HS Doreswamy Passes Away: ಎಚ್ ಎಸ್ ದೊರೆಸ್ವಾಮಿ ನಿಧನಕ್ಕೆ ವಿವಿಧ ವಲಯದ ಗಣ್ಯರಿಂದ ಸಂತಾಪ

| Updated By: ganapathi bhat

Updated on: Aug 23, 2021 | 12:27 PM

HS Doreswamy Death News: ಹಿರಿಯರ ನಿಧನಕ್ಕೆ ಸಮಾಜದ ವಿವಿಧ ವಲಯದ ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ. ರಾಜಕಾರಣಿಗಳು, ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ಜನಸಾಮಾನ್ಯರ ಸಹಿತ ನೂರಾರು ಮಂದಿ ಕಂಬನಿ ಮಿಡಿದಿದ್ದಾರೆ.

HS Doreswamy Passes Away: ಎಚ್ ಎಸ್ ದೊರೆಸ್ವಾಮಿ ನಿಧನಕ್ಕೆ ವಿವಿಧ ವಲಯದ ಗಣ್ಯರಿಂದ ಸಂತಾಪ
ಎಚ್ ಎಸ್ ದೊರೆಸ್ವಾಮಿ
Follow us on

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯರಾಗಿದ್ದು, ತಮ್ಮ ಇಳಿವಯಸ್ಸಿನಲ್ಲಿಯೂ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಿದ್ದ 104 ವರ್ಷದ ಹಿರಿಜೀವ ಎಚ್.ಎಸ್. ದೊರೆಸ್ವಾಮಿ ಇಂದು (ಮೇ 26) ಮಧ್ಯಾಹ್ನ 1.30 ಸುಮಾರಿಗೆ ನಿಧನ ಹೊಂದಿದರು. ಇತ್ತೀಚೆಗೆ ಕೊರೊನಾ ಸೋಂಕನ್ನು ಗೆದ್ದಿದ್ದ ಅವರು ಬಳಿಕ ಬಳಲಿಕೆಯ ಕಾರಣಕ್ಕೆ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಹೃದಯಾಘಾತದಿಂದ ನಿಧನರಾದರು.

ಹಿರಿಯರ ನಿಧನಕ್ಕೆ ಸಮಾಜದ ವಿವಿಧ ವಲಯದ ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ. ರಾಜಕಾರಣಿಗಳು, ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ಜನಸಾಮಾನ್ಯರ ಸಹಿತ ನೂರಾರು ಮಂದಿ ಕಂಬನಿ ಮಿಡಿದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಮತ್ತು ಇನ್ನೂ ಹಲವರು ಟ್ವೀಟ್ ಮಾಡುವ ಮೂಲಕ, ಫೇಸ್​ಬುಕ್​ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನಮನ ಸಲ್ಲಿಸಿದ್ದಾರೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀವಾದಿ, ಪತ್ರಕರ್ತ, ಸಮಾಜ ಸೇವಕರು, ನಾಡುನುಡಿ ಜನಪರ ಕಾಳಜಿಗಳಿಗೆ ಸದಾ ಧ್ವನಿಯಾಗಿದ್ದ ಶತಾಯುಷಿ ಹೆಚ್.ಎಸ್.ದೊರೆಸ್ವಾಮಿ ವಿಧಿವಶರಾದ ಸುದ್ದಿ ಕೇಳಿ ಅತೀವ ದುಃಖವಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸುದೀರ್ಘ ಸಾರ್ವಜನಿಕ ಜೀವನ ನಡೆಸಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅಶ್ವತ್ಥ್ ನಾರಾಯಣ ಬರೆದುಕೊಂಡಿದ್ದಾರೆ.

ನಮ್ಮನ್ನು ಅಗಲಿ ಹೋದ ಎಚ್.ಎಸ್. ದೊರೆಸ್ವಾಮಿ ಅವರು ನಮ್ಮೆಲ್ಲರ ಆತ್ಮ ಸಾಕ್ಷಿಯಾಗಿದ್ದರು. ತಪ್ಪು ಕಂಡಾಗ ಎಚ್ಚರಿಸಿ, ಸರಿ ಕಂಡಾಗ ಬೆಂಬಲಿಸುತ್ತಿದ್ದ ಮಾರ್ಗದರ್ಶಕರಾಗಿದ್ದರು. ಇಳಿ ವಯಸ್ಸಿನಲ್ಲಿಯೂ ಜಗ್ಗದೆ, ಕುಗ್ಗದೆ ಅನ್ಯಾಯ-ಅಕ್ರಮ‌ ಕಂಡಾಗ ಬೀದಿಗಿಳಿಯುತ್ತಿದ್ದ ಅವರು ಎಲ್ಲರ ಪಾಲಿನ ಸ್ಪೂರ್ತಿಯಾಗಿದ್ದರು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯೋತ್ತರ ನಂತರ ಸೆರೆವಾಸ ಅನುಭವಿಸಿದ್ದ ದೊರೆಸ್ವಾಮಿಯವರ ಬದುಕಿನ ಆದರ್ಶ, ಮೌಲ್ಯಗಳು ಎಲ್ಲರಿಗೂ ಸ್ಪೂರ್ತಿ. ಇಂತಹ ಮಹಾನ್ ಚೇತನ ಎರಡು ಶತಮಾನಗಳ ಕಾಲಘಟ್ಟದಲ್ಲಿ ನಮ್ಮೆಲ್ಲರಿಗೂ ಹೋರಾಟದ ಸ್ಪೂರ್ತಿಯ ಸೆಲೆಯಾಗಿ ಮುಂಚೂಣಿಯ ಮಾರ್ಗದರ್ಶಕರಾಗಿದ್ದರು ಎಂಬುದನ್ನು ಅತ್ಯಂತ ವಿನೀತ ಭಾವದಿಂದ ಸ್ಮರಿಸಿಕೊಳ್ಳುತ್ತೇನೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.

ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಬಿ.ವಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ಹಿರಿಯ ನ್ಯಾಯವಾದಿ ಬ್ರಿಜೇಶ್ ಕಲ್ಲಪ್ಪ, ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ, ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ್ರು ಮತ್ತಿತರರು ನೆನಕೆಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: HS Doreswamy Passed Away: ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ನಿಧನ

ಸ್ವಾತಂತ್ರ್ಯ ಸಿಕ್ಕ ನಂತರವೂ ಹೋರಾಟದ ಹಾದಿಯಲ್ಲೇ ನಡೆದು ಬಂದ ಶತಾಯುಷಿ ಎಚ್​.ಎಸ್​.ದೊರೆಸ್ವಾಮಿ ಅವರಿಗೆ ಭಾವಪೂರ್ಣ ವಿದಾಯ

Published On - 3:18 pm, Wed, 26 May 21