ಕರ್ನಾಟಕದಲ್ಲಿ‌ ಹಿಟ್ಲರ್ ಆಡಳಿತ ಇದೆಯಾ? ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ನಿರ್ಧಾರಕ್ಕೆ ಜೋಶಿ ಸೇರಿ ಅನೇಕರಿಂದ ಖಂಡನೆ

ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತಪ್ಪು ಹಾಗೂ ತಿರುಚಿದ ಮಾಹಿತಿ ಪ್ರಚಾರ ಮಾಡಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದೆ. ಬಿಜೆಪಿ ನಾಯಕರು ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ‘‘ಹಿಟ್ಲರ್ ಆಡಳಿತ’’ ಎಂಬ ಆರೋಪ ಮಾಡಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದಲ್ಲಿ‌ ಹಿಟ್ಲರ್ ಆಡಳಿತ ಇದೆಯಾ? ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ನಿರ್ಧಾರಕ್ಕೆ ಜೋಶಿ ಸೇರಿ ಅನೇಕರಿಂದ ಖಂಡನೆ
Pralhad Joshi
Image Credit source: Twitter

Updated on: May 26, 2025 | 11:58 AM

ಬೆಂಗಳೂರು, ಮೇ 26: ಕರ್ನಾಟಕ ಕಾಂಗ್ರೆಸ್ ಸರ್ಕಾರದ (Karnataka Congress Govt) ಬಗ್ಗೆ ತಪ್ಪು ಹಾಗೂ ತಿರುಚಿದ ಮಾಹಿತಿ, ಸುಳ್ಳು ಸಂಗತಿ ಅಳವಡಿಸಿ ಬಿಜೆಪಿ (BJP) ಸುಳ್ಳು ಪ್ರಚಾರ ಮಾಡಿದೆ ಎಂದು ಕಾಂಗ್ರೆಸ್ (Congress) ಆರೋಪಿಸಿದೆ. ಈ ವಿಚಾರವಾಗಿ ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವಂತೆ ಕಾಂಗ್ರೆಸ್ ಸರ್ಕಾರ ಒಳಾಡಳಿತ ಇಲಾಖೆ ಅಧಿಸೂಚನೆ ಹೊರಡಿಸಿದೆ. ಈ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ‌ ಹಿಟ್ಲರ್ ಆಡಳಿತ ಜಾರಿಗೆ ಬಂದಿದೆಯಾ ಎಂಬ ಪ್ರಶ್ನೆ ಮೂಡಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

‘ಕರ್ನಾಟಕ ರಾಜ್ಯದಲ್ಲಿ‌ ಹಿಟ್ಲರ್ ಆಡಳಿತ ಜಾರಿಗೆ ಬಂದಿದೆಯಾ ಎಂಬ ಪ್ರಶ್ನೆ ಬಿಟ್ಟುಬಿಡದೆ ಕಾಡುತ್ತಿದೆ. ಸಂವಿಧಾನದ ಕುರಿತು, ಡಾ ಬಾಬಾ ಸಾಹೇಬರ ಬಗ್ಗೆ, ಅವರ ನೀತಿಗಳನ್ನು ಪಾಲಿಸುತ್ತೇವೆ ಎಂದು ಹೇಳುವ ಕಾಂಗ್ರೆಸ್ ಸರ್ಕಾರದ ನಡೆ ಹಿಟ್ಲರ್ ಆಡಳಿತಕ್ಕಿಂತಲೂ ಕಡೆಯಾಗಿದೆ‌. ವಾಕ್ ಸ್ವತಂತ್ರ ಕಿತ್ತುಕೊಳ್ಳುವುದು ಸಂವಿಧಾನದಲ್ಲಿ ಬರೆದಿದೆಯಾ ಸಿಎಂ ಸಿದ್ದರಾಮಯ್ಯನವರೇ? ನಿಮ್ಮ ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿದರೆ ನಿಮಗೆ ಯಾಕೆ ಸಂಕೋಚ ಡಿಕೆ ಶಿವಕುಮಾರ್ ರವರೇ? ನಿಮ್ಮ‌ ಸರ್ಕಾರದ ದುರಾಡಳಿತವನ್ನು, ಭ್ರಷ್ಟತೆಯನ್ನು, ಸುಭಿಕ್ಷವಾಗಿದ್ದ ರಾಜ್ಯದ ಆರ್ಥಿಕತೆಯನ್ನು ಹಾಳು ಮಾಡಿದ್ದನ್ನು, ಮಿತಿಮೀರಿದ ಓಲೈಕೆ ರಾಜಕಾರಣದ ಬಗ್ಗೆ ಮಾತನಾಡಿದರೆ ನಿಮಗೆ ಏಕೆ ಭಯ? ಖಾಸಗಿ ನ್ಯೂಸ್ ಚಾನೆಲ್ ಮುಖ್ಯಸ್ಥರನ್ನು ಬಂಧಿಸಲು ಕರ್ನಾಟಕದ ಪೊಲೀಸರನ್ನು ಕಳುಹಿಸಿರುವುದು ಯಾವ ಸಂದೇಶ ನೀಡುವುದಕ್ಕಾಗಿ? ನಿಮ್ಮ‌ ಸರ್ಕಾರದ ವೈಫಲ್ಯ ಮುಚ್ಚಿಸಿಡಲು, ನಿಮ್ಮ ಆತಂಕ, ದುಗುಡ ಈ ಆದೇಶದಲ್ಲಿ ಭಾಸವಾಗುತ್ತಿದೆ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಈ ಮಾರ್ಗವನ್ನು ಹಿಡಿದಿರುವಂತೆ ಕಾಣುತ್ತಿದೆ‌ ಸಿದ್ದರಾಮಯ್ಯನವರೇ! ನಿಮ್ಮ‌ ಹತಾಶೆ ನಮಗೆ ಅರ್ಥವಾಗುತ್ತಿದೆ. ಆದರೆ, ಈ ಹಿಟ್ಲರ್ ಆಡಳಿತದ ಪದ್ದತಿ, ಮೊಘಲರ ಆಡಳಿತದ ಪದ್ದತಿಯನ್ನು ಕರ್ನಾಟಕ ಎಂದಿಗೂ ಸಹಿಸುವುದಿಲ್ಲ’ ಎಂದು ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ
3 ಸಾವಿರ ಕೋಟಿ ಪಿಎಫ್ ಬಾಕಿ ಉಳಿಸಿಕೊಂಡ ಸಾರಿಗೆ ನಿಗಮಗಳು: ನೌಕರರಿಗೆ ಸಂಕಷ್ಟ
ವಾಡಿಕೆಗಿಂತ ಮೊದಲೇ ಮುಂಗಾರು ಆಗಮನ, ಕರ್ನಾಟಕ, ಕೇರಳದಲ್ಲಿ ಭಾರಿ ಮಳೆ
ಕರಾವಳಿ ಕರ್ನಾಟಕ, ಮಲೆನಾಡು ಭಾಗದಲ್ಲಿ ಭಾರಿ ಮಳೆ; ಎಲ್ಲೆಲ್ಲಿ ಏನೇನಾಯ್ತು?
ಮುಂಗಾರು ಮಳೆ: ಕರವಾಳಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಅವಾಂತರ

ಪ್ರಲ್ಹಾದ್ ಜೋಶಿ ಟ್ವೀಟ್


‘ಪ್ರಜಾಪ್ರಭುತ್ವ ವ್ಯವಸ್ಥೆಯ ಕತ್ತು ಹಿಸುಕಲು ಭಾರತದದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕರಾಳ ಇತಿಹಾಸ ಕಾಂಗ್ರೆಸ್ ಪಕ್ಷದ್ದು. ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿರುವ ವಿರೋಧ ಪಕ್ಷವನ್ನು ದಮನ ಮಾಡಲು ವಿರೋಧಿ ರಾಜಕೀಯ ನೇತಾರರು ಹಾಗೂ ಪ್ರಮುಖರನ್ನು ಜೈಲಿಗೆ ತಳ್ಳಿದ ಕುಖ್ಯಾತಿ ಕಾಂಗ್ರೆಸ್ ಪಕ್ಷದ್ದು. ತುರ್ತು ಪರಿಸ್ಥಿತಿ ಹೆಸರಿನಲ್ಲಿ ಮಾಧ್ಯಮ ಕಚೇರಿಗಳಿಗೆ ಬೀಗ ಜಡಿದು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಸಂವಿಧಾನದ ಆಶಯದ ಮೇಲೆ ಅಟ್ಟಹಾಸ ಮೆರೆದ ಇತಿಹಾಸ ಕಾಂಗ್ರೆಸ್ ಪಕ್ಷದ್ದು. ಅಧಿಕಾರಕ್ಕೆ ಬಂದಾಗಲೆಲ್ಲಾ ಪಾಳೆಗಾರಿಕೆ ಗುಂಗಿನಲ್ಲಿ ವರ್ತಿಸುವ ಕಾಂಗ್ರೆಸ್ಸಿಗರು ಕರ್ನಾಟಕದಲ್ಲಿ ಕಳೆದ 2 ವರ್ಷಗಳಲ್ಲಿ ನಿರಂಕುಶ ಪ್ರಭುತ್ವ ಸಾಧಿಸಲು ಹವಣಿಸುತ್ತಿದ್ದಾರೆ. ಸರಣಿ ಭ್ರಷ್ಟಾಚಾರಗಳು, ಅಭಿವೃದ್ಧಿ ಶೂನ್ಯ ಆಡಳಿತವನ್ನು ಪ್ರಶ್ನಿಸಿ ಹೋರಾಡುತ್ತಿರುವ ವಿರೋಧ ಪಕ್ಷಗಳನ್ನು ಈವರೆವಿಗೂ ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು ಬೆದರಿಸುತ್ತಿದ್ದ ಕಾಂಗ್ರೆಸ್, ವಿಧಾನ ಸಭೆಯ ಅಧ್ಯಕ್ಷರನ್ನು ಬಳಸಿಕೊಂಡು ವಿರೋಧ ಪಕ್ಷದ 18 ಸದಸ್ಯರನ್ನು ಸುದೀರ್ಘ ಅವಧಿಗೆ ಅಮಾನತ್ತು ಮಾಡಿ ಸಭಾಧ್ಯಕ್ಷ ಪೀಠವನ್ನು ತನ್ನ ಸರ್ವಾಧಿಕಾರತನ ಪ್ರದರ್ಶಿಸಲು ಬಳಸಿಕೊಂಡಿತ್ತು’ ಎಂದು ಬಿವೈ ವಿಜಯೇಂದ್ರ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

‘ಇದೀಗ ಸಾಧನೆಯ ಹೆಸರಿನಲ್ಲಿ ರಾಜ್ಯದ ಜನರಿಗೆ ಸುಳ್ಳು ಹೇಳಲು ಹೊರಟು ಬರಿದಾಗಿರುವ ಬೊಕ್ಕಸವನ್ನು ಮತ್ತಷ್ಟು ಬರಿದು ಮಾಡಲು ದುಂದುವೆಚ್ಚದಲ್ಲಿ ‘ಸಾಧನ ಸಮಾವೇಶ’ ಮಾಡಲು ಹೊರಟ ಜನವಿರೋಧಿ ನಡೆಯನ್ನು ಪ್ರಶ್ನಿಸಿ ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ ಮಾಧ್ಯಮಗಳ ಮೂಲಕ ಜಾಹಿರಾತು ಬಿಡುಗಡೆ ಮಾಡಿದರೆ, ಅದರಿಂದ ವಿಚಲಿತಗೊಂಡು ಮಾನನಷ್ಟ ಮೊಕದ್ದಮೆ ಹೂಡಲು ಹೊರಟಿದೆ. ಇದಕ್ಕೆ ಸರ್ಕಾರದ ವ್ಯವಸ್ಥೆ ಹಾಗೂ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಇದೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ವಿರೋಧ ಪಕ್ಷ ಹಾಗೂ ಮಾಧ್ಯಮದವರನ್ನು ಬೆದರಿಸುವ ಕರಾಳ ಅಧಿಸೂಚನೆ ಹೊರಡಿಸಿದೆ. ಕೇವಲ ಜಾಹಿರಾತಿಗೆ ಇಷ್ಟೊಂದು ಹೆದರಿರುವ ಕಾಂಗ್ರೆಸ್ ಸರ್ಕಾರದ ನಡೆ ಪಲಾಯನವಾದ ಹಾಗೂ ‘ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಂತೆ’ ಎಂಬುದನ್ನು ಪ್ರತಿಬಿಂಬಿಸುತ್ತಿದೆ’ ಎಂದು ವಿಜಯೇಂದ್ರ ವಾಗ್ದಳಿ ನಡೆಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಯಾವುದೇ ಬೆದರಿಕೆಗೂ ಬಿಜೆಪಿ ಹೆದರಲ್ಲ: ವಿಜಯೇಂದ್ರ

‘ಕಾಂಗ್ರೆಸ್ ಸರ್ಕಾರದ ಯಾವುದೇ ಬೆದರಿಕೆಗೂ ಬಿಜೆಪಿ ಹೆದರಲ್ಲ. ಅಂಜುವ ಪ್ರಶ್ನೆಯೇ ಇಲ್ಲ. ಪೊಲೀಸ್ ಹಾಗೂ ಕಾನೂನಿನ ಹೆಸರಿನಲ್ಲಿ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಬಹುದು ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನದ ಪರಮಾವಧಿಯಲ್ಲದೇ ಬೇರೆನೂ ಅಲ್ಲ. ನಿಮ್ಮ ಸರ್ವಾಧಿಕಾರಿ ಮನಃಸ್ಥಿತಿಗೆ ಭಟ್ಟಂಗಿಗಳ ಹಾಗೂ ಅವಿವೇಕಿಗಳ ಸಲಹೆಯನ್ನು ಆಧರಿಸಿ, ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿರುವುದು ಕೇವಲ ಭಾರತೀಯ ಜನತಾ ಪಾರ್ಟಿ ವಿರುದ್ಧವಷ್ಟೇ ಅಲ್ಲ, ಮಾಧ್ಯಮಗಳ ವಿರುದ್ಧವೂ ಸೇಡು ತೀರಿಸಿಕೊಳ್ಳಲು ಹೊರಟಿರುವುದು ಸ್ಪಷ್ಟವಾಗಿದೆ’ ಎಂದು ವಿಜಯೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: ಸಂಧಾನ ಸಭೆ ಯಶಸ್ವಿ: 18 ಬಿಜೆಪಿ ಶಾಸಕರ ಅಮಾನತು ವಾಪಸ್‌!

ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿಯ 2ನೇ ಅಧ್ಯಾಯ ಆರಂಭವಾಗಿದೆ, ಅದನ್ನು ಹಿಮ್ಮೆಟ್ಟಿಸುವ ಶಕ್ತಿ ಪ್ರಜಾಪ್ರಭುತ್ವಕ್ಕಿದೆ, ಕರ್ನಾಟಕದ ಜನರಿಗಿದೆ, ವಿರೋಧ ಪಕ್ಷಗಳಿಗಿದೆ ಹಾಗೂ ಮಾಧ್ಯಮಗಳಿಗಿದೆ ಎಂಬುದನ್ನು ಶೀಘ್ರದಲ್ಲಿ ಕಾಂಗ್​ರೆಸ್ ಸರಕಾರ ಎದುರು ನೋಡಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:47 am, Mon, 26 May 25