗಿದ್ದಾರಾ? ಎನ್ನುವ ಅನುಮಾನ ಕೂಡ ಪೊಲೀಸರಲ್ಲಿ ಇದ್ದು, ಈ ಮಗು ಯಾರದು? ಏಕೆ ಎಸೆದು ಹೋಗಿದ್ದಾರೆ? ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಏನೇ ಇರಲಿ ಹೆತ್ತವರೆ ಎಸೆದು ಹೋಗಿದ್ದ ಕಂದ ಈಗ ಬದುಕಿ ಉಳಿದಿದ್ದು, ಗದಗ ಜಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಮಕ್ಕಳ ತಜ್ಞರು ಕಂದನಿಗೆ ನಿರಂತರ ಚಿಕಿತ್ಸೆ ನೀಡುತ್ತಿದ್ದಾರೆ.

ಅವಧಿಗಿಂತ ಒಂದು ತಿಂಗಳ ಮೊದಲು ಜನಿಸಿರಬಹುದು. ಹೀಗಾಗಿ ಮಗುವಿನ ತೂಕ ಸ್ವಲ್ಪ ಕಡಿಮೆ ಇದೆ. ಮಗು ಈಗ ಚೇತರಿಸಿಕೊಳ್ಳುತ್ತಿದೆ ಎಂದು ಜಿಮ್ಸ್ ನಿರ್ದೇಶಕ ಡಾ. ಪಿ. ಎಸ್. ಭೂಸರೆಡ್ಡಿ ಹೇಳಿದ್ದಾರೆ.

ಇಂತಹ ಕಟುಕ ಮನಸ್ಸಿನ ಕ್ರೂರ ಹೆತ್ತವರು ಯಾರು ಎಂದು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಸದ್ಯ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಒಟ್ಟಾರೆ ಹೆತ್ತವರು ಮಾಡಿದ ತಪ್ಪಿಗೆ ಹಸುಗೂಸು ಅನಾಥವಾಗಿದ್ದು, ಕಣ್ಣು ಬಿಡುವ ಮುನ್ನವೇ ಹೆತ್ತ ಕರುಳನ್ನು ಅಮಾನವೀಯವಾಗಿ ಎಸೆದು ಹೋಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಇದನ್ನೂ ಓದಿ: ಬೀದಿ ಪಾಲಾಗುವ ನವಜಾತ ಶಿಶುಗಳ ಭವಿಷ್ಯ ಉಜ್ವಲಗೊಳಿಸುತಿದೆ ‘ಮಮತೆಯ ತೊಟ್ಟಿಲು’!