ವ್ಯಾಪಕ ಮಳೆ: ಬೆಂಗಳೂರು ಗ್ರಾಮಾಂತರ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 2 ದಿನ ಶಾಲಾ-ಕಾಲೇಜುಗಳಿಗೆ ರಜೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 18, 2021 | 6:36 PM

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಅಂಗನವಾಡಿಗಳಿಗೂ ರಜೆ ಘೋಷಿಸಲಾಗಿದೆ

ವ್ಯಾಪಕ ಮಳೆ: ಬೆಂಗಳೂರು ಗ್ರಾಮಾಂತರ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 2 ದಿನ ಶಾಲಾ-ಕಾಲೇಜುಗಳಿಗೆ ರಜೆ
ಮಳೆಯಲ್ಲಿ ನೆನೆಯುತ್ತಾ ಹೆಜ್ಜೆ ಹಾಕುತ್ತಿರುವ ವಿದ್ಯಾರ್ಥಿಗಳು (ಸಂಗ್ರಹ ಚಿತ್ರ)
Follow us on

ಬೆಂಗಳೂರು: ರಾಜ್ಯದಾದ್ಯಂತ ಮಳೆ ಆರ್ಭಟ ಮುಂದುವರಿದಿದ್ದು ಮಳೆಯಿಂದ ತೀವ್ರ ಹಾನಿ ಅನುಭವಿಸಿರುವ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಾಳೆ-ನಾಡಿದ್ದು (ನ.19-20) ಎರಡು ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೋಲಾರ ಜಿಲ್ಲೆಯ ಡಿಡಿಪಿಐ ರೇವಣಸಿದ್ದಪ್ಪ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಡಿಡಿಪಿಐ ಜಯರಾಮ ರೆಡ್ಡಿ ಈ ವಿಷಯವನ್ನು ಎರಡು ಪ್ರತ್ಯೇಕ ಪತ್ರಿಕಾ ಹೇಳಿಕೆಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಅಂಗನವಾಡಿಗಳಿಗೂ ರಜೆ ಘೋಷಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅಶ್ವತ್ಥಮ್ಮ ಟಿವಿ9ಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ
ಪ್ರಾಥಮಿಕ, ಪ್ರೌಢಶಾಲೆಗಳಿಗೆ 2 ದಿನ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇನ್ನೂ ಒಂದು ವಾರ ಮುಂದುವರಿಯುವ ಸಾಧ್ಯತೆಯಿದೆ. ನವೆಂಬರ್ 23ರವರೆಗೆ ಭಾರಿ ಮಳೆ ನಿರೀಕ್ಷಿತ ಎಂದು ಹವಾಮಾನ ಇಲಾಖೆ ಹೇಳಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸುರಿಯುವ ಭೀತಿ ಎದುರಾಗಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಧಾರಾಕಾರ ಮಳೆಯಿಂದ ಬೆಂಗಳೂರಿನಲ್ಲಿ ವ್ಯಾಪಾರ ಕಳೆಗುಂದಿದೆ. ಖರೀದಿ ಮಾಡಬೇಕು ಎಂದುಕೊಂಡಿರುವ ಗ್ರಾಹಕರು ಮತ್ತು ವ್ಯಾಪಾರಕ್ಕೆಂದು ಅಂಗಡಿ ಬಾಗಿಲು ತೆಗೆದಿರುವ ವ್ಯಾಪಾರಸ್ಥರು ವಾಣಿಜ್ಯ ಚಟುವಟಿಕೆ ನಡೆಸಲು ಆಸ್ಪದವಿಲ್ಲದೆ ಕಂಗಾಲಾಗಿದ್ದಾರೆ.

‘ಕಳೆದ 15 ದಿನಗಳಿಂದ ಮದುವೆಗೆ ಬಟ್ಟೆ ಖರೀದಿ ಮಾಡಬೇಕು ಎಂದು ಎಂದುಕೊಂಡಿದ್ದೆವು. ಆದರೆ ಪ್ರತಿದಿನ ಮಳೆ ಸುರಿಯುತ್ತಿದೆ. ಮಳೆ ನಿಲ್ಲಲಿ ಎಂದು ಕಾಯುತ್ತಾ ಕುಳಿತರೆ ಮದುವೆ ದಿನ ಹತ್ತಿರ ಬರುತ್ತೆ. ಹೀಗಾಗಿ ಮಳೆ ನಡುವೆಯೇ ವ್ಯಾಪಾರ ಮಾಡಲು ಬಂದಿದ್ದೇವೆ. ಈಗ ಆಟೋದಲ್ಲಿ ಹೋಗ್ಬೇಕಂದ್ರೆ ಡಬಲ್ ಕೇಳ್ತಾರೆ. ಏನೂ ಮಾಡೋಕೆ‌ ಆಗೊಲ್ಲ ಕೇಳಿದಷ್ಟು ಕೊಟ್ಟು ಹೋಗಬೇಕಾಗಿದೆ’ ಎಂದು ಬಟ್ಟೆ ಖರೀದಿಗೆಂದು ಚಿಕ್ಕಪೇಟೆಯ ಅಂಗಡಿಗೆ ಬಂದಿದ್ದ ಮಹಿಳೆಯೊಬ್ಬರು ಪ್ರತಿಕ್ರಿಯಿಸಿದರು.

ತಮ್ಮ ಪರಿಸ್ಥಿತಿ ವಿವರಿಸಿದ ಚಿಕ್ಕಪೇಟೆ ಬಟ್ಟೆ ಅಂಗಡಿ ವ್ಯಾಪಾರಿಗಳು, ‘ಜಿಟಿಜಿಟಿ ಮಳೆಗೆ ತುಂಬಾ ನಷ್ಟ ಆಗಿದೆ. ಜನರು ಮನೆಯಿಂದ ಹೊರಗೆ ಬರ್ತಿಲ್ಲ. ಶೇ 70ರಷ್ಟು ವ್ಯಾಪಾರ ಕುಸಿದಿದೆ. ಕೊರೊನಾ ಬಳಿಕ ಈಗಷ್ಟೇ ಚೇತರಿಸಿಕೊಳ್ತಿದ್ವಿ. ಮಳೆ ಹೀಗೆ ಮುಂದುವರಿದ್ರೆ ಕಷ್ಟವಾಗುತ್ತೆ. ಮದುವೆ, ತುರ್ತು ಕಾರ್ಯಕ್ರಮಗಳಿಗೆ ಬೇಕಾದವರು ಮಾತ್ರ ಬರ್ತಿದ್ದಾರೆ ಎಂದು ಅಲವತ್ತುಕೊಂಡರು.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದುವರಿದ ಮಳೆ: 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
ಇದನ್ನೂ ಓದಿ: ತಮಿಳುನಾಡಿನಲ್ಲಿ ನ.21ರವರೆಗೂ ಮಳೆ ಸಾಧ್ಯತೆ; ಪರಿಸ್ಥಿತಿ ನಿಭಾಯಿಸಲು ವಾರ್​ ರೂಂ ನಿರ್ಮಾಣ

Published On - 6:11 pm, Thu, 18 November 21