R. S. Mugali Birthday : ಬಿ. ಎಲ್. ರೈಸ್-ರಂ. ಶ್ರೀ. ಮುಗಳಿ ‘ಕನ್ನಡ ಸಾಹಿತ್ಯ’ ಮುಖಾಮುಖಿ

History of Kannada Literature : ಸಂಶೋಧಕ ಬಿ.ಎಲ್. ರೈಸ್ ಅವರು ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರಿತಂತೆ ಇಂಗ್ಲಿಷ್​ನಲ್ಲಿ ಬರೆದ, ‘ಹಿಸ್ಟರಿ ಆಫ್ ಕನ್ನಡ ಲಿಟರೇಚರ್’ ಕೃತಿಯಲ್ಲಿ ಕನ್ನಡ ಸಾಹಿತ್ಯದ ಲಕ್ಷಣಗಳನ್ನು ಕುರಿತಂತೆ ಅನೇಕ ಓರಿಯಂಟಲ್ ದೃಷ್ಟಿಕೋನದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಮುಗಳಿ ಅವರು ಮೊಟ್ಟಮೊದಲ ಬಾರಿಗೆ ‘ಕನ್ನಡ ಸಾಹಿತ್ಯ ಚರಿತ್ರೆ’ ಕೃತಿಯಲ್ಲಿ ಈ ಕುರಿತು ಸ್ಪಷ್ಟವಾದ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆಯ್ದ ಭಾಗ ನಿಮ್ಮ ಓದಿಗೆ.

R. S. Mugali Birthday : ಬಿ. ಎಲ್. ರೈಸ್-ರಂ. ಶ್ರೀ. ಮುಗಳಿ ‘ಕನ್ನಡ ಸಾಹಿತ್ಯ’ ಮುಖಾಮುಖಿ
ಕನ್ನಡದ ಬಹುಮುಖ್ಯ ಕೊಂಡಿಗಳಾದ ಬಿ. ಎಲ್​. ರೈಸ್ ಮತ್ತು ರಂ. ಶ್ರೀ. ಮುಗಳಿ

‘ರಸಿಕರಂಗ’ ಹೀಗೆಂದು ಚಿರಪರಿಚಿತರಾದ ರಂ. ಶ್ರೀ. ಮುಗಳಿ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಅಪ್ರತಿಮವಾದ ಕೆಲಸವನ್ನು ಮಾಡಿದವರು. 20ನೇ ಶತಮಾನದ ಮೂರು ಮತ್ತು ನಾಲ್ಕನೆಯ ದಶಕಗಳಲ್ಲಿ ವರಕವಿ ಬೇಂದ್ರೆಯವರ ನಾಯಕತ್ವದಲ್ಲಿ ‘ಗೆಳೆಯರ ಗುಂಪಿ’ ನ ಭಾಗವಾಗಿ ಇವರ ಪ್ರಮುಖ ಹೆಸರಾಗಿ ಕಾಣುತ್ತಾರೆ. ಕಾವ್ಯ, ಕಾದಂಬರಿ, ನಾಟಕ, ವಿಮರ್ಶೆ, ಸಾಹಿತ್ಯ ಚರಿತ್ರೆ ಮೊದಲಾದ ಅನೇಕ ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯದ ವೈವಿಧ್ಯಮಯ ಸ್ವರೂಪವನ್ನು ಚರ್ಚಿಸಿದ ಮುಗಳಿಯವರ ಸೇವೆ ಬಹುಮುಖ್ಯವಾದದ್ದು. ಕನ್ನಡ ಸಾಹಿತ್ಯ ಚರಿತ್ರೆಯ ಪ್ರಪ್ರಥಮ ಬರಹಗಾರರಾಗಿ ರೂಪಿಸಿದ ಅವರ ಕೃತಿಯು ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಧಾರವಾಡ ಜಿಲ್ಲೆಯ ಹೊಳೆ ಆಲೂರಿನಲ್ಲಿ 1909ರ ಜುಲೈ 15ರಂದು ಜನಿಸಿದ ಮುಗಳಿಯವರು ಬೇಂದ್ರೆಯವರ ಪ್ರಭಾವದಿಂದ ಸಾಹಿತ್ಯದ ಕಡೆಗೆ ತಮ್ಮನ್ನು ತಾವು ಹೊರಳಿಸಿಕೊಂಡರು. 

ಕನ್ನಡ ಭಾಷೆ, ಸಾಹಿತ್ಯ, ಶಾಸನದ ಹಿನ್ನೆಲೆಯಲ್ಲಿ ಗುರುತರ ಕಾರ್ಯಗಳನ್ನು ಮಾಡುತ್ತ ಐತಿಹಾಸಿಕವಾಗಿ ಸಾಕಷ್ಟು ನಿಖರ ಮಾಹಿತಿಗಳನ್ನು ಒದಗಿಸಿದ ಖ್ಯಾತಿ ಬಿ.ಎಲ್​. ರೈಸ್ ಅವರಿಗೆ ಸಲ್ಲುತ್ತದೆ. ಅವರು ಕನ್ನಡ ಸಾಹಿತ್ಯದ ಲಕ್ಷಣಗಳ ಕುರಿತು ಮಾಡಿದ ಆಲೋಚನೆಗೆ ರಂ.ಶ್ರೀ. ಮುಗಳಿಯವರು ಕೊಟ್ಟ ಉತ್ತರದ ಆಯ್ದ ಭಾಗ ಇಲ್ಲಿದೆ. ರೈಸ್ ಅವರು ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರಿತಂತೆ ಇಂಗ್ಲಿಷ್​ನಲ್ಲಿ ಬರೆದ, ‘ಹಿಸ್ಟರಿ ಆಫ್ ಕನ್ನಡ ಲಿಟರೇಚರ್’ ಕೃತಿಯಲ್ಲಿ ಕನ್ನಡ ಸಾಹಿತ್ಯದ ಲಕ್ಷಣಗಳನ್ನು ಕುರಿತಂತೆ ಅನೇಕ ಓರಿಯಂಟಲ್ ದೃಷ್ಟಿಕೋನದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಮುಗಳಿ ಅವರು ಮೊಟ್ಟಮೊದಲ ಬಾರಿಗೆ ‘ಕನ್ನಡ ಸಾಹಿತ್ಯ ಚರಿತ್ರೆ’ ಕೃತಿಯಲ್ಲಿ ಈ ಕುರಿತು ಸ್ಪಷ್ಟವಾದ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದು ಕನ್ನಡ ಸಾಹಿತ್ಯಾಸಕ್ತರಿಗೆ ಮತ್ತು ಸಾಹಿತ್ಯ ಚರಿತ್ರೆ ಕುರಿತು ಅಧ್ಯಯನದಲ್ಲಿ ತೊಡಗಿಕೊಂಡಿರುವ ಸಂಶೋಧಕರಿಗೆ ಉಪಯುಕ್ತದುದು.

*

ಏಳನೆಯ ವೈಲಕ್ಷಣ್ಯವನ್ನು ಕನ್ನಡ ಲೇಖಕರಿಗೆ ಸಂಬಂಧಿಸಿಯೇ ರೈಸ್​ ಅವರು ಘಂಟಾನುಘೋಷವಾಗಿ ಹೇಳಿದ್ದಾರೆ. ಅದೆಂದರೆ, ‘ಕನ್ನಡ ಲೇಖಕರು ಭಾಷೆಯ ಪ್ರಯೋಗದಲ್ಲಿ ಅತ್ಯಂತ ಕುಶಲರಾಗಿ ಕರ್ಣಮಧುರವಾದ ಪದರಚನೆಗಳನ್ನು ಮಾಡುವವರಾದರೂ ಜಗತ್ತಿನ ಜ್ಞಾನ ಭಂಡಾರಕ್ಕೆ ಮತ್ತು ಸ್ಪೂರ್ತಿ ಸಾಹಿತ್ಯಕ್ಕೆ ಈವರೆಗೆ ತೀರ ಸ್ವಲ್ಪವಾಗಿ ತಮ್ಮದೆಂಬ ಕಾಣಿಕೆಯನ್ನು ಸಲ್ಲಿಸಿರುವರೆಂದು ಒಪ್ಪಬೇಕಾಗುತ್ತದೆ. ವ್ಯಾಕರಣದ ವ್ಯಾಸಂಗದಲ್ಲಿ, ಋತುಗಳ ವರ್ಣನೆಯಲ್ಲಿ ಅವರು ಮೇಲಾಗಿದ್ದಾರೆ. ಆದರೆ ಮನುಷ್ಯನಿಗೆ ಯಾವಾಗಲೂ ಪ್ರಿಯವಾದ ವಿಷಯಗಳ ಬಗ್ಗೆ ಅವರಲ್ಲಿ ಸ್ವತಂತ್ರವಾದ ಮತ್ತು ಅಮರವಾದ ವಿಚಾರವಿಲ್ಲ. ಜೀವನವೆಂದರೆ ಒಂದು ಮುಗಿಯದ ಜನ್ಮಯಾತ್ರೆ, ನಿರ್ವಾಣದ ಶೋಧನೆ ಎಂದು ತಿಳಿದ ಕಾರಣ ಆಸೆಯನ್ನು ಹುಟ್ಟಿಸುವ ಹಿರಿಯ ಸಾಹಸಕ್ಕೆ ಸ್ಫೂರ್ತಿಯನ್ನು ಕೊಡುವ ಸಾಹಿತ್ಯವು ಅವರಿಂದ ನಿರ್ಮಾಣವಾಗಿಲ್ಲ.’ (I am afraid it must be confessed that Kanarese writers, highly skillful though they are in the manipulation of language, and very pleasing to listen to in the original, have as yet contributed extremely little to the stock of the world‘s knowledge and inspiration… there is little of original and imperishable thought on the questions of perennial interest to man… Hence a lack of that which stimulates hope and inspires to great enterprises.)

ರೈಸ್ ಅವರು ಒತ್ತು ಕೊಟ್ಟು ಹೇಳಿದ ಈ ಏಳನೆಯ ವೈಲಕ್ಷಣ್ಯದ ಹೇಳಿಕೆ ಕನ್ನಡ ಸಾಹಿತ್ಯಕ್ಕೆ ಅತ್ಯಂತ ಅನ್ಯಾಯ ಮಾಡಿರುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಬರೆದು ಅವರು ಮಾಡಿದ ‘ಉಪಕೃತಿ’ ಈ ನಿರ್ಣಯಾತ್ಮಕ ವಾಕ್ಯಗಳಿಂದ ತೊಳೆದುಹೋದಂತಾಗಿದೆ. ಕನ್ನಡ ಸಾಹಿತ್ಯವನ್ನು ಅವರು ಸ್ವಂತವಾಗಿ ಎಷ್ಟು ಓದಿ ತಿಳಿದಿದ್ದರೋ ನಾವರಿಯೆವು. ಆದರೆ ಅವರು ಅಭಿಪ್ರಾಯಕ್ಕೆ ಅರ್ಧಜ್ಞಾನವಾಗಲಿ ಪೂರ್ವಗ್ರಹವಾಗಲಿ ಕಾರಣವಾಗಿರಬೇಕೆಂಬುದನ್ನು ನಮಗೆ ತೋರುತ್ತದೆ. ಜಗತ್ತಿನ ಜ್ಞಾನಭಂಡಾರಕ್ಕೆ ಕನ್ನಡ ಕಾಣಿಕೆಯೇನೆಂಬುದನ್ನು ತಿಳಿಯಲು ಶಾಸ್ತ್ರೀಯ ಮತ್ತು ತಾತ್ವಿಕ ಗ್ರಂಥಗಳನ್ನು ಕೂಲಂಕಷವಾಗಿ ಪರೀಕ್ಷಿಸಬೇಕು. ವೈದ್ಯ, ಜ್ಯೋತಿಷ್ಯ ಮುಂತಾದ ಶಾಸ್ತ್ರಗಳನ್ನು ಕುರಿತು ಕನ್ನಡದಲ್ಲಿ ಹಲವಾರು ಗ್ರಂಥಗಳಿವೆ. ಅವುಗಳಲ್ಲಿ ಸಂಸ್ಕೃತ ಅನುಪೂರ್ವಿಯ ಪ್ರಭಾವವಿದ್ದರೂ ಸ್ವಾನುಭವದ ಸ್ವತಂತ್ರ ಅಂಶಗಳಿವೆ. ಈ ವಿಷಯದ ಪರಿಶೋಧನೆಯಾಗಬೇಕು. ಇಲ್ಲಿಯವರೆಗೆ ಯಾವ ನಿರ್ಣಯವೂ ತಪ್ಪಾದುದು.

ತಾತ್ವಿಕ ಗ್ರಂಥಗಳಲ್ಲಿ ವೀರಶೈವ, ಮಾಧ್ವ ಇವುಗಳ ಸ್ವತಂತ್ರ ದರ್ಶನಗಳು ಕನ್ನಡ ಸಾಹಿತ್ಯದಲ್ಲಿಯೇ ಮುಖ್ಯವಾಗಿ ಅಭಿವ್ಯಕ್ತವಾಗಿವೆ. ಜಗತ್ತಿನ ಜ್ಞಾನಭಂಡಾರಕ್ಕೆ ಇವು ಉಜ್ವಲ ಕಾಣಿಕೆಗಳಲ್ಲವೆ? ಜೈನಧರ್ಮ ಮತ್ತು ಶಂಕರ-ರಾಮಾನುಜ ದರ್ಶನಗಳು ಕನ್ನಡ ಜನಕ್ಕಾಗಿ ವಿವಿಧ ಸಾಹಿತ್ಯ ರೂಪಗಳಲ್ಲಿ ಇಳಿದು ಬಂದು ಜನಸಾಮಾನ್ಯರ ತಿಳಿವನ್ನು ಹೆಚ್ಚಿಸಿದ್ದು ಸಣ್ಣ ಸಂಗತಿಯೆ? ಇನ್ನು ಜಗತ್ತಿನ ಸ್ಫೂರ್ತಿಸಾಹಿತ್ಯಕ್ಕೆ ಕನ್ನಡದ ಕಾಣಿಕೆಯೇನು? ಸ್ಪೂರ್ತಿ ಪಡೆಯಬೇಕೆನ್ನುವವರಿಗೆ ಅದು ವಿಪುಲವಾಗಿದೆ, ಪ್ರಭಾವಿಯಾಗಿದೆ. ಪಂಪನ ‘ಆದಿಪುರಾಣ’ ಮತ್ತು ‘ಪಂಪಭಾರತ’, ರಾಘವಾಂಕನ ‘ಹರಿಶ್ಚಂದ್ರಕಾವ್ಯ’, ಕುಮಾರವ್ಯಾಸನ ‘ಭಾರತ’, ರತ್ನಾಕರನ ‘ಭರತೇಶವೈಭವ’, ಈ ಮೊದಲಾದ ಕೆಲ ಕನ್ನಡದ ಶ್ರೇಷ್ಠಗ್ರಂಥಗಳು ಕಲಾದೃಷ್ಟಿಯಿಂದ ಉನ್ನತವಾಗಿರುವುದಲ್ಲದೆ ಒಂದೊಂದು ಭವ್ಯವಾದ ಜೀವನದರ್ಶನಪ್ರತೀಕಗಳಾಗಿವೆ. ಜನ್ಮದಿಂದ ಜನ್ಮಕ್ಕೆ ವಿಕಾಸಗೊಳ್ಳುವ ಜೀವನಸಮ್ಯಕ್​ಸಿದ್ಧಿ, ಸತ್ಯವೇ ಪರಮಾತ್ಮನೆಂಬ ಸಾಕ್ಷಾತ್ಕಾರ, ಭಗವತ್​ಶಕ್ತಿಯಿಂದ ಸಮಗ್ರಜೀವನದ ಚಾಲಕತ್ವ, ತ್ಯಾಗಭೋಗಗಳ ಸಮನ್ವಯವಾದ ಜೀವನ ರಸಿಕತೆ… ಒಂದೇ ಎರಡೆ? ಇಂಥ ಸಂದೇಶಗಳನ್ನು ಸಮೃದ್ಧವಾಗಿ ರಸೋತ್ಕಟವಾಗಿ ಕನ್ನಡ ಸಾಹಿತ್ಯವು ಕನ್ನಡಿಗರ ಮತ್ತು ಇತರರ ಕಲ್ಯಾಣಕ್ಕಾಗಿ ನೀಡುತ್ತದೆ. ಶಿವಶರಣರ ವಚನಗಳು ಮತ್ತು ಹರಿದಾಸರ ಹಾಡುಗಳು ಅಧ್ಯಾತ್ಮಿಕವಾದ ಜೀವನಿಷ್ಠೆಯನ್ನು ಬೇಸರಿಲ್ಲದೆ ಬೋಧಿಸುತ್ತದೆ. ಜ್ಞಾನ-ಭಕ್ತಿಪೂರ್ವಕವಾದ ಕರ್ಮಯೋಗವನ್ನು ಕನ್ನಡ ಸಂಸ್ಕೃತಿ ತನ್ನ ಸಾಹಿತ್ಯದ ಉತ್ತಮಿಕೆಯಲ್ಲಿ ಸಾರುತ್ತಲಿದೆ.

r s mugali birthday

ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾದ ಪುಸ್ತಕಗಳು

ಜೈನಮತದಲ್ಲಿ ವೈರಾಗ್ಯವನ್ನು ಉಪದೇಶಿಸಿದ್ದರೂ ಅದಕ್ಕೂ ಒಂದು ತಾತ್ವಿಕ ಭೂಮಿಕೆಯಿದೆ; ಯತಿಧರ್ಮ, ಗೃಹಸ್ಥಧರ್ಮ; ಗ್ರಹಸ್ಥಧರ್ಮ ಎಂಬ ತಾರತಮ್ಯವಿದೆ. ಸರ್ವಜ್ಞನಂಥ ಜ್ಞಾನಿಗಳೂ ಜನತಾಕವಿಗಳೂ ಕಲ್ಪಿಸಿದ ವಿವೇಕವು ಎಲ್ಲ ಜಗತ್ತಿಗೆ ಸ್ಫೂರ್ತಿಯನ್ನು ಕೊಡಬಲ್ಲುದು. ‘ಶೂನ್ಯ ಸಂಪಾದನೆ’ಯಂಥ ಗ್ರಂಥದಲ್ಲಿಯೂ ಪ್ರಭುದೇವನ ವಚನಗಳಲ್ಲಿಯೂ ಕಾಣುವ ಅನುಭವಮಂಟಪದ ವಿಚಾರಮಂಥನ, ಜ್ಞಾನದ ಪ್ರಖರತೆಗಳನ್ನು ಕನ್ನಡ ಸಾಹಿತ್ಯಯವು ತನ್ನ ಕಾಣಿಕೆಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ‘ಮನುಷ್ಯ ಜಾತಿ ತಾನೊಂದೇ ವಲಂ’, ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ’, ‘ಅಯ್ಯಾ ಎನೆ ಸ್ವರ್ಗ, ಎಲವೋ ಎನೆ ನರಕ’, ‘ತನ್ನ ತಾನರಿದಡೆ ತನ್ನರಿವೆ ಗುರು’, ‘ಮಾತೆಂಬುದು ಜ್ಯೋತಿರ್ಲಿಂಗ’, ‘ಈಸಬೇಕು ಇದ್ದು ಜಯಿಸಬೇಕು, ‘ಬಿಲ್ಲಾಗಿರಬೇಕು ಬಲ್ಲವರೊಳು, ಕಲ್ಲಾಗಿರಬೇಕು ಕಠಿಣ ಭವತೊರೆಯೊಳು’, ‘ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಜಿದಡೆಂತಯ್ಯ’, ‘ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಣವಕ್ಕು’ ಇಂಥ ನೂರಾರು ನುಡಿಕಿಗಳು ಕೂಡಿ ಜೀವನಶಕ್ತಿಯನ್ನು ಕೊಡುವ ತೇಜೋರಾಶಿಯಂತೆ ಕನ್ನಡ ಸಾಹಿತ್ಯದಲ್ಲಿರುವಾಗ ‘ಸ್ವತಂತ್ರವಾದ, ಅಮರವಾದ ವಿಚಾರವಿಲ್ಲ’ ಎಂದರೇನು? ಈ ವಿಚಾರಗಳಿಗ ಭಾರತೀಯವೆಂಬ ದೊಡ್ಡ ಹಿನ್ನೆಲೆಯಿದೆ. ಸ್ವಾನುಭವದ ಪೀಠಿಕೆಯಿದೆ. ಒಟ್ಟುಗೂಡಿದ ಅಭಿವ್ಯಕ್ತಿಯಲ್ಲಿ ಸ್ವತಂತ್ರ ತೇಜಸ್ಸಿದೆ. ಹಾಗೆ ನೋಡಿದರೆ ಯಾವುದು ಶುದ್ಧವಾದ ಸ್ವತಂತ್ರ?

ಹಳೆಯ ಕನ್ನಡ ಸಾಹಿತ್ಯವು ವಿಷಯದಲ್ಲಿ, ನಿರೂಪಣೆಯಲ್ಲಿ ಎಷ್ಟು ವೈವಿಧ್ಯಯುತವಾದರೂ ಮರ್ಯಾದಿತವಾಗಿದೆ, ಸಮಯಶರಣವಾಗಿದೆ ಎಂಬುದು ನಿಜವಾದರೂ ಅಂದಂದಿನ ಆವರಣದಲ್ಲಿ ಅದು ಪಡೆದ ಶಕ್ತಿಯನ್ನೂ ಬೀರಿದ ಪ್ರಭಾವವನ್ನೂ ಅರಿತು ಮೆಚ್ಚಬೇಕು. ಹೊಸ ಕನ್ನಡ ಸಾಹಿತ್ಯವು ವಿಷಯದ ಆಯ್ಕೆಯಲ್ಲಿ, ವ್ಯಕ್ತಿನಿರೂಪಣೆಯಲ್ಲಿ ಹೆಚ್ಚು ಸ್ವತಂತ್ರವಾಗಿ ಮತ್ತು ಸಾಮಾಜಿಕವಾಗಿ ಬೆಳೆಯುತ್ತಲಿದ್ದು ಹೊಸ ಶಕ್ತಿಯ ಕೇಂದ್ರವಾಗುತ್ತಲಿದೆ. ಅದನ್ನು ಬೆಳೆಸುವಾಗ ಹಳೆಯ ಸಾಹಿತ್ಯದಿಂದ ದೊರೆಯುವ ಸ್ಫುರಣವನ್ನು ಪಡೆಯುವುದು ಅವಶ್ಯವಾಗಿದೆ.

ಕನ್ನಡ ಸಾಹಿತ್ಯವು ಕನ್ನಡದ ನಂದಾದೀಪ, ಕರ್ನಾಟಕದ ತವನಿಧಿ ಎಂಬ ಶ್ರದ್ಧೆ ಕನ್ನಡಿಗರಲ್ಲಿಯೇ ಬೆಳೆಯದಿದ್ದರೆ ಇತರರಲ್ಲಿ ಹೇಗೆ ಬೆಳೆದೀತು?

ಇದನ್ನೂ ಓದಿ : A.K. Ramanujan Death Anniversary : ‘ಹುತ್ತ ಹುಟ್ಟದ ಕೈತುಂಬ ಕೈಗೂಡ ಮರಳು’

Read Full Article

Click on your DTH Provider to Add TV9 Kannada