ಎಚ್‌ಡಿಕೆಯಿಂದ ಕೇತಗಾನಹಳ್ಳಿ ಬಳಿ ಭೂ ಕಬಳಿಕೆ ಆರೋಪ: ವರದಿ ನೀಡದ ಅಧಿಕಾರಿಗೆ ಕೋರ್ಟ್ ತರಾಟೆ

| Updated By: ರಮೇಶ್ ಬಿ. ಜವಳಗೇರಾ

Updated on: Jan 29, 2025 | 9:57 PM

ಕೇಂದ್ರ ಸಚಿವ ಎಚ್‌. ಡಿ. ಕುಮಾರಸ್ವಾಮಿ (HD Kumaraswamy) ಹಾಗೂ ಮಾಜಿ ಶಾಸಕ ಡಿ. ಸಿ. ತಮ್ಮಣ್ಣ(DC Thammanna) ವಿರುದ್ಧ ದಾಖಲಾಗಿರುವ ಭೂಕಬಳಿಕೆ ಪ್ರಕರಣದ ಅರ್ಜಿಯನ್ನು ಇಂದು (ಜನವರಿ 29) ಕರ್ನಾಟಕ ಹೈಕೋರ್ಟ್​ ವಿಚಾರಣೆ ನಡೆಸಿದ್ದು, ಸರ್ಕಾರದ ಪರವಾಗಿ ಕೋರ್ಟ್​ಗೆ ಹಾಜರಾಗಿದ್ದ ರಾಜ್ಯ ಕಂದಾಯ ಇಲಾಖೆಯ ಪ್ರದಾನ ಕಾರ್ಯದರ್ಶಿಗೆ ನ್ಯಾಯಮೂರ್ತಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಎಚ್‌ಡಿಕೆಯಿಂದ ಕೇತಗಾನಹಳ್ಳಿ ಬಳಿ ಭೂ ಕಬಳಿಕೆ ಆರೋಪ: ವರದಿ ನೀಡದ ಅಧಿಕಾರಿಗೆ ಕೋರ್ಟ್ ತರಾಟೆ
Hd Kumaraswamy
Follow us on

ಬೆಂಗಳೂರು, (ಜನವರಿ, 29): ಮಾಜಿ ಸಿಎಂ, ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಹಾಗೂ ಡಿಸಿ ತಮ್ಮಣ್ಣ ವಿರುದ್ಧದ ಕೇತಗಾನಹಳ್ಳಿ ಬಳಿಯ 14 ಎಕರೆ ಭೂಕಬಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ನಲ್ಲಿಂದು ಅರ್ಜಿ ವಿಚಾರಣೆ ನಡೆದಿದ್ದು, ವರದಿ ಸಲ್ಲಿಸದಕ್ಕೆ ಕೋರ್ಟ್​ ಗರಂ ಆಗಿದೆ. ಇನ್ನು  ವಿಚಾರಣೆಗೆ ಹಾಜರಾಗಿದ್ದ ಕಂದಾಯ ಇಲಾಖೆಯ ಪ್ರದಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾಗೆ ಕೋರ್ಟ್​ ತರಾಟೆಗೆ ತೆಗೆದುಕೊಂಡಿದೆ. ವರದಿ ನೀಡಲು ನಿಮ್ಮ ಕೈಲಿ ಆಗದಿದ್ರೆ ನಿಮ್ಮನ್ನ ಎಲ್ಲಿ ಕಳಿಸಬೇಕೊಕೋ ಅಲ್ಲಿಗೆ ಕಳಿಸುತ್ತೇನೆ ಅಂತೆಲ್ಲಾ ಕ್ಲಾಸ್ ತೆಗೆದುಕೊಂಡಿದೆ.

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್​ಆರ್ ಹಿರೇಮಠ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾ.ಕೆ.ಸೋಮಶೇಖರ್ ನೇತೃತ್ವದ ವಿಭಾಗೀಯ ಪೀಠ, ಪ್ರತಿವಾದಿಗಳು ಉನ್ನತ ಹುದ್ದೆಯಲ್ಲಿದ್ದಾರೆಂದು 5 ವರ್ಷ ಏನೂ ಮಾಡಿಲ್ಲ. ನೀವು ಐದು ವರ್ಷ ಏನೂ ಮಾಡಿಲ್ಲ. ನಿಮಗೆ ಇನ್ನೆರಡು ವಾರ ಸಮಯ ಕೊಡುತ್ತೇನೆ. ನಿಮ್ಮ ಕೈಲಿ ಆಗದಿದ್ರೆ ನಿಮ್ಮನ್ನ ಎಲ್ಲಿ ಕಳಿಸಬೇಕೊಕೋ ಅಲ್ಲಿಗೆ ಕಳಿಸುತ್ತೇನೆ. ಹದಿನೈದು ದಿನ ಜೈಲಿನಲ್ಲಿ ಇದ್ದು ಬಂದರೆ ಸರಿಹೋಗುತ್ತೀರಿ ಕ್ಲಾಸ್ ತೆಗೆದುಕೊಂಡಿದೆ.

ಇದನ್ನೂ ಓದಿ: Land Encroachment: ಹೆಚ್‌ಡಿ ಕುಮಾರಸ್ವಾಮಿ, ಡಿ.ಸಿ.ತಮ್ಮಣ್ಣ ಭೂಕಬಳಿಕೆ ಕೇಸ್‌: ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು

ಏನೆಲ್ಲಾ ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ವಿಚಾರಣೆಗೆ ಹಾಜರಾಗಿದ್ದ ಸರ್ಕಾರದ ಪರ ಅಧಿಕಾರಿ ರಾಜೇಂದ್ರ ಕುಮಾರ್ ಕಠಾರಿಯಾ ಅವರಿಗೆ ಹೈಕೋರ್ಟ್​ ಪ್ರಶ್ನಿಸಿದೆ. ಈ ವೇಳೆ ರಾಜೇಂದ್ರ ಕುಮಾರ್ ಅವರು ಎಸ್ಐಟಿ ರಚನೆ ಸೇರಿದಂತೆ ಕೈಗೊಂಡ ಕ್ರಮದ ವಿವರಣೆ ನೀಡಿದ್ದಾರೆ. ಆದ್ರೆ, ಇದಕ್ಕೆ ಹೈಕೋರ್ಟ್​ ಒಪ್ಪಲಿಲ್ಲ. ಬಳಿಕ ಫೆಬ್ರವರಿ 21ರೊಳಗೆ ಕ್ರಮ ಕೈಗೊಂಡ ವರದಿ ಸಲ್ಲಿಸಲು ತಾಕೀತು ಮಾಡಿದೆ.

ಏನಿದು ಪ್ರಕರಣ?

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಯಾಗಿರುವ ಡಿಸಿ ತಮ್ಮನಣ್ಣ ರಾಮನಗರ ಜಿಲ್ಲೆ ಬಿಡದಿ ಹೋಬಳಿ ಕೇತಗಾನಹಳ್ಳಿಯಲ್ಲಿ ವಿವಿಧ ಸರ್ವೆ ನಂಬರ್‌ಗಳಲ್ಲಿ 14 ಎಕರೆಗೂ ಅಧಿಕ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿದ್ದಾರೆ ಎಂದು ಮಾಜಿ ಸಂಸದ ದಿವಂಗತ ಜಿ. ಮಾದೇಗೌಡರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರ ಸಮಗ್ರ ತನಿಖೆ ನಡೆಸಬೇಕು ಎಂದು ಕಂದಾಯ ಇಲಾಖೆಗೆ ಲೋಕಾಯುಕ್ತರು 2014ರಲ್ಲಿ ಆದೇಶಿಸಿದ್ದರು. ಲೋಕಾಯುಕ್ತರ ಆದೇಶವನ್ನು ಹೈಕೋರ್ಟ್‌ ಕೂಡ ಎತ್ತಿಹಿಡಿದಿತ್ತು. ಆದರೆ, ಹೈಕೋರ್ಟ್ ಆದೇಶ ಪಾಲಿಸಿಲ್ಲ ಎಂದು ದೂರಿ ಹಿರೇಮಠ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಬಳಿಕ ಕ್ರಮ ಕೈಗೊಂಡಿರುವ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿನೆ ನೀಡಿತ್ತು. ಆದ್ರೆ, ಇದುವರೆಗೂ ಸರಿಯಾದ ವರದಿ ನೀಡದಿರುವುದರಿಂದ ಇದೀಗ ಹೈಕೋರ್ಟ್ ಗರಂ ಆಗಿದೆ.