ಟಿವಿನೈನ್ ಕನ್ನಡದ ಮೂರು ಕಾರ್ಯಕ್ರಮಗಳಿಗೆ ಒಲಿದ ಇಂಡಿಯನ್ ಟೆಲಿವಿಷನ್ ಅವಾರ್ಡ್
ಟಿವಿ9 ಕನ್ನಡ ಸುದ್ದಿವಾಹಿನಿಗೆ ಇಂಡಿಯನ್ ಟೆಲಿವಿಷನ್ ಅವಾರ್ಡ್ (Indian Television Award) ಒಲಿದಿದೆ. ಟಿವಿ9 ಕನ್ನಡ ಸುದ್ದಿವಾಹಿನಿಯ ಮೂರು ಕಾರ್ಯಕ್ರಮಗಳಿಗೆ ಪ್ರಶಸ್ತಿ ದೊರೆತಿದ್ದು, ಇಂದು(ಡಿ.09) ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ನವದೆಹಲಿ, ಡಿ.09: ಟಿವಿ9 ಕನ್ನಡ ಸುದ್ದಿವಾಹಿನಿಗೆ ಇಂಡಿಯನ್ ಟೆಲಿವಿಷನ್ ಅವಾರ್ಡ್ (Indian Television Award) ಒಲಿದಿದೆ. ಟಿವಿ9 ಕನ್ನಡ ಸುದ್ದಿವಾಹಿನಿಯ ಮೂರು ಕಾರ್ಯಕ್ರಮಗಳಿಗೆ ಪ್ರಶಸ್ತಿ ದೊರೆತಿದ್ದು, ಟಿವಿ9 ಮಂಥನ, ಟಿವಿ9 ವಿಶೇಷ ಹಾಗೂ ‘ಸೇವ್ ಬೇಬಿ ಜನೀಶ್’ ಸಾಮಾಜಿಕ ಕಳಕಳಿ ಕಾರ್ಯಕ್ರಮಕ್ಕೆ ಪ್ರಶಸ್ತಿ ಗರಿಯ ಲಭಿಸಿದೆ. ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
* ‘ಸೇವ್ ಬೇಬಿ ಜನೀಶ್’ ಸಾಮಾಜಿಕ ಕಳಕಳಿ ಕಾರ್ಯಕ್ರಮ
ಟಿವಿ9 ಕನ್ನಡ ಸುದ್ದಿವಾಹಿನಿಯ ಸೇವ್ ಬೇಬಿ ಜನೀಶ್ ಕಾರ್ಯಕ್ರಮಕ್ಕೆ ಇಂಡಿಯನ್ ಟೆಲಿವಿಷನ್ ಅವಾರ್ಡ್ ದೊರೆತಿದ್ದು, ಬೆನ್ನುಮೂಳೆ ಸ್ನಾಯುವಿನ ಕ್ಷೀಣತೆಯಿಂದ ಬೇಬಿ ಜನೀಶ್ನನ್ನು ಉಳಿಸಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆನ್ನುಮೂಳೆಯ ಸ್ನಾಯುವಿನ ಕ್ಷೀಣತೆ (Spinal Muscular Atrophy) ಒಂದು ಆನುವಂಶಿಕ ರೋಗ. ಬೆನ್ನುಹುರಿ ಮತ್ತು ಮೆದುಳಿನ ಕಾಂಡದ ನರದಲ್ಲಿರುವ ಜೀವಕೋಶಗಳು ತಾನೇ ತಾನಾಗಿ ಜೀವ ಕಳೆದುಕೊಳ್ಳುವುದರಿಂದ, ಈ ರೋಗ ಬಂದ ವ್ಯಕ್ತಿಯು ತನ್ನ ಸ್ನಾಯುಗಳ ಚಲನೆಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದು ಒಂದು ನರವೈಜ್ಞಾನಿಕ ರೋಗದ ಸ್ಥಿತಿ ಮತ್ತು ಮೋಟಾರ್ ನ್ಯೂರಾನ್ ಕಾಯಿಲೆಯ ಒಂದು ವಿಧವಾಗಿದೆ. ಇದನ್ನು ಗುಣಪಡಿಸಲು ಬರೊಬ್ಬರಿ 16 ಕೋಟಿ ರೂ. ಅವಶ್ಯಕತೆಯಿತ್ತು.
ಏನಿದು ಬೇಬಿ ಜನೀಶ್ ಉಳಿಸಿ ಅಭಿಯಾನ?
ಸ್ಪೈನಲ್ ಮಸ್ಕ್ಯೂಲರ್ ಎಟ್ರೋಪಿ ಎಂಬ ಅಪರೂಪದ ರೋಗಕ್ಕೆ ಜನೀಶ್ ಎಂಬ ಮಗು ಬಳಲುತ್ತಿತ್ತು. ಈ ರೋಗವು ಮಗುವಿನ ಬೆಳವಣಿಗೆಯನ್ನು ಸಂಪೂರ್ಣ ಚಿವುಟಿ ಹಾಕಬಹುದು ಮತ್ತು ಚಿಕಿತ್ಸೆ ಸಿಗದಿದ್ದರೆ ಪ್ರಾಣಾಂತಿಕವೂ ಆಗಬಹುದು. ಈ ರೋಗಕ್ಕೆ ಸಿಗುತ್ತಿರುವ ಔಷಧಿ ಎಂದರೆ, ನೋವಾರ್ಟಿಸ್ ಕಂಪೆನಿಯ ಝೋಲ್ಗೆಂಜ್ಮಾ(zolgensma). ಇದರ ಬೆಲೆ ರೂ. 16 ಕೋಟಿ ರೂ. ಮಗುವಿನ ತೂಕ 13.6 ಕಿಲೋ ದಾಟಿದರೆ ಅಥವಾ ಮಗು ಮೂರು ವರ್ಷ ದಾಟಿದರೆ, ಮಗುವಿನ ಮೇಲೆ ಔಷಧಿ ಪರಿಣಾಮ ಆಗಲಿಕ್ಕಿಲ್ಲ ಎಂಬುದು ಪರಿಣಿತರ ಅಭಿಪ್ರಾಯವಾಗಿತ್ತು. ಆದ್ದರಿಂದ, ಮಗುವನ್ನು ಉಳಿಸಿಕೊಳ್ಳಲು ತುಂಬಾ ಕಡಿಮೆ ಸಮಯ ಇತ್ತು.
ಎರಡು ವರ್ಷದ ಹಿಂದೆ ಟಿವಿ9 ಕನ್ನಡ ಅಭಿಯಾನವೊಂದನ್ನು ಪ್ರಾರಂಭಿಸಿ ಜನೀಶ್ನ ಪ್ರಾಣ ಉಳಿಸಲು ಕಂಕಣ ತೊಟ್ಟಿತು. ಟಿವಿ9ನ ಅಭಿಯಾನಕ್ಕೆ ಕರ್ನಾಟಕದ ಜನ ಕೈ ಜೋಡಿಸಿದರು. ಆಗ ಸಂಗ್ರಹವಾದ ರೂ. 7 ಕೋಟಿ, ನೇರವಾಗಿ ಜನೀಶ್ನ ಅಪ್ಪನ ಬ್ಯಾಂಕ್ ಖಾತೆಗೆ ಹೋಗಿತ್ತು. ಆದರೆ, ಆ ಮಗುವನ್ನು ಉಳಿಸಲು ಇನ್ನೂ ಒಂಬತ್ತು ಕೋಟಿ ರೂ. ಬೇಕಾಗಿತ್ತು. ಬಳಿಕ ಟಿವಿ9 ಕನ್ನಡ ಕೈ ಮುಗಿದು ಕರ್ನಾಟಕದ ಜನರನ್ನು ಕೇಳಿ, ಆ ಮಗುವನ್ನು ಉಳಿಸಲು ಸಹಾಯ ಮಾಡಿತ್ತು.
ಇನ್ನುಳಿದಂತೆ ಟಿವಿ9 ಮಂಥನ ಹಾಗೂ ಟಿವಿ9 ವಿಶೇಷ ಕಾರ್ಯಕ್ರಮಗಳಿಗೆ ಪ್ರಶಸ್ತಿ ದೊರೆತಿದೆ. ಟಿವಿ9 ಕನ್ನಡವು ಇಂತಹ ಸಾಮಾಜಿಕ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿದ್ದು, ಉತ್ತಮ ಸಮಾಜಕ್ಕಾಗಿ ಶ್ರಮಿಸುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 pm, Sat, 9 December 23