ಮಂಡ್ಯದಲ್ಲಿ ಜನತಾದರ್ಶನ: 7 ಗಂಟೆಗಳಲ್ಲಿ ಬಂದ ಅರ್ಜಿಗಳೆಷ್ಟು? ಕುಮಾರಸ್ವಾಮಿ ಹೇಳಿದ್ದೇನು?
ಇಂದು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಇದೀಗ ಅಂತ್ಯವಾಗಿದೆ. ಬಳಿಕ ಮಾತನಾಡಿದ ಅವರು, ಜನತಾದರ್ಶನದಲ್ಲಿ 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. 7 ಗಂಟೆಗಳ ಕಾಲ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಮಂಡ್ಯ, ಜುಲೈ 05: ನಗರದ ಅಂಬೇಡ್ಕರ್ ಭವನದಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಆಯೋಜಿಸಿದ್ದ ಜನತಾದರ್ಶನ (Janata Darshan) ಅಂತ್ಯವಾಗಿದೆ. ಬೆಳಗ್ಗೆ 11.30ರಿಂದ ನಿರಂತರವಾಗಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಜನತಾ ದರ್ಶನ ನಡೆಸಿದ್ದಾರೆ. ಊಟಕ್ಕೂ ತೆರಳದೆ ಜನರ ಅಹವಾಲು ಸ್ವೀಕರಿಸಿದ್ದಾರೆ. ಸರ್ಕಾರದ ಸೂಚನೆ ಹಿನ್ನೆಲೆ ಕೇಂದ್ರ ಸಚಿವರ ಜನತಾ ದರ್ಶನಕ್ಕೆ ಅಧಿಕಾರಿಗಳು ಬಂದಿರಲಿಲ್ಲ. ಆದರೂ ಸಮಸ್ಯೆ ಆಲಿಸಿದ ಹೆಚ್ ಡಿ ಕುಮಾರಸ್ವಾಮಿ ಪರಿಹಾರ ಒದಗಿಸಲು ಮುಂದಾಗಿದ್ದಾರೆ. ಹೆಚ್ಚು ಜನರಿದ್ದ ಹಿನ್ನೆಲೆ ಹೊರಗೆ ಊಟಕ್ಕೆ ತೆರಳದೆ ಜನತಾ ದರ್ಶನ ಕಾರ್ಯಕ್ರಮದಲ್ಲೇ ಊಟ ಮಾಡಿದ್ದಾರೆ.
ಜನತಾದರ್ಶನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ಜನರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುವ ಬಗ್ಗೆ ವಿಶ್ವಾಸವಿಲ್ಲ. ಮಂಡ್ಯ ನಗರದಲ್ಲಿ ನಿವೇಶನ ನೀಡುವಂತೆ ಸಾಕಷ್ಟು ಒತ್ತಡವಿದೆ. ರಾಜಕಾರಣ ಬೇರೆ, ಕೆಲವು ಕಾರ್ಯಕ್ರಮ ತರಲು ಅವಕಾಶ ಇದೆ. ಸಿಎಂ ಸಿದ್ದರಾಮಯ್ಯ, ಸಚಿವರು ಕೂಡ ಜನತಾದರ್ಶನ ಮಾಡಿದ್ದರು. ಚುನಾವಣೆ ಮುಂಚೆ ಜನತಾದರ್ಶನದಲ್ಲಿ ಎಷ್ಟು ಪರಿಹಾರ ಸಿಕ್ಕಿದೆ ಅಂತಾ ಜನತಾದರ್ಶನ ವೇಳೆ ದರ್ಶನವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದು, ಇನ್ಮುಂದೆ ಆದರೂ ಕೆಲಸ ಮಾಡುವಂತೆ ಕಿವಿಮಾತು ಹೇಳಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ಟ್ವೀಟ್
ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನತಾ ದರ್ಶನದಲ್ಲಿ ಜನತೆಯ ಅಹವಾಲು ಆಲಿಸಲಾಯಿತು. ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ.#ಜನತಾದರ್ಶನ#ನಿಮ್ಮಮನೆಬಾಗಿಲಿಗೆ_ನಿಮ್ಮಮನೆಮಗಕುಮಾರಣ್ಣ pic.twitter.com/YPWfjxbG8L
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 5, 2024
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೆಲವು ವಿಚಾರ ಸುತ್ತಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರೇ ಪ್ರೇರಣೆ ನೀಡುತ್ತಿದ್ದಾರೆ. ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಈ ರೀತಿಯ ಅಧಿಕಾರ ಇನ್ನೆಷ್ಟು ದಿನ ನಡೆಸುತ್ತೀರಿ. ಜನ ಅಧಿಕಾರ ಕೊಟ್ಟಿದ್ದಾರೆ, ತಿರುಗಿಬೀಳುವ ಮೊದಲು ಎಚ್ಚರವಹಿಸಿ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಮಂಡ್ಯ: ಕುಮಾರಸ್ವಾಮಿ ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರು: ಸರ್ಕಾರದ ವಿರುದ್ಧ ಗರಂ
ಜನತಾದರ್ಶನಕ್ಕೆ ಅಧಿಕಾರಿಗಳು ಹೋಗದಂತೆ ಸುತ್ತೋಲೆ ಹೊರಡಿಸಿದ್ದಾರೆ. ಜನತಾದರ್ಶನ ನಡೆಸಲು ನನಗೆ ಅಧಿಕಾರ ಇಲ್ವಾ? ಲೋಕಸಭೆ ಚುನಾವಣೆಗೂ ಮುನ್ನ ಬೆಂಗಳೂರು ಗ್ರಾಮಾಂತರದಲ್ಲಿ ಸಭೆ ಮಾಡಿದ್ದರು. ಅಂದಿನ ಸಂಸದರು ಹಳ್ಳಿಹಳ್ಳಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿದ್ದರು ಎಂದು ಡಿ.ಕೆ.ಸುರೇಶ್ ನಡೆಸಿದ್ದ ಸಭೆ ಫೋಟೋ ಪ್ರದರ್ಶಿಸಿದರು.
ಹೆಚ್ಡಿ ಕುಮಾರಸ್ವಾಮಿ ಜನತಾದರ್ಶನ ಮಾಡ್ತಿದ್ದಾನೆಂದು ತರಾತುರಿಯಲ್ಲಿ ಸುತ್ತೋಲೆ ಹೊರಡಿಸಿದ್ದಾರೆ. ಜನರಿಂದ ಆಯ್ಕೆಯಾದ ಪ್ರತಿನಿಧಿಗೆ ಜನತಾದರ್ಶನಮಾಡುವ ಅವಕಾಶವಿದೆ. ರಾಜ್ಯ ಸರ್ಕಾರಕ್ಕೆ ಅಲ್ಪಸ್ವಲ್ಪವಾದರೂ ಜ್ಞಾನ ಇದೆಯಾ ಎಂದು ಪ್ರಶ್ನಿಸಿದರು. ನಾನು ರಾಜ್ಯ ಸರ್ಕಾರದ ಶಿಷ್ಟಾಚಾರ ನಂಬಿ ರಾಜಕಾರಣ ಮಾಡುತ್ತಿಲ್ಲ. ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿರುವುದರಲ್ಲಿ ಸಂಶಯವೇ ಇಲ್ಲ. ಅಧಿಕಾರಿಗಳನ್ನು ರಾತ್ರೋರಾತ್ರಿ ವರ್ಗಾವಣೆ ಮಾಡುತ್ತಿದ್ದಾರೆಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಕುಮಾರಸ್ವಾಮಿ ಜನತಾದರ್ಶನಕ್ಕೆ ಅಧಿಕಾರಿಗಳ ಗೈರು: ಸಿದ್ದರಾಮಯ್ಯ ಖಡಕ್ ಸ್ಪಷ್ಟನೆ
HMT ಭೂಮಿ ಯಾರು ಯಾರು ಹೊಡೆದಿದ್ದೀರಿ, ಅದರ ಬಗ್ಗೆ ತನಿಖೆ ಮಾಡುತ್ತಿರಾ? ರಾಜ್ಯ ಸರ್ಕಾರಕ್ಕೆ ಬರುತ್ತಿದ್ದ ಆದಾಯದ ಬಗ್ಗೆ ಚಿಂತೆ ಮಾಡಿದ್ದೀರಾ? ನಾನು ಕಡುಬು ತಿನ್ನಲು ಕುಳಿತಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಜಾಗಟೆ ಬಾರಿಸಿದ್ದರು. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿಲ್ಲ, ಇವರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.