Belagavi: ತಾಯಿಯ ಹಸಿವಿನ ಪರದಾಟ ನೋಡದೇ ಮಗ ಆತ್ಮಹತ್ಯೆ ಎಂಬುವುದು ಸುಳ್ಳು: ಪೊಲೀಸರಿಂದ ಸತ್ಯಾಂಶ ಬಯಲು
ಹಸಿವು ಹಾಗೂ ತಾಯಿಯ ಕಷ್ಟವನ್ನು ನೋಡಲಾಗದೆ ಬೆಳಗಾವಿಯ ಖಾನಾಪುರ ತಾಲ್ಲೂಕಿನಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಾಯಿ ಹಸಿವಿನ ಪರದಾಟ ನೋಡದೇ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ಜುವ ಸುದ್ದಿ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಹರಿದಾಡಿದ್ದು, ಇದಕ್ಕೆ ಅನೇಕರು ಕಂಬನಿ ಮಿಡಿದಿದ್ದರು. ಇದೀಗ ಈ ಸುದ್ದಿಗೆ ತಿರುವು ಸಿಕ್ಕಿದ್ದು, ತಾಯಿ ಹಸಿವಿನ ಪರದಾಟ ನೋಡದೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಸುದ್ದಿ ಸುಳ್ಳು ಎಂದು ಪೊಲೀಸರು ತನಿಖೆಯಲ್ಲಿ ತಿಳಿದುಬಂದಿದೆ.
ಬೆಳಗಾವಿ, (ಫೆಬ್ರವರಿ 07): ತುತ್ತು ಅನ್ನಕ್ಕಾಗಿ ಪರದಾಡಿ ತಾಯಿಯ (Mother) ಹಸಿವು(hunger)ನೋಡಲಾರದೆ ಮನನೊಂದು ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಯೊಂದು ವೈರಲ್ ಆಗಿದ್ದು, ಬೆಳಗಾವಿಯ (Belagavi) ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಮನಕಲಕುವಂತೆ ಮಾಡಿತ್ತು. ಅಲ್ಲದೇ ಈ ಸುದ್ದಿ ಓದುತ್ತಿರುವಾಗಲೇ ಕೆಲವರ ಕಣ್ಣೀರು ಹಾಕಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡು ಕಂಬನಿ ಮಿಡಿದಿದ್ದರು. ಆದ್ರೆ, ಈ ಸುದ್ದಿಗೆ ಇದೀಗ ಹೊಸ ತಿರುವು ಸಿಕ್ಕಿದ್ದು, ಸುದ್ದಿಯ ಸತ್ಯಾಸತ್ಯತೆಯನ್ನು ಬೆಳಗಾವಿ ಪೊಲೀಸರು ಬಯಲಿಗೆಳೆದಿದ್ದಾರೆ. ಬೆಳಗಾವಿಯಲ್ಲಿ ತಾಯಿ ಹಸಿವಿನ ಪರದಾಟ ನೋಡದೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಸುದ್ದಿ ಸುಳ್ಳು ಎಂದು ಪೊಲೀಸರು ಖಚಿತ ಪಡಿಸಿದ್ದಾರೆ. ಪೊಲೀಸರು ಮೃತ ಯುವಕ ಬಸವರಾಜನ ನಿಜವಾದ ತಂದೆ, ತಾಯಿ ಕರೆಸಿ ವಿಚಾರಣೆ ಮಾಡಿದ್ದು, ಆತ್ಮಹತ್ಯೆ ಮಾಡಿಕೊಂಡ ಯುವಕ ಬಸವರಾಜ ಹಾಗೂ ಮಹಿಳೆ ಶಾಂತವ್ವ ತಾಯಿ ಮಗ ಅಲ್ಲ ಎನ್ನುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ.
ಪ್ರಕರಣದ ಸತ್ಯಾಂಶ ಇಲ್ಲಿದೆ
ಇನ್ನು ಈ ಬಗ್ಗೆ ಬೆಳಗಾವಿ ಜಿಲ್ಲೆಯ ನಂದಗಡ ಪೊಲೀಸರು ಸತ್ಯಾಂಶ ಬಯಲು ಮಾಡಿದ್ದು, ಮೃತ ಬಸವರಾಜ ಮತ್ತು ಶಾಂತವ್ವ ಕಳೆದ 14ವರ್ಷದಿಂದ ಜೊತೆಗಿದ್ದರು. ಕೂಲಿ ಕೆಲಸಕ್ಕಾಗಿ ಗೋವಾ, ಬೆಂಗಳೂರು ಸೇರಿ ಅನೇಕ ಕಡೆ ಹೋಗುತ್ತಿದ್ದರು. ವಾರದ ಹಿಂದೆ ಗೋವಾಕ್ಕೆ ಹೋಗಿ ವಾಪಸ್ ಆಗುವ ವೇಳೆ ಇಬ್ಬರು ಪಾನಮತ್ತರಾಗಿದ್ದರು. ವಾಂತಿ ಮಾಡಿದ ಹಿನ್ನೆಲೆಯಲ್ಲಿ ಸಹ ಪ್ರಯಾಣಿಕರು ಮಹಿಳೆ ಶಾಂತವ್ವಳನ್ನು ರೈಲಿನಿಂದ ಕೆಳಗಿಳಿಸಿದ್ದರು. ಬಳಿಕ ಬಸವರಾಜ ಶಾಂತವ್ವಳನ್ನ ಅಳ್ನಾವರ ರೈಲು ನಿಲ್ದಾಣದಲ್ಲಿ ಬಿಟ್ಟು ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದ ಬಳಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದ್ರೆ, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: ಬೆಳಗಾವಿ: ಪತಿಯ ಬಿಟ್ಟು ಓಡಿಹೋಗಿದ್ದ ಮಹಿಳೆ, ಆಕೆಯ ಪ್ರಿಯಕರನ ಬರ್ಬರ ಕೊಲೆ
ಇನ್ನು ಈ ಬಗ್ಗೆ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ್ ಗುಳೇದ್ ಪ್ರತಿಕ್ರಿಯಿಸಿ, ತನಿಖೆ ಪೂರ್ಣಗೊಳ್ಳುವ ಮೊದಲೇ ಎನ್‌ಜಿಓ ತಾಯಿ, ಮಗ ಎಂದು ಹೇಳಿದೆ. ಖಾನಾಪುರ ಮೂಲದ ಎನ್‌ಜಿಓಗೆ ನಿನ್ನೆ ನೋಟಿಸ್ ಕೊಡಲಾಗಿದೆ. ಅನುಮಾನಸ್ಪದ ವಿಚಾರದಲ್ಲಿ ತಾವೇ ತಿರ್ಮಾನಕ್ಕೆ ಬರುವುದು ತಪ್ಪು. ಹಸಿವಿನಿಂದ ಆತ್ಮಹತ್ಯೆ ಎಂಬುವುದು ಸುಳ್ಳು ಎಂದು ಕಂಡು ಬಂದಿದೆ. ಇಬ್ಬರು ಪರಸ್ಪರ ಪರಿಚತರಾಗಿದ್ದು, ಜೊತೆಗೆ ಇದ್ದರು. ಸಾವಿನಲ್ಲಿ ಮಹಿಳೆಯ ಪಾತ್ರದ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಎಚ್ಡಿಕೆ
ಹಸಿವು ಹಾಗೂ ತಾಯಿಯ ಕಷ್ಟವನ್ನು ನೋಡಲಾಗದೆ ಬೆಳಗಾವಿಯ ಖಾನಾಪುರ ತಾಲ್ಲೂಕಿನಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ‘ಸತ್ತ ಸರಕಾರ ಸಾವಿನ ವ್ಯಾಪಾರ’ ಎಂಬ ಹ್ಯಾಷ್ ಟ್ಯಾಗ್ ಅಡಿ ಸರಣಿ ಟ್ವೀಟ್ (ಎಕ್ಸ್) ಮಾಡಿದ್ದ ಎಚ್ಡಿಕೆ, ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಅನ್ನ ಭಾಗ್ಯ, ಗೃಹ ಲಕ್ಷ್ಮೀ ಹೆಸರಿನಲ್ಲಿ ಲೋಕೋದ್ಧಾರ ಮಾಡಿದ್ದೇವೆ ಎಂದು ಸುಳ್ಳು ಲೆಕ್ಕ ಕೊಟ್ಟು ಜನರ ತೆರಿಗೆ ಹಣದಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿರುವ ನಿಮ್ಮ ಲೊಳಲೊಟ್ಟೆ ಬಯಲಾಗಿದೆ. ಸಿದ್ದರಾಮಯ್ಯನವರೇ.. ನುಡಿದಂತೆ ನಡೆದಿದ್ದೇವೆ ಎಂದರೆ ಇದೇನಾ ಮುಖ್ಯಮಂತ್ರಿಗಳೇ? ಎಂದು ಎಚ್ಡಿಕೆ ಪ್ರಶ್ನೆ ಮಾಡಿದ್ದರು.
ದುಡಿದು ತಾಯಿಯನ್ನು ಸಲಹಬೇಕೆಂದು ಕನಸು ಕಟ್ಟಿಕೊಂಡು ಹೊರಟ ಹಾವೇರಿ ಜಿಲ್ಲೆ ಯಲಗಚ್ಚು ಗ್ರಾಮದ ಬಸವರಾಜ ವೆಂಕಟ ಎಂಬ ಯುವಕನ ಆತ್ಮಾಹುತಿ ಆಘಾತಕಾರಿ. ನಿಮ್ಮ ಪ್ರಚಾರ ಪ್ರಿಯ, ಖೊಟ್ಟಿ ಗ್ಯಾರಂಟಿಗಳ ಸರಕಾರದ ಆತ್ಮಸಾಕ್ಷಿಗೆ ಎದುರಾದ ದೊಡ್ಡ ಸವಾಲು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ