
ಬೆಂಗಳೂರು, (ಜುಲೈ 03): ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾವೇರಿ 2.0 (kaveri 2.0) ತಂತ್ರಾಂಶದ ಮೂಲಕ ಕಾಗದರಹಿತ ಆಸ್ತಿ ನೋಂದಣಿ ವ್ಯವಸ್ಥೆಯನ್ನು ಪರಿಚಯಿಸಿದೆ.ಇದರಿಂದ ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾಗದದ ದಾಖಲೆಗಳ ಅವಶ್ಯಕತೆಯೇ ಇರುವುದಿಲ್ಲ. ಡಿಜಿಟಲ್ ದಾಖಲೆಗಳು ಲಭ್ಯವಾಗಲಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಪ್ರಮುಖವಾಗಿ ನಿಮ್ಮ ಆಸ್ತಿಯ ನೋಂದಣಿಗಾಗಿ ಉಪನೋಂದಣಾಧಿಕಾರಿಗಳ ಕಚೇರಿಯ ಮುಂದೆ ದಿನಗಟ್ಟಲೆ ಕಾಯುವ ಅಗತ್ಯವಿಲ್ಲ. ನೋಂದಣಿ ಪ್ರಕ್ರಿಯೆ ಕೇವಲ 10 ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ.
ಕಾವೇರಿ 2.0 ತಂತ್ರಾಂಶ ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅತ್ಯಾಧುನಿಕ ಆನ್‌ಲೈನ್ ಆಸ್ತಿ ನೋಂದಣಿ ವ್ಯವಸ್ಥೆಯಾಗಿದೆ. ಇದು ಹಳೆಯ ಕಾವೇರಿ ತಂತ್ರಾಂಶದ ಸುಧಾರಿತ ಆವೃತ್ತಿಯಾಗಿದೆ. ಇದು ಭೂಮಿ, ಇ-ಸ್ವತ್ತು, ಖಜಾನೆ-2, ಮತ್ತು ಸಾಕಲಾ ಮುಂತಾದ ಇಲಾಖೆಗಳೊಂದಿಗೆ ಸಂಯೋಜಿತಗೊಂಡು ಕೇವಲ 10 ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಮತ್ತು ಮಧ್ಯವರ್ತಿಗಳಿಲ್ಲದೆ ಪಾರದರ್ಶಕ ಸೇವೆ ಒದಗಿಸಲು ಸಹಾಯಕವಾಗಿದೆ.
ಆಸ್ತಿ ನೋಂದಣಿ: ಸಾರ್ವಜನಿಕರು ಉಪನೋಂದಣಿ ಕಚೇರಿಗಳಲ್ಲಿ ಭೌತಿಕವಾಗಿ ಕಾಯುವುದನ್ನು ತಪ್ಪಿಸಲು ಆನ್‌ಲೈನ್ ಮೂಲಕವೇ ಅಪಾಯಿಂಟ್‌ಮೆಂಟ್‌ಗಳನ್ನು ಕಾಯ್ದಿರಿಸಬಹುದು. ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದೆ.
ವಿವಾಹ ನೋಂದಣಿ: ವಿವಾಹಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ನೋಂದಾಯಿಸಿಕೊಳ್ಳಬಹುದು ಮತ್ತು ಕಚೇರಿಯಲ್ಲಿ ನಡೆಯುವ ಔಪಚಾರಿಕ ಪ್ರಕ್ರಿಯೆಗಳಿಗಾಗಿ ಮುಂಚಿತವಾಗಿ ಸಮಯವನ್ನು ನಿಗದಿಪಡಿಸಿಕೊಳ್ಳಬಹುದು.
ಇ-ಮುದ್ರಾಂಕ ಸೇವೆಗಳು: ಭೌತಿಕ ಸ್ಟ್ಯಾಂಪ್ ಪೇಪರ್‌ಗಳ ಬಳಕೆಯನ್ನು ಕಡಿಮೆ ಮಾಡಲು ಮತ್ತು ವಂಚನೆ ತಡೆಯಲು ಅಧಿಕೃತ ಚಾನೆಲ್‌ಗಳ ಮೂಲಕ ಆನ್‌ಲೈನ್‌ನಲ್ಲಿಯೇ ಮುದ್ರಾಂಕ ಶುಲ್ಕವನ್ನು ಪಾವತಿಸುವ ಆಧುನಿಕ ವ್ಯವಸ್ಥೆ ಇಲ್ಲಿದೆ.
ಆಸ್ತಿ ಮೌಲ್ಯಮಾಪನ: ಯಾವುದೇ ಆಸ್ತಿಯನ್ನು ಕೊಳ್ಳುವ ಅಥವಾ ಮಾರುವ ಮೊದಲು, ಆ ಪ್ರದೇಶದ ಮಾರ್ಗದರ್ಶಿ ಮೌಲ್ಯ ಎಷ್ಟಿದೆ ಎಂಬುದನ್ನು ಆಸ್ತಿಯ ಪ್ರಕಾರ ಮತ್ತು ಬಳಕೆಗೆ ಅನುಗುಣವಾಗಿ ಆನ್‌ಲೈನ್‌ನಲ್ಲಿಯೇ ಪರಿಶೀಲಿಸಬಹುದು.
ಋಣಭಾರ ಪ್ರಮಾಣಪತ್ರ : ಯಾವುದೇ ಆಸ್ತಿಯು ಕಾನೂನುಬದ್ಧವಾಗಿದೆಯೇ ಮತ್ತು ಅದಕ್ಕೆ ಯಾವುದೇ ಆರ್ಥಿಕ ಅಥವಾ ಕಾನೂನು ಹೊಣೆಗಾರಿಕೆಗಳು ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಪೋರ್ಟಲ್ ಮೂಲಕ ಋಣಭಾರ ಪ್ರಮಾಣಪತ್ರವನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಆನ್‌ಲೈನ್ ದಾಖಲೆ ಪರಿಶೀಲನೆ: ಆಸ್ತಿ ಖರೀದಿಸುವ ಮೊದಲು ಅದು ಅಸಲಿಯೇ ಅಥವಾ ನಕಲಿಯೇ ಎಂಬ ಅಪಾಯವನ್ನು ತಪ್ಪಿಸಲು ಕರ್ನಾಟಕ ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಈ ಪೋರ್ಟಲ್‌ನಲ್ಲಿ ಪರಿಶೀಲಿಸುವ ಅವಕಾಶವಿದೆ.
ಶುಲ್ಕದ ಅಂದಾಜು: ಆಸ್ತಿಯ ಮೌಲ್ಯಕ್ಕೆ ಅನುಗುಣವಾಗಿ ಎಷ್ಟು ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂಬುದನ್ನು ಮುಂಚಿತವಾಗಿ ಲೆಕ್ಕಹಾಕಲು ಇಲ್ಲಿ ಕ್ಯಾಲ್ಕುಲೇಟರ್ ಸೌಲಭ್ಯವಿದ್ದು, ಇದು ಆರ್ಥಿಕ ಯೋಜನೆಗೆ ಸಹಕಾರಿಯಾಗಿದೆ.
ಕಾವೇರಿ 2.0 ಮೂಲಕ ಅರ್ಜಿ ಸಲ್ಲಿಕೆಯಿಂದ ಅನುಮೋದನೆಯವರೆಗೆ 7 ಸರಳ ಹಂತಗಳಲ್ಲಿ ಕಾಗದರಹಿತ ನೋಂದಣಿ ಪೂರ್ಣಗೊಳಿಸಿ.#eGovernance #GoodGovernance #DigitalIndia #stamps #property #propertyregistration #Kaveri2 #PaperlessRegistration pic.twitter.com/eijndPqdAz
— IGR karnataka (@IGRKarnataka) February 3, 2026