ಬೆಂಗಳೂರು: ಇನ್ನೇನು ಯುಗಾದಿ ಹಬ್ಬ ಬರುತ್ತಿದೆ ಎಂದು ಕೊರೊನಾ ಸುಮ್ಮನಾಗಲ್ಲ. ಬೆಂಗಳೂರಿನಿಂದ ಗ್ರಾಮೀಣ ಭಾಗಕ್ಕೆ ತೆರಳುವವರು ಎಚ್ಚರಿಕೆಯಿಂದ ಇರಬೇಕು. ಹಳ್ಳಿಗಳಲ್ಲಿ ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳಬೇಕು. ನಗರದಲ್ಲಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. 5 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ಜಾಗರೂಕರಾಗಿರಿ ಎಂದು ಆರೋಗ್ಯ ಸಚಿವ ಸುಧಾಕರ್ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ನಿನ್ನೆ ಒಂದೇ ದಿನ 7,000 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು ನಗರದಲ್ಲಿ 5,000 ಪಾಸಿಟಿವ್ ಕೇಸ್‌ಗಳು ದಾಖಲಾಗಿವೆ. ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳ ಜತೆ ಸಭೆ ನಡೆಸಿ ಆಡಳಿತಾತ್ಮಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಎಲ್ಲ ಹಬ್ಬಗಳಿಗೂ ನಿಯಮ ಜಾರಿಯಲ್ಲಿರುತ್ತದೆ. ಇದರಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಅವರು ಹೇಳಿದರು.
ಕೊರೊನಾ ನಿಯಂತ್ರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಜತೆ ವಿಡಿಯೊ ಸಂವಾದ ಸಭೆ ನಡೆಯಲಿದೆ. ಕೊವಿಡ್ ಎರಡನೇ ಅಲೆ ನಿಯಂತ್ರಣದ ಬಗ್ಗೆ ಹಾಗೂ ಮಾರ್ಗಸೂಚಿ ಅನುಷ್ಠಾನದ ಬಗ್ಗೆ ಚರ್ಚೆ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ರಾಜ್ಯದ ಸ್ಥಿತಿ ಗತಿಯ ಬಗ್ಗೆ ಪ್ರಧಾನಿ ಮೋದಿ ಅವರಿಗೆ ತಿಳಿಸುತ್ತಾರೆ ಎಂದು ಮಾಹಿತಿ ಹಂಚಿಕೊಂಡರು.
50 ಲಕ್ಷಕ್ಕೂ ಅಧಿಕ ಲಸಿಕೆ ಕೊಡುವ ಕೆಲಸ ಆಗಲಿದೆ. ಈ ಕುರಿತಂತೆ 13 ಜಿಲ್ಲೆಗಳ ಜಿಲ್ಲಾಡಳಿತದ ಜೊತೆ ನಿನ್ನೆ ವಿಡಿಯೊ ಸಂವಾದ ಮಾಡಲಾಗಿದೆ. ಎಲ್ಲಾ ಕಡೆಗಳಲ್ಲೂ ಸೋಂಕಿನ ಪ್ರಮಾಣ ದಿನ ಸಾಗುತ್ತಿದ್ದಂತೆ ಹೆಚ್ಚುತ್ತಲೇ ಇದೆ. ಅವರಿಗೆ ನಿರ್ದಿಷ್ಟ ಮಾರ್ಗಸೂಚಿ ನೀಡಲಾಗಿದ್ದು, ಪ್ರತಿ ಜಿಲ್ಲೆಗಳಲ್ಲಿ ವಾರ್ ರೂಮ್, ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕೊರೊನಾ ಎರಡನೇ ಅಲೆ ಭೀತಿಗೆ ತತ್ತರ.. ಮಧ್ಯಪ್ರದೇಶದಲ್ಲಿ ನಾಳೆಯಿಂದ ಲಾಕ್ಡೌನ್