ಕರ್ನಾಟಕ ಸರ್ಕಾರಕ್ಕೆ ‌ಮರ್ಯಾದೆ ಬೇಡವಾ? ಹೆಚ್​ಎಂಟಿಯಿಂದ ಭೂಮಿ ವಶಕ್ಕೆ ಪಡೆದಿದ್ದಕ್ಕೆ ಹೆಚ್​ಡಿಕೆ ಕಿಡಿ

| Updated By: ಗಣಪತಿ ಶರ್ಮ

Updated on: Oct 26, 2024 | 12:48 PM

ಕೇಂದ್ರ ಸರ್ಕಾರದ ಅಧೀನದ ಹೆಚ್‌ಎಂಟಿಯಿಂದ 5 ಎಕರೆ ಅರಣ್ಯ ಭೂಮಿಯನ್ನು ಕರ್ನಾಟಕ ಅರಣ್ಯ ಇಲಾಖೆ ವಶಪಡಿಸಿಕೊಂಡಿರುವುದನ್ನು ಹೆಚ್‌.ಡಿ. ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಮೊದಲು ಇತರ ಅಕ್ರಮ ಭೂ ವಶದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಹೆಚ್‌ಎಂಟಿ ಪುನಶ್ಚೇತನಕ್ಕೆ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಕರ್ನಾಟಕ ಸರ್ಕಾರಕ್ಕೆ ‌ಮರ್ಯಾದೆ ಬೇಡವಾ? ಹೆಚ್​ಎಂಟಿಯಿಂದ ಭೂಮಿ ವಶಕ್ಕೆ ಪಡೆದಿದ್ದಕ್ಕೆ ಹೆಚ್​ಡಿಕೆ ಕಿಡಿ
ಹೆಚ್​ಡಿ ಕುಮಾರಸ್ವಾಮಿ
Image Credit source: PTI
Follow us on

ಬೆಂಗಳೂರು, ಅಕ್ಟೋಬರ್ 26: ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಹೆಚ್‌ಎಂಟಿಯಿಂದ 5 ಎಕರೆ ಅರಣ್ಯ ಭೂಮಿಯನ್ನು ರ್ನಾಟಕ ಅರಣ್ಯ ಇಲಾಖೆ ವಶಪಡಿಸಿಕೊಂಡಿರುವುದಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಹೆಚ್​ಎಂಟಿಯಿಂದ ಭೂಮಿ ಮರುವಶ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಹೇಳುವುದು ಇಷ್ಟೇ, ಕೋಲಾರದಲ್ಲಿ ಸಸಿ ನೆಡುವುದಕ್ಕೆ ಹೋಗಿದ್ದಾರೆ. ಮೊದಲು ಶ್ರೀನಿವಾಸಪುರದಲ್ಲಿ ಒಬ್ಬ ಮಾಜಿ ಸ್ವೀಕರ್ ಸುಮಾರು ನೂರಾರು ಎಕರೆ ಅರಣ್ಯ ಭೂಮಿಯನ್ನು ಲೂಟಿ ಹೊಡೆದಿದ್ದಾರೆ. ಅದನ್ನು ಮೊದಲು ಮರುವಶಪಡಿಸಿಕೊಳ್ಳಲಿ ಎಂದರು.

ತೀರ್ಪು ಬಂದಿರುವುದನ್ನೆಲ್ಲ ಕುರ್ಚಿ ಕೆಳಗೆ ಇಟ್ಟುಕೊಂಡು ಕುಳಿತಿದ್ದಾರೆ. ಮೊದಲು ಅದನ್ನು ನೋಡಲು‌ ಹೇಳಿ. ಎಷ್ಟು ಏಕರೆ ಲೂಟಿಯಾಗಿದೆ ಅಲ್ಲಿ? ಅದರ ಬಗ್ಗೆ ಚರ್ಚೆ ಮಾಡಿದ್ದೀರಾ? ಇಲ್ಲಿ ಕೋರ್ಟ್ ಇದೆ. ಅಲ್ಲಿ ಪೋಲೀಸ್, ಅರಣ್ಯ ಇಲಾಖೆಯವರು ಬಲವಂತವಾಗಿ ಹೋಗಿ ಬೇಲಿ ಹಾಕಿರಬಹುದು. ಅಂತಿಮವಾಗಿ ನ್ಯಾಯಾಲಯದ ತೀರ್ಪುಗಳಿಗೆ ತಲೆಬಾಗಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಕೇತಗಾನಹಳ್ಳಿ ಭೂ ಒತ್ತುವರಿ ವಿವಾದ ವಿಚಾರವಾಗಿ ಸರ್ಕಾರ ತನಿಖೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಬಗ್ಗೆ ಕಳೆದ ನಲವತ್ತು ವರ್ಷಗಳಿಂದ ‌ನಡೆಯುತ್ತಿದೆ. ಹಲವು ಹೈಕೋರ್ಟ್ ಆದೇಶಗಳ ಮೇರೆಗೆ ದಾಖಲೆ ನೋಡಿ, ಸರ್ವೆ ಮಾಡಿ ಸುಸ್ತಾಗಿದ್ದಾರೆ. ಕೇತಗಾನಹಳ್ಳಿಯಲ್ಲಿ ಯಾವುದೇ ಒತ್ತುವರಿ ಮಾಡಿದ್ದರೆ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ, ನಮ್ಮ ಆಕ್ಷೇಪ ಏನಿಲ್ಲ. ಅಲ್ಲಿ 1980 ರಲ್ಲಿ ಪ್ರಾರಂಭವಾಗಿರುವುದು ಇನ್ನೂ ನಿಂತಿಲ್ಲ. ಸರ್ಕಾರಕ್ಕೆ ‌ಮರ್ಯಾದೆ ಬೇಡವಾ? ಇದು ಕಷ್ಟಪಟ್ಟು ಬೆವರು ಸುರಿಸಿ ಸಂಪಾದಿಸಿದ ಆಸ್ತಿ. ಇನ್ನೊಬ್ಬರ ಥರ ಕಳ್ಳ ಬೇಲಿ ಹಾಕಿಕೊಂಡು ಪಡೆದಿರುವುದಲ್ಲ. ಸರ್ಕಾರ ಯಾವ ತರಹ ಬೇಕಾದರೂ ತನಿಖೆ ಮಾಡಿಕೊಳ್ಳಲಿ, ನಾನು ಸಿದ್ಧವಾಗಿ ಇದ್ದೇನೆ ಎಂದರು.

ಇದನ್ನೂ ಓದಿ: HMT ವಶದಲ್ಲಿದ್ದ 150 ಕೋಟಿ ರೂ ಮೌಲ್ಯದ 5 ಎಕರೆ ಅರಣ್ಯ ಭೂಮಿ ಮರುವಶಕ್ಕೆ

ಕುಮಾರಸ್ವಾಮಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಹೆಚ್​ಎಂಟಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದರು. ಅಲ್ಲದೆ, ಹೆಚ್​ಎಂಟಿ ಪರ ಹಲವು ನಿಲುವುಗಳನ್ನೂ ತೆಗೆದುಕೊಂಡಿದ್ದರು. ಮಗ ನಿಖಿಲ್ ಕುಮಾರಸ್ವಾಮಿಗೆ ಹೆಚ್​ಎಂಟಿ ವಾಚ್​ ಅನ್ನೇ ಉಡುಗೊರೆ ನೀಡಿದ್ದರು. ಅಲ್ಲದೆ, ರಾಜ್ಯದ ಹೆಮ್ಮೆಯ ಬ್ರ್ಯಾಂಡ್ ಆಗಿರುವ ಹೆಚ್​ಎಂಟಿ ವಾಚ್​​ಗಳನ್ನೇ ಉಡುಗೊರೆ ನೀಡುವಂತೆ ಪಕ್ಷದ ಶಾಸಕರು, ಸಂಸದರಿಗೆ ಕರೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ