AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಪ್ಪು ಮಾಡಿದ್ರೆ ಶಿಕ್ಷಿಸಲಿ, ಆದ್ರೆ ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ: ಡಿಕೆಶಿ

ಬೆಂಗಳೂರು: ಕಾಂಗ್ರೆಸ್​ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಿಂದ ಬೆಂಗಳೂರಿಗೆ ವಾಪಸಾಗಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೆಪಿಸಿಸಿ ಕಚೇರಿಗೆ ಆಗಮಿಸಿ ಕಾಂಗ್ರೆಸ್ ನಾಯಕರ ಜೊತೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಇ.ಡಿ ಅಧಿಕಾರಿಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ನನ್ನ ಮೇಲೆ ಇಡಿ ಅಧಿಕಾರಿಗಳು ಪ್ರಯೋಗ ನಡೆಸ್ತಿದ್ದಾರೆ. ನನ್ನ ಮೇಲಿನ ಪ್ರಯೋಗ ಎಲ್ಲರ ಮೇಲೆ ನಡೆಯುತ್ತಾ? ನ್ಯಾಯಾಲಯದಿಂದ ಅನ್ಯಾಯದ ತೀರ್ಪು ಬರಬಾರದು. ನಾನು ಇಂಧನ ಸಚಿವರಾಗಿದ್ದಾಗ ಫೋನ್ ಗಿಫ್ಟ್‌ ಕೊಟ್ಟಿದ್ದೆ. ಆಗ ಬಿಜೆಪಿಯ ಕೇಂದ್ರ ಸಚಿವರೂ ಫೋನ್ […]

ತಪ್ಪು ಮಾಡಿದ್ರೆ ಶಿಕ್ಷಿಸಲಿ, ಆದ್ರೆ ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ: ಡಿಕೆಶಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Oct 27, 2019 | 6:36 AM

Share

ಬೆಂಗಳೂರು: ಕಾಂಗ್ರೆಸ್​ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಿಂದ ಬೆಂಗಳೂರಿಗೆ ವಾಪಸಾಗಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೆಪಿಸಿಸಿ ಕಚೇರಿಗೆ ಆಗಮಿಸಿ ಕಾಂಗ್ರೆಸ್ ನಾಯಕರ ಜೊತೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಇ.ಡಿ ಅಧಿಕಾರಿಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ನನ್ನ ಮೇಲೆ ಇಡಿ ಅಧಿಕಾರಿಗಳು ಪ್ರಯೋಗ ನಡೆಸ್ತಿದ್ದಾರೆ. ನನ್ನ ಮೇಲಿನ ಪ್ರಯೋಗ ಎಲ್ಲರ ಮೇಲೆ ನಡೆಯುತ್ತಾ? ನ್ಯಾಯಾಲಯದಿಂದ ಅನ್ಯಾಯದ ತೀರ್ಪು ಬರಬಾರದು. ನಾನು ಇಂಧನ ಸಚಿವರಾಗಿದ್ದಾಗ ಫೋನ್ ಗಿಫ್ಟ್‌ ಕೊಟ್ಟಿದ್ದೆ. ಆಗ ಬಿಜೆಪಿಯ ಕೇಂದ್ರ ಸಚಿವರೂ ಫೋನ್ ಗಿಫ್ಟ್‌ ಪಡೆದಿದ್ರು. ಈ ಸಂಬಂಧ ನನಗೆ ನೋಟಿಸ್‌ ನೀಡಲಾಗಿತ್ತು. ಆದ್ರೆ, ಬಿಜೆಪಿಯ ಕೇಂದ್ರ ಸಚಿವರಿಗೂ ನೋಟಿಸ್‌ ನೀಡ್ತಾರಾ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಯಾವುದೇ ತನಿಖೆಗೂ ಸಿದ್ಧ: ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ. ನನ್ನದೇನಿದ್ರೂ ನೇರಾನೇರ ಹೋರಾಟ. ಅಧಿಕಾರ ಇರಲಿ, ಇಲ್ಲದಿರಲಿ ಮಾನವೀಯತೆಯಿಂದ ನಡೆದುಕೊಂಡಿದ್ದೇನೆ. ತಪ್ಪು ಮಾಡಿದ್ರೆ ಶಿಕ್ಷಿಸಲಿ, ನಾನು ಸ್ವಾಗತಿಸುತ್ತೇನೆ. ಆದ್ರೆ ನಾನು ಸುಮ್ಮನೇ ಕುಳಿತುಕೊಳ್ಳುವ ವ್ಯಕ್ತಿಯಲ್ಲ. ಇ.ಡಿ ಮತ್ತು ಐಟಿ ಸೇರಿದಂತೆ ಯಾವುದೇ ತನಿಖೆಗೂ ಸಿದ್ಧನಿದ್ದೇನೆ ಎಂದರು.

ಕೆಪಿಸಿಸಿ ಕಚೇರಿ ನಮಗೆ ದೇವಾಲಯವಿದ್ದಂತೆ. ನಾನು ಜೈಲಿನಲ್ಲಿದ್ದಾಗ ನನ್ನ ಜೊತೆ ಇಡೀ ರಾಜ್ಯದ ಜನತೆ ಇದ್ದರು. ಬಿಜೆಪಿಯ ಸ್ನೇಹಿತರೂ ನನಗೆ ಬೆಂಬಲಿಸಿದ್ದಾರೆ. ಚುನಾವಣೆ ವೇಳೆ ಅಫಿಡವಿಟ್‌ನಲ್ಲಿ ನನ್ನ ಮತ್ತು ಕುಟುಂಬದ ಆಸ್ತಿಪಾಸ್ತಿ ಬಗ್ಗೆ ಉಲ್ಲೇಖಿಸಿದ್ದೇನೆ. ಈ ಸಂಬಂಧ ಬೇಕಾದಷ್ಟು ಚರ್ಚೆ ಆಗಿದೆ. ಈ ಬಗ್ಗೆ ಈಗ ನಾನು ಏನನ್ನೂ ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಹೇಳುತ್ತೇನೆ ಎಂದರು.

ನಾನು ರೈತನಾಗಿ ಹುಟ್ಟಿದ್ದೇನೆ, ಉದ್ಯಮಿಯಾಗಿ ಬೆಳೆದಿದ್ದೇನೆ. ಆದ್ರೆ, ನಾನು ಯಾರಿಗೂ ವಂಚನೆ ಮಾಡಿಲ್ಲ. ಎಲ್ಲರಿಗೂ ಎಲ್ಲಾ ಸಮಯದಲ್ಲಿ ಅಧಿಕಾರ ಸಿಗುವುದಿಲ್ಲ. ತಾಳ್ಮೆಯಿಂದ ನಾನು ಹೋರಾಟ ಮಾಡಿದ್ದೇನೆ, ಪಕ್ಷ ಸಂಕಷ್ಟದಲ್ಲಿದ್ದಾಗ ಪಕ್ಷ ನೀಡಿದ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಾನು ಕೆಲಸ ಮಾಡಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ತಪ್ಪು ಮಾಡಿದ್ರೆ ದೇವರು ಶಿಕ್ಷಿಸಲಿ: ನಾನು ಎಲ್ಲಾ ಕಾರ್ಯಕರ್ತರಿಗೆ ಸಹಾಯ ಮಾಡಿಲ್ಲ. ಕಾರ್ಯಕರ್ತರ ಋಣ ತೀರಿಸಲು ದೇವರು ಶಕ್ತಿ ನೀಡಲಿ. ನಾನು ನಂಬಿದ ಕಾಂಗ್ರೆಸ್‌ ಪಕ್ಷ ನನ್ನ ಜೊತೆಯಲ್ಲಿದೆ. ನಾನು ಜೈಲಿನಲ್ಲಿದ್ದಾಗ ಖುದ್ದು ಸೋನಿಯಾ ಗಾಂಧಿ ಅವರೇ ಬಂದು ಭೇಟಿ ಮಾಡಿದ್ರು. ಸಿದ್ದರಾಮಯ್ಯ ಸಹ ನಾನು ಇದ್ದ ಆಸ್ಪತ್ರೆಗೆ ಬಂದಿದ್ದರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನನಗೆ ಬೆಂಬಲ ನೀಡಿದ್ರು. ನಾನು, ನನ್ನ ಕುಟುಂಬ ತಪ್ಪು ಮಾಡಿದ್ರೆ ಶಿಕ್ಷೆ ನೀಡಲಿ. ನಾನು ತಪ್ಪು ಮಾಡಿದ್ರೆ ದೇವರು, ಈ ನೆಲದ ಕಾನೂನು ನಮ್ಮನ್ನು ಶಿಕ್ಷಿಸಲಿ. ನಾನು ನನ್ನ ತಾಯಿಗೆ ಸಹಾಯ ಮಾಡಿದ್ದೇ ತಪ್ಪಾ? ತಾಯಿಗೆ ಮಗ ಬೇನಾಮಿದಾರನೇ ಎಂದು ಡಿ.ಕೆ.ಶಿವಕುಮಾರ್‌ ಪರೋಕ್ಷವಾಗಿ ಇ.ಡಿ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ರು.

ಲಂಚ ಪಡೆದಿಲ್ಲ, ಮೋಸ ಮಾಡಿಲ್ಲ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಗೂ ಮುನ್ನ ಸಾದರಹಳ್ಳಿ ಗೇಟ್ ಬಳಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಯಾರಿಂದಲೂ ಯಾವುದೇ ಲಂಚ ಪಡೆದಿಲ್ಲ, ಯಾರಿಗೂ ಮೋಸ ಮಾಡಿಲ್ಲ. ನನ್ನ 40 ವರ್ಷದ ರಾಜಕಾರಣ ಮುಗಿಸಲು ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ರು. ಇದು ಒಂದು ದಿನಕ್ಕೆ ಮುಗಿದಿದ್ದಲ್ಲ, ಇದು ಅಂತ್ಯವಲ್ಲ, ಇದು ಪ್ರಾರಂಭ ಎಂದರು.

Published On - 8:33 pm, Sat, 26 October 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು