ಹುಬ್ಬಳ್ಳಿ: ರೈಲು ಅಪಘಾತದಲ್ಲಿ ತಾಯಿ ಜೊತೆಗೆ ಕಾಲು ಕಳ್ಕೊಂಡ ಕರುವಿಗೆ ಕೃತಕ ಕಾಲು ಜೋಡಣೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 07, 2024 | 5:12 PM

ಇಷ್ಟು ದಿನ ಮನುಷ್ಯರಿಗೆ ಕೃತಕ ಕೈ ಕಾಲು ಜೋಡಣೆ ಮಾಡಿರುವುದನ್ನು ನೋಡಿದ್ದೇವೆ. ಆದರೆ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕರುವಿಗೆ ಕೃತಕ ಕಾಲು ಜೋಡಣೆ ಮಾಡಿರುವ ಅಪರೂಪದ ಘಟನೆಯೊಂದು ನಡೆದಿದೆ. ರೈಲು ಅಪಘಾತದಲ್ಲಿ ತಾಯಿಯ ಜೊತೆಗೆ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದ ಕರುವಿಗೆ ಕೃತಕ ಕಾಲು ಜೋಡಣೆ ಮಾಡುವ ಮೂಲಕ ಮಾನವೀಯತೆಯ ಮೆರೆಯಲಾಗಿದೆ.

ಹುಬ್ಬಳ್ಳಿ: ರೈಲು ಅಪಘಾತದಲ್ಲಿ ತಾಯಿ ಜೊತೆಗೆ ಕಾಲು ಕಳ್ಕೊಂಡ ಕರುವಿಗೆ ಕೃತಕ ಕಾಲು ಜೋಡಣೆ
ಹುಬ್ಬಳ್ಳಿಯಲ್ಲಿ ಕಾಲು ಕಳೆದುಕೊಂಡ ಕರುವಿಗೆ ಕೃತಕ ಕಾಲು ಜೋಡಣೆ
Follow us on

ಹುಬ್ಬಳ್ಳಿ, ಫೆ.07: ಹುಬ್ಬಳ್ಳಿ(Hubballi)ಯ ಆನಂದ ನಗರದ ಬಳಿ ಇರುವ ಗೋಶಾಲೆಯಲ್ಲಿ ತಾಯಿ ಜೊತೆಗೆ ಒಂದು ಕಾಲು ಕಳೆದುಕೊಂಡ ಕರು(Calf) ವಿಗೆ ಕೃತಕ ಕಾಲು ಜೋಡಣೆ ಮಾಡಿರುವ ಅಪರೂಪದ ಘಟನೆಯೊಂದು ನಡೆದಿದೆ. ರೈಲು ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡು ಓಡಡಾಲು ಕೂಡ ಆಗದೇ ಇರುವ ಆಕಳು ಕರುವೊಂದನ್ನು ವಿಶ್ವ ಹಿಂದೂ ಪರಿಷತ್ತಿನ ಗೋ ಶಾಲೆಗೆ ಕರೆದುಕೊಂಡು ಬರಲಾಗಿತ್ತು. ಮಹಾವೀರ್ ಲಿಂಬ್ ಸೆಂಟರ್​ನಿಂದ ಆಕಳ ಕರುವಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ.

ಒಂದು ವಾರಗಳ ನಿರಂತರವಾಗಿ ಶ್ರಮ ವಹಿಸಿ ಕರುವಿಗೆ ಕಾಲು ಜೋಡಣೆ

ಕಿಮ್ಸ್​ನ ನುರಿತ ತಜ್ಞರು ಇಂತಹದೊಂದು ಅಪರೂಪದ ಕೆಲಸ ಮಾಡಿದ್ದಾರೆ. ಸುಮಾರು ಒಂದು ವಾರಗಳ ನಿರಂತರವಾಗಿ ಶ್ರಮ ವಹಿಸಿ ಕರುವಿಗೆ ಕಾಲು ಜೋಡಣೆ ಮಾಡಿದ್ದಾರೆ. ಕರುವಿನ ನಾಲ್ಕು ಕಾಲುಗಳ ಅಳತೆ ತಗೆದುಕೊಂಡು, ಪ್ಲಾಸ್ಟರ್ ಆಪ್ ಪ್ಯಾರಿಸ್ ಮೂಲಕ ಮೊದಲು ಕಾಲು ರೆಡಿ ಮಾಡಿದ್ದಾರೆ. ಬಳಿಕ ತುಂಡಾಗಿರುವ ಕಾಲಿನ ಅಳತೆ ಪ್ರಮಾಣದ ಅನುಸಾರವಾಗಿ ಕಾಲು ಫಿಟ್ಟಿಂಗ್ ಮಾಡಿದ್ದಾರೆ.

ಇದನ್ನೂ ಓದಿ:ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಮನಕಲುಕುವ ದೃಶ್ಯ ಮೊಬೈಲ್​ನಲ್ಲಿ ಸೆರೆ

ಇನ್ನು ಕರು ಹಾಗೂ ತಾಯಿ ಆಕಳಿಗೆ ಧಾರವಾಡ ಹೊರವಲಯದಲ್ಲಿ ರೇಲ್ವೆ ಅಪಘಾತವಾಗಿತ್ತು. ಅಪಘಾತದಲ್ಲಿ ತಾಯಿ ಆಕಳು ಸ್ಥಳದಲ್ಲಿಯೇ ಮೃತವಾಗಿತ್ತು. ಒಂದು ಕಾಲು ಕಳೆದುಕೊಂಡ ಕರುವನ್ನು ಮೊದಲು ಧಾರವಾಡ ಪಶು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಐದು ದಿನಗಳ ಕಾಲ ಅಲ್ಲಿಯೇ ಚಿಕಿತ್ಸೆ ಕೊಡಿಸಿದ ಬಳಿಕ ಕರುವನ್ನು ಹುಬ್ಬಳ್ಳಿಯ ಗೋಶಾಲೆಗೆ ಸೇರಿಸಲಾಗಿತ್ತು. ಮಹಾವೀರ ಲಿಂಬ್ ಸೆಂಟರ್​ನವರು ಕರು ಸ್ಥಿತಿ ಕಂಡು ಯಾಕೆ ಕಾಲು ಜೋಡಿಸಬಾರದು ಎಂದುಕೊಂಡು ಕಾಲು ಜೋಡಣೆಗೆ ಮುಂದಾಗಿದ್ದರು. ಹೀಗಾಗಿ ಮನುಷ್ಯನಂತೆ ಕರುವಿಗೆ ಕಾಲು ಜೋಡಣೆ ಮಾಡಿದ್ದಾರೆ.

ಇದೀಗ ಇದನ್ನು ನೋಡಿದ ನೆರೆಯ ಆಂಧ್ರದಿಂದಲೂ ಕೆಲವರು ಕರೆ ಮಾಡಿ ಕಾಲು ಜೋಡಣೆ ಮಾಡಬೇಕು ಎಂದು ಕೇಳುತ್ತಿದ್ದಾರಂತೆ. ಕಾಲು ಕಳೆದುಕೊಂಡ ಕರು ಮೊದಲು ಮೇಲೆ ಎದ್ದೇಳುವುದಕ್ಕೂ ಹರಸಾಹಸ ಪಡುತ್ತಿತ್ತು. ಇದೀಗ ಎಲ್ಲ ಆಕಳಂತೆ ಅದು ಕೂಡ ಓಡಾಡುತ್ತಿದೆ. ಕೃತಕ ಕಾಲು ಜೋಡಣೆ ಮೊದಲೆರೆಡು ದಿನ ಕರುವಿಗೆ ಕಷ್ಟ ಆಗಿತ್ತು. ಇದೀಗ ಕರು ಕೃತಕ ಕಾಲು ಜೋಡಣೆಗೆ ಹೊಂದಿಕೊಂಡಿದೆ ಎಂದು ವೈದ್ಯರಾದ ಎಮ್ ಎಚ್ ನಾಯ್ಕರ್ ಹೇಳುತ್ತಾರೆ.

ಇನ್ನು ಮಹಾವೀರ ಲಿಂಬ್ ಸೆಂಟರ್ ಮನುಷ್ಯರಿಗೂ ಕಾಲು ಜೋಡಣೆಯಂತಹ ಸಾಮಾಜಿಕ ಕೆಲಸ ಮಾಡುತ್ತಿದ್ದು, ರಾಜ್ಯದ ನಾನಾ ಕಡೆ ಈಗಾಗಲೇ ಕೃತಕ ಕಾಲು ಜೋಡಣೆ ಕ್ಯಾಂಪ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಕರುವಿಗೆ ಕೃತಕ ಕಾಲು ಜೋಡಣೆ ಮಾಡಿರೋದು ಇತಿಹಾಸ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಅಪಘಾತದಲ್ಲಿ ಕಾಲು ಕಳೆದುಕೊಂಡ ಕರುವಿಗೆ ಕೃತಕ ಕಾಲು ಜೋಡಣೆ ಮಾಡಿರುವುದು ವಿಶೇಷವಾಗಿದೆ. ಅಲ್ಲದೇ ಕರು ಬೆಳೆದಂತೆ ಕ್ರಮೇಣ ಕಾಲಿನ ಅಳತೆಗೆ ಅನುಗುಣವಾಗಿ ಕೃತಕ ಕಾಲು ಬದಲಾವಣೆ ಮಾಡಲಾಗುತ್ತದೆ. ಇಂತಹದೊಂದು ಅಪರೂಪದ ಕಾರ್ಯ ಹುಬ್ಬಳ್ಳಿಯಲ್ಲಿ ನಡೆದಿರುವುದು ವಿಶೇಷವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:08 pm, Wed, 7 February 24