ರಾಜ್ಯದಲ್ಲಿ ಕಾಲೇಜು ಆರಂಭದ ಬಳಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ರಾಜ್ಯದಲ್ಲಿ ನಾಲ್ಕೇ ದಿನಕ್ಕೆ ಕೋವಿಡ್ ಪ್ರಕರಣಗಳು ಶತಕ ದಾಟಿವೆ.
ರಾಜ್ಯದಲ್ಲಿ ಕಾಲೇಜು ಆರಂಭವಾದ ಬಳಿಕ 104ಕ್ಕೂ ಹೆಚ್ಚು ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಕೊರೊನಾ ಒಕ್ಕರಿಸಿದೆ. ಅದರಲ್ಲಿ ಸಿಲಿಕಾನ್ ಸಿಟಿಯೊಂದರಲ್ಲಿಯೇ 89 ಜನರಿಗೆ ಸೋಂಕು ದೃಢವಾಗಿದೆ. ನವೆಂಬರ್ 16 ರಿಂದ ನ.19ವರೆಗೆ 13037 ಜನ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಿಟಿಯಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ 89 ಜನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸೋಂಕು ದೃಢವಾಗಿರುವುದು ಕಂಡು ಬಂದಿದೆ.
ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕಾಲೇಜು ಆರಂಭ ಮಾಡಿ ಸರ್ಕಾರ ತಪ್ಪು ಮಾಡ್ತಾ ಎಂಬ ಅನುಮಾನ ಈಗ ಎಲ್ಲೆಡೆ ಶುರುವಾಗಿದೆ. ರಾಜ್ಯದಲ್ಲಿ ಈಗಾಗಲೇ 104 ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಕಾಲೇಜಿಗೆ ಬಂದವರಲ್ಲಿ ಸೋಂಕು ಬಂದ ಹಿನ್ನೆಲೆ ಇತರೆ ವಿದ್ಯಾರ್ಥಿಗಳಲ್ಲಿ ಕೂಡ ಭೀತಿ ಹೆಚ್ಚಳವಾಗಿದೆ.
ಕಾಲೇಜು ಆರಂಭವಾದ ಹರಿಯಾಣ, ದೆಹಲಿ, ಆಂದ್ರಪ್ರದೇಶ ಗಳಲ್ಲಿ ಕೊರೊನಾ ಏರಿಕೆಯಾದ ಕಾರಣದಿಂದಾಗಿ ಹರಿಯಾಣದಲ್ಲಿ ಮತ್ತೆ ಶಾಲಾ -ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ನ. 23 ರಿಂದ ಆರಂಭ ಮಾಡಲು ತಯಾರಿ ನಡೆಸಿದ್ದ ಗುಜರಾತ್ ಸರ್ಕಾರ ಕೊರೊನಾ ಏರಿಕೆಯನ್ನು ಕಂಡು ಶಾಲಾ ಕಾಲೇಜು ಆರಂಭವನ್ನು ಮತ್ತೆ ಮುಂದೂಡಿದೆ.
ಇದನ್ನೂ ಓದಿ: ವಿದ್ಯಾರ್ಥಿ, ಪೋಷಕರ ಒತ್ತಾಯಕ್ಕೆ ಕಾಲೇಜು ಓಪನ್ ಮಾಡಿದ್ದೇವೆ -DCM ಡಾ. ಅಶ್ವತ್ಥ್ ನಾರಾಯಣ