ಬೆಂಗಳೂರು, (ಅಕ್ಟೋಬರ್ 18): ವಾಲ್ಮೀಕಿ ಹಗರಣ ಮತ್ತು ಮುಡಾ ಹಗರಣ ಇಡೀ ಸಿದ್ದರಾಮ್ಯಯ ಸರ್ಕಾರವನ್ನೇ ಅಲುಗಾಡುವಂತೆ ಮಾಡಿದೆ. ಈ ಎರಡು ಹಗರಣದಲ್ಲಿ ಇಡಿ ಪ್ರವೇಶ ಮಾಡಿದ್ದು, ತನಿಖೆ ಚುರುಕುಗೊಳಿಸಿದೆ. ಅಲ್ಲದೇ ವಾಲ್ಮೀಕಿ ಹಗರಣದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಜೈಲಿ ಹೋಗಿಬಂದಿದ್ದು ಆಯ್ತು. ಇದರ ಮಧ್ಯ ಇದೀಗ ಕರ್ನಾಟಕ ರಾಜ್ಯ ಕೋ ಆಪರೇಟಿವ್ ಸೊಸೈಟಿಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿದೆ. ಹೌದು…ಸೊಸೈಟಿಯಲ್ಲಿ ಬರೋಬ್ಬರಿ 19.34 ಕೋಟಿ ರೂ, ಹಣ ಅಕ್ರಮ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಸೊಸೈಟಿಯ ಪ್ರಭಾರಿ ಸಿಇಒ ಸೇರಿ 6 ಒಟ್ಟು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಹಕಾರ ಸಚಿವ ಕೆಎನ್ ರಾಜಣ್ಣ ಸಭೆ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. 2017ರಿಂದ 2023ರ ವರೆಗೆ ಸೊಸೈಟಿಯಲ್ಲಿ FD ರೂಪದಲ್ಲಿದ್ದ 19.34 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಸೊಸೈಟಿಯ ಪ್ರಭಾರ ಸಿಇಒ ಆಶಾಲತಾ ಪತಿ ಸೋಮಶೇಖರ್ ಸೇರಿ ಖಾಸಗಿಯವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಬಳಿಕ 101 FDಡಿ ಖಾತೆಗಳ ನಕಲಿ ಠೇವಣಿ ಬಾಂಡ್ ಸೃಷ್ಟಿಸಿದ್ದಾರೆ. ಈ ಮೂಲಕ ಅಕ್ರಮ ಮುಚ್ಚಿಡಲು ನಕಲಿ ಖಾತೆ ಸೃಷ್ಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಧ್ಯಕ್ಷರ ಸಹಿಯನ್ನೂ ಕೂಡ ನಕಲಿ ಮಾಡಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಮುಡಾ ಬುಡಕ್ಕೆ ಇಡಿ: ಸಿಎಂ ಪತ್ನಿ ಪಡೆದಿದ್ದ 14 ಸೈಟ್ ರಹಸ್ಯ ಕೆದಕಿದ ಅಧಿಕಾರಿಗಳು
ಸಹಕಾರ ಸಚಿವ ರಾಜಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆದಾಗ ವಂಚನೆ ಬೆಳಕಿಗೆ ಬಂದಿದ್ದು, ಆಶಾಲತಾ ಅವರು ಸೊಸೈಟಿ ಹಣವನ್ನು BDCC, ಅಪೆಕ್ಸ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವುದಾಗಿ ಹೇಳಿದ್ದಾರೆ. ಆದರೆ ಪರಿಶೀಲನೆ ವೇಳೆ ಹಣ ವರ್ಗಾವಣೆ, ನಕಲಿ ಠೇವಣಿ ಬಾಂಡ್ ಗಳ ಸೃಷ್ಟಿ ಬೆಳಕಿಗೆ ಬಂದಿದೆ.
ಸದ್ಯ ಸೊಸೈಟಿಯ ಅಧ್ಯಕ್ಷ ರಾಜು ಎಂಬುವರು ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಭಾರ ಸಿಇಒ ಆಶಾಲತಾ, ಆಕೆಯ ಪತಿ ಸೋಮಶೇಖರ್, BDCC, ಅಪೆಕ್ಸ್ ಬ್ಯಾಂಕ್ ಮ್ಯಾನೇಜರ್, ಆಡಿಟರ್ ಸೇರಿ 6 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ