ದೆಹಲಿ/ಬೆಂಗಳೂರು, ಆಗಸ್ಟ್ 1: ವಾಲ್ಮೀಕಿ ಮತ್ತು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆಗೆ ಪಟ್ಟುಹಿಡಿದಿರುವ ಬಿಜೆಪಿ ಮತ್ತು ಜೆಡಿಎಸ್ ಆಗಸ್ಟ್ 3ನೇ ರಂದು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಕೈಗೊಳ್ಳಲು ಮುಂದಾಗಿದೆ. ಆದರೆ ಈ ಪಾದಯಾತ್ರೆ (padayatra) ಪಾಲಿಟಿಕ್ಸ್ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಭಿನ್ನಮತ ಉಂಟಾಗಿತ್ತು. ಈ ಪಾದಯಾತ್ರೆಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಮೊದಲು ಒಪ್ಪಿಗೆ ಸೂಚಿಸಿರಲಿಲ್ಲ. ಆದರೆ ಇದೀಗ ಕುಮಾರಸ್ವಾಮಿ ಮನವೊಲಿಸಲಾಗಿದ್ದು, ಜೆಡಿಎಸ್-ಬಿಜೆಪಿಯಿಂದ ಪಾದಯಾತ್ರೆ ಫಿಕ್ಸ್ ಆಗಿದೆ. ಈ ಬಗ್ಗೆ ದೆಹಲಿಯಲ್ಲಿಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಉಸ್ತುವಾರಿ ರಾಧಾಮೋಹನ್ ದಾಸ್, ಬಿವೈ ವಿಜಯೇಂದ್ರ ಜಂಟಿ ಸದ್ದಿಗೋಷ್ಠಿ ನಡೆಸಿ, ಬೆಂಗಳೂರು ಟು ಮೈಸೂರು ಪಾದಯಾತ್ರೆ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಕಾರಣಕ್ಕಾಗಿ ಕೆಂಡಾಮಂಡಲರಾಗಿದ್ದ ಕುಮಾರಸ್ವಾಮಿ, ನಮ್ಮ ಕುಟುಂಬದಲ್ಲಿ ವಿಷ ಹಾಕಿದವನ ನೇತೃತ್ವದಲ್ಲಿ ಪಾದಯಾತ್ರೆಗೆ ನಮ್ಮ ಬೆಂಬಲವಿಲ್ಲ ಎಂದು ಖಾರವಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ನಡೆಸಬೇಕಿದ್ದ ಮುಡಾ ಸೈಟ್ ಕುರಿತಾದ ಮೈಸೂರು ಚಲೋ ರದ್ದಾಗಬಹುದಾದ ಸನ್ನಿವೇಶ ಸೃಷ್ಟಿಯಾಗಿತ್ತು. ಇದೀಗ ಅಂತಿಮವಾಗಿ ವಿಜಯೇಂದ್ರ, ರಾಧಾಮೋಹನ್ ದಾಸ್, ಪ್ರಲ್ಹಾದ್ ಜೋಶಿ ಇಂದು(ಆಗಸ್ಟ್ 01) ಸಂಸತ್ ಭವನದಲ್ಲಿ ಕುಮಾರಸ್ವಾಮಿ ಜೊತೆ ಸಂಧಾನ ಸಭೆ ಮಾಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಕುಮಾರಸ್ವಾಮಿ ಅವರಿಂದಲೇ ಈ ಪಾದಯಾತ್ರೆಗೆ ಚಾಲನೆ ಕೊಡಿಸಲು ತೀರ್ಮಾನಿಸಿದ್ದಾರೆ.
ಸದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಶನಿವಾರ ಮೈಸೂರಿಗೆ ಪಾದಯಾತ್ರೆ ಆರಂಭವಾಗಲಿದೆ. ಸಣ್ಣಪುಟ್ಟ ಗೊಂದಲ ಇದ್ದರೂ ಪಾದಯಾತ್ರೆ ನಡೆಯುತ್ತೆ. ಶನಿವಾರ ಬೆಳಗ್ಗೆ 8.30ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಆರಂಭಗೊಳುತ್ತದೆ. ಕುಮಾರಸ್ವಾಮಿಯೇ ಪಾದಯಾತ್ರೆಗೆ ಚಾಲನೆ ನೀಡುತ್ತಾರೆ. ಭ್ರಷ್ಟಾಚಾರ ಆಗಿದ್ದನ್ನ ಸದನದಲ್ಲಿ ಸಿಎಂ ಒಪ್ಕೊಂಡಿದ್ದಾರೆ. 4 ಸಾವಿರ ಕೋಟಿ ರೂ. ಬೆಲೆಬಾಳುವ ಸೈಟ್ ಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಮಾತನಾಡಿ, ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ-ಜೆಡಿಎಸ್ ನಾಯಕರು ಸೇರಿ ಪಾದಯಾತ್ರೆ ಮಾಡುತ್ತೇವೆ. ಆಗಸ್ಟ್ 3ರಿಂದ ಪಾದಯಾತ್ರೆ ಆರಂಭಿಸುತ್ತೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಡವರನ್ನು ಲೂಟಿ ಮಾಡುತ್ತಿದೆ. ಇದೇ ಕಾರಣಕ್ಕೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ. ಹಗಲು ದರೋಡೆ ಮೂಲಕ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಪಾದಯಾತ್ರೆ: ಜೆಡಿಎಸ್ ನಾಯಕರಿಗೊಂದು ವಿಶೇಷ ಮನವಿ ಮಾಡಿದ ಅಶೋಕ್
ಸಿಎಂ ಸಿದ್ದರಾಮಯ್ಯ ಅಕ್ರಮವಾಗಿ 14 ಸೈಟ್ಗಳನ್ನು ಪಡೆದಿದ್ದಾರೆ. ಮುಡಾದಲ್ಲಿ 4000 ಕೋಟಿಗೂ ಹೆಚ್ಚು ಹಗರಣವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆದಿವಾಸಿ ಹಣವನ್ನು ಲೂಟಿ ಮಾಡಿದೆ. ಆ ಹಣವನ್ನು ಚುನಾವಣೆಯಲ್ಲಿ ಬಳಕೆ ಮಾಡಿರೋದನ್ನು ಒಪ್ಪಿಕೊಂಡಿದ್ದಾರೆ. ಜನರಲ್ಲಿ ಆಕ್ರೋಶವಿದೆ, ಯಾವಾಗ ಬೇಕಿದ್ರೂ ಕಟ್ಟೆ ಒಡೆಯಬಹುದು ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಶನಿವಾರದಿಂದ ಪಾದಯಾತ್ರೆ ಆರಂಭವಾಗಲಿದೆ. ಬಿಜೆಪಿ, ಜೆಡಿಎಸ್ ಸೇರಿ ಮೈಸೂರಿನವರೆಗೆ ಪಾದಯಾತ್ರೆ ನಡೆಸುತ್ತೇವೆ. ಸಂವಹನದ ಕೊರತೆಯಿಂದ ಒಂದಷ್ಟು ಗೊಂದಲಗಳು ಆಗಿದ್ದವು. ಇದೀಗ ಯಾವುದೇ ಗೊಂದಲವಿಲ್ಲದೆ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:03 pm, Thu, 1 August 24