ಬೆಂಗಳೂರು, ಫೆಬ್ರವರಿ 14: ಇನ್ಫೋಸಿಸ್‌ನಲ್ಲಿ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಲಾಗುತ್ತಿದೆ ಎಂದು ಟೆಕ್ ಉದ್ಯೋಗಿಗಳ ಸ್ವತಂತ್ರ ಸಂಘಟನೆಯೊಂದು ನೀಡಿದ ದೂರನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಮಸ್ಯೆಯನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ಕಾರ್ಮಿಕ ಇಲಾಖೆಗೆ ಕೇಂದ್ರ ಕಾರ್ಮಿಕ ಸಚಿವಾಲಯ ಸೂಚನೆ ನೀಡಿದೆ.
ಇನ್ಫೋಸಿಸ್ ಮೈಸೂರು ಕ್ಯಾಂಪಸ್ನಲ್ಲಿ ತರಬೇತಿ ಹಂತದಲ್ಲಿರುವ ಸುಮಾರು 300 ಹೊಸ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವುದಾಗಿ ಕಳೆದ ವಾರ ಇನ್ಫೋಸಿಸ್ ಒಪ್ಪಿಕೊಂಡಿತ್ತು.
ಆದರೆ ಈ ಸಂಖ್ಯೆಗಳ ಬಗ್ಗೆ ಟೆಕ್ ಉದ್ಯೋಗಿಗಳ ಹಿತಾಸಕ್ತಿ ಕಾಪಾಡುವುದಕ್ಕೆಂದು ರೂಪುಗೊಂಡಿರುವ ಸ್ವತಂತ್ರ ಸಂಘಟನೆ (Nascent Information Technology Employees Senate) ಅನುಮಾನ ವ್ಯಕ್ತಪಡಿಸಿತ್ತು. ಅಲ್ಲದೆ ಸುಮಾರು 700 ರಷ್ಟು ಉದ್ಯೋಗಿಗಳನ್ನು ಇನ್ಫೋಸಿಸ್ ವಜಾ ಗೊಳಿಸುತ್ತಿದೆ ಎಂದು ಆರೋಪಿಸಿತ್ತು. ಬಳಿಕ ಕೇಂದ್ರ ಕಾರ್ಮಿಕ ಇಲಾಖೆಗೆ ಅಧಿಕೃತವಾಗಿ ಪತ್ರ ಬರೆದು ದೂರು ನೀಡಿತ್ತು. ಇನ್ಫೋಸಿಸ್ ಲೇಆಫ್ ವಿಚಾರದಲ್ಲಿ ತಕ್ಷಣವೇ ಮಧ್ಯಪ್ರವೇಶಿಸಿ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತ್ತು.
ಆಫರ್ ಲೆಟರ್ ಕೊಟ್ಟ ನಂತರ ಎರಡು ವರ್ಷ ಕಾಯಿಸಿ ಉದ್ಯೋಗಕ್ಕೆ ಸೇರಿಸಿಕೊಂಡವರನ್ನು ಇನ್ಫೋಸಿಸ್ ಈಗ ಕೆಲಸದಿಂದ ತೆಗೆದುಹಾಕುತ್ತಿದೆ. ಈಗಾಗಲೇ ಎರಡು ವರ್ಷ ಕಾದಿರುವ ಅವರು ಉದ್ಯೋಗ ಕಳೆದುಕೊಂಡು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಆಗುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಹೊಸದಾಗಿ ಸೇರ್ಪಡೆಯಾದ ಉದ್ಯೋಗಿಗಳಿಂದ ಮ್ಯೂಚುವಲ್ ಸಫರೇಷನ್ ಒಪ್ಪಂದಕ್ಕೆ ಇನ್ಫೋಸಿಸ್ ಸಹಿ ಹಾಕಿಸುತ್ತಿದೆ ಎಂಬ ಬಗ್ಗೆ ಇತ್ತೀಚೆಗೆ ವರದಿಗಳಾಗಿದ್ದವು.
‘ಇಂಡಸ್ಟ್ರಿಯಲ್ ಡಿಸ್ಪ್ಯೂಟ್ಸ್ ಆಕ್ಟ್ 1947’ ರ ಅಡಿಯಲ್ಲಿ ಇನ್ಫೋಸಿಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ನೀಡಿದ ದೂರಿನಲ್ಲಿ ಆಗ್ರಹಿಸಲಾಗಿತ್ತು.
ಕೇಂದ್ರ ಕಾರ್ಮಿಕ ಸಚಿವಾಲಯ ನೀಡಿರುವ ನಿರ್ದೇಶನದಂತೆ ಕರ್ನಾಟಕ ಕಾರ್ಮಿಕ ಇಲಾಖೆ ಅಧಿಕಾರಿಗಳು ಗುರುವಾರ ಇನ್ಫೋಸಿಸ್ ನ ಬೆಂಗಳೂರು ಮತ್ತು ಮೈಸೂರು ಕ್ಯಾಂಪಸ್ ಗಳಿಗೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವಿಚಾರವಾಗಿ ಇನ್ಫೋಸಿಸ್ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಇದನ್ನೂ ಓದಿ: ಇನ್ವೆಸ್ಟ್ ಕರ್ನಾಟಕ: ವೋಲ್ವೋ ಕಂಪನಿಯಿಂದ 1,400 ಕೋಟಿ ರೂ ಹೂಡಿಕೆ, ಸಿಎಂ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ
ಕಂಪನಿಯು ಕಠಿಣ ನೇಮಕಾತಿ ಪ್ರಕ್ರಿಯೆಯನ್ನು ಅನುಸರಿಸುತ್ತಿರುವುದಾಗಿ ಈ ಹಿಂದೆ ಹೇಳಿತ್ತು. ತರಬೇತಿಯ ನಂತರದ ಹೊಸ ಉದ್ಯೋಗಿಗಳು ಮೂರು ಪ್ರಯತ್ನಗಳಲ್ಲಿ ಆಂತರಿಕ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಬೇಕು. ಅದರಲ್ಲಿ ವಿಫಲವಾದರೆ ಅವರು ಕಂಪನಿಯ ಉದ್ಯೋಗದಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಈ ಪ್ರಕ್ರಿಯೆಯು ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಅಸ್ತಿತ್ವದಲ್ಲಿದೆ ಎಂದು ಕಂಪನಿ ಈ ಹಿಂದೆ ತಿಳಿಸಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ