ಬೆಂಗಳೂರು: ಮೈಸೂರು ಜಿಲ್ಲೆಯಲ್ಲಿ ಸೆಲೆಬ್ರಿಟಿಗಳ ನಡವಳಿಕೆ, ಭಾಷೆ, ವರ್ತನೆ ಮಿತಿಮೀರುತ್ತಿದೆ ಎಂದು ಗೃಹ ಸಚಿವ ಬಸವರಾಜು ಬೊಮ್ಮಾಯಿಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ದೂರು ನೀಡಿದ್ದಾರೆ. ಮೈಸೂರಿನಲ್ಲಿ ಜನಸಾಮಾನ್ಯರಿಗೆ ನ್ಯಾಯ ಸಿಗುತ್ತಿಲ್ಲ. ಪೊಲೀಸ್ ಠಾಣೆಗಳಲ್ಲಿ ಸೆಟಲ್ಮೆಂಟ್ ಮೂಲಕ ಡೀಲ್ ಮಾಡುತ್ತಾರೆ ಎಂದು ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡುತ್ತಿದ್ದಾರೆ.
ದರ್ಶನ್, ರಾಕೇಶ್ ಪಾಪಣ್ಣ, ಮೆಲಾಂಟ ಏನು ಹೇಳಿದ್ದರು? ಎಂದು ಪ್ರಶ್ನಿಸಿದ ನಿರ್ದೇಶಕ, ಸಂದೇಶ್ ಹೋಟೆಲ್ನಲ್ಲಿ ದೊಡ್ಡ ಗಲಾಟೆ ಆಗಿತ್ತು. ಹೋಟೆಲ್ನ ಕೆಲಸಗಾರನಿಗೆ ಮನಬಂದಂತೆ ಥಳಿಸಿದ್ದಾರೆ. ಇವರೆಲ್ಲಾ ಸೇರಿ ಹೊಡೆದಿರುವ ಬಗ್ಗೆ ನನಗೆ ಮಾಹಿತಿ ಇದೆ. ಈ ಸಂಬಂಧ ನಾನು ಗೃಹ ಸಚಿವರಿಗೆ ದೂರು ನೀಡಿದ್ದೇನೆ. ಮಾಧ್ಯಮಗಳ ಮುಂದೆಯೇ ತಲೆ ಸೀಳ್ತೀನಿ, ತೆಗಿತೀನಿ ಅಂತಾರೆ. ಮೈಸೂರು ಪೊಲೀಸರು ನನ್ನ ಜೇಬಲ್ಲಿದ್ದಾರೆ ಅಂತಾನೆ ರಾಕೇಶ್. ಅಂದರೆ ಪೊಲೀಸರ ಬಗ್ಗೆ ಎಷ್ಟು ಕೇವಲವಾಗಿ ಮಾತಾಡ್ತಾನೆ. ದರ್ಶನ್ ಗ್ಯಾಂಗ್ ಹಾವಳಿ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಗಂಭೀರ ಆರೋಪ ಮಾಡುತ್ತಿದ್ದಾರೆ.
ಅರುಣಾ ಕುಮಾರಿಯನ್ನು ಆರ್.ಆರ್.ನಗರ ಮನೆಗೆ ಏಕೆ ಕರೆಸಿಕೊಂಡಿರಿ? ಎಲ್ಲಾ ಸೆಟಲ್ಮೆಂಟ್ ಅಂದರೆ ಪೊಲೀಸರು ಏಕಿರಬೇಕು? ಅರುಣಾ ಕುಮಾರಿ ಇದರಲ್ಲಿ ಒಂದು ಪಾತ್ರ ಅಷ್ಟೇ ಎಂದು ಹೇಳಿಕೆ ನೀಡಿದ ಇಂದ್ರಜಿತ್, ಮೈಸೂರು ಪೊಲೀಸರು ಬಳೆ ತೊಟ್ಟಿದ್ದೀರಾ? ಪೊಲೀಸ್ ಠಾಣೆಗಳು ಸೆಟಲ್ಮೆಂಟ್ ತಾಣಗಳಾಗಿವೆಯಾ? ನಿರ್ದೇಶಕರು, ನಿರ್ಮಾಪಕರಿಗೆ ಹೊಡೆಯೋದು, ಹೆದರಿಸೋದು, ಸೆಟಲ್ಮೆಂಟ್ ಇದಕ್ಕಿಂತ ದುರಂತ ಬೇಕಾ ಎಂದಿದ್ದಾರೆ.
ಮೈಸೂರಿನಲ್ಲಿ ದಲಿತ ಕೆಲಸಗಾರನ ಕಣ್ಣು ಬ್ಲರ್ ಆಗಿದೆ. ಮಾರನೆಯ ದಿನ ಆತನ ಪತ್ನಿ ಪೊರಕೆ ಹಿಡಿದು ಬಂದಿದ್ದಳು. ಇದನ್ನೂ ಸೆಟಲ್ಮೆಂಟ್ ಮಾಡಿಕೊಳ್ತಾರೆ ಅಂದರೆ ಏನು? ದರ್ಶನ್ ಹೊಡೆದಿಲ್ಲ ಅಂದರೆ ಪ್ರಮಾಣ ಮಾಡಿ ಹೇಳಲಿ. ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರಮಾಣ ಮಾಡಿ ಹೇಳಲಿ ಎಂದು ಇಂದ್ರಜಿತ್ ಹೇಳಿದರು.
ಡ್ರಗ್ಸ್ ಪ್ರಕರಣದಲ್ಲಿ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಮಾತನಾಡಿದ ಇಂದ್ರಜಿತ್, ಮೈಸೂರಿನಲ್ಲಿ ಹಲ್ಲೆ, ಅರುಣಾ ಕುಮಾರಿ ಪ್ರಕರಣಗಳಿರಲಿ.. ಯಾವುದೇ ಇರಲಿ, ನಾನು ಯಾರ ಪರವೂ ಇಲ್ಲ. ಹಾಗೆಂದು ನಾನು ಯಾರ ವಿರೋಧವೂ ಇಲ್ಲ. ಗೃಹ ಸಚಿವರು ಕಾನೂನು ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Published On - 10:02 am, Thu, 15 July 21