ಜಯಲಲಿತಾರ 11,344 ರೇಷ್ಮೆ ಸೀರೆ, 750 ಜೋಡಿ ಚಪ್ಪಲಿ ಸೇರಿದಂತೆ ಆಸ್ತಿ ಪತ್ರ ಹಸ್ತಾಂತರ ಪ್ರಕ್ರಿಯೆ ಆರಂಭ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಜನತೆ ಪಾಲಿಗೆ 'ಅಮ್ಮ' ಎನಿಸಿದ್ದ ಮಾಜಿ ಸಿಎಂ ಜಯಲಲಿತಾ ಅವರಿಗೆ ಸಂಬಂಧಿಸಿದ ಕೆಲವು ವಸ್ತುಗಳನ್ನು ವಿಶೇಷ ನ್ಯಾಯಾಲಯವು ವಶಪಡಿಸಿಕೊಂಡಿತ್ತು. ವಶಪಡಿಸಿಕೊಂಡ ವಸ್ತುಗಳನ್ನು ಹಾಗೂ ಬಟ್ಟೆಗಳನ್ನು ಒಡವೆಗಳನ್ನು ತಮಿಳುನಾಡು ಸರ್ಕಾರಕ್ಕೆ ನೀಡುವಂತೆ ಕೋರ್ಟ್ ಆದೇಶ ಹೊರಡಿಸಿದ್ದು, ಅದರಂತೆ ವಾಪಸ್ ತೆಗೆದುಕೊಂಡು ಹೋಗಲು ತಮಿಳುನಾಡಿನಿಂದ ಪೊಲೀಸರು ಬಿಗಿ ಭದ್ರತೆಯಲ್ಲಿ ಆಗಮಿಸಿದ್ದಾರೆ. ಇನ್ನು ಜಯಲಲಿತಾ ವಸ್ತುಗಳನ್ನು ಕೇಳಿದ್ರೆ ನೀವು ಹೌಹಾರುತ್ತೀರಿ.

ಬೆಂಗಳೂರು, (ಫೆಬ್ರವರಿ 14): ಮಾಜಿ ಸಿಎಂ ಜಯಲಲಿತಾ ಅವರಿಗೆ ಸಂಬಂಧಿಸಿದ ಆಸ್ತಿ ಪತ್ರಗಳು, 11,344 ರೇಷ್ಮೆ ಸೀರೆಗಳು, 7040 ಗ್ರಾಂ ತೂಕದ 468 ಬಗೆಯ ಚಿನ್ನ, ವಜ್ರಖಚಿತ ಆಭರಣಗಳು ಹಾಗೂ 750 ಜೊತೆ ಚಪ್ಪಲಿಗಳು, ವಾಚ್‌ಗಳು ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ತಮಿಳುನಾಡಿನಿಂದ ಪೊಲೀಸರು ಬಿಗಿ ಭದ್ರತೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದು, ಇಂದು (ಫೆಬ್ರವರಿ 14) ಅಥವಾ ನಾಳೆ(ಫೆಬ್ರವರಿ 15) ತೆಗೆದುಕೊಂಡು ಹೋಗಲಿದ್ದಾರೆ.
ಸಂಬಂಧಿಕರು ಎಂದು ಹೇಳಿಕೊಂಡು ದೀಪ ಹಾಗೂ ದೀಪಕ್ ಇಬ್ಬರು ಜಯಲಲಿತಾ ಒಡವೆಯನ್ನ ನಮಗೆ ಕೊಡಿ ಎಂದು ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿಯನ್ನ ಸಲ್ಲಿಸಿದ್ದರು. ಆದ್ರೆ, ಹೈಕೋರ್ಟ್ ಅವರ ಅರ್ಜಿಯನ್ನು ವಜಾ ಮಾಡಿತ್ತು. ಇಂದು ನ್ಯಾಯಾಧೀಶರ ಸಮ್ಮುಖದಲ್ಲಿ ತಮಿಳುನಾಡು ಸರ್ಕಾರಕ್ಕೆ ಎಲ್ಲಾ ವಸ್ತುಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ವಕೀಲರು ಹಾಗೂ ತಮಿಳುನಾಡಿನ ಕೆಲವು ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಪ್ರತಿಯೊಂದು ಮಾಹಿತಿಯನ್ನು ನೀಡಿ ಚಿನ್ನದ ಒಡವೆಗಳನ್ನು ತೂಕವನ್ನು ಹಾಕುತ್ತಿದ್ದಾರೆ.
ಇದನ್ನೂ ಓದಿ: ಜಯಲಲಿತಾ ವಾರಸುದಾರೆ ಸಲ್ಲಿಸಿದ್ದ ಅರ್ಜಿ ವಜಾ: ಜಪ್ತಿಯಾದ ಒಡವೆ ಸರ್ಕಾರದ ಪಾಲು
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರಿಂದ ಮುಟ್ಟುಗೋಲು ಹಾಕಿಕೊಂಡಿದ್ದ ಬೆಲೆ ಬಾಳುವ ವಸ್ತುಗಳು ಮತ್ತು ಆಸ್ತಿಗಳನ್ನು ಹರಾಜು ಹಾಕುವ ಬದಲು ತಮಿಳುನಾಡು ಸರಕಾರದ ಸುಪರ್ದಿಗೆ ನೀಡುವಂತೆ ವಿಶೇಷ ನ್ಯಾಯಾಲಯವು ಆದೇಶಿಸಿತ್ತು.
7040 ಗ್ರಾಂ ತೂಕದ 468 ಬಗೆಯ ಚಿನ್ನ, ವಜ್ರಖಚಿತ ಆಭರಣಗಳು, 700 ಕೆ.ಜಿ ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜರೇಟರ್, 10 ಟಿವಿ ಸೆಟ್, 8 VCR, 1 ವಿಡಿಯೋ ಕ್ಯಾಮರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೆಕಾರ್ಡರ್ ಹಾಗೂ 1040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್ಗಳು ತಮಿಳುನಾಡು ಸರ್ಕಾರಕ್ಕೆ ಸೇರಲಿವೆ.
ವಿಶೇಷ ನ್ಯಾಯಾಲಯವು ಬೆಲೆ ಬಾಳುವ ವಸ್ತುಗಳು, ಚಿನ್ನ ಮತ್ತು ವಜ್ರಾಭರಣಗಳನ್ನು ಹಿಂದಿರುಗಿಸಲು 2024ರ ಫೆ.19ಕ್ಕೆ ದಿನಾಂಕ ನಿಗದಿಪಡಿಸಿತ್ತು. 2024ರ ಮಾರ್ಚ್ 6 ಮತ್ತು 7ರಂದು ಅವುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕೃತ ಅಧಿಕಾರಿಗಳನ್ನು ನಿಯೋಜಿಸುವಂತೆ ತಮಿಳುನಾಡು ಸರಕಾರಕ್ಕೆ ನಿರ್ದೇಶನ ನೀಡಿತ್ತು. ಈ ಮಧ್ಯೆ, ದೀಪಾ ಮತ್ತು ದೀಪಕ್ ಅವರು ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆಸ್ತಿ ಮತ್ತು ಬೆಲೆ ಬಾಳುವ ವಸ್ತುಗಳ ಹಸ್ತಾಂತರ ಪ್ರಕ್ರಿಯೆಗೆ ಒಂದು ದಿನ ಮೊದಲು 2024ರ ಮಾರ್ಚ್ 5ರಂದು ಹೈಕೋರ್ಟ್‌ನ ಏಕ ಸದಸ್ಯ ಪೀಠ, ವಿಶೇಷ ನ್ಯಾಯಾಲಯದ ಆದೇಶವನ್ನು ತಡೆಹಿಡಿದಿತ್ತು. ಈಗ ಮೇಲ್ಮನವಿ ವಜಾಗೊಂಡ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯವು ಆಸ್ತಿ ಮತ್ತು ಆಭರಣಗಳನ್ನು ಹಸ್ತಾಂತರಿಸುತ್ತಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು, 2014ರ ಸೆ.27ರಂದು ಜಯಲಲಿತಾ ಅವರಿಗೆ ನಾಲ್ಕು ವರ್ಷ ಜೈಲು ಮತ್ತು 100 ಕೋಟಿ ರೂ. ದಂಡ ವಿಧಿಸಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:51 pm, Fri, 14 February 25



