ನಿರ್ಭಯಾ ನಿಧಿ ಬಳಕೆ ಗುತ್ತಿಗೆ ಕರಡು ವಿವಾದ: ನಿಜವಾದ ಗುರಿ ಯಾರು? ಯಾಕೆ?

ನಿರ್ಭಯಾ ನಿಧಿ ಬಳಕೆಗೋಸ್ಕರ ಕರೆಯಲಿರುವ ಗುತ್ತಿಗೆಯ ಕರಡನ್ನು ತಯಾರು ಮಾಡುವ ವಿಚಾರದಲ್ಲಿ ಹಿರಿಯ ಐಪಿಎಸ್​ ಅಧಿಕಾರಿಗಳಾದ ರೂಪಾ ಮೌದ್ಗಿಲ್ ಮತ್ತು ಹೇಮಂತ್ ನಿಂಬಾಳ್ಕರ್ ಅವರ ನಡುವಿನ ಮಾತಿನ ಸಮರವನ್ನು ಕೆಸರೆರಚಾಟವಂದೋ ಅಥವಾ ಹೊಲಸು ಎಂದು ವರ್ಣಿಸಿದರೆ, ಇಬ್ಬರೂ ತಪ್ಪು ಮಾಡಿದ್ದಾರೆ ಎಂಬ ಅಭಿಪ್ರಾಯ ಮೂಡುವ ಸಾಧ್ಯತೆ ಹೆಚ್ಚು. ಇಡೀ ಪ್ರಕರಣವನ್ನು ಯಾಕೆ ಮತ್ತು ಹೇಗೆ ಬೇರೆ ರೀತಿ ನೋಡಬೇಕು ಎಂಬ ವಿಶ್ಲೇಷಣೆ ಇಲ್ಲಿದೆ.

ನಿರ್ಭಯಾ ನಿಧಿ ಬಳಕೆ ಗುತ್ತಿಗೆ ಕರಡು ವಿವಾದ: ನಿಜವಾದ ಗುರಿ ಯಾರು? ಯಾಕೆ?
ಹೇಮಂತ್​ ನಿಂಬಾಳ್ಕರ್, ಡಿ.ರೂಪಾ ಮತ್ತು ಬಿ.ಎಸ್.ಯಡಿಯೂರಪ್ಪ
bhaskar hegde

|

Dec 29, 2020 | 7:01 PM

ಬೆಳಗಾವಿಯ ಹಿಂಡಲಗಾ ಬಂದೀಖಾನೆಯ ಸಿಬ್ಬಂದಿ ರಾಜಾರೋಷವಾಗಿ ವಿವಿಐಪಿಗಳಿಗೆ ರಾಜಾತಿಥ್ಯ ನೀಡುತ್ತಿದ್ದ ಅಕ್ರಮವನ್ನು ಈಗ್ಗೆ ಕೆಲ ದಿನಗಳ ಹಿಂದೆ ಟಿವಿ9 ಸುದೀರ್ಘವಾಗಿ ವರದಿ ಮಾಡಿತ್ತು. ಟಿವಿ9 ವರದಿ ನೋಡಿ, ಇಲಾಖೆಯ ಮೇಲಾಧಿಕಾರಿಗಳು ಅಲ್ಲಿಗೆ ಭೇಟಿ ನೀಡಿದರು. ಏನೂ ಆಗಿಲ್ಲ, ಎಲ್ಲ ಸರಿ ಇದೆ ಎಂಬ ವರದಿ ನೀಡಿದರು. ಅಲ್ಲಿಗೆ ಮುಗಿಯಿತು ಆ ಕಥೆ. ಟಿವಿಯಲ್ಲಿ ಇದನ್ನು ನೋಡಿದ ಕರ್ನಾಟಕದ ಜನ ಹೇಗೆ ಪ್ರತಿಕ್ರಿಯಿಸಿರಬಹುದು?

ಕೆಲ ವರ್ಷಗಳ ಹಿಂದೆ ಜಯಲಲಿತಾ ಅವರ ಗೆಳತಿ ಶಶಿಕಲಾ ಅವರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇದೇ ರೀತಿ ರಾಜಾತಿಥ್ಯ ನೀಡಲಾಗುತ್ತಿದೆ ಹಾಗೂ ಕೊಡುವ ರಾಜಾತಿಥ್ಯಕ್ಕೆ ಪ್ರತಿಯಾಗಿ, ಇಲಾಖೆ ಅಧಿಕಾರಿಗಳು ಕಪ್ಪ ಕಾಣಿಕೆ ಪಡೆಯುತ್ತಾರೆ ಎಂದು ಅಂದಿನ ಬಂದೀಖಾನೆ ಡಿಐಜಿ ಡಿ. ರೂಪಾ ಮೌದ್ಗಿಲ್ ವರದಿ ಕೊಟ್ಟಿದನ್ನು ಜನ ನೆನಪಿಸಿಕೊಂಡಿರಬಹುದು. ಬೆಳಗಾವಿಯ ಸುದ್ದಿ ನೋಡಿದ ಟಿವಿ9 ವೀಕ್ಷಕರಿಗೆ ಶಶಿಕಲಾ ರಾಜಾತಿಥ್ಯವೂ ನೆನಪಾಗಿರಬಹುದು. ‘ಇದೇನು ಹೊಸದಲ್ಲ. ಈ ವ್ಯವಸ್ಥೆ ಬ್ರಹ್ಮ ಬಂದರೂ ಬದಲು ಮಾಡಲು ಸಾಧ್ಯವಿಲ್ಲ’ ಅಂತ ಅವರು ಉದ್ಗರಿಸಿದ್ದಿರಬಹುದು.

ಈ ವಿಚಾರದ ಬಗ್ಗೆ ಈಗ ಯಾಕೆ ಚರ್ಚೆ ಮಾಡಬೇಕು ಅಂತ ಓದುಗರು ಅಂದುಕೊಳ್ಳಬಹುದು. ಕಾರಣವಿದೆ. ಈಗ ಮತ್ತೆ ಡಿ. ರೂಪಾ ಮೌದ್ಗಿಲ್ ಸುದ್ದಿಯಲ್ಲಿದ್ದಾರೆ. ಬೆಂಗಳೂರಿನಲ್ಲಿ ನಿರ್ಭಯಾ ನಿಧಿಯ ಬಳಕೆ ಕುರಿತಾಗಿ ಗುತ್ತಿಗೆ ನೀಡಲು ಹೊರಟಿರುವ ಕುರಿತು ಗದ್ದಲ ಎದ್ದಿದೆ. ಇದಕ್ಕೆ ಮೂಲ ಕಾರಣ, ನಗರದ ಹೆಚ್ಚುವರಿ ಆಯುಕ್ತ, ಹೇಮಂತ್ ನಿಂಬಾಳ್ಕರ್ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಬರೆದ ಪತ್ರ. ಡಿಸೆಂಬರ್​ 9 ರಂದು ಬರೆದ ತಮ್ಮ ಪತ್ರದಲ್ಲಿ, ನಿಂಬಾಳ್ಕರ್​ ಅವರು ಮಾಡಿದ ಆರೋಪದಲ್ಲಿ ಹಲವು ವೈರುಧ್ಯಗಳು ಮೇಲ್ನೋಟಕ್ಕೇ ಕಾಣುವಂತಿದ್ದವು. ಉತ್ತರ ಸಿಗದ ಆ ಪ್ರಶ್ನೆಗಳನ್ನು ಮೊದಲು ನೋಡೋಣ. ಆಮೇಲೆ ರೂಪಾ ಅವರ ಬಗ್ಗೆ ಕೆಲವರು ಮಾಡಿರುವ ಆರೋಪ ಮತ್ತು ಇಡೀ ಘಟನೆಯನ್ನು ಜನ ಹೇಗೆ ನೋಡಬಹುದು ಎಂಬ ವಿಚಾರಕ್ಕೆ ಬರೋಣ.

ನಿಂಬಾಳ್ಕರ್ ಅರೋಪ ಏನು?

ಗೃಹ ಕಾರ್ಯದರ್ಶಿಯವರ ಕಚೇರಿಯ ದೂರವಾಣಿ ಬಳಸಿಕೊಂಡು, ಓರ್ವ ಮಹಿಳಾ ಐಪಿಎಸ್​ ಅಧಿಕಾರಿಯೋರ್ವರು ಗೃಹ ಕಾರ್ಯದರ್ಶಿ ಸೋಗಿನಲ್ಲಿ ಅರ್ನಸ್ಟ್ ಆಂಡ್ ಯಂಗ್ ಕಂಪೆನಿಯ ಹಿರಿಯ ಅಧಿಕಾರಿಗೆ ದೂರವಾಣಿ ಮಾಡಿ ನಿರ್ಭಯಾ ನಿಧಿಯ ಬಳಕೆ ಕುರಿತಾಗಿ ತಯಾರಿಸುತ್ತಿರುವ ಗುತ್ತಿಗೆ ಕರಡು ಕುರಿತು ವಿಚಾರಿಸಿದ್ದಾರೆ. ಗೃಹ ಕಾರ್ಯದರ್ಶಿ ಅಂತ ಸೋಗು ಹಾಕಿಕೊಂಡು (impersonation) ಅರ್ನಸ್ಟ್​ ಅಂಡ್ ಯಂಗ್​ನ ಅಧಿಕಾರಿಗೆ ಮಾತಾಡಿ ಗುತ್ತಿಗೆ ಕರಡನ್ನು ಬದಲಾವಣೆ ಮಾಡಲು ಪ್ರಯತ್ನಿಸಿದ್ದಾರೆ. ಸೋಗು ಹಾಕಿಕೊಂಡು ಕರೆ ಮಾಡಿದ ವ್ಯಕ್ತಿಗೆ ಪ್ರಾಯಶಃ ಬೇರೆ ಯಾರಿಗೋ ಈ ಕೆಲಸದ ಗುತ್ತಿಗೆ ಕೊಡಿಸುವ ಉದ್ದೇಶವಿದೆ. ಹಾಗಾಗಿ ಗುತ್ತಿಗೆ ಕರಡನ್ನು ಬದಲಾವಣೆ ಮಾಡಿಸುವ ಉದ್ದೇಶವಿಟ್ಟುಕೊಂಡು ಅರ್ನಸ್ಟ್​ ಅಂಡ್ ಯಂಗ್ ಕಂಪೆನಿಯ ಹಿರಿಯ ಅಧಿಕಾರಿ ಮೇಲೆ ಪ್ರಭಾವ ಬೀರಲು ದೂರವಾಣಿ ಕರೆ ಮಾಡಿದ್ದಾರೆ ಎಂದು ಅವರು ಅರೋಪಿಸಿದ್ದಾರೆ. ಅವರ ಪತ್ರದ ಒಕ್ಕಣಿಕೆಯನ್ನು ಓದಿದಾಗ ಹಲವಾರು ಪ್ರಶ್ನೆ ಮತ್ತು ವೈರುಧ್ಯಗಳು ಕಾಣುತ್ತಿವೆ. ಈ ಪ್ರಶ್ನೆ ಮತ್ತು ವೈರುಧ್ಯಗಳಿಗೆ ಮೊನ್ನೆ ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೂಡ ಅವರು ಸಮಜಾಯಿಷಿ ನೀಡಲಿಲ್ಲ ಎಂಬುದು ವಿಶೇಷ. ಹಾಗಾದರೆ ಆ ಪ್ರಶ್ನೆ ಮತ್ತು ವೈರುಧ್ಯಗಳು ಯಾವುವು?

ಮೊದಲನೆಯ ವೈರುಧ್ಯ: ತಮ್ಮ ಗುರುತನ್ನು ಮರೆಮಾಚಿ ಬೇರೆಯವರ ಧ್ವನಿ ಮತ್ತು ಹೆಸರನ್ನು ದುರುಪಯೋಗ ಮಾಡಿದಾಗ ಮಾತ್ರ ಅದು ಸೋಗು ಹಾಕಿ ಮಾಡಿದ ಕರೆ ಎಂದಾಗುತ್ತದೆ. ನಿಂಬಾಳ್ಕರ್ ತಮ್ಮ ಪತ್ರದಲ್ಲಿ ಓರ್ವ ಮಹಿಳಾ ಐಪಿಎಸ್​ ಅಧಿಕಾರಿ ಸೋಗು ಹಾಕಿದ್ದಾರೆ ಅಂತ ಹೇಳಿದ್ದಾರೆ ಅಲ್ಲವೆ? ಒಂದೊಮ್ಮೆ ಸೋಗು ಹಾಕಿಕೊಂಡು ದೂರವಾಣಿ ಮಾಡಿದ ವ್ಯಕ್ತಿ ಮಹಿಳಾ ಐಪಿಎಸ್​ ಅಧಿಕಾರಿ ಅಂತ ಖಡಾಖಂಡಿತವಾಗಿ ಹೇಳೋದಾದರೆ, ಆಗ ಅದು ಸೋಗು ಹೇಗೆ ಆಗುತ್ತದೆ?

ಎರಡನೆಯ ವೈರುಧ್ಯ: ನಿಂಬಾಳ್ಕರ್ ಅವರಿಗೆ ಕಳಿಸಿದ ಈ-ಮೇಲ್​ನಲ್ಲಿ ಆರ್ನಸ್ಟ್ ಅಂಡ್ ಯಂಗ್ ಕಂಪೆನಿಯ ಹಿರಿಯ ಅಧಿಕಾರಿ, ನಿರ್ಭಯಾ ನಿಧಿಯ ಬಳಕೆ ಕುರಿತಾಗಿ ಕೈಗೊಳ್ಳಲು ಹೊರಟಿರುವ ಗುತ್ತಿಗೆ ಬಗ್ಗೆ ಐಪಿಎಸ್​ ಅಧಿಕಾರಿ ಮಾತನಾಡಿದ್ದನ್ನು ಪ್ರಸ್ತಾಪಿಸುತ್ತಾರೆ. ಮೂಲಗಳ ಪ್ರಕಾರ, ಈ-ಮೇಲ್ ಬಂದಿದ್ದು ನವೆಂಬರ್​ ಮೊದಲ ವಾರದಲ್ಲಿ. ನಿಂಬಾಳ್ಕರ್ ಅವರೇ ಹೇಳಿಕೊಂಡಂತೆ ಓರ್ವ ಅಧಿಕಾರಿ ಗುತ್ತಿಗೆ ಕರಡನ್ನು ತಿದ್ದಿಸಲು ಪ್ರಭಾವ ಬೀರಿದ್ದರು ಎಂತಾದರೆ, ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತರಲು ನಿಂಬಾಳ್ಕರ್​ ಒಂದು ತಿಂಗಳು ಕಾದಿದ್ದು ಏಕೆ? ಸೋಗಿನಾಟ ಮಾಡಲು ಹೊರಟಿದ್ದರು ಎಂಬ ಅನುಮಾನ ಅವರಿಗೆ ಬಂದಿದ್ದರೆ, ಅವರು ಕೂಡಲೇ ಚುರುಕಾಗಬೇಕಿತ್ತು. ಡಿಸೆಂಬರ್​ ಮೊದಲ ವಾರದಲ್ಲಿ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದ ಅವರು ಡಿಸೆಂಬರ್ 25 ರಂದು ಪತ್ರಿಕೆ ಮತ್ತು ಟಿವಿ ವಾಹಿನಿಗಳಲ್ಲಿ ಬಂದ ನಂತರವೇ ಈ ಕುರಿತು ಮಾತಾಡಿದ್ದು ಏಕೆ? ಅವರೇ ಹೇಳುವಂತೆ ಇದು ಬಹಳ ಗಂಭೀರ ವಿಚಾರ. ಇಲ್ಲಿ ಸೋಗಿನಲ್ಲಿ ಮೋಸದಾಟ ನಡೆಯುತ್ತಿದೆ ಎಂಬ ಅನುಮಾನ ಅವರಿಗೆ ಬಂದಿತ್ತು. ಆದರೂ ಅವರು ಯಾಕೆ ಸುಮ್ಮನಿದ್ದರು?

ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಮದನ್​ ಗೋಪಾಲ್​ ಅವರ ಪ್ರಕಾರ ನಿಂಬಾಳ್ಕರ್​ ನೇರವಾಗಿ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯೋ ಹಾಗಿಲ್ಲ. ಅವರು, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಬರೆಯಬೇಕಿತ್ತು ಮತ್ತು ಅವರ ಮೂಲಕ ಮುಖ್ಯ ಕಾರ್ಯದರ್ಶಿ ಅವರಿಗೆ ಕಳಿಸಬೇಕಾಗಿತ್ತು. ಟಿವಿ9 ಕನ್ನಡ ಡಿಜಿಟಲ್​ ಜೊತೆಗೆ ಮಾತನಾಡಿದ ಅವರು ಇನ್ನೂ ಎರಡು ವಿಚಾರ ಪ್ರಸ್ತಾಪಿಸುತ್ತಾರೆ. ಈಗಾಗಲೇ ಐಎಮ್​ಎ ಕೇಸಿನಲ್ಲಿ ಆರೋಪ ಎದುರಿಸುತ್ತಿರುವ ನಿಂಬಾಳ್ಕರ್​ ಈ ನಿರ್ಭಯಾ ನಿಧಿ ಬಳಕೆ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ತೆಗೆದುಕೊಳ್ಳಬಾರದಿತ್ತು.

ರೂಪಾ ಮೇಲಿನ ಆರೋಪ

ಇವರು ದಕ್ಷರು ಆದರೆ ಪ್ರಚಾರಪ್ರಿಯರು. ಹೋದಲ್ಲೆಲ್ಲ ಕಿರಿಕ್ ಮಾಡುತ್ತಾರೆ? ಈ ಬಾರಿ ಕೂಡ ಅದನ್ನೇ ಮಾಡಿದ್ದು. ತಮ್ಮ ಅಧಿಕಾರ ಮೀರಿ ಆರ್ನಸ್ಟ್ ಅಂಡ್ ಯಂಗ್ ಕಂಪೆನಿಯ ಹಿರಿಯ ಅಧಿಕಾರಿಗೆ ದೂರವಾಣಿ ಮಾಡಿದ್ದಾರೆ. ನಿರ್ಭಯಾ ಮಹಿಳಾ ಯೋಜನೆ ಗುತ್ತಿಗೆ ಕರಡು ವಿಚಾರಕ್ಕೆ ಬಂದರೆ, ರೂಪಾ ಅವರು ತಮ್ಮ ಅಧಿಕಾರ ವ್ಯಾಪ್ತಿಗೂ ಮೀರಿ ವರ್ತಿಸಿದ್ದಾರೆ. ಹೀಗೆ ಅವರ ಮೇಲೆ ಒಂದಾದ ಮೇಲೊಂದು ಆರೋಪ ಬಂದಿದೆ ಅಲ್ಲವೇ?

ಇಲ್ಲೊಂದು ಕುತೂಹಲಕಾರಿ ಅಂಶವನ್ನು ಜನ ಗಮನಿಸಬೇಕು. ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್​ ಅವರು ರೂಪಾ ಅವರಿಗೆ ಜ್ಞಾಪನಾ ಪತ್ರ (memo) ಬರೆದು, ಅಧಿಕಾರ ವ್ಯಾಪ್ತಿಗೂ ಮೀರಿ ವರ್ತಿಸಿದ ಬಗ್ಗೆ ಸ್ಪಷ್ಟೀಕರಣ ಕೇಳಿದ್ದಾರೆ. ತಮಾಷೆ ಎಂದರೆ, ಸೇವಾ ನೀತಿಯನ್ನು ಮೀರಿ ಪತ್ರಿಕಾಗೋಷ್ಠಿ ಮಾಡಿರುವ ನಿಂಬಾಳ್ಕರ್ ಅವರಿಗೆ ಯಾಕೆ ಜ್ಞಾಪನಾ ಪತ್ರ (memo) ನೀಡಿಲ್ಲ ಎಂಬುದು ಕುತೂಹಲಕಾರಿ ಅಂಶವಾಗಿದೆ.

ಇನ್ನು ಇವರ ಮೇಲಿನ ಪ್ರಚಾರಪ್ರಿಯತೆಯ ಆರೋಪದ ಬಗ್ಗೆ ನೋಡೋಣ. ಓರ್ವ ಅಧಿಕಾರಿ ತಮ್ಮ ಕೆಲಸ ಬಿಟ್ಟು ಪ್ರಚಾರಪ್ರಿಯತೆಗೆ ಇಳಿದಿದ್ದರೆ ಅದು ತಪ್ಪು. ಆಗ ಅವರು ಸೇವಾ ನಿಯಮ ಉಲ್ಲಂಘಿಸಿದಂತೆ ಆಗುತ್ತದೆ. ಅವರ ವಿರೋಧಿಗಳು ಕೂಡ ಇಲ್ಲೀವರೆಗೆ ಅಂಥ ಆರೋಪ ಮಾಡಿಲ್ಲ. ಇಂಥ ಆರೋಪ ವ್ಯಕ್ತಿಗತ (subjective) ಕೆಳಮಟ್ಟದ ವಿಮರ್ಶೆ ಆಗುತ್ತದೆಯೇ ಹೊರತು ಗಂಭೀರ ಆರೋಪ ಆಗಲು ಸಾಧ್ಯವಿಲ್ಲ. ಇನ್ನೊಂದು ಕೋನದಿಂದ ನೊಡೋಣ. ಸಿಕ್ಕಿರುವ ಮಾಹಿತಿಗಳನ್ನು ಪದೇ ಪದೇ ಸಾರ್ವಜನಿಕವಾಗಿ ಚರ್ಚಿಸುತ್ತಾರೆ ಅಥವಾ ಮಾಧ್ಯಮಕ್ಕೆ ಸೋರಿಕೆ ಮಾಡುತ್ತಾರೆ ಎಂದುಕೊಳ್ಳೋಣ. ಆಗಸ್ಟ್​ನಲ್ಲಿ ಗೃಹ ಕಾರ್ಯದರ್ಶಿಯಾಗಿ ಇವರು ಬರುತ್ತಾರೆ. ಆದರೆ ಅವರ ಡೆಸ್ಕ್​ಗೆ ಬರುವ ಯಾವ ವಿಚಾರಗಳನ್ನು ಅವರು ಸೋರಿಕೆ ಮಾಡಿದ ಆರೋಪ ಅಥವಾ ಅನುಮಾನ ಸರಕಾರದಲ್ಲಿ ಇರುವ ಹಿರಿಯ ಅಧಿಕಾರಿಗಳಿಗೆ ಬಂದಿಲ್ಲ. ಹಾಗಾದರೆ ಅವರು ಮಾಹಿತಿ ಸೋರಿಕೆ ಮಾಡಿ ಪ್ರಚಾರ ಪಡೆಯುತ್ತಾರೆ ಎಂಬ ಆರೋಪ ಕೂಡ ಸುಳ್ಳು ಎಂದಾಯ್ತು. ಮೂರನೇಯದು, ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅವರು ಈ ಬಾರಿ ಹೆಜ್ಜೆ ಇಟ್ಟಿದ್ದಾರೆ ಎಂಬ ಆರೋಪದ ಕುರಿತು. ಮದನ್​ ಗೋಪಾಲ್​ ಅವರು ಹೇಳಿದಂತೆ, ಮುಖ್ಯ ಕಾರ್ಯದರ್ಶಿಯೇ ರೂಪಾ ಅವರನ್ನು ನಿರ್ಭಯಾ ನಿಧಿ ಬಳಕೆ ಕುರಿತಾಗಿ ಚರ್ಚಿಸುವ ಸಭೆಗೆ ಕರೆದಿದ್ದರಿಂದ, ಆ ಸಭೆಗೆ ಹೋಗುವಾಗ ಅಥವಾ ಹೋಗಿ ಬಂದ ನಂತರ ರೂಪಾ ಅವರು ಈ ಕುರಿತು ಆರ್ನಸ್ಟ್ ಅಂಡ್ ಯಂಗ್ ಕಂಪೆನಿಯ ಹಿರಿಯ ಅಧಿಕಾರಿಯಿಂದ ಸ್ಪಷ್ಟೀಕರಣ ಕೇಳಿದ್ದಿರಬಹುದು. ಇದು ತಪ್ಪಲ್ಲ ಎಂದು ಮದನ್​ ಗೋಪಾಲ್​ ಅವರು ವಿಶ್ಲೇಷಿಸುತ್ತಾರೆ.

ಈಗ ಬೆಳಗಾವಿಗೆ ಹೋಗೋಣ ಬನ್ನಿ..

ಈ ಸುದ್ದಿ ವಿಶ್ಲೇಷಣೆಯ ಪ್ರಾರಂಭದಲ್ಲಿ ಬೆಳಗಾವಿಯ ಬಂದೀಖಾನೆಯ ವಿಚಾರ ಮಾತನಾಡಿದ್ದೆವು. ಈಗ ಪುನಃ ಆ ವಿಚಾರವನ್ನು ನೋಡೋಣ. 2017ರಲ್ಲಿ ಮೊದಲ ಬಾರಿಗೆ, ಪರಪ್ಪನ ಅಗ್ರಹಾರದ ಬಂದೀಖಾನೆಯಲ್ಲಿ ನಡೆದ ಮೋಸದಾಟದ ಬಗ್ಗೆ ಮೊದಲ ಬಾರಿಗೆ ದನಿ ಎತ್ತಿದಾಗಲೂ ರೂಪಾ ಅವರನ್ನು ಅಪಮಾನಗೊಳಿಸುವ ಪ್ರಯತ್ನ ನಡೆಸಲಾಗಿತ್ತು. ಮಾತನಾಡುವ ರೂಪಾ ಅಲ್ಲಿಂದ ಹೋದರೆ, ನಾವೆಲ್ಲ ಸರಿ ಮಾಡುತ್ತೇವೆ ಎಂದು ಪತ್ರಿಕೆ, ಟಿವಿ ವರದಿಗಾರರನ್ನು ನಂಬಿಸಲಾಗಿತ್ತು. ಅಂದು ಇದ್ದ ಸರಕಾರಕ್ಕೆ ಇರಿಸು ಮುರುಸಾದ ಹಿನ್ನೆಲೆಯಲ್ಲಿ ಕೆಲವು ರಾಜಕಾರಿಣಿಗಳು ಸೇರಿದಂತೆ ಬಹಳ ಜನ ರೂಪಾ ಅವರನ್ನು ಅತ್ಯಂತ ಕೆಟ್ಟಭಾಷೆಯಲ್ಲಿ ಬಯ್ದಿದ್ದನ್ನು ನೆನಪಿಸಿಕೊಳ್ಳಬಹುದು. ಅವರನ್ನು ಬಂದೀಖಾನೆ ಡಿಐಜಿ ಕುರ್ಚಿಯಿಂದ ಎತ್ತಂಗಡಿ ಮಾಡಿದ್ದಾಯಿತು. ಇಡೀ ಬಂದೀಖಾನೆ ವ್ಯವಸ್ಥೆ ಬದಲಾಯಿತೇ? ಏನೇನು ಬದಲಾವಣೆ ಆಗಿಲ್ಲ. 2017ರಲ್ಲಿ ಪರಪ್ಪನ ಅಗ್ರಹಾರದ ಬಂದೀಖಾನೆಯಲ್ಲಿ ಏನು ನಡೆದಿತ್ತೋ, ಅದೇ ಈಗ ಹಿಂಡಲಗಾ ಬಂದೀಖಾನೆಯಲ್ಲೂ ನಡೆದಿದೆ ಎಂದ ಹಾಗಾಯ್ತು.

ರೂಪಾ ಅವರು ಪತ್ರಿಕೆಗಳಿಗೆ ಮತ್ತು ಸಾಮಾಜಿಕ ಜಾಲತಾಣಕ್ಕೆ ಹೋಗಿ ಡಂಗುರ ಹೊಡೆಯಬಾರದಿತ್ತು. ನಮಗೆ ವರದಿ ಕೊಟ್ಟು ಸುಮ್ಮನಾಗಬೇಕಿತ್ತು. ಆಗ ನಾವು ಬದಲಾವಣೆ ತರುತ್ತಿದ್ದೆವು ಎಂದು ಹೇಳಿದವರು, ಈಗ ಬೆಳಗಾವಿಯ ಸುದ್ದಿ ನೋಡಿ ಏನು ಹೇಳುತ್ತಾರೆ? ಅಷ್ಟೆಲ್ಲಾ ಸುದ್ದಿ ಮಾಡಿದರೂ ಸುಧಾರಣೆ ಆಗದ ಬಂದೀಖಾನೆ ವ್ಯವಸ್ಥೆ, ಒಂದೊಮ್ಮೆ ರೂಪಾ ಅವರು ಅಂದು ಸುಮ್ಮನಿದ್ದರೆ, ನಮ್ಮ ನಾಯಕರುಗಳು ಏನು ಮಾಡುವ ಸಾಧ್ಯತೆ ಇತ್ತು? ರೂಪಾ ಅವರದ್ದೇ ತಪ್ಪು ಎಂದು ಸಾಧಿಸಿಬಿಡುತ್ತಿತ್ತು. ಹಿಂದಿನ ಸರಕಾರ ನೇಮಿಸಿದ್ದ ನಿವೃತ್ತ ಐಎಎಸ್​ ಅಧಿಕಾರಿ ವಿನಯ್​ ಕುಮಾರ್​ ಅವರು ರೂಪಾ ಅವರ ವರದಿಯಲ್ಲಿನ ಅಂಶವನ್ನು ಎತ್ತಿ ಹಿಡಿದಿದ್ದಾರೆ. ಆ ವರದಿಯನ್ನು ಮುಚ್ಚಿಟ್ಟಿದ್ದು ಏಕೆ? ಅಂಗಡಿ ತೆರೆದು ಕುಳಿತವರಿಗೆ ವ್ಯವಹಾರ ನಡೆಯಬೇಕಲ್ಲ. ಇದನ್ನು ಜನ ಇಷ್ಟು ಮರೆತು ಬಿಟ್ಟರೆ?

ಕೊನೇ ಗುಟುಕು

2017ರಲ್ಲಿ ಪರಪ್ಪನ ಅಗ್ರಹಾರದ ಬಂದೀಖಾನೆಯಲ್ಲಿ ನಡೆಯುತ್ತಿದ್ದ ಅವ್ಯವಹಾರದ ಬಗ್ಗೆ ರೂಪಾ ಅವರು ವರದಿ ಕೊಟ್ಟ ನಂತರ ನಡೆದ ಬೆಳವಣಿಗೆಯ ಪುನರಾವೃತ್ತಿ ಈಗಲೂ ಆಗುವ ಲಕ್ಷಣ (similar pattern) ಕಾಣುತ್ತಿದೆ. ಅವರನ್ನು ಬಂದೀಖಾನೆ ವ್ಯವಸ್ಥೆಯಿಂದ ಅಂದು ಎತ್ತಂಗಡಿ ಮಾಡಿಸಿದ್ದರ ಹಿಂದಿನ ನಿಜವಾದ  ಕಾರಣಗಳು ಇಂದು ನಮಗೆ ಬೆಳಗಾವಿಯ ಹಿಂಡಲಗಾ ಬಂದೀಖಾನೆಯ ವಿದ್ಯಮಾನವನ್ನು ನೋಡಿದಾಗ ಗೊತ್ತಾಗುತ್ತದೆ. ಅವರನ್ನು ಕಳಿಸಿದ ಭ್ರಷ್ಟ ವ್ಯವಸ್ಥೆ ಅಂದು ನಿಟ್ಟುಸಿರು ಬಿಟ್ಟಿತು. ಬಂದೀಖಾನೆ ಇಲಾಖೆಯಲ್ಲಿ ಅಂದು ಇದ್ದ (ಅ)ವ್ಯವಸ್ಥೆ ಇಂದಿಗೂ ಮುಂದುವರಿದಿದೆ ಎನ್ನುವುದಕ್ಕೆ ಟಿವಿ9 ವರದಿ ಸಾಕ್ಷಾಧಾರ ಒದಗಿಸಿದಂತಾಗಿದೆ. ಈಗ ಗೃಹ ಇಲಾಖೆಯಿಂದ ರೂಪಾ ಅವರನ್ನು ಎತ್ತಂಗಡಿ ಮಾಡಿಸಿದರೆ ಸಾಕು. ನಾವು (ಅ)ವ್ಯವಸ್ಥೆಯನ್ನು ನಡೆಸಿಕೊಂಡು ಹೋಗುತ್ತೇವೆ ಎಂದು ಪಟ್ಟಭದ್ರರು ಕಂಕಣ ತೊಟ್ಟಿರುವ ಹಾಗೆ ಕಾಣುತ್ತಿದೆ. ರೂಪಾ ಅಲ್ಲಿಂದ ಹೋದರೆ ವ್ಯವಸ್ಥೆ ಸರಿಯಾಗಿ ನಡೆದುಕೊಂಡು ಹೋಗುತ್ತೆ ಅಂತ ಜನರಿಗೆ ಬಿಂಬಿಸಲಾಗುತ್ತಿದೆ. ಅದರ ಅರ್ಥ ಏನು? ಜನ ಎಲ್ಲವನ್ನೂ ಬೇಗ ಮರೆಯುತ್ತಾರೆ, ಆಮೇಲೆ ಈ ಹಿಂದಿನಂತೆ ಎಲ್ಲ ನಡೆಸಿಕೊಂಡು ಹೋಗುವ ವಿಶ್ವಾಸ ಪಟ್ಟಭದ್ರರಲ್ಲಿ ಇರುವ ಹಾಗೆ ಕಾಣುತ್ತಿದೆ. ಆಗ ಬಂದೀಖಾನೆಯಲ್ಲಿ ಆದ ಹಾಗೆ ಈಗ ಗೃಹ ಇಲಾಖೆಯಲ್ಲೂ ಸಹ ಆಗುವ ಸಾಧ್ಯತೆ ಜಾಸ್ತಿ ಇದ್ದಂತೆ ಕಾಣುತ್ತಿದೆ.

ಇದು ಒಬ್ಬ ರೂಪಾ ಅವರ ವಿಚಾರ ಅಲ್ಲ. ತುಂಬಾ ಜನ ಪ್ರಾಮಾಣಿಕ ಐಎಎಸ್/ಐಪಿಎಸ್​ ಹಾಗೂ ಕೆಎಎಸ್​ ಅಧಿಕಾರಿಗಳಿಗೆ ವರ್ಗ ಮಾಡಿಸುವ ವ್ಯವಸ್ಥೆ ನಮ್ಮದು. ಹರ್ಷ ಗುಪ್ತ, ರಶ್ಮಿ ಮಹೇಶ್, ಕೆ. ಮಥಾಯ್ ಮುಂತಾದ ಪ್ರಾಮಾಣಿಕ ಅಧಿಕಾರಿಗಳು ಪದೇಪದೇ ವರ್ಗವಾಗಿ ಹೋಗಿದ್ದನ್ನು ನಾವು ನೋಡಿಲ್ಲವೇ? ಇದರ ಫಲ ಏನು? ವ್ಯವಸ್ಥೆ ಪಟ್ಟಭದ್ರರ ಕಬಂಧ ಬಾಹುವಿನ ಹಿಡಿತಕ್ಕೆ ಹೋಗುತ್ತದೆ ಮತ್ತು ಜನ ಆ ವ್ಯವಸ್ಥೆಯ ಕೈಗೆ ಸಿಕ್ಕಿ ನಲುಗುತ್ತಾರೆ. ಸಾಕ್ಷಾಧಾರ ಸಿಗದಿದ್ದ ಕಾರಣಕ್ಕಾಗಿ ಇದು ಹೊರ ಜಗತ್ತಿಗೆ ಗೊತ್ತೇ ಆಗುವುದಿಲ್ಲ. ಈ ಬಾರಿ ಬಿ.ಎಸ್​. ಯಡಿಯೂರಪ್ಪ ಅವರು ಸಿದ್ದರಾಮಯ್ಯನವರ ದಾರಿಯನ್ನು ಹಿಡಿದು ಗೃಹ ಕಾರ್ಯದರ್ಶಿಯಾಗಿ ಬಂದ ಆರು ತಿಂಗಳೊಳಗೆ ರೂಪಾ ಅವರನ್ನು ಮತ್ತೆ ಎತ್ತಂಗಡಿ ಮಾಡಿ ಪಟ್ಟಭದ್ರರ ಕೈ ಮೇಲಾಗುವಂತೆ ನೋಡಿಕೊಳ್ಳುತ್ತಾರಾ?

ಇಡೀ ಬೆಳವಣಿಗೆಯ ಮೂಲ ಗುಟ್ಟು ಇಲ್ಲಿದೆಯೇ ಹೊರತು ನಿರ್ಭಯಾ ನಿಧಿ ಗುತ್ತಿಗೆ ವಿಚಾರದಲ್ಲಿ ಅಲ್ಲ ಎಂಬುದನ್ನು ಜನ ಗಮನಿಸಲೂಬಹುದು.

ನಿರ್ಭಯಾ ಸೇಫ್ ಸಿಟಿ ಟೆಂಡರ್​ಗೆ ಬಿಇಎಲ್ ಬಿಡ್ ಮಾಡಿರಲಿಲ್ಲ: ಹೇಮಂತ್ ನಿಂಬಾಳ್ಕರ್

‘ನಿರ್ಭಯಾ’ ಟೆಂಡರ್ ವಿವಾದ: ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಡಿ.ರೂಪಾ ಉತ್ತರ

ನಿರ್ಭಯಾ ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ಪ್ರಕರಣ: ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದ ಸರ್ಕಾರ

ನಿರ್ಭಯಾ ನಿಧಿ ಮಹಿಳಾ ಸುರಕ್ಷತಾ ಯೋಜನೆ: ಗೃಹ ಕಾರ್ಯದರ್ಶಿ ರೂಪಾ ಅವರಿಂದ ದಾಖಲೆ ಬಿಡುಗಡೆ, ವಿವಾದಕ್ಕೆ ಹೊಸ ಆಯಾಮ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada