ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತಟ್ಟದ ಕೊರೊನಾ ಆತಂಕ; ವಿಮಾನ ಹಾರಾಟ, ಪ್ರಯಾಣಿಕರ ಓಡಾಟದಲ್ಲಿ ಹೆಚ್ಚಳ
ಬೆಳಗಾವಿ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಹಾಗೂ ಪ್ರಯಾಣಿಸಿದವರ ಸಂಖ್ಯೆಯ ಆಧಾರದ ಮೇಲೆ ಈ ನಿಲ್ದಾಣ ಜೂನ್ ತಿಂಗಳಲ್ಲಿ ರಾಜ್ಯದಲ್ಲೇ 2ನೇ ಸ್ಥಾನ ಗಳಿಸಿತ್ತು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಸ್ಥಾನವನ್ನು ಇದು ಗಳಿಸಿತ್ತು. ಆ ಅವಧಿಯಲ್ಲಿ ಬೆಳಗಾವಿಯಿಂದ 391 ವಿಮಾನಗಳು ಹಾರಾಟ ನಡೆಸಿದ್ದು, 10,224 ಮಂದಿ ಪ್ರಯಾಣಿಸಿದ್ದಾರೆ.
ಬೆಳಗಾವಿ: ಮಹಾಮಾರಿ ಕೊರೊನಾ ದೇಶಕ್ಕೆ ಎಂಟ್ರಿ ಕೊಟ್ಟ ಬಳಿಕ ವಿಮಾನಗಳನ್ನ ರದ್ದು ಮಾಡಿದ್ದು, ನಂತರದಲ್ಲಿ ವಿಮಾನ ಸೇವೆಯನ್ನು ಆರಂಭಿಸಲಾಯಿತು. ಆದರೆ ವಿಮಾನದಲ್ಲಿ ಓಡಾಡುವುದರಿಂದ ಕೊರೊನಾ ಬರಬಹುದು ಎನ್ನುವ ಮನಸ್ಥಿತಿಯಿಂದಾಗಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು, ಇದರಿಂದ ವಿಮಾನಯಾನ ಸಂಸ್ಥೆಗಳು ಸಾಕಷ್ಟು ನಷ್ಟ ಅನುಭವಿಸುವಂತಾಯಿತು. ಆದರೆ ಈ ಸಂಕಷ್ಟದ ನಡುವೆಯೂ ಕುಂದಾನಗರಿ ಬೆಳಗಾವಿಯ ವಿಮಾನ ನಿಲ್ದಾಣದಿಂದ ಅತೀ ಹೆಚ್ಚು ವಿಮಾನಗಳು ಹಾರಾಟ ನಡೆಸುವುದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಓಡಾಟ ನಡೆಸುತ್ತಿರುವುದು ಆಶ್ಚರ್ಯಕರವಾಗಿದೆ.
ಸಾಂಬ್ರಾ ವಿಮಾನ ನಿಲ್ದಾಣ ಸಕ್ರಿಯ ನಿಲ್ದಾಣ ಬೆಳಗಾವಿ ತಾಲೂಕಿನಲ್ಲಿರುವ ಸಾಂಬ್ರಾ ವಿಮಾನ ನಿಲ್ದಾಣ ಇದೀಗ ಹೆಚ್ಚು ಸಕ್ರಿಯವಾಗಿರುವ ನಿಲ್ದಾಣವಾಗಿ ಮಾರ್ಪಟ್ಟಿದ್ದು, 6 ತಿಂಗಳಲ್ಲಿ ಬರೋಬ್ಬರಿ 3,211 ವಿಮಾನಗಳ ಕಾರ್ಯಾಚರಣೆ ಇಲ್ಲಿಂದ ನಡೆದಿರುವುದು ವಿಶೇಷವಾಗಿದೆ. ನವೆಂಬರ್ ತಿಂಗಳೊಂದರಲ್ಲೇ 767 ವಿಮಾನಗಳು ಹಾರಾಡಿದ್ದು, 30,336 ಜನರು ಈ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದಾರೆ. ಇನ್ನು ಜೂನ್‌ನಲ್ಲಿ 391, ಜುಲೈ 450, ಆಗಸ್ಟ್‌ನಲ್ಲಿ 432, ಸೆಪ್ಟೆಂಬರ್‌ನಲ್ಲಿ 519, ಅಕ್ಟೋಬರ್‌ನಲ್ಲಿ 652 ವಿಮಾನಗಳು ಬೆಳಗಾವಿಯಿಂದ ಕಾರ್ಯಾಚರಣೆ ನಡೆಸಿ ಸಾವಿರಾರು ಪ್ರಯಾಣಿಕರಿಗೆ ಸೇವೆ ಒದಗಿಸಿದ್ದು, ಈ ಮಾಹಿತಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಬಂದ್ ಆಗಿದ್ದ ವಿಮಾನಗಳ ಹಾರಾಟ ಆರಂಭ 2018ರಲ್ಲಿ ಇದ್ದ 5 ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇದರಿಂದ ಬೆಳಗಾವಿ ವಿಮಾನ ನಿಲ್ದಾಣ ಬಂದ್ ಆಗುತ್ತದೆ ಎಂಬ ಭಯ ಕೂಡ ಇಲ್ಲಿನ ಜನರಿಗೆ ಕಾಡಿತ್ತು. ಆದರೆ ಈ ಭಾಗದ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಹೋರಾಟದ ಪರಿಣಾಮವಾಗಿ ಉಡಾನ್ ಯೋಜನೆಯಲ್ಲಿ ನಿಲ್ದಾಣ ಸೇರ್ಪಡೆಯಾದ ಬಳಿಕ ಈ ವಿಮಾನ ನಿಲ್ದಾಣಕ್ಕೆ ಜೀವಕಳೆ ಬಂದಿದೆ.
2020ರ ಫೆಬ್ರವರಿಯಲ್ಲಿ 752 ವಿಮಾನಗಳು ಹಾರಾಟ ನಡೆಸಿದ್ದವು, ಬಳಿಕ ನವೆಂಬರ್‌ನಲ್ಲಿ 767 ವಿಮಾನ ಓಡಾಟ ನಡೆಸಿ ಹೊಸ ದಾಖಲೆ ಸೃಷ್ಟಿಯಾಗಿದೆ. ಇನ್ನು ಅತೀ ಹೆಚ್ಚು ವಿಮಾನಗಳ ಓಡಾಟದಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಹೆಚ್ಚು ಅನುಕೂಲವಾಗದೆ.
ದೇಶದ ಪ್ರಮುಖ ನಗರಳಿಗೆ ಸಂಪರ್ಕ: ಬೆಳಗಾವಿ ವಿಮಾನ ನಿಲ್ದಾಣದಿಂದ ದೇಶದ ಪ್ರಮುಖ ನಗರಗಳಿಗೆ ಸಾಕಷ್ಟು ವಿಮಾನಗಳು ಹಾರಾಟ ನಡೆಸುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಆಗಿದೆ. ಇಲ್ಲಿಂದ ಬೆಂಗಳೂರು ಹಾಗೂ ಹೈದರಾಬಾದ್‌ಗೆ ತಲಾ 3, ಮುಂಬೈಗೆ 2, ಪುಣೆ, ಇಂದೋರ್, ಸೂರತ್, ಕಡಪ, ತಿರುಪತಿ, ಮೈಸೂರು, ಚೆನ್ನೈ ಹಾಗೂ ಅಹಮದಾಬಾದ್‌ಗೆ ನಿತ್ಯವೂ ತಲಾ 1 ವಿಮಾನ ಕಾರ್ಯಾಚರಣೆಯಿದೆ. ಇದರ ಜೊತೆಗೆ ಡಿಸೆಂಬರ್ 21ರಿಂದ ಸೂರತ್‌ಗೆ ಹೊಸದಾಗಿ ವಿಮಾನ ಹಾರಾಟ ಆರಂಭವಾಗಿದೆ.
ಉಡಾನ್ ಯೋಜನೆಯಲ್ಲಿ ಸ್ಟಾರ್ ಏರ್ ಕಂಪನಿಯ ವಿಮಾನವು ವಾರದಲ್ಲಿ 3 ದಿನ (ಸೋಮವಾರ, ಬುಧವಾರ ಹಾಗೂ ಶುಕ್ರವಾರ) ಓಡಾಟ ನಡೆಸಲಿದೆ. ಬೆಳಗಾವಿಯಿಂದ ಮಧ್ಯಾಹ್ನ 12ಕ್ಕೆ ಹೊರಟು ಮಧ್ಯಾಹ್ನ 1.20ಕ್ಕೆ ಸೂರತ್ ತಲುಪಲಿದ್ದು, ಅಲ್ಲಿಂದ ಸಂಜೆ 5.30ಕ್ಕೆ ನಿರ್ಗಮಿಸಿ, ಸಂಜೆ 6.50ಕ್ಕೆ ಸಾಂಬ್ರಾಗೆ ಬಂದಿಳಿಯಲಿದೆ. ಇದಲ್ಲದೇ ಬೆಂಗಳೂರಿಗೆ ಮತ್ತೊಂದು ವಿಮಾನ ಸೇವೆ ಆರಂಭಿಸಲಿದೆ ಎಂದು ಏರ್ಪೋರ್ಟ್ ಮೂಲಗಳು ಮಾಹಿತಿ ನೀಡಿವೆ. ಲಾಕ್‌ಡೌನ್‌ನಿಂದ ವಿನಾಯಿತಿ ಸಿಕ್ಕ ಬಳಿಕ ಬೆಳಗಾವಿ ನಿಲ್ದಾಣವು ವಿಮಾನಗಳ ಹಾರಾಟ ಹಾಗೂ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಇಲ್ಲಿಂದ ವಿಮಾನಗಳ ಕಾರ್ಯಾಚರಣೆ ಜೊತೆಗೆ ಪ್ರಯಾಣಿಕರ ಸಂಖ್ಯೆಯೂ ವೃದ್ಧಿಸುತ್ತಿದೆ. ಜನರ ಸಹಕಾರದಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ನಿರ್ದೇಶಕ ರಾಜೇಶ್‌ಕುಮಾರ್ ಮೌರ್ಯ ತಿಳಿಸಿದ್ದಾರೆ.
ಅತಿ ಹೆಚ್ಚು ಪ್ರಯಾಣಿಕರ ಓಡಾಟ: ಬೆಳಗಾವಿ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಹಾಗೂ ಪ್ರಯಾಣಿಸಿದವರ ಸಂಖ್ಯೆಯ ಆಧಾರದ ಮೇಲೆ ಈ ನಿಲ್ದಾಣ ಜೂನ್ ತಿಂಗಳಲ್ಲಿ ರಾಜ್ಯದಲ್ಲೇ 2ನೇ ಸ್ಥಾನ ಗಳಿಸಿತ್ತು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಸ್ಥಾನವನ್ನು ಇದು ಗಳಿಸಿತ್ತು. ಆ ಅವಧಿಯಲ್ಲಿ ಬೆಳಗಾವಿಯಿಂದ 391 ವಿಮಾನಗಳು ಹಾರಾಟ ನಡೆಸಿದ್ದು, 10,224 ಮಂದಿ ಪ್ರಯಾಣಿಸಿದ್ದಾರೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 3ನೇ ಸ್ಥಾನದಲ್ಲಿತ್ತು.
ಕೋವಿಡ್-19 ಲಾಕ್‌ಡೌನ್ ನಿರ್ಬಂಧದಿಂದ ವಿನಾಯಿತಿ ಸಿಕ್ಕ ನಂತರ ಅಂದರೆ ಮೇ 25ರ ಬಳಿಕ ಇಲ್ಲಿಂದ ವಿಮಾನ ಹಾರಾಟ ಪುನರಾರಂಭವಾಗಿತ್ತು. ಅಂದಿನಿಂದ ಜುಲೈ 31ರವರೆಗೆ 855 ವಿಮಾನಗಳು ಹಾರಾಡಿದ್ದವು, 25,300 ಮಂದಿ ಪ್ರಯಾಣಿಸಿದ್ದರು. ಇದೆಲ್ಲದರ ನಡುವೆ ವಿಮಾನ ಹಾರಾಟ ತರಬೇತಿ ಕೇಂದ್ರ ಸ್ಥಾಪಿಸಲು ಸಿದ್ಧತೆ ನಡೆದಿದ್ದು, ತರಬೇತಿ ಕೇಂದ್ರವಾದರೆ ಈ ಭಾಗದ ಜನರಿಗೆ ಇನ್ನು ಹೆಚ್ಚಿನ ಅನುಕೂಲವಾಗಲಿದೆ.
The flight traffic graph of #AAI's Belagavi @aaiblgairport is rising month on month, at a steady pace!We applaud the sincere dedication of AAI staff & cooperation of passengers for following safety guidelines in order to maintain the surge in flight movements. #Unite2FightCorona pic.twitter.com/tBqUmOzS9r
— Airports Authority of India (@AAI_Official) December 16, 2020
ಇದು ಸೋಲಾರ್ ಮಹಾತ್ಮೆ! ಹುಬ್ಬಳ್ಳಿ ವಿಮಾನ ನಿಲ್ದಾಣ ಈಗ ವಿದ್ಯುತ್ ಸ್ವಾವಲಂಬಿ