
ಬೆಂಗಳೂರು, ಜೂನ್ 22: ತುರ್ತು ಸಂದರ್ಭಗಳಲ್ಲಿ ಪರ್ಯಾಯವಾಗಿ ಓಡಿಸಲಾಗಿದ್ದ ಬಸ್ನಿಂದ (Bus) ಅಪಘಾತ ಉಂಟಾದರೇ ವಿಮಾ ಕಂಪನಿಯೇ ಪರಿಹಾರವನ್ನು ನೀಡಬೇಕೆಂದು ಕರ್ನಾಟಕ ಹೈಕೋರ್ಟ್ (High Court) ತೀರ್ಪು ನೀಡಿದೆ. ತುರ್ತು ಸಂದರ್ಭಗಳಲ್ಲಿ ಪರ್ಯಾಯ ಬಸ್ ಓಡಿಸುವುದು ಷರತ್ತುಗಳ ಉಲ್ಲಂಘನೆಯಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ತುರ್ತು ಸಂದರ್ಭಗಳಲ್ಲಿ ಪರ್ಯಾಯವಾಗಿ ಓಡಿಸುವ ಬಸ್ ಅನ್ನು ಮೂಲಭೂತ ಉಲ್ಲಂಘನೆಯಂತೆ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ. ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ಗಾಯಾಳುಗಳು ಮತ್ತು ಬಸ್ ಮಾಲೀಕರು ಸಲ್ಲಿಸಿದ ಮೇಲ್ಮನವಿಗಳನ್ನು ನ್ಯಾಯಾಲಯ ಅಂಗೀಕರಿಸಿ ಈ ತೀರ್ಪು ನೀಡಿದೆ.
2014ರ ಜನವರಿ 21 ರಂದು ಬೆಳಿಗ್ಗೆ 11.45 ರ ಸುಮಾರಿಗೆ, ಗಣೇಶ್ ಮತ್ತು ಬಸವರಾಜ್ ಎಂಬುವರು ಮುದೂರಿನಿಂದ ಹಾವೇರಿಗೆ ಬೈಕ್ನಲ್ಲಿ ಹೋಗುತ್ತಿದ್ದರು. ಸಂಗೂರು ಗ್ರಾಮದ ಸಕ್ಕರೆ ಕಾರ್ಖಾನೆಯ ಬಳಿ, ಅತಿ ವೇಗದ ಬಂದ ಖಾಸಗಿ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಸವಾರರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಇಬ್ಬರೂ ಪರಿಹಾರ ಕೋರಿ ಅರ್ಜಿ ಸಲ್ಲಿಸಿದರು.
ಅರ್ಜಿ ವಿಚಾರಣೆ ನಡೆಸಿದ ಹಾವೇರಿ ಮೋಟಾರು ಅಪಘಾತ ಹಕ್ಕು ನ್ಯಾಯಮಂಡಳಿ, ಬಸ್ ಅನುಮತಿ ಪಡೆದ ಮಾರ್ಗ ಹೊರತುಪಡಿಸಿ ಬೇರೆ ಮಾರ್ಗದಲ್ಲಿ ಪ್ರಯಾಣಿಸಿದೆ. ಇದು ಪರವಾನಗಿ ಷರತ್ತುಗಳ ಉಲ್ಲಂಘನೆಯಾಗಿದೆ ಎಂದು ಹೇಳಿತ್ತು. ಕೋರ್ಟ್ ಗಣೇಶ್ ಅವರಿಗೆ 3,71,030 ರೂ. ಮತ್ತು ಬಸವರಾಜ್ ಅವರಿಗೆ 1,27,250 ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು.
ಅಪಘಾತಕ್ಕೀಡಾದ ಬಸ್ ಶಿವಮೊಗ್ಗ ಮತ್ತು ಹಂಗಳ ನಡುವಿನ ಮಾರ್ಗಕ್ಕೆ ಪರವಾನಗಿ ಹೊಂದಿತ್ತು. ಆ ದಿನ, ಅದು ಹಂಗಳ ಆಚೆ ಹಾವೇರಿಯವರೆಗೆ ಪ್ರಯಾಣಿಸಿತ್ತು ಮತ್ತು ಹಾವೇರಿಯಿಂದ ಹಿಂತಿರುಗುವಾಗ ಅಪಘಾತ ಸಂಭವಿಸಿದೆ. ಪರ್ಮಿಟ್ ಹೊಂದಿದ್ದ ಬಸ್ ಕೆಟ್ಟುಹೋಗಿದ್ದರಿಂದ ಅಪಘಾತಕ್ಕೀಡಾದ ಬಸ್ ಆ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿತ್ತು.
ಆದರೆ, ಗಣೇಶ್ ಹಾಗೂ ಬಸವರಾಜ್ ಮತ್ತು ಬಸ್‌ನ ಮಾಲೀಕ ಕೆ.ಎಂ. ಅಲ್ತಾಫ್ ಹುಸೇನ್ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಗಾಯಾಳುಗಳು ಹೆಚ್ಚಿನ ಪರಿಹಾರವನ್ನು ಕೋರಿದರು, ಆದರೆ ಬಸ್‌ನ ಮಾಲೀಕರು ವಿಮಾ ಕಂಪನಿಯವರೇ ಪರಿಹಾರದ ನೀಡಬೇಕೆಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಅವರಿದ್ದ ಪೀಠ ತುರ್ತು ಸಂದರ್ಭಗಳಲ್ಲಿ ಪರ್ಯಾಯವಾಗಿ ಬಸ್ಗಳನ್ನು ಓಡಿಸುವುದು ಷರತ್ತುಗಳ ಮೂಲಭೂತ ಉಲ್ಲಂಘನೆ ಎಂದು ಹೇಳಿತು.
“ಅಪಘಾತಕ್ಕೆ ಒಳಗಾದ ಬಸ್‌ಗೆ ಪರ್ಮಿಟ್ ಇಲ್ಲದಿರುವುದು ಪ್ರಕರಣವಲ್ಲ. ಇಲ್ಲಿ, ಇದು ಅನಿವಾರ್ಯ ಸಂದರ್ಭಗಳಲ್ಲಿ ಆ ಮಾರ್ಗದಲ್ಲಿ ಬಸ್ ಸಂಚರಿಸಿತು ಎಂಬುವುದು ಗಮನಿಸಬೇಕಾದ ಅಂಶವಾಗಿದೆ. ಆದ್ದರಿಂದ, ಕರ್ನಾಟಕ ಮೋಟಾರು ವಾಹನ ನಿಯಮಗಳು, 1989 ರ ನಿಯಮ 57 ರ ಪ್ರಕಾರ, 1988 ರ ಕಾಯ್ದೆಯ ಸೆಕ್ಷನ್ 66 ಅನ್ನು ವಿನಾಯಿತಿ ನೀಡಲಾಗಿದೆ” ಎಂದು ಪೀಠ ಹೇಳಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣದಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಳ: ತಜ್ಞರು
ಹಕ್ಕುದಾರರು ಸಲ್ಲಿಸಿದ ಮೇಲ್ಮನವಿಗಳನ್ನು ಅಂಗೀಕರಿಸಿದ ನ್ಯಾಯಾಲಯವು, ಗಣೇಶ್ ಅವರಿಗೆ ನೀಡಬೇಕಾದ ಪರಿಹಾರವನ್ನು 7,15,550 ರೂ.ಗಳಿಗೆ ಹೆಚ್ಚಿಸಿ, ಬಸವರಾಜ್‌ಗೆ 2,24,810 ರೂ.ಗೆ ಹೆಚ್ಚಿಸಿ ಪರಿಹಾರವನ್ನು ನೀಡುವಂತೆ ಆದೇಶಿಸಿತು. ಪರಿಹಾರದ ಮೊತ್ತವನ್ನು ವಿಮಾ ಕಂಪನಿಯು ಪಾವತಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Sun, 22 June 25