ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ; ಕೊರೊನಾ ಲಸಿಕೆ ಪ್ರಮಾಣ 10 ಲಕ್ಷಕ್ಕೆ ಏರಿಕೆ: ಡಾ ಕೆ ಸುಧಾಕರ್

| Updated By: ganapathi bhat

Updated on: Aug 30, 2021 | 6:35 PM

Corona Vaccine: ವಾರದಲ್ಲಿ ಒಂದು ದಿನ ಬುಧವಾರ ಲಸಿಕಾ ಉತ್ಸವ ನಡೆಸಿ ಈ ಪ್ರಮಾಣವನ್ನು 5 ದಿಂದ 10 ಲಕ್ಷಕ್ಕೆ ಹೆಚ್ಚಿಸಲಾಗುವುದು. ಇಡೀ ದೇಶದಲ್ಲಿ ಲಸಿಕೆ ಕಾರ್ಯ ಪೂರ್ಣಗೊಂಡ ನಗರ ಬೆಂಗಳೂರು ಆಗಬೇಕು ಎಂಬ ಗುರಿ ಇದೆ ಎಂದರು.

ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ; ಕೊರೊನಾ ಲಸಿಕೆ ಪ್ರಮಾಣ 10 ಲಕ್ಷಕ್ಕೆ ಏರಿಕೆ: ಡಾ ಕೆ ಸುಧಾಕರ್
ಡಾ.ಕೆ. ಸುಧಾಕರ್​
Follow us on

ಬೆಂಗಳೂರು: ಇನ್ನು ಮುಂದೆ ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ ನಡೆಸಿ ಸುಮಾರು 10 ಲಕ್ಷ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆಗಸ್ಟ್ ತಿಂಗಳಲ್ಲೇ 1.10 ಕೋಟಿ ಲಸಿಕೆ ಕೇಂದ್ರ ಸರ್ಕಾರದಿಂದ ಬಂದಿದೆ. ನಾನು ಮತ್ತು ಮುಖ್ಯಮಂತ್ರಿಗಳು ಕೇಂದ್ರದ ಮಟ್ಟದಲ್ಲಿ ಚರ್ಚಿಸಿದ ಬಳಿಕ ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. ಇನ್ನು ಮುಂದೆ ಪ್ರತಿ ದಿನ 5 ಲಕ್ಷ ಲಸಿಕೆ ನೀಡಲಾಗುವುದು. ವಾರದಲ್ಲಿ ಒಂದು ದಿನ ಬುಧವಾರ ಲಸಿಕಾ ಉತ್ಸವ ನಡೆಸಿ ಈ ಪ್ರಮಾಣವನ್ನು 5 ದಿಂದ 10 ಲಕ್ಷಕ್ಕೆ ಹೆಚ್ಚಿಸಲಾಗುವುದು. ಇದರಿಂದ ಒಂದೂವರೆಯಿಂದ ಎರಡು ಕೋಟಿ ಲಸಿಕೆಯನ್ನು ಒಂದು ತಿಂಗಳಲ್ಲಿ ನೀಡಬಹುದು. ಇಡೀ ದೇಶದಲ್ಲಿ ಲಸಿಕೆ ಕಾರ್ಯ ಪೂರ್ಣಗೊಂಡ ನಗರ ಬೆಂಗಳೂರು ಆಗಬೇಕು ಎಂಬ ಗುರಿ ಇದೆ ಎಂದರು.

ಇಡೀ ರಾಜ್ಯದಲ್ಲಿ 4 ಕೋಟಿ ಲಸಿಕೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಕೋಟಿ ಲಸಿಕೆ ನೀಡಲಾಗಿದೆ. ಬೀದರ್, ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗುವುದು. ಕೊಳೆಗೇರಿ ನಿವಾಸಿಗಳಿಗೆ ಪ್ರತಿ ದಿನ ವಿಶೇಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅವರು ವಾಸ ಮಾಡುವ ಸ್ಥಳದಲ್ಲೇ ಸಿಬ್ಬಂದಿ ನಿಯೋಜಿಸಿ ಅಲ್ಲೇ ಲಸಿಕೆ ನೀಡಲಾಗುವುದು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮೊದಲಾದ ಗಡಿಭಾಗದ ಜಿಲ್ಲೆಗಳಲ್ಲಿ ಆದ್ಯತೆ ನೀಡಲಾಗಿದೆ. ಗಡಿಯಿಂದ 20 ಕಿ.ಮೀ. ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುವುದು. ಡಿಸೆಂಬರ್ ಅಂತ್ಯಕ್ಕೆ ಎರಡೂ ಡೋಸ್ ಲಸಿಕೆ ನೀಡುವ ಗುರಿ ಇದೆ ಎಂದರು.

ರಾಜ್ಯದಲ್ಲಿ ಶಾಲಾ, ಕಾಲೇಜುಗಳನ್ನು ಆರಂಭಿಸಲಾಗಿದೆ. ಪ್ರಾಥಮಿಕ ಶಾಲೆ ಆರಂಭಿಸಲು ಚರ್ಚೆಯಾಗಿದೆ. ಈ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸುವುದು ಸರ್ಕಾರ ಕರ್ತವ್ಯ. ಪೋಷಕರ ಕಡೆಯಿಂದಲೂ ಒತ್ತಡ ಬರುತ್ತಿದೆ. ಶಿಕ್ಷಣ ಸಂಸ್ಥೆಗಳು ಆರಂಭವಾದ ಬಳಿಕ ದುಷ್ಪರಿಣಾಮ ಉಂಟಾಗಿಲ್ಲ. ಆದ್ದರಿಂದ ವಿಶ್ವಾಸ ಬಂದಿದೆ ಎಂದರು.

ಎಲ್ಲ ಹಬ್ಬಗಳ ಆಚರಣೆಗೆ ಒಂದೇ ಕೋವಿಡ್ ಮಾರ್ಗಸೂಚಿ ನೀಡಲಾಗಿದೆ. ಸರ್ಕಾರಕ್ಕೆ ಯಾವುದೇ ಚಟುವಟಿಕೆ ನಿರ್ಬಂಧಿಸುವುದರಲ್ಲಿ ಸಂತೋಷವಿಲ್ಲ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಎಲ್ಲ ಹಿತ ಕಾಯುವುದು ಸರ್ಕಾರ ಕೆಲಸ. ಕೋವಿಡ್ ಮಾರ್ಗಸೂಚಿಗೆ ನಮ್ಮನ್ನೂ ಒಳಗೊಂಡಂತೆ ಎಲ್ಲರೂ ಬೆಲೆ ಕೊಡಬೇಕು. ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಚುನಾವಣೆ ಮುಂದೂಡಬೇಕು ಎಂದು ಕೋರಲಾಗಿತ್ತು. ಈ ಎಲ್ಲ ಸಂದಿಗ್ಧ ಪರಿಸ್ಥಿತಿ ಹೊರತಾಗಿಯೂ ಕೋವಿಡ್ ನಿಯಂತ್ರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಮೊಬೈಲ್ ನಂಬರ್ ಸಮಸ್ಯೆ
ಮೊದಲ ಡೋಸ್ ಪಡೆದಾಗ ನೀಡಿದ ಫೋನ್ ಸಂಖ್ಯೆಯನ್ನೇ ಎರಡನೇ ಡೋಸ್ ಪಡೆದಾಗಲೂ ನೀಡಬೇಕು. ಇಲ್ಲದಿದ್ದರೆ ಲಸಿಕೆ ಪಡೆದವರ ಪ್ರಮಾಣದ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗುವುದಿಲ್ಲ. ಕೋವಿಡ್ ಮೂರನೇ ಅಲೆ ತಡೆಯಲು ಸುರಕ್ಷತಾ ಕ್ರಮ ಪಾಲಿಸಬೇಕು ಎಂದು ಕೋರಿದರು.

ಫಾನಾ ಸಂಘಟನೆ ಮೂರನೇ ಅಲೆ ವಿರುದ್ಧ ಹೋರಾಡುವ ಕುರಿತು ವರದಿ ನೀಡಿದೆ. ಇದರ ಸಲಹೆಯನ್ನೂ ನೋಡಲಾಗುವುದು. ಇದರ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯ ಜೊತೆಗೂ ಚರ್ಚಿಸಲಾಗುವುದು. ಈವರೆಗೆ ಜಾರಿಯಲ್ಲಿ ಇಲ್ಲದ ಶಿಫಾರಸುಗಳನ್ನೂ ಜಾರಿ ಮಾಡಲಾಗುವುದು. ಮೂರನೇ ಅಲೆ ತಡೆಗಟ್ಟಲು ಸರ್ಕಾರ ಸಿದ್ಧವಾಗಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: Covishield: ಡೆಲ್ಟಾ ಪ್ರಭೇದದ ಬ್ರೇಕ್ ಥ್ರೂ ಪ್ರಕರಣ ತಡೆಯಲು ಕೊವಿಶೀಲ್ಡ್ ಲಸಿಕೆ ವಿಫಲ – ಅಧ್ಯಯನ

ಭಾರತದಲ್ಲಿ ಇಂದು ಮತ್ತೆ 45 ಸಾವಿರ ದಾಟಿದ ಕೊರೊನಾ ಕೇಸ್​; ಮುಕ್ಕಾಲು ಭಾಗ ಕೇರಳದಲ್ಲೇ ಪತ್ತೆ