ಬೆಂಗಳೂರು: ಕರ್ನಾಟಕದ ಗಡಿನಾಡಿನ ಹೋರಾಟಗಾರರಾದ ಕಯ್ಯಾರ ಕಿಞ್ಞಣ್ಣ ರೈ ಹಾಗೂ ಜಯದೇವಿ ತಾಯಿ ಲಿಗಾಡೆರವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ನೀಡಲು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಘೋಷಿಸಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರರವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಸ್ತುತ ಆರ್ಥಿಕ ವರ್ಷದ ಪ್ರಥಮ ಪ್ರಾಧಿಕಾರ ಸಭೆಯಲ್ಲಿ ಹಲವಾರು ಕನ್ನಡಪರ ಕನ್ನಡ ನಾಡು-ನುಡಿ ಸಂಸ್ಕೃತಿ ಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ದಿಸೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ರಾಜ್ಯದ ಗಡಿ ಭಾಗದಲ್ಲಿ ಬರುವ 63 ಗಡಿ ತಾಲ್ಲೂಕುಗಳಲ್ಲಿ ಹಾಗೂ ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಹೊರ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ವಿಶೇಷವಾಗಿ ಕನ್ನಡ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಉತ್ಸವಗಳನ್ನು ಚಿಂತನಾ ಶಿಬಿರಗಳನ್ನು ಆಯೋಜಿಸುವ ಮೂಲಕ ಗಡಿ ಭಾಗದಲ್ಲಿ ವರ್ಷ ಪೂರ್ತಿ ನಿರಂತರ ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ವಿಶೇಷವಾಗಿ ಗಡಿ ನಾಡಿನ ಹಿರಿಯ ಸಾಧಕರ ಹಾಗೂ ಗಡಿ ಭಾಗದ ಐತಿಹಾಸಿಕ ಮಹತ್ವವನ್ನು ದರ್ಶಿಸುವ ವಿಶೇಷ ಸಮಗ್ರ ಸಾಕ್ಷ್ಯಚಿತ್ರ ನಿರ್ಮಾಣ, ಗಡಿ ಭಾಗದಲ್ಲಿನ ಜಾನಪದ ಕಲೆ ಸಂಸ್ಕೃತಿಗೆ ಸಂಬಂಧಿಸಿದ ಜಾನಪದ ಅಧ್ಯಯನ ಗಡಿ ಭಾಗದಲ್ಲಿನ ಕನ್ನಡ ದಾರ್ಶನಿಕರ ಸ್ಮಾರಕಗಳ ಅಧ್ಯಯನ, ಸಮೂಹ ಮಾಧ್ಯಮಗಳ ಮೂಲಕ ಗಡಿ ಭಾಗದ ಜನರ ಜೀವನ ದರ್ಶನ ಮಾಡಿಸುವಂತಹ ಅನೇಕ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರಾಧಿಕಾರವು ತೀರ್ಮಾನಿಸಿತು. ಜೊತೆಗೆ ಗಡಿ ಭಾಗದಲ್ಲಿನ ಕನ್ನಡ ಶಾಲೆಗಳಿಗೆ ವಿಶೇಷವಾಗಿ ಸ್ಮಾರ್ಟ್ ತರಗತಿಗಳನ್ನು ನಡೆಸಲು ಅನುಕೂಲವಾಗುವಂತಹ ತಾಂತ್ರಿಕ ಸಲಕರಣೆಗಳ ಪೂರೈಕೆ, ಗ್ರಂಥಾಲಯ, ಶೌಚಾಲಯಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಪೂರೈಕೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಹಾ ತೀರ್ಮಾನಿಸಲಾಗಿದೆ.
ವಿಶೇಷವಾಗಿ ಬೀದರ್ ಜಿಲ್ಲೆಯಲ್ಲಿ ಕೆಲವು ಪ್ರತಿಭಾವಂತ ಕನ್ನಡ ಭಾಷಾ ವಿದ್ಯಾರ್ಹತೆಯುಳ್ಳ ಯುವಕರನ್ನು ಆಯ್ಕೆ ಮಾಡಿ ಅವರಿಗೆ ಒಂದು ನಿರ್ದಿಷ್ಟ ಅವಧಿಯ ತರಬೇತಿಯನ್ನು ನೀಡಿ, ಕನ್ನಡ ಶಿಕ್ಷಕರ ಅಭಾವವಿರುವ ಶಾಲೆಗಳಿಗೆ ನಿಯೋಜಿಸಿ, ಗಡಿ ಭಾಗದಲ್ಲಿ ಅವರಿಂದ ಕನ್ನಡ ಪಾಠ ಪ್ರವಚನ ನಡೆಸುವಂತೆ ಮಾಡುವ ಒಂದು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ತೀರ್ಮಾನಿಸಲಾಯಿತು. ಗಡಿ ಭಾಗದ 63 ತಾಲ್ಲೂಕುಗಳಲ್ಲಿ ಪ್ರತಿ ತಾಲ್ಲೂಕಿನಿಂದ ಒಂದು ಯುವಕ ಸಂಘ / ಸಾಂಸ್ಕೃತಿಕ ಸಂಘವನ್ನು ಆಯ್ಕೆ ಮಾಡಿ ಸ್ವಾತಂತ್ರ್ಯ ಅಮೃತೋತ್ಸವದ ಸವಿ ನೆನಪಿನಲ್ಲಿ ಈ ಸಂಘಗಳು ಸ್ವಾತಂತ್ರ್ಯ ಚಳುವಳಿಯ ಐತಿಹಾಸಿಕ ಮಹತ್ವವವನ್ನು ಸಾರುವಂತಹ ಒಂದು ನಿರ್ದಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಪ್ರೋತ್ಸಾಹಿಸಲು ನಿರ್ಧರಿಸಲಾಯಿತು. ರಾಜ್ಯದ ಹಾಗೂ ಹೊರರಾಜ್ಯದ ಕೆಲವು ಆಯ್ದ ಗಡಿ ಪ್ರದೇಶದ ಸ್ಥಳಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಲು ತೀರ್ಮಾನಿಸಲಾಯಿತು.
ಗಡಿ ಭಾಗದ ದಾರ್ಶನಿಕರ ಕಿರು ಸಾಕ್ಷ್ಯಚಿತ್ರಗಳನ್ನು ಸಹ ನಿರ್ಮಿಸಿ ಆಯಾ ಸ್ಮಾರಕಗಳ ಬಳಿ ಅವುಗಳನ್ನು ಪ್ರದರ್ಶಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಪ್ರಾಧಿಕಾರದ ಸದಸ್ಯರಾದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್, ಪ್ರಕಾಶ್ ಮತ್ತಿಹಳ್ಳಿ, ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಮತ್ತು ಸದಸ್ಯರುಗಳು ಭಾಗವಹಿಸಿದ್ದರು.
ಇದನ್ನೂ ಓದಿ:
R. S. Mugali Birthday : ಬಿ. ಎಲ್. ರೈಸ್-ರಂ. ಶ್ರೀ. ಮುಗಳಿ ‘ಕನ್ನಡ ಸಾಹಿತ್ಯ’ ಮುಖಾಮುಖಿ
ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ: ಪ್ರಾಮಾಣಿಕ ಅಭಿವ್ಯಕ್ತಿಯೇ ಸೃಜನಶೀಲತೆ: ಸ್ವಾಮಿ ಪೊನ್ನಾಚಿ
(In the name of Karnataka frontier fighter Kayara Kiyanna Rai and Jayadevi Tayi Ligade award anounced)
Published On - 3:02 pm, Fri, 16 July 21