ಮೈಸೂರಿನಲ್ಲಿ ಕೊರೊನಾ ನೆಗೆಟಿವ್ ರಿಪೋರ್ಟ್ ಇದ್ದರಷ್ಟೆ ಸಿನಿಮಾ ವೀಕ್ಷಣೆಗೆ ಅವಕಾಶ: ಏಪ್ರಿಲ್ 10 ರಿಂದ 20 ರವರೆಗೆ ಅನ್ವಯ!

shruti hegde

shruti hegde |

Updated on: Apr 08, 2021 | 1:07 PM

ಮೈಸೂರಿನಲ್ಲಿ ಕೊರೊನಾ ನೆಗೆಟಿವ್​ ವರದಿ ಇದ್ದರೆ ಮಾತ್ರ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 10 ರಿಂದ 20 ರವರೆಗೆ ಅನ್ವಯವಾಗುತ್ತದೆ. ಸಾಲು ಸಾಲು ರಜೆ ಇರುವ ಕಾರಣ ಈ ಆದೇಶ ಜಾರಿ‌ಗೆ‌ ಮುಂದಾಗಿದ್ದೇವೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

ಮೈಸೂರಿನಲ್ಲಿ ಕೊರೊನಾ ನೆಗೆಟಿವ್ ರಿಪೋರ್ಟ್ ಇದ್ದರಷ್ಟೆ ಸಿನಿಮಾ ವೀಕ್ಷಣೆಗೆ ಅವಕಾಶ: ಏಪ್ರಿಲ್ 10 ರಿಂದ 20 ರವರೆಗೆ ಅನ್ವಯ!
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ (ಸಂಗ್ರಹ ಚಿತ್ರ)

ಮೈಸೂರು: ಜಿಲ್ಲೆಯಲ್ಲಿ ಕೊವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕೊರೊನಾ ಎರಡನೇ ಅಲೆ ಆರ್ಭಟ ಕೂಡಾ ಹೆಚ್ಚುತ್ತಿದೆ. ದಿನ ಸಾಗುತ್ತಿದ್ದಂತೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚು ದಾಖಲಾಗುತ್ತಿದೆ. ಈ ನಿಟ್ಟಿನಲ್ಲಿ ಕೊರೊನಾ ನೆಗೆಟಿವ್​ ವರದಿ ಇದ್ದರೆ ಮಾತ್ರ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇಂದಿನಿಂದ ಸಿನಿಮಾ ವೀಕ್ಷಿಸಲು ಥಿಯೇಟರ್​ಗೆ ಹೋಗುವವರು ಕೊವಿಡ್ ರಿಪೋರ್ಟ್​ ಹಿಡಿದೇ ತೆರಳಬೇಕಾಗಿದೆ.

ಥಿಯೇಟರ್ ಜೊತೆಗೆ‌ ಪ್ರವಾಸಿ ತಾಣಗಳಿಗೆ ಹೋಗಬೇಕಿದ್ದರೂ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಮದುವೆ, ಸಭೆ ಸಮಾರಂಭಗಳನ್ನು ಹಮ್ಮಿಕೊಳ್ಳಲು ಅನುಮತಿ ಕಡ್ಡಾಯಗೊಳಿಸಲಾಗಿದೆ. ಈ ಆದೇಶ ಏಪ್ರಿಲ್​ 10 ರಿಂದ 20 ರವರೆಗೆ ಅನ್ವಯವಾಗುತ್ತದೆ. ಸಾಲು ಸಾಲು ರಜೆ ಇರುವ ಕಾರಣ ಈ ಆದೇಶ ಜಾರಿ‌ ಮಾಡಲು‌ ಮುಂದಾಗಿದ್ದೇವೆ, ಇದನ್ನೆಲ್ಲ ವೀಕ್ಷಣೆ ಮಾಡಲು 300 ಜನ ಹೋಂ ಗಾರ್ಡ್ ನೇಮಕ ಮಾಡಲಾಗುತ್ತಿದೆ. ಹೋಂ ಗಾರ್ಡ್ ಜೊತೆ ಪೊಲೀಸ್ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ‌ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ಬರುವವರು ಕೊವಿಡ್ ಟೆಸ್ಟ್ ವರದಿ ತಂದರೆ ಒಳ್ಳೆಯದು. ಬೆಂಗಳೂರಿನಲ್ಲಿ 5 ಸಾವಿರ ಪ್ರಕರಣಗಳು ದಾಖಲಾಗುತ್ತಿದೆ. ಮೈಸೂರಿಗೆ ಬೆಂಗಳೂರಿನಿಂದ ಸಾವಿರಾರು ಜನರು ಮೈಸೂರಿಗೆ ಬರುತ್ತಿದ್ದಾರೆ. ಮೈಸೂರಿನ ಹಿತದೃಷ್ಟಿಯಿಂದ ನೆಗೆಟಿವ್ ವರದಿ‌ ತಂದರೆ ಒಳ್ಳೆಯದು. ಜನರೇ ಈ ಬಗ್ಗೆ ಮುಂಜಾಗ್ರತೆ ವಹಿಸಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲಿ 28 ಕೊರೊನಾ‌ ಸಾವು ಸಂಭವಿಸಿದೆ. ಏಪ್ರಿಲ್ ತಿಂಗಳ 7 ದಿನಗಳಲ್ಲಿ 12 ಸಾವುಗಳು ಸಂಭವಿಸಿದೆ. ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಕಟ್ಟು ನಿಟ್ಟಿನ ಕ್ರಮ ಜಾರಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿಂದು 304 ಜನರಿಗೆ ಕೊರೊನಾ ದೃಢಪಟ್ಟಿದೆ ಎಂದು ಹೇಳಿದ್ದಾರೆ.

ನಗರ ಪ್ರದೇಶಗಳಲ್ಲಿ ಜಾತ್ರೆ ಊರ ಹಬ್ಬಗಳು ರದ್ದಾಗಿದೆ. ಮದುವೆ ಸಭಾಂಗಣದಲ್ಲಿ ಒಳಾಂಗಣ 200 ಜನ ಹಾಗೂ ಹೊರಾಂಗಣಕ್ಕೆ 500 ಜನಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಸಿಪಿ ಇಂದ‌ ಅನುಮತಿಯನ್ನು ಪಡೆಯಬೇಕು‌. ಅನುಮತಿ ಪಡೆದವರಿಗೆ ಕೊವಿಡ್ ನಿಯಮ ಕಡ್ಡಾಯವಾಗಿರುತ್ತದೆ. ಪ್ರವಾಸಿತಾಣಗಳಿಗೆ ಬರುವವರು ಆರೋಗ್ಯ ದೃಷ್ಟಿಯಿಂದ ಕೊವಿಡ್ ಟೆಸ್ಟ್ ಮಾಡಿಸಿದರೆ ಒಳ್ಳೆಯದು‌ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಹೇಳಿಕೆ ನೀಡಿದ್ದಾರೆ.

ಕೊರೊನಾ ಆರ್ಭಟ ದೇಶಾದ್ಯಂತ ಏರಿಕೆಯತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಥಿಯೇಟರ್‌ಗಳಲ್ಲಿ ಈ ಹಿಂದೆ ಶೇಕಡಾ 50ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಕೊವಿಡ್​ ನಿಯಮ ಪಾಲಿಸಲೇ ಬೇಕು ಎಂದು ಸೂಚನೆ ನೀಡಲಾಗಿತ್ತು. ತದನಂತರ ಕನ್ನಡ ಚಿತ್ರರಂಗದ​ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ, ಚಿತ್ರಮಂದಿರಗಳ ಪೂರ್ಣ ಸಾಮರ್ಥ್ಯದ (ಶೇ 100) ಪ್ರವೇಶಾವಕಾಶ ನೀಡಲು ಒಪ್ಪಿಗೆ ಸೂಚಿಸಿತ್ತು. ಈ ಕುರಿತಂತೆ ಆರೋಗ್ಯ ಸಚಿವ ಡಾ.ಸುಧಾಕರ್, ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಒಪ್ಪಿಗೆ ನೀಡಿದ್ದರು. ಸುಮಾರು ಒಂದು ಲಕ್ಷ ಮಂದಿ ಚಿತ್ರರಂಗದ ಮೇಲೆ ಅವಲಂಬಿತರಾಗಿದ್ದಾರೆ. ಚಿತ್ರರಂಗದ ಬೇಡಿಕೆ ಮೇರೆಗೆ, ಮುಖ್ಯಮಂತ್ರಿ ಸೂಚನೆ ಅನುಸರಿಸಿ ಎಲ್ಲ ಚಿತ್ರಮಂದಿರಗಳಲ್ಲಿ ನಾಲ್ಕು ವಾರಗಳ ಅವಧಿಗೆ ಶೇ 100ರಷ್ಟು ಆಸನ ಭರ್ತಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಸುಧಾಕರ್ ಹೇಳಿದ್ದರು.

ಈ ಬಗ್ಗೆ ಸೂಕ್ತ ಮಾರ್ಗಸೂಚಿ ರಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಮಾರ್ಗಸೂಚಿಯೊಂದಿಗೆ ಈ ಸಂಬಂಧ ಆದೇಶ ಹೊರಡಿಸುತ್ತೇವೆ. ಸಿನಿಮಾ ನೋಡಲು ಬರುವ ಪ್ರೇಕ್ಷಕರು, ಥಿಯೇಟರ್ ಮಾಲೀಕರು ಸಹಕರಿಸಬೇಕು. 4 ವಾರಗಳ ನಂತರ ಪರಿಸ್ಥಿತಿ ಗಮನಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ತೀವಿ. ಕೋವಿಡ್-19 ಈ ಕಾರಣದಿಂದ ಹೆಚ್ಚಾದರೆ ಕಠಿಣ ನಿರ್ಬಂಧ ಅನಿವಾರ್ಯವಾಗಲಿದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಥಿಯೇಟರ್‌ಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ -ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada