ಸುಳ್ಯದಲ್ಲಿ ಪಿಎಫ್ಐ ಕಾರ್ಯಕರ್ತರಿಗೆ ತರಬೇತಿ: ಗೃಹಸಚಿವ ಆರಗ ಜ್ಞಾನೇಂದ್ರ
ಪಿಎಫ್ಐ ತನ್ನ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದ ಜಾಗದ ಮಾಹಿತಿ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ ತರಬೇತಿ ನೀಡುತ್ತಿದ್ದರು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರು: ಪಿಎಫ್ಐ ತನ್ನ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದ ಜಾಗದ ಮಾಹಿತಿ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ ತರಬೇತಿ ನೀಡುತ್ತಿದ್ದರು. ಈ ಬಗ್ಗೆ ಕೆಲವು ಮಾಹಿತಿ ಸಿಕ್ಕಿದ್ದು, ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ದೇಶಾದ್ಯಂತ ಪಿಎಫ್ಐ ಕಚೇರಿ ಹಾಗೂ ಮುಖಂಡರ ಮೇಲೆ ಎನ್ಐಎ ಮತ್ತು ಪೊಲೀಸರು ನಡೆಸಿದ ದಾಳಿಯಲ್ಲಿ ಅನೇಕರನ್ನು ಬಂಧಿಸಲಾಗಿದ್ದು, ಕೇಂದ್ರ ಸರ್ಕಾರ ಐದು ವರ್ಷ ಸಂಘಟನೆಯನ್ನು ನಿಷೇಧಿಸಿದೆ. ಅಲ್ಲದೆ ಬಂಧಿತ ಆರೋಪಿಗಳನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದ್ದು, ಆಘಾತಕಾರಿ ಮಾಹಿತಿಗಳು ಒಂದೊಂದಾಗಿಯೇ ಹೊರಬೀಳುತ್ತಿದೆ. ಈ ಪೈಕಿ ಕಾರ್ಯಕರ್ತರಿಗೆ ಉಗ್ರ ಮಾದರಿಯ ತರಬೇತಿ ನೀಡುತ್ತಿದ್ದ ಸಂಗತಿಯೂ ಒಂದಾಗಿದೆ.
ಪರೇಶ್ ಮೇಸ್ತ ಸಾವು ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಗೃಹಸಚಿವರು, ಪರೇಶ್ ತಂದೆ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ. ಮಗನನ್ನು ಕೊಂದು ತಂದು ಹಾಕಿದ್ದಾರೆ ಅಂತ ಹೇಳಿದ್ದಾರೆ. ಪರೇಶ್ ಮೇಸ್ತ ಪ್ರಕರಣದ ಬಗ್ಗೆ ಮತ್ತೆ ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ.
ಸೆಲ್ಯುಲಾರ್ ಜೈಲ್ ಅನ್ನ ಒಮ್ಮೆ ಎಲ್ಲರೂ ನೋಡಿ
ವೀರ ಸಾವರ್ಕರ್ ಅವರ ನೆನಪಿಗಾಗಿ ಅರಮನೆ ಮೈದಾನದಲ್ಲಿ ಸೆಲ್ಯುಲಾರ್ ಜೈಲ್ ನಿರ್ಮಾಣ ಮಾಡಿದ್ದಾರೆ. ಸಾವರ್ಕರ್ ಜೈಲಿನಲ್ಲಿ ಹೇಗೆ ಇದ್ದರು ಎಂಬುದನ್ನು ಕಾರ್ಯಕರ್ತರು ಜೈಲು ನಿರ್ಮಾಣ ಮಾಡಿ ತೋರಿಸುತ್ತಿದ್ದಾರೆ. ಸೆಲ್ಯುಲಾರ್ ಜೈಲ್ ಅನ್ನ ಒಮ್ಮೆ ಎಲ್ಲರೂ ನೋಡುವಂತೆ ಗೃಹಸಚಿವರು ಮನವಿ ಮಾಡಿದ್ದಾರೆ. ಅವರು ಶಿಕ್ಷೆ ಅನುಭವಿಸಿದ ಜೈಲು ನೋಡಿದರೆ ಕರಳು ಹಿಚಕುತ್ತದೆ. ಅವರ ತ್ಯಾಗ ಬಲಿದಾನದಿಂದ ಇಂದು ನಾವು ಸ್ವಾತಂತ್ರ್ಯವಾಗಿದ್ದೇವೆ. ಸಾವರ್ಕರ್ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಮುಸ್ಲಿಂ ಕಾಲೋನಿಯಲ್ಲಿ ಯಾಕೆ ಹಾಕಿದ್ದೀರಿ ಎಂದು ಹೇಳುವುದು ಅಪಚಾರ, ಮಾನಸಿಕ ವಿರೋಧಿತನವಾಗಿದೆ. ಇಂತಹ ಸ್ವಾತಂತ್ರ್ಯ ಹೋರಾಟಗಾರನನ್ನ ಗೌರವಿಸಬೇಕು ಎಂದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:23 pm, Fri, 7 October 22