ರಾಜ್ಯದಲ್ಲಿ ಮದರಸಾಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದ ಶ್ರೀರಾಮಸೇನೆ
ರಾಜ್ಯದಲ್ಲಿ ಮದರಸಾಗಳನ್ನು ನಿಷೇಧಿಸುವಂತೆ ಆಗ್ರಹಿಸುತ್ತಿರುವ ಶ್ರೀರಾಮಸೇನೆ ಸಂಘಟನೆಯು ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ. ಇನ್ನೊಂದೆಡೆ ರಾಮನಗರದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮದರಸಾಗಳ ನಿಷೇಧಕ್ಕೆ ಆಗ್ರಹಿಸಿವೆ.
ಧಾರವಾಡ: ರಾಜ್ಯದಲ್ಲಿ ಮದರಸಾಗಳನ್ನು ನಿಷೇಧಿಸುವಂತೆ ಆಗ್ರಹಿಸುತ್ತಿರುವ ಶ್ರೀರಾಮಸೇನೆ ಸಂಘಟನೆಯು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಸರ್ಕಾರಿ ಅನುದಾನದಲ್ಲಿ ಕೆಲ ಮದರಸಾ ನಡೆಯುತ್ತಿವೆ, ಸರ್ಕಾರಿ ಅನುದಾನದಲ್ಲಿದ್ದರೂ ದೇಶ ವಿರೋಧಿ ಚಟುವಟಿಕೆ ಮಾಡುತ್ತಿವೆ. ಅಂತಹ ಮದರಸಾಗಳನ್ನು ಪತ್ತೆ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಇನ್ನೊಂದೆಡೆ ರಾಮನಗರ ಜಿಲ್ಲೆಯಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಮದರಸಾ ಶಿಕ್ಷಣ ಸಂಸ್ಥೆ ನಿಷೇಧಿಸುವಂತೆ ಆಗ್ರಹಿಸಿದರು.
ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದ ಶ್ರೀರಾಮಸೇನೆ ಕಾರ್ಯಕರ್ತರು, “ಮದರಸಾಗಳಲ್ಲಿ ದ್ವೇಷ, ಮತಾಂಧತೆ ಬಿತ್ತುವ ಕೆಲಸ ನಡೆಯುತ್ತಿದೆ. ಮದರಸಾಗಳು ಉಗ್ರ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. ಅಲ್ಲಿನ ಹೆಣ್ಣು ಮಕ್ಕಳಿಗೆ ದೌರ್ಜನ್ಯ, ಲೈಂಗಿಕ ಕಿರುಕುಳ ನೀಡಲಾಗುತ್ತಿದೆ. ಉತ್ತರ ಪ್ರದೇಶ, ಅಸ್ಸಾಂ ಮಾದರಿಯಂತೆ ರಾಜ್ಯದಲ್ಲೂ ಕ್ರಮ ಕೈಗೊಳ್ಳಬೇಕು. ರಾಜ್ಯದ ಮದರಸಾಗಳನ್ನು ಸರ್ಕಾರ ಸುಪರ್ದಿಗೆ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಪತ್ರದಲ್ಲಿಯೂ ಉಲ್ಲೇಖಿಸಲಾಗಿದೆ.
ಕೇಂದ್ರ ಸರ್ಕಾರವು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದ ನಂತರ ಎಸ್ಡಿಪಿಐ ಅನ್ನು ಯಾಕೆ ನಿಷೇಧಿಸಿಲ್ಲ ಎಂಬ ಚರ್ಚೆ ನಡೆದಿತ್ತು. ಇದರ ಬೆನ್ನಲ್ಲೆ ಮದರಸಾಗಳನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸುತ್ತಿವೆ. ಮದರಸಾ ಶಿಕ್ಷಣ ಹೆಸರಲ್ಲಿ ಸಣ್ಣ ಮಕ್ಕಳಲ್ಲಿ ಕೋಮು ವಿಷ ಬೀಜ ಬಿತ್ತಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Fri, 7 October 22