A.K. Ramanujan Death Anniversary : ‘ಹುತ್ತ ಹುಟ್ಟದ ಕೈತುಂಬ ಕೈಗೂಡ ಮರಳು’
Poetry ‘ಬ್ರಹ್ಮಜ್ಞಾನ: ಒಂದು ನಿಶ್ಯಬ್ದ ಸಾನೆಟ್ಟು’ ಹಲವರ ಚಿಂತನೆಗೆ ಆಹಾರವಾದ ಒಂದು ಪ್ರಯೋಗ. ಲಘು ಗುರುಗಳ ಪ್ರಸ್ತಾರದಲ್ಲಿರುವ ಆಕಾರದಲ್ಲಿ ಶಬ್ದಗಳೇ ಇಲ್ಲ. ಹೀಗೆ ಮಾತುಗಳನ್ನು ಆಡುವುದರಲ್ಲಿ ಹೊಸ ಅರ್ಥಗಳನ್ನು ಬೆಳೆಸುತ್ತ ಹೋದ ರಾಮಾನುಜನ್ ಮಾತಿರದ ರಚನೆಯೊಂದಿಗೆ ಹಲವು ಅರ್ಥಗಳಿಗೆ ಜಾಗ ಕೊಟ್ಟರು.’ ಎನ್. ಎಸ್. ಶ್ರೀಧರಮೂರ್ತಿ
ಇಂಗ್ಲಿಷ್ನಲ್ಲಿ ಬರೆಯುತ್ತಿದ್ದ ಪ್ರಮುಖ ಭಾರತೀಯ ಲೇಖಕರಲ್ಲಿ ಹಿರಿಯ ಕವಿ ಎ.ಕೆ. ರಾಮಾನುಜನ್ ಕೂಡ ಒಬ್ಬರು. ಅವರು ಸಾಹಿತ್ಯಪ್ರೇಮಿಗಳನ್ನು ಅಗಲಿದ ದಿನ ಇಂದು (16/3/1929 – 13/7/1993). ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾಕಷ್ಟು ಪರಿಣತಿ ಹೊಂದಿದ್ದ ವಿಶಿಷ್ಟ ರೀತಿಯ ಕವಿ, ಬರಹಗಾರರಾಗಿದ್ದರು. ಬಿಎ, ಎಂಎ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿ ದಕ್ಷಿಣ ಭಾರತದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. 1958ರಲ್ಲಿ ಪುಣೆಯ ಡೆಕ್ಕನ್ ವಿಶ್ವವಿದ್ಯಾಲಯದಿಂದ ‘ಥಿಯೇಟ್ರಿಕಲ್ ಲಿಂಗ್ವಿಸ್ಟಿಕ್ಸ್’ ವಿಷಯದಲ್ಲಿ ಡಿಪ್ಲೊಮಾ ಪಡೆದರು. 1963ರಲ್ಲಿ ಅಮೆರಿಕದ ಅಮೆರಿಕ ಇಂಡಿಯಾನ ವಿಶ್ವವಿದ್ಯಾನಿಲಯದಿಂದ ಭಾಷಾವಿಜ್ಞಾನದಲ್ಲಿ ಪಿಎಚ್.ಡಿ ಪದವಿ ಪಡೆದರು. ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನ ಮತ್ತು ದ್ರಾವಿಡ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು. ಬರ್ಕಲಿ, ವಿಸ್ಕಾಸಿನ್, ಮಿಚಿಗನ್ ಮುಂತಾದ ವಿಶ್ವವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಭೇಟಿ ನೀಡುತ್ತಿದ್ದರು. ಚಿಕಾಗೋ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಏಷ್ಯಾ ಭಾಷೆಗಳ ಅಧ್ಯಯನ ಪೀಠ ಸ್ಥಾಪನೆ ಮಾಡಿದ ಹೆಗ್ಗಳಿಕೆ ಇವರದು.
ಇವರ ಕವನಗಳು ನವ್ಯಕಾವ್ಯದ ಪ್ರಭಾವದಿಂದ ಬಿಡಿಸಿಕೊಂಡು ಹೊಸ ಸಂವೇದನೆಗಳೊಂದಿಗೆ ಹೊಮ್ಮಿದವು. ‘ಹೊಕ್ಕುಳಲ್ಲಿ ಹೂವಿಲ್ಲ’, ಹೊಕ್ಕುಳಲ್ಲಿ ಹೂವಿಲ್ಲ ಮತ್ತು ಇತರ ಕವಿತೆಗಳು’, ಮತ್ತು ‘ಕುಂಟೋ ಬಿಲ್ಲೆ’, ‘ಮತ್ತೊಬ್ಬನ ಆತ್ಮಚರಿತ್ರೆ’ ಅವರ ಪ್ರಸಿದ್ಧ ಕೃತಿಗಳು. ಮನೋಹರ ಗ್ರಂಥಮಾಲೆಯು ಸಮಗ್ರ ಹೊರತಂದಿದ್ದು, ಅವರ ಮೂರು ಕವನ ಸಂಕಲನಗಳು, ಒಂದು ಕಾದಂಬರಿ, ಎರಡು ಸಣ್ಣ ಕತೆಗಳು, ಎರಡು ರೇಡಿಯೋ ನಾಟಕಗಳು, ಗಾದೆಗಳನ್ನು ಕುರಿತ ಕಿರು ಹೊತ್ತಿಗೆಗಳು ಅಡಕಗೊಂಡಿವೆ. ಅಲ್ಲದೆ, ‘ನಡೆದು ಬಂದ ದಾರಿ’ ಕೃತಿ, ‘ಸಾಕ್ಷಿ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಕವನಗಳು, ಐವತ್ತರ ದಶಕದಲ್ಲಿ ರಾಶಿ ಅವರ ‘ಕೊರವಂಜಿ’ಯಲ್ಲಿ ಪ್ರಕಟವಾದ ಹಲವು ನಗೆಬರಹಗಳನ್ನೂ ಈ ಸಂಪುಟ ಒಳಗೊಂಡಿದೆ.
ಈಗಿಲ್ಲಿ ಹಿರಿಯ ಪತ್ರಕರ್ತ, ಲೇಖಕ ಎನ್. ಎಸ್. ಶ್ರೀಧರಮೂರ್ತಿ ಅವರು, ರಾಮಾನುಜನ್ ಅವರ ಕಾವ್ಯದ ಬಗ್ಗೆ ಸ್ಥೂಲ ಅವಲೋಕನ ನೀಡಿದ್ದಾರೆ.
*
ಭಾಮಹ ಶಬ್ದ ಅರ್ಥ ಬೇರೆ ಬೇರೆ ಅನ್ನೋ ಕಿರಿಕಿರಿಯೇ ಬೇಡವೆಂದು ಎರಡೂ ಒಂದಾದರೆ ಕಾವ್ಯ ಎಂದು ಕಾಳಿದಾಸನ ‘ರಘುವಂಶ’ದ ಶೈಲಿಯಲ್ಲಿ ಹೇಳಿದ ಮೇಲೂ, ಕಾಲ್ಡ್ರಿಜ್ ಶಬ್ದಗಳ ಬಹುರೀತಿ ಸಂಯೋಜನೆಯಲ್ಲಿ ಅರ್ಥ ಗುನುಗಿದ ಮೇಲೂ ರಚನೆ, ಸಂಯೋಜನೆ, ನಿರ್ಮಿತಿ ಅಂತ ಹಾಕೋ ಲೆಕ್ಕಾಚಾರಕ್ಕಂತೂ ಎಂದೂ ಕಡಿಮೆ ಇರಲಿಲ್ಲ. ಗಣಿತದ ನಿಖರ ಸೂತ್ರಗಳ ಥರ ಮಾತ್ರೆಗಳ ಜೋಡಿಸಿ ಎಸೆಯುತ್ತಿದ್ದ ಪದ್ಯಗಳಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಅರ್ಥ ಅನ್ನೋದರ ತೊಂದರೆ ಬಗ್ಗೆ ಯೋಚಿಸಿದ ರಾಮಾನುಜನ್ ಅದರ ತಾತ್ವಿಕ ಪ್ರಶ್ನೆಯನ್ನೇ ತಮ್ಮ ಕಾವ್ಯದ ಬೆನ್ನೆಲುಬಾಗಿಟ್ಟುಕೊಂಡರು. 1949ರಲ್ಲೇ ‘ಅಕ್ರೂರ’ ಅನ್ನೋ ಹೆಸರಿನಲ್ಲಿ ಲೇವಡಿ ಮಾಡಿ ಅವರು ಬರೆದ ಪದ್ಯದ ತುಣುಕು ಹೀಗಿದೆ.
ಕ್ರಾಂತಿ! ಕ್ರಾಂತಿ!! ಕ್ರಾಂತಿ!!! ಆಗಲಿ! ಆಗಲಿ!! ಆಗಲಿ!!! ಸಾಯಲಿ! ಸಾಯಲಿ!! ಸಾಯಲಿ!!!
ರೈತ! ರೈತ!! ರೈತ!!! ಕೂಲಿ! ಕೂಲಿ!! ಕೂಲಿ!!! ರೈತ! ರೈತ!! ರೈತ!!!
ಹೊಕ್ಕುಳಲ್ಲಿ ಹೂವಿಲ್ಲ (1969) ಸಂಕಲನದ ಹೊತ್ತಿಗಾಗಲೇ ಈ ಲೇವಡಿ ‘ಪ್ರಯೋಗ’ದ ಹದಕ್ಕೆ ಬಂದಿತ್ತು. ಇದರಲ್ಲಿನ ಅಂಗುಲ ಹುಳುವಿನ ಪರಕಾಯ ಪ್ರವೇಶ ಅನ್ನೋ ಪದ್ಯದಲ್ಲಿನ ‘ಕಮಾನು’ ಮಾದರಿ ರಚನೆಗಳು ದೃಶ್ಯ ಕಾವ್ಯದ ಮಾದರಿ ಪ್ರಯೋಗಗಳಾದರೆ, ಇಡೀ ಪದ್ಯವೇ ಕಥಾನಕವನ್ನು ಶಬ್ದ ಸಂಯೋಜನೆಯಲ್ಲಿ ಅಭಿನಯಿಸಿದ ನಿರಂತರ ದೃಶ್ಯ ನಾಟಕ, ‘ಪರಕಾಯ ಪ್ರವೇಶ’ ಎಂಬ ಕಲ್ಪನೆಯನ್ನೇ ವಿಡಂಬನಾತ್ಮಕವಾಗಿ ಎತ್ತಿಕೊಂಡು ಗಬಕ್ಕೆನಿಸುವ ಹಕ್ಕಿಗಳಿಗೆ ಹೆದರಿ ಕಾಯ ಅಳೆಯಲು ಹೊರಟ ಅಂಗುಲ ಹುಳುವಿಗೆ ಎದುರಾಗಿದ್ದು ಹಾಡನ್ನು ಅಳೆ ಎಂಬ ಕೋಗಿಲೆ ಸವಾಲು. ಕಾಯವಿಲ್ಲದ ಹಾಡಿಗೆ ಪರಕಾಯ ಪ್ರವೇಶವಾದರೂ ಹೇಗೆ ಸಾಧ್ಯ? ವಿಡಂಬನೆ ತಾತ್ವಿಕತೆ ಎರಡನ್ನೂ ಒಟ್ಟಾಗಿ ಸಾಧಿಸಿದ ಈ ಕವಿತೆ, ಲೆಕ್ಕಾಚಾರ ಹಾಕಿ ಶಬ್ದ ಜೋಡಿಸೋ ಪಂಡಿತರ ಹಣೆಬರಹವನ್ನು ಅರ್ಥಪೂರ್ಣವಾಗಿಯೇ ಹರಾಜು ಹಾಕಿತು. ‘ಪುನರ್ಜನ್ಮ’ ಕವಿತೆಯಲ್ಲಿನ ‘ಭಗವದ್ಗೀತೆ’ ಕೊಟೇಶನ್ ನೆನಪಾಗಲಿಲ್ಲ ಎಂಬ ಲೇವಡಿ ಕೂಡ ಸಂಸ್ಕೃತಿಯ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಾಧಿಸಿದ ರಾಮಾನುಜನ್ ಕವಿತೆಯ ಮಟ್ಟಿಗೆ ಸೂತ್ರಕ್ಕೆ ಸಿಕ್ಕಿ ಬೀಳದೆ ಸಾಧ್ಯವಾಗುವ ಪರಿಣಾಮದಲ್ಲೇ ‘ಸಂರಚನೆ’ ನೆಲೆಯನ್ನು ಗುರುತಿಸಿದರು. ಅದಕ್ಕೇ ‘ನಾದ’ ಅನ್ನೋದನ್ನ ಬುಡಕಿತ್ತು ಎಸೆಯಲು ಅವರು ಮುಂದಾಗಿದ್ದು. ‘ಪಾಕಾಶಾಸ್ತ್ರ’ದ ಪುಸ್ತಕ ಹಿಡಿದು ರಚಿಸಿದ ಕಾಫಿಗೆ ಬದಲಾಗಿ, ಹಾಲು ಸಕ್ಕರೆ ಕಾಫಿ ಪುಡಿಗಳನ್ನು ಅನುಭವದಿಂದಲೇ ಬೆರೆಸಿ ತಯಾರಿಸುವ ಗೃಹಿಣಿಯ ಸಾಧ್ಯತೆ ಅವರ ತಲೆಯಲ್ಲಿ ಸುಳಿಯುತ್ತಿದ್ದಿರಬೇಕು.
‘…. ಮತ್ತು ಇತರ ಪದ್ಯಗಳು’ ಶೀರ್ಷಿಕೆಯಿಂದಲೇ ಪ್ರಯೋಗಕ್ಕೆ ಇಳಿಯಿತು. ಇದರ ಶೀರ್ಷಿಕೆಗೆ ಎರಡು ಅರ್ಥ ಹಚ್ಚಬಹುದು. ಮೊದಲ ಸಂಕಲನ ಬಂದ ಎಂಟು ವರ್ಷಗಳ ನಂತರ ಬಂದರೂ ಇದರಲ್ಲಿನ ಕವಿತೆಗಳು ಮೊದಲ ಸಂಕಲನದ ಜಾಡಿನಲ್ಲಿಯೇ ಮುಂದುವರೆದಿದ್ದವು ಅಂತ ಅವರಿಗನ್ನಿಸಿ ‘ಹೊಕ್ಕಳಲ್ಲಿ ಹೂವಿಲ್ಲ ಮತ್ತು ಇತರ ಪದ್ಯಗಳು’ ಎಂಬ ಅರ್ಥ ಬರುವಂತೆಯೂ ಇಟ್ಟಿರಬಹುದು. ಅಥವಾ ಈ ರೀತಿ ಶೀರ್ಷಿಕೆ ಇಡುವಾಗ ಸಂಕಲನ ಮುಖ್ಯ ಪದ್ಯ ಹೆಸರಿಸಿ ಮತ್ತು ಇತರ ಪದ್ಯಗಳು ಎಂಬ ರೂಢಿಯನ್ನು ಗಮನದಲ್ಲಿರಿಸಿದರೆ, ಈ ಸಂಕಲನದ ಯಾವ ಪದ್ಯಗಳಿಗೂ ಹೆಸರೇ ಇಲ್ಲವಲ್ಲ. ಎಲ್ಲವೂ ಮುಖ್ಯ ಯಾವುದೂ ಮುಖ್ಯ ಅಲ್ಲ ಅನ್ನೋ ಸ್ಥಿತಿಯಲ್ಲಿಯೇ ಮೂರು ಚುಕ್ಕೆಗಳು ಹೇಳಬಹುದು. ಈ ಸಂಕಲನದಲ್ಲಿ ಸಂಯೋಜನೆಯ ವಿವಿಧ ಮಾದರಿ ಪ್ರಯೋಗಗಳಿಂದಲೇ ಅರ್ಥ ಹೇಳುವ ದಿಕ್ಕಿನೆಡೆ ರಾಮಾನುಜನ್ ಯೋಚಿಸಿದರು.
ಅಂತ : ಹೀಗೆ ಪ್ರತ್ಯಕ್ಷ ಆಗುವುದು | ದುರ್ಗಿ ಮಾತ್ರ
ಅಲ್ಲ
ಇಲ್ಲಿ ‘ಅಲ್ಲ’ ಕಾಯ್ದುಕೊಳ್ಳುವ ದೂರ ‘ಪ್ರತ್ಯಕ್ಷ’ ಸಾಧಿಸಿಕೊಳ್ಳುವ ಸಾಪೇಕ್ಷತೆ ಎಲ್ಲವೂ ಶಬ್ದಗಳನ್ನು ಸಂಯೋಜಿಸುವ ರೀತಿಯಲ್ಲೇ ಇದೆ. ಭಾಷಾಶಾಸ್ತ್ರ ಶಬ್ದಗಳನ್ನು ಅರ್ಥದ ಸಂಕೇತ ಮಾತ್ರ ಎಂದು ತೆಪ್ಪಗಾದರೆ, ರಾಮಾನುಜನ್ ಇನ್ನೂ ಮುಂದೆ ಹೋಗಿ ಶಬ್ದಗಳ ಸಂಯೋಜನೆಯಲ್ಲಿ ಇನ್ನಷ್ಟು ಅರ್ಥ ಬೆದಕಲು ಮುಂದಾದರು.
ಈಗ ತಾನೇ ಬೇಟೆ ಗಾರ ಬಿಟ್ಟ ಬಾಣ ನೆಟ್ಟುಕೊಂಡ…
ಎನ್ನುವ ಮಾದರಿ ಉದಾಹರಣೆಗಳು ‘ಸಂಕಲನ’ದಲ್ಲಿ ಸಾಕಷ್ಟಿವೆ. ಅರ್ಥಪೂರ್ತಿ ತಲೆಯೊಳಗೆ ಹೋಗುವ ಮೊದಲೇ ಶಬ್ದಗಳನ್ನು ಚೆಲ್ಲಿಬಿಟ್ಟ ರೀತಿ ಸಾಧಿಸುವ ಪರಿಣಾಮ, ಕಾವ್ಯಕ್ಕೆ ಹೊಸ ಮಾದರಿ ‘ಸಂರಚನೆ’ ನೀಡುವ ಪ್ರಯತ್ನವಾಗಿತ್ತು. ಆದರೆ ರಾಮಾನುಜನ್ ಇನ್ನಷ್ಟು ಪ್ರಯೋಗಗಳಿಗೆ ನಿಷ್ಠವಾಗಿದ್ದರೆ ಮಾತ್ರ ಇದಕ್ಕೆ ಅಗತ್ಯ ತಾತ್ವಿಕತೆ ಲಭ್ಯವಾಗುತ್ತಿತ್ತು. ಭಾಷಾಶಾಸ್ತ್ರ ಹಿಂದೆ ಹೇಳಿದಂತೆ ಶಬ್ದ ಅನ್ನೋದು ಅರ್ಥ ಪರಂಪರೆ ಸಂಕೇತ ಮಾತ್ರ ಎಂದು ಹೇಳುವಾಗ ಅದರ ಶಕ್ತಿ ಏನು ಎಂಬುದನ್ನು ಗಮನದಲ್ಲಿಟ್ಟಿತ್ತು. ಹೀಗಾಗಿ ಶಬ್ದಗಳನ್ನು ಕತ್ತರಿಸಿ ಮರುಕಟ್ಟುವ ಕ್ರಿಯೆಯ ಕಾವ್ಯದ ಪರಿಣಾಮ ಎಷ್ಟರ ಮಟ್ಟಿಗೆ ಹಿಗ್ಗಿಸಬಲ್ಲುದು ಎಂಬುದನ್ನು ಭಾಷಾಶಾಸ್ತ್ರದ ನೆಲೆಯಲ್ಲೂ ಚರ್ಚಿಸಬೇಕು. ಮುಂದಿನ ಸಂಕಲನದಲ್ಲಿ ಕಡಿಮೆಯಾಗಿರುವ ಈ ಮಾದರಿ ಅವರಿಗೇ ಇರಬಹುದಾದ ಅವಿಶ್ವಾಸವನ್ನು ಹೇಳಿತು, ಅಷ್ಟೇ ಅಲ್ಲ ಇಂತಹ ಪ್ರಯತ್ನದ ಜೊತೆಗೆ ಅರ್ಥ ಪರಂಪರೆಗೆ ಅವರು ನೆಲದಿಂದ ತೆಗೆದದ್ದು ಕಡಿಮೆಯಾಗಿ ಎರವಲು ತಂದಿದ್ದು ಹೆಚ್ಚಾಗಿ ಸಂಯೋಜನೆ ಎಷ್ಟೋ ಕಡೆ ಸರ್ಕಸ್ ಆಗಿಬಿಟ್ಟಿತ್ತು.
ಕುಂಟೋಬಿಲ್ಲೆ (1990) ಬರುವ ವೇಳೆಗೆ ರಾಮಾನುಜನ್ ಮಹತ್ವದ ಅನುವಾದಗಳನ್ನು ತಮ್ಮ ಹಿರಿಮೆಗೆ ದಕ್ಕಿಸಿಕೊಂಡಿದ್ದರು. ಮೌಕಿಕ ಪರಿಂಪರೆಯ ಮಹತ್ವವವನ್ನು ಮನಗಂಡು ಅದರ ಸಂಗ್ರಹಕ್ಕೆ ದಿಕ್ಕು ದಿಕ್ಕಿಗೆ ಅಲೆಯುತ್ತಿದ್ದರು. ಈ ದೈತ್ಯ ಪ್ರತಿಭೆಗೆ, ‘ಸಂರಚನೆ’ಯ ಕುರಿತ ಹಳೆ ಪ್ರಯೋಗಗಳನ್ನು ಮೀರಿದ ಸಾಧ್ಯತೆ ಸಹಜವಾಗಿತ್ತು. ಇದಕ್ಕೆ ಅದರಲ್ಲಿನ ‘ಹೋಮರ್’ನ ಒಡಿಸ್ಸಿಯಿಂದ ಆಯ್ದ ‘ಮೆನೆಲೆ ಆಸ್ ಕತೆ’ ಎಂಬ ಭಾವಾನುವಾದ ನೋಡಬಹುದು. ಇದು ಸಾಲುಗಳ ಕತ್ತರಿಸಿದ್ದರೆ ಗದ್ಯವೇ ಆಗಬಹುದಾಗಿದ್ದ ಭಾಷೆ ಮತ್ತು ವಸ್ತು. ಆದರೆ ಇದನ್ನು ಹೇಳುವ ಧಾಟಿಯೇ ಕವಿತೆ ಆಗಿಬಿಟ್ಟಿದೆ. ಕವಿತೆ ಅನ್ನೋದು ಪರಿಣಾಮದಲ್ಲಿ ಅನ್ನೋದನ್ನು ಸ್ಪಷ್ಟವಾಗಿ ಸಾಧಿಸಿಬಿಟ್ಟಿದ್ದರು. ‘ಹುತ್ತ ಕಟ್ಟದೆ…’ ಎಂಬ ಅಡಿಗರ ಧ್ಯಾನಸ್ಥ ಮನೋಸ್ಥಿತಿಯ ಪ್ರತಿಮೆಗೆ ‘ಹುತ್ತ ಹುಟ್ಟದ ಕೈ ತುಂಬ ಕೈಗೂಡ ಮರಳು’ (ಗಂಟು) ಎಂಬ ಪ್ರತಿಮೆ ಇಟ್ಟು ಇದನ್ನು ತಾತ್ವಿಕವಾಗಿಯೂ ತೋರಿಸಿದರು.
‘ಬ್ರಹ್ಮಜ್ಞಾನ: ಒಂದು ನಿಶ್ಯಬ್ದ ಸಾನೆಟ್ಟು’ ಹಲವರ ಚಿಂತನೆಗೆ ಆಹಾರವಾದ ಒಂದು ಪ್ರಯೋಗ. ಲಘು ಗುರುಗಳ ಪ್ರಸ್ತಾರದಲ್ಲಿರುವ ಆಕಾರದಲ್ಲಿ ಶಬ್ದಗಳೇ ಇಲ್ಲ. ನಿಶ್ಯಬ್ದ ಸ್ಥಿತಿಯಲ್ಲಿ ಸಾಧ್ಯವಾಗುವ ಬ್ರಹ್ಮಜ್ಞಾನ ತಾನೇ… ಸಾನೆಟ್ ಎಂಬ 14 ಸಾಲಿನ ಆಕಾರ ಪಾಶ್ಚಾತ್ಯ ಛಂದೋ ಕಲ್ಪನೆಗಳಿದ್ದ ಎರಡೂ ಎಷ್ಟು ಶುಷ್ಕ ಸಂಯೋಜನೆ ಎಂಬುದನ್ನು ಶಬ್ದವಿಹೀನ ಸ್ಥಿತಿಯಲ್ಲಿ ಒಂದು ಕಡೆ ಲೇವಡಿ ಮಾಡಿದರೆ, ‘ಬ್ರಹ್ಮಜ್ಞಾನ’ ಎಂಬ ಚಿಂತನೆಯು ಅಂತಿಮ ಸ್ಥಿತಿ ಇರಬಹುದಾದ ನಿರ್ವಾತವನ್ನು ಅತಾರ್ಕಿಕ ಪಾಂಡಿತ್ಯವನ್ನು ಇನ್ನೊಂದೆಡೆ ಲೇವಡಿ ಮಾಡುತ್ತಿದೆ. ಹೀಗೆ ಮಾತುಗಳನ್ನು ಆಡುವುದರಲ್ಲಿ ಹೊಸ ಅರ್ಥಗಳನ್ನು ಬೆಳೆಸುತ್ತ ಹೋದ ರಾಮಾನುಜನ್ ಮಾತಿರದ ರಚನೆಯೊಂದಿಗೆ ಹಲವು ಅರ್ಥಗಳಿಗೆ ಜಾಗ ಕೊಟ್ಟರು.
‘ಸಂರಚನೆ’ ಅರಸುತ್ತ ಸಾಗಿದ ರಾಮಾನುಜನ್ ಕಾವ್ಯ ಸಹ ಹೀಗೆ ಶಬ್ದವಿಲ್ಲದ ಶಬ್ದಬೇಡದ ಶಬ್ದ.
ಇದನ್ನೂ ಓದಿ : M. Balamuralikrishna Birthday : ‘ಯಾವ ಕಲಾವಿದರಿಗೂ ಅವರವರ ಪ್ರತಿಭೆಯ ಮೇಲೆ ಅವರಿಗೆ ಹತೋಟಿ ಇರುವುದೇ ಇಲ್ಲ’
Published On - 3:15 pm, Tue, 13 July 21