ಸರ್ಕಾರ ಉರಳಿಸಲು ಡ್ರಗ್ಸ್ ಹಣ ಬಳಸಿದ್ದು ಅಂತ ಕುಮಾರಸ್ವಾಮಿಯವರಿಗೆ ಜ್ಞಾನೋದಯವಾಗಿದೆ!

  • Publish Date - 5:14 pm, Tue, 1 September 20
ಸರ್ಕಾರ ಉರಳಿಸಲು ಡ್ರಗ್ಸ್ ಹಣ ಬಳಸಿದ್ದು ಅಂತ ಕುಮಾರಸ್ವಾಮಿಯವರಿಗೆ ಜ್ಞಾನೋದಯವಾಗಿದೆ!
ಕಾಂಗ್ರೆಸ್‌ನ ‘ರಾಜಕೀಯ ನರಮೇಧ’ಕ್ಕೆ ಕಾರಣ ಯಾರು? ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್

ಸ್ಯಾಂಡಲ್​ವುಡ್​ನಲ್ಲಿ ಹಲವಾರು ಯುವ ನಟರು ಡ್ರಗ್ಸ್ ಚಟಕ್ಕೆ ಬಿದ್ದಿದ್ದಾರೆ, ಸೆಟ್​ಗಳಿಗೂ ಕೆಲವರು ಮಾದಕ ಪದಾರ್ಥಗಳ ಅಮಲಿನಲ್ಲೇ ಬರುತ್ತಾರೆ, ಅಂತ ತನ್ನಷ್ಟಕ್ಕೆ ತಾನೇ ಸ್ಟಾರ್ ಡೈರೆಕ್ಟರ್ ಎಂದು ಕರೆದುಕೊಳ್ಳುವ ಇಂದ್ರಜಿತ್ ಲಂಕೇಶ್ ಹೇಳಿದ ನಂತರ ಹಲವಾರು ನಟ ನಟಿಯರು, ಅವರ ಪರ ಹಾಗೂ ವಿರೋಧ ಹೇಳಿಕೆಗಳನ್ನು ನೀಡುತ್ತಾ ಲಾಕ್​ಡೌನ್​ನಿಂದಾಗಿ ಅನುಭವಿಸಿದ ಪ್ರಚಾರದ ಕೊರತೆಯನ್ನು ನೀಗಿಸಿಕೊಳ್ಳುತ್ತಿದ್ದಾರೆ.

ಪ್ರಶ್ನೆ ಅದಲ್ಲ. ಅದಿರೋದು ಜವಾಬದಾರಿಯುತ ಸ್ಥಾನದಲ್ಲಿರುವವರು ಈ ಡ್ರಗ್ಸ್ ಹಾವಳಿಗೆ ನೀಡುತ್ತಿರುವ ಪ್ರತಿಕ್ರಿಯೆಯಲ್ಲಿ. ಉದಾಹರಣೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸದರಿ ಸಮಸ್ಯೆಗೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಅಂತ ನಿಮಗೆ ಗೊತ್ತಿರಬಹುದು. ಸೋಮವಾರದಂದು ನೀಡಿರುವ ಹೇಳಿಕೆಯೊಂದರಲ್ಲಿ ಕುಮಾರಸ್ವಾಮಿ, ಡ್ರಗ್ಸ್ ಹಣವನ್ನು ತಮ್ಮ ಸಮ್ಮಿಶ್ರ ಸರ್ಕಾರ ಉರುಳಿಸಲು ಬಳಸಲಾಯಿತು ಅಂತ ಹೇಳಿದ್ದಾರೆ. ಮುಂದುವರಿದು ಹೇಳಿರುವ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ಡ್ರಗ್ಸ್ ದಂಧೆಯಲ್ಲಿರುವವರನ್ನು ಹೆಡೆಮುರಿಕಟ್ಟಿ ಜೈಲಿಗಟ್ಟಬೇಕೆನ್ನುವಷ್ಟರಲ್ಲಿ ಅವರು ಶ್ರೀಲಂಕಾಗೆ ಓಡಿಹೋದರಂತೆ!

ಅವರ ಮೊದಲ ಹೇಳಿಕೆಯನ್ನು ಸ್ವಲ್ಪ ಗಮನಿಸಿ. ಸರ್ಕಾರ ಉರುಳುಸಿವ ಪ್ರಯತ್ನ ನಡೆಯುತ್ತಿದ್ದಾಗ, ಕುಮಾರಣ್ಣ ಒಬ್ಬೊಬ್ಬ ಶಾಸಕನಿಗೆ 30, 50, 100 ಕೋಟಿ ರೂಪಾಯಿಗಳನ್ನು ನೀಡಿ ಖರೀದಿಲಾಗುತ್ತಿದೆ ಎಂದು ಅಳುತ್ತಾ ಹೇಳುತ್ತಿದ್ದರೆ ಹೊರತು ಯಾವತ್ತೂ ಅದು ಡ್ರಗ್ಸ್ ಮಾರಾಟದಿಂದ ಬಂದ ಹಣ ಅಂತ ಹೇಳಲಿಲ್ಲ.

ಆದರೆ, ಅವರಿಗೆ ಈಗ ಜ್ಞಾನೋದಯವಾಗಿ ಅದು ಡ್ರಗ್ಸ್ ಹಣ ಅಂತ ಅನಿಸಿದೆ. ಅಥವಾ ಅವರೇನಾದರೂ ಮರೆಗುಳಿತನದ ಕಾಯಿಲೆಯಿಂದ ಬಳಲುತ್ತಿದ್ದಾರೆಯೇ? ಡ್ರಗ್ಸ್ ಎಷ್ಟು ಅಪಾಯಕಾರಿಯಾಗಿ ತನ್ನ ಮೃತ್ಯುಪಾಶವನ್ನು ಯುವಕರ ಮೇಲೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಮೇಲೆ ಬೀಸಿದೆ ಅನ್ನೋದರ ಬಗ್ಗೆ ನಮ್ಮ ನಾಯಕರಿಗೆ ಯೋಚನೆಯೇ ಇಲ್ಲ. ಇದರಲ್ಲೂ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ.

ಕುಮಾರಸ್ವಾಮಿ ಹೇಳುತ್ತಿರುವುದು ನಿಜವೇ ಆಗಿದ್ದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ನೆರವು ಪಡೆಯಬಹುದಿತ್ತಲ್ಲ, ಅವರಿಗದು ಗೊತ್ತಿಲ್ಲವೆ? ಓಕೆ, ಗೊತ್ತಿರಲಿಕ್ಕಿಲ್ಲ ಎಂದೇ ಭಾವಿಸೋಣ. ಅವರ ಪಕ್ಷದ ಲೀಗಲ್ ಸೆಲ್ ಇದೆ ತಾನೆ, ಅದರ ಮೂಲಕ ದೂರು ದಾಖಲಿಸಬಹುದಿತ್ತಲ್ಲ? ಹಾಗೆ ಮಾಡಿದ್ದೇಯಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಅಂತ ಡ್ರಗ್ಸ್ ಮಾಫಿಯಾ ಅವರನ್ನು ಹೆದರಿಸಿತ್ತೇ?

ಕುಮಾರಸ್ವಾಮಿ ಅವರ ಎರಡನೇ ಹೇಳಿಕೆಯನ್ನು ನೋಡುವ. ಕಾರ್ಯಾಚರಣೆ ನಡೆಸಿ ಬಂಧಿಸಬೇಕೆನ್ನುವಷ್ಟರಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡವರು, ಶ್ರೀಲಂಕಾಗೆ ಓಡಿಹೋದರೆಂದು ಅವರು ಹೇಳುತ್ತಾರೆ. ಸ್ವಾಮಿ, ಸಾವಿರಾರು ಮೈಲಿದೂರದ ಅಮೇರಿಕಾದ ಯಾವುದೋ ಒಂದು ಮೂಲೆಯಲ್ಲಿ ಅವಿತು ಕೂತಿದ್ದ ಅಂಡರ್​ವರ್ಲ್ಡ್ ಡಾನ್ ರವಿ ಪೂಜಾರಿಯನ್ನು ನಮ್ಮ ಬೆಂಗಳೂರು ಪೊಲೀಸರು ದರದರನೆ ಎಳೆದುಕೊಂಡು ಬಂದರು. ನಡೆದು ಹೋಗುವಷ್ಟು ದೂರದಲ್ಲಿರುವ ಶ್ರೀಲಂಕಾದಿಂದ ಅವರನ್ನು ಎತ್ಹಾಕಿಕೊಂಡು ಬರೋದು ಪೊಲೀಸರಿಗೆ ಕಷ್ಟವಿತ್ತೇ? 

ಡ್ರಗ್ಸ್​ನಂಥ ವಿಷಯವನ್ನು ಹಗುರವಾಗಿ ಕಾಣುವ ಪ್ರಯತ್ನವನ್ನು ನಮ್ಮ ನಾಯಕರು ನಿಲ್ಲಿಸಬೇಕು. ಯುವಕರ ಬಾಳನ್ನು ಅದು ಹಾಳು ಮಾಡುತ್ತಿದೆ, ಇದು ಯಾವ ಕಾರಣಕ್ಕೂ ಹಗುರ ವಿಷಯವಲ್ಲ.

Click on your DTH Provider to Add TV9 Kannada