ಕರ್ನಾಟಕಕ್ಕೆ ಪ್ರತಿದಿನ ದೊರೆಯುವ ಆಮ್ಲಜನಕದ ಪಾಲು 802 ಮೆಟ್ರಿಕ್ ಟನ್‌ನಿಂದ 865 ಟನ್‌ಗೆ ಹೆಚ್ಚಳ; ಕೇಂದ್ರ ಸಚಿವ ಸದಾನಂದಗೌಡ ಮಾಹಿತಿ

ಇನ್ನೊಂದು ಪ್ರಮುಖ ಔಷಧ ‘ತೊಸಿಲಿಜುಮಾಬ್’ನ್ನು (Tocilizumab) ಸಿಪ್ಲಾ ಕಂಪನಿ ಮೂಲಕ ಸ್ವಿಜರ್ಲ್ಯಾಂಡಿನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅವುಗಳಲ್ಲಿ 9500 ವಯಲ್ಸ್ ಔಷಧವನ್ನು ಕೇಂದ್ರದ ವೈದ್ಯಕೀಯ ಸಂಸ್ಥೆಗಳು ಹಾಗೂ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಈ ಪೈಕಿ ಕರ್ನಾಟಕಕ್ಕೆ 855 ವಯಲ್ಸ್ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

  • TV9 Web Team
  • Published On - 21:16 PM, 1 May 2021
ಕರ್ನಾಟಕಕ್ಕೆ ಪ್ರತಿದಿನ ದೊರೆಯುವ ಆಮ್ಲಜನಕದ ಪಾಲು 802 ಮೆಟ್ರಿಕ್ ಟನ್‌ನಿಂದ 865 ಟನ್‌ಗೆ ಹೆಚ್ಚಳ; ಕೇಂದ್ರ ಸಚಿವ ಸದಾನಂದಗೌಡ ಮಾಹಿತಿ
ಕೇಂದ್ರ ಸಚಿವ ಡಿ ವಿ ಸದಾನಂದಗೌಡ

ಬೆಂಗಳೂರು: ಕರ್ನಾಟಕಕ್ಕೆ ಈವರೆಗೆ ಪ್ರತಿದಿನ ನಿತ್ಯ ಪೂರೈಸುತ್ತಿರುವ ಮೆಡಿಕಲ್ ಆಕ್ಸಿಜನ್​ನ್ನು 802 ಮೆಟ್ರಿಕ್ ಟನ್‌ನಿಂದ 865 ಟನ್‌ಗೆ ಏರಿಸಲಾಗಿದೆ. ಜತೆಗೆ ರಾಜ್ಯಕ್ಕೆ ಮೇ 9ರವರೆಗೆ ಪ್ರತಿದಿನ 3.1 ಲಕ್ಷ ‘ರೆಮ್‌ಡಿಸಿವಿರ್ ಔಷಧವನ್ನು ಒದಗಿಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳಿಗೆ ಇಂದು ಹೆಚ್ಚುವರಿಯಾಗಿ 16.5 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಹಂಚಿಕೆ ಮಾಡಿದ್ದು ಕರ್ನಾಟಕಕ್ಕೆ ಮೇ 3ರಿಂದ 9ರವರೆಗಿನ ಅವಧಿಯ ಬಳಕೆಗೆಗಾಗಿ 1.62 ಲಕ್ಷ ವಯಲ್ಸ್ ನಿಗದಿಪಡಿಸಲಾಗಿದೆ. ಇದರಿಂದಾಗಿ ರಾಜ್ಯಕ್ಕೆ ಇದುವರೆಗೆ ಹಂಚಿಕೆಯಾದ ರೆಮ್ಡೆಸಿವರ್ ಪ್ರಮಾಣ 3,01,300 ವಯಲ್ಸ್​ಗೆ ಏರಿಕೆಯಾದಂತಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯಕ್ಕೆ ಏಪ್ರಿಲ್ 21ರಿಂದ ಮೇ 2ರವರೆಗಿನ ಬಳಕೆಗಾಗಿ 1,39,300 ವಯಲ್ಸ್ ರೆಮ್ಡೆಸಿವಿರ್ ಹಂಚಿಕೆ ಮಾಡಲಾಗಿತ್ತು. ಮುಂದಿನ ವಾರದ ಬಳಕೆಗಾಗಿ 1.62 ಲಕ್ಷ ವಯಲ್ಸ್ ನಿಗದಿಪಡಿಸಲಾಗಿದೆ ಎಂದಿದ್ದಾರೆ.  ಆಮದು ಮಾಡಿಕೊಳ್ಳಲಾಗುತ್ತಿರುವ ರೆಮ್ಡೆಸಿವರ್ ಪೈಕಿ 75 ಸಾವಿರ ವಯಲ್ಸ್ ಈಗಾಗಲೇ ಭಾರತ ತಲುಪಿದೆ. ಹಾಗೆಯೇ ಭಾರತದಲ್ಲಿಯೂ ರೆಮ್ಡೆಸಿವರ್ ಉತ್ಪಾದನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಲಭ್ಯತೆಯನ್ನು ನೋಡಿಕೊಂಡು ಇನ್ನೂ ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗುವುದು ಸಚಿವ ಡಿ.ವಿ. ಸದಾನಂದಗೌಡ ಭರವಸೆ ನೀಡಿದ್ದಾರೆ.

ಕರ್ನಾಟಕದ ಆಮ್ಲಜನಕ ಪಾಲನ್ನು ಸದ್ಯದ 802 ಮೆಟ್ರಿಕ್ ಟನ್ನಿನಿಂದ 865 ಮೆಟ್ರಿಕ್ ಟನ್ನಿಗೆ ಏರಿಸಲಾಗಿದೆ. ಇದನ್ನು ಇನ್ನಷ್ಟು ಹೆಚ್ಚಿಸುವಂತೆ ರಾಜ್ಯವು ಕೇಂದ್ರ ವಾಣಿಜ್ಯ ಇಲಾಖೆಯನ್ನು ಕೋರಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿದ್ದೇನೆ. ಕೊರೊನಾ ನಿರ್ವಹಣೆ ಬಗ್ಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದೊಂದಿಗೆ ಸತತ ಸಂಪರ್ಕದಲ್ಲಿದೆ. ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರೊಂದಿಗೂ ಹೆಚ್ಚುವರಿ ಆಮ್ಲಜನಕ ಪೂರೈಕೆ ಬಗ್ಗೆ ಚರ್ಚಿಸಿದ್ದೇವೆ. ಕೊರೊನಾ ವಿರುದ್ಧದ ಈ ಸಮರದಲ್ಲಿ ರಾಜ್ಯಕ್ಕೆ ಅಗತ್ಯ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ.

ಇನ್ನೊಂದು ಪ್ರಮುಖ ಔಷಧ ‘ತೊಸಿಲಿಜುಮಾಬ್’ನ್ನು (Tocilizumab) ಸಿಪ್ಲಾ ಕಂಪನಿ ಮೂಲಕ ಸ್ವಿಜರ್ಲ್ಯಾಂಡಿನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗೆ ಆಮದು ಮಾಡಿಕೊಳ್ಳಲಾದ 9500 ವಯಲ್ಸ್ ತೊಸಿಲಿಜುಮಾಬ್ ಔಷಧವನ್ನು ಕೇಂದ್ರದ ವೈದ್ಯಕೀಯ ಸಂಸ್ಥೆಗಳು ಹಾಗೂ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಈ ಪೈಕಿ ಕರ್ನಾಟಕಕ್ಕೆ 855 ವಯಲ್ಸ್ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದರು.

ಈ ಮಧ್ಯೆ ಕರ್ನಾಟಕದ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವಿದ್ ಅಖ್ತರ್ ಕೇಂದ್ರ ವಾಣಿಜ್ಯ ಇಲಾಖೆಗೆ ಪತ್ರ ಬರೆದು ರಾಜ್ಯದ ಆಮ್ಲಜನಕದ ಪಾಲನ್ನು ಹೆಚ್ಚಿಸುವಂತೆ ಕೋರಿದ್ದಾರೆ. ರಾಜ್ಯದಲ್ಲಿ ಮೇ 5ರ ವೇಳೆಗೆ ಸಕ್ರಿಯ ಕೊವಿಡ್ ಪ್ರಕರಣಗಳು 3.95 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಹಾಗಾದಲ್ಲಿ ಶೇಕಡಾ 3ರಷ್ಟು ಕೊವಿಡ್ ಪೀಡಿತರನ್ನು ತೀವ್ರನಿಗಾ ಘಟಕದಲ್ಲಿ ದಾಖಲಿಸಬೇಕಾಗುತ್ತದೆ. ಹಾಗೆಯೇ ಶೇಕಡಾ 17 ರಷ್ಟು ಜನರಿಗೆ ಆಮ್ಲಜನಕದ ಅವಶ್ಯಕತೆ ಉಂಟಾಗಲಿದೆ. ಇದರಿಂದಾಗಿ ಮೇ 5ರ ವೇಳೆಗೆ ರಾಜ್ಯದ ಆಮ್ಲಜನಕದ ಅವಶ್ಯಕತೆ ಪ್ರತಿದಿನ ಕನಿಷ್ಠಪಕ್ಷ 1162 ಮೆಟ್ರಿಕ್ ಟನ್ನಿಗೆ ಏರಿಕೆಯಾಗಲಿದ್ದು ಇದನ್ನು ಪೂರೈಸುವಂತೆ ಅವರು ಕೋರಿದ್ದಾರೆ.

ಇದನ್ನೂ ಓದಿ: Covid Helpline Numbers: ಆಕ್ಸಿಜನ್​, ರೆಮ್​ಡೆಸಿವರ್​ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ

ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ತಡೆಗೆ ತಜ್ಞರ ಸಮಿತಿ ರಚಿಸಲು ಸಿಎಂ ಯಡಿಯೂರಪ್ಪ ತೀರ್ಮಾನ

ಖಾಸಗಿ ಆಸ್ಪತ್ರೆಗಳು ಸುಖಾಸುಮ್ಮನೆ ಬೆಡ್ ಇಲ್ಲ ಎನ್ನುವಂತಿಲ್ಲ; ಬಿಬಿಎಂಪಿ ವ್ಯಾಪ್ತಿಯಲ್ಲಿ ‘ಸಿಟಿಜನ್​​ ಹೆಲ್ಪ್​ ಡೆಸ್ಕ್

(Increased Karnataka daily share of oxygen from 802 metric tonnes to 865 tonnes says Central Minister Sadananda Gowda)