ಬೆಂಗಳೂರು: ನಗರ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬುಧವಾರ ಸಿಡಿಲು ಗುಡುಗು ಸಹಿತ ಮಳೆಯಾಗಿದೆ. ಮಳೆಯಿಂದಾಗಿ ನಗರದಲ್ಲಿ ಟ್ರಾಫಿಕ್ ಕೆಲ ಸಮಯ ಅಸ್ತವ್ಯಸ್ತಗೊಂಡಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೈಸೂರು, ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ಗದಗ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.
ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಹಿನ್ನೆಲೆಯಲ್ಲಿ ಕೆ.ಜಿ.ರಸ್ತೆಯ ಕಂದಾಯ ಭವನದ ಎದುರು ರಸ್ತೆಗೆ ಕಾರ್ಕ್ ಬೀಜದ ಕಾಯಿಗಳು ಉದುರಿವೆ. ರಸ್ತೆ ಮೇಲೆ ಹರಿಯುತ್ತಿರುವ ನೀರಿನಲ್ಲಿ ನೊರೆ ಉತ್ಪತ್ತಿಯಾದ ಕಾರಣ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬೀಳುತ್ತಿವೆ. ಸ್ಥಳದಲ್ಲಿ ನಿಧಾನಗತಿಯಲ್ಲಿ ವಾಹನ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಂಡಿದ್ದಾರೆ. ಹಲಸೂರು ಗೇಟ್ ಸಂಚಾರ ಠಾಣೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ.
ಎಲ್ಲೆಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಮಳೆ
ಬೆಂಗಳೂರಿನ ಹಲವೆಡೆ ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆ ದಾಖಲಾಗಿದೆ. ಸುದ್ದುಗುಂಟೆ ಪಾಳ್ಯ 45 ಎಂಎಂ, ಜಯನಗರ 45 ಎಂಎಂ, ಸಿದ್ದಾಪುರ 45 ಎಂಎಂ, ಕೋರಮಂಗಲ 24 ಎಂಎಂ, ಹೊಯ್ಸಳ ನಗರ 18 ಎಂಎಂ, ಗುಟ್ಟಹಳ್ಳಿ 15 ಎಂಎಂ, ಮನೋರಾಯನ ಪಾಳ್ಯ 15 ಮಿಲಿಮೀಟರ್ ಮಳೆ, HSR ಲೇಔಟ್ 13 ಎಂಎಂ, ಶಾಂತಲನಗರ 10 ಎಂಎಂ, ಈಜೀಪುರ 10 ಎಂಎಂ, ವರ್ತೂರು 22 ಎಂಎಂ, ಬೆಳ್ಳಂದೂರಿನಲ್ಲಿ 21 ಮಿಲಿಮೀಟರ್ ಮಳೆ ದಾಖಲಾಗಿದೆ.
ಚಿಕ್ಕಬಳ್ಳಾಪುರ ನಗರದಲ್ಲಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ನೀರು ಹೊರಹಾಕಲು ಮಹಿಳೆಯರು ಹರಸಾಹಸಪಟ್ಟರು. ನಗರದ 19ನೇ ವಾರ್ಡ್ನಲ್ಲಿರುವ ಮಹಾಕಾಳಿ ದೇವಸ್ಥಾನವೂ ಜಲಾವೃತವಾಗಿತ್ತು. ಎಂ.ಜಿ.ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ಕಿರಿಕಿರಿಯಾಯಿತು. ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿಯಿತು.
ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದ ಬಳಿಯ ತೋಟದಲ್ಲಿ ಸಿಡಿಲು ಬಡಿದು ನಾಗಮ್ಮ (55) ಎಂಬುವವರು ಮೃತಪಟ್ಟರು. ಮತ್ತೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೈಸೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಹಲವು ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ವಾಹನ ಸವಾರರು ಪರದಾಡುವಂತಾಗಿದೆ.
ಗದಗ ಜಿಲ್ಲೆಯ ಹಲವಡೆ ಭಾರಿ ಮಳೆಯಾಗಿದೆ. ತಾಲ್ಲೂಕಿನ ಕೋಟುಮಚಗಿ ಗ್ರಾಮದ ವಾರ್ಡ್ ನಂಬರ್ 4ರಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿನ ನೀರು ಹೊರ ಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದ ಜನರು ಮಳೆ ಸುರಿದ ಕಾರಣ ಸಂತೋಷಗೊಂಡಿದ್ದಾರೆ. ಮಕ್ಕಳು ಮಳೆಯ ನೀರಿನಲ್ಲಿ ಆಟವಾಡಿ ಸಂಭ್ರಮಿಸಿದರು.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಅಬ್ಬರದಿಂದ ಧರೆಗಿಳಿದ. ಚಿಕ್ಕಮಗಳೂರು, ಎನ್.ಆರ್.ಪುರ, ಮೂಡಿಗೆರೆ, ತರೀಕೆರೆ ಮತ್ತು ಕೊಪ್ಪ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಕಾಫಿ ನಾಡಿಗೆ ವರುಣ ತಂಪೆರದಿದ್ದಾನೆ. ಹಾಸನ ಜಿಲ್ಲೆಯಲ್ಲಿಯೂ ಬಹುದಿನಗಳ ಬಳಿಕ ಉತ್ತಮ ಮಳೆಯಾಗಿದೆ.
(Heavy Rain in Bengaluru Mysuru Hassan women dead in Chikkaballapura District)
ಇದನ್ನೂ ಓದಿ: Bengaluru Rain: ಬಿಸಿಲಿನಿಂದ ಬೆಂದಿದ್ದ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ; ರಾಜಧಾನಿಯ ಹಲವೆಡೆ ಜಿಟಿಜಿಟಿ ಮಳೆ
ಇದನ್ನೂ ಓದಿ: ತೆಲಂಗಾಣದ ಹಲವೆಡೆ ಅಕಾಲಿಕ ಮಳೆ, ಬೆಳೆ ನಾಶ
Published On - 7:40 pm, Wed, 14 April 21