ಮಹಿಳಾ ದಿನಾಚರಣೆ 2021: ‘ಕ್ರೀಡೆಯಲ್ಲಿ ಸಾಧನೆ ಸುಲಭವಲ್ಲ..‘ ಅಂತರಾಷ್ಟ್ರೀಯ ಹೈಜಂಪ್​ ಕ್ರೀಡಾಪಟು ಸಹನಾಕುಮಾರಿ ಮನದಾಳ

| Updated By: Lakshmi Hegde

Updated on: Mar 08, 2021 | 12:34 PM

International Women's Day 2021: ಅಂತರಾಷ್ಟ್ರೀಯ ಒಲಿಂಪಿಯನ್ ಸಹನಾ ಕುಮಾರಿ ಟಿವಿ9 ಜೊತೆ ಅಂತರಾಳದ ಮಾತು ಹೇಳಿಕೊಂಡಿದ್ದಾರೆ. ಹೇಗಿತ್ತು ಅವರ ತರಬೇತಿ ದಿನಗಳು, ಸಾಧನೆಯ ಗುರಿತಲುಪುವ ದಿನಗಳು..

ಮಹಿಳಾ ದಿನಾಚರಣೆ 2021: ‘ಕ್ರೀಡೆಯಲ್ಲಿ ಸಾಧನೆ ಸುಲಭವಲ್ಲ..‘  ಅಂತರಾಷ್ಟ್ರೀಯ ಹೈಜಂಪ್​ ಕ್ರೀಡಾಪಟು ಸಹನಾಕುಮಾರಿ ಮನದಾಳ
ಹೈಜಂಪ್​​ನಲ್ಲಿ ಅಮೋಘ ಸಾಧನೆ ತೋರಿದ ಸಹನಾಕುಮಾರಿ
Follow us on

‘ಸ್ತ್ರೀ’ ಇದು ಬರೀ ಪದವಲ್ಲ. ಶಕ್ತಿ, ಮನಸ್ಥಿತಿ, ಸಾಧ್ಯತೆ, ಮಮತೆ, ಸ್ಫೂರ್ತಿ, ಸಂಭ್ರಮ. ಸಮತೆಯೂ. ಪೂಜ್ಯನೀಯ ಪಟ್ಟದಿಂದಾಚೆಯೂ ಆಕೆ ತನ್ನನ್ನು ತಾನಿವತ್ತೂ  ನಿಭಾಯಿಸಿಕೊಳ್ಳುವಷ್ಟು ಸ್ವತಂತ್ರ ಮನೋಭಾವವನ್ನು ಹೊಂದಿದ್ದಾಳೆ. ಹಾಗಂತ ಪೂರ್ತಿಯಾಗಿ ಶೋಷಣೆಯಿಂದ ಹೊರಗಾಗಿದ್ದಾಳೆ ಎನ್ನುವುದನ್ನೂ ಒಪ್ಪಲಾಗದು. ಕೂಲಿಯಿಂದ ಸೇನೆಯವರೆಗೂ ಆಕೆ ಶಕ್ತಿಯಾಗಿ ಚಿಮ್ಮಿದ್ದಾಳೆಂದರೆ ಆಕೆಯ ದಿಟ್ಟತೆಗೆ ದೊಡ್ಡ ಇತಿಹಾಸವೇ ಇದೆ. ಅವಳು ಕಾಲಿಟ್ಟಲ್ಲೆಲ್ಲ ಹೊಳಹಿನ ಛಾಯೆ ಆವರಿಸುತ್ತದೆಯೆಂದರೆ ಒಡಲೊಳಗೆ ಕಟ್ಟಿಟ್ಟುಕೊಂಡ ತಾಳ್ಮೆ ಇದೆ, ವಿವೇಚನೆ ಇದೆ, ಸ್ವಾವಲಂಬೀ ಮನೋಭಾವವಿದೆ. ಹೀಗೆ ಅವಳ ಆತ್ಮಗೌರವವನ್ನು ದ್ವಿಗುಣಗೊಳಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅವಳನ್ನಪ್ಪಿದೆ (International Women’s Day 2021). ನಮ್ಮನಿಮ್ಮ ನಡುವೆಯೇ ಇರುವ ಸಾಧಕ ಮನಸ್ಥಿತಿಗಳನ್ನು ಈ ಸಂದರ್ಭದಲ್ಲಿ ನಾವು ನಿಮಗೆ ಪರಿಚಯಿಸುತ್ತಿದ್ದೇವೆ. ಇದು ಕರುನಾಡ ಕ್ರೀಡಾ ಸಾಧಕಿ, ದಕ್ಷಿಣ ಕನ್ನಡದ ಸಹನಾ ಕುಮಾರಿಯವರ ಬಗೆಗಿನ ಲೇಖನ..

ಅಂತರಾಷ್ಟೀಯ ಮಟ್ಟದ ಹೈಜಂಪ್ ಕ್ರೀಡೆಯಲ್ಲಿ ಹೆಸರು ಪಡೆದು ದೇಶಕ್ಕೆ ಕೀರ್ತಿ ತಂದು ಕೊಟ್ಟವರು ಮಂಗಳೂರಿನ ಅಂತರಾಷ್ಟ್ರೀಯ ಒಲಿಂಪಿಯನ್ ಸಹನಾ ಕುಮಾರಿ. ಅದೆಷ್ಟೋ ಹೆಣ್ಣುಮಕ್ಕಳಿಗೆ ಮಾದರಿಯಾಗಿ, ಕ್ರೀಡೆಯಲ್ಲಿಯೇ ಮುಂದುವರಿಯಬೇಕೆಂಬ ಆಸೆಯೊಂದಿಗೆ ಹೆಜ್ಜೆ ಇಡುತ್ತಿರುವ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿ ನಿಂತವರು ಇವರು.

ಮಹಿಳಾ ದಿನದ ಪ್ರಯುಕ್ತ ಕ್ರೀಡೆಯಲ್ಲಿ ಉತ್ತಮ ಸಾಧನೆಗಳಿಸಿದವರನ್ನು ಹುಡುಕತ್ತಾ ಟಿವಿ9 ಕನ್ನಡ ಡಿಜಿಟಲ್ ಹೊರಟಾಗ ಸಿಕ್ಕಿದ್ದು ಮಂಗಳೂರಿನ  ಸಹನಾ ಕುಮಾರಿ. ಇವರ ಜೊತೆಗಿನ ಸಂದರ್ಶನದಲ್ಲಿ, ಸಹನಾ ಕುಮಾರಿ ನಡೆದು ಬಂದ ಹಾದಿಯ ಜೊತೆಗೆ,  ಅವರ ಅಂತರಾಳದ ಮಾತುಗಳಿವೆ. ಮುಂದೆ ಕ್ರೀಡೆಯಲ್ಲಿ ಸಾಧನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ಕಿವಿ ಮಾತಿದೆ.

ಬಾಲ್ಯದ ಜೀವನ
ನನಗೆ ಚಿಕ್ಕ ವಯಸ್ಸಿನಿಂದಲೂ ಕ್ರೀಡೆಯ ಬಗ್ಗೆ ಆಸಕ್ತಿ ಇತ್ತು. ಚಿಕ್ಕವಳಿದ್ದಾಗ ಶಾಲೆಯಲ್ಲಿ ಸ್ನೇಹಿತರೊಡನೆ ಕ್ರೀಡಾಂಗಣದಲ್ಲಿ ಆಡುತ್ತಿದ್ದೆ. ಆದರೆ ಅದೊಂದು ಆಟವಾಗಿತ್ತು ಅಷ್ಟೆ. ತುಂಟಾಟ ಆಡುವ ವಯಸ್ಸಿನಲ್ಲಿ  ಆಟವಾಡುತ್ತ  ಹಲವು ಪ್ರಶಸ್ತಿಗಳನ್ನೂ ಪಡೆದುಕೊಳ್ಳುತ್ತಿದ್ದೆ. ಚಿಕ್ಕವಳಿದ್ದರಿಂದ ಕ್ರೀಡೆಯ ಬಗೆಗೆ ಅಷ್ಟೊಂದು ಮಾಹಿತಿ ಇರಲಿಲ್ಲ. ಸುಮ್ಮನೆ ಆಟವಾಡುತ್ತ ಬೆಳೆದೆ. ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನಲ್ಲೇ ಮುಗಿಸಿ ಪ್ರೌಢ ಶಿಕ್ಷಣಕ್ಕೆ ಕಾಲಿಟ್ಟಾಗ ಸ್ವಲ್ಪ ಕ್ರೀಡೆಯ ಕುರಿತಾಗಿ ಆಸಕ್ತಿ ಬೆಳೆಯಿತು. ನನ್ನ ತಾಯಿ ಯಶೋಧಾ ನನ್ನನ್ನು ಹುರಿದುಂಬಿಸುತ್ತಿದ್ದರು. ಬೆಳಗ್ಗೆ 5 ಗಂಟೆಗೆ ಎದ್ದು ಕ್ರೀಡೆಯ ತರಬೇತಿ ಪಡೆದುಕೊಳ್ಳಲು ಹೋಗಬೇಕಿತ್ತು. ತಾಯಿಯೂ ನನ್ನನ್ನೊಡನೆ ಬರುವಳು. ನನಗಿಂತಲೂ ಅಮ್ಮನಿಗೆ ಕ್ರೀಡೆಯ ಕುರಿತು ಆಸಕ್ತಿ ಹೆಚ್ಚಿತ್ತು. ಆರ್ಥಿಕವಾಗಿ ಕಷ್ಟ ಎದುರಾದರು ಕೂಡಾ ಮಕ್ಕಳ ಮುಂದೆ ಅದನ್ನು ತೋರಿಸದೇ, ಮಕ್ಕಳ ಇಷ್ಟಾರ್ಥಗಳನ್ನು ಪೂರೈಸುತ್ತಿದ್ದಳು ನನ್ನಮ್ಮ. ಹಾಗಾಗಿ ಕಷ್ಟದ ಅರಿವು ಆಗ ನನಗೆ ಗೊತ್ತಾಗುತ್ತಿರಲಿಲ್ಲ ಎಂದು ಸಹನಾ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ.

ಇನ್ನು ಓದಿಗೆ ಬಂದರೆ , ಮುಂದಿನ ತರಗತಿಗೆ ಸೇರಲು ಬೇಕಾಗುವಷ್ಟು ಅಂಕ ಗಳಿಸುತ್ತಿದ್ದೆ. ಹಾಗೆಂದು ಓದದೇ ಕುಳಿತವಳಲ್ಲ. ಓದುತ್ತಿದ್ದೆ, ಆದರೆ  ತುಂಬ ಎಲ್ಲ ಓದುತ್ತಿರಲಿಲ್ಲ. ಪರೀಕ್ಷೆ ಪಾಸಾಗುವಷ್ಟು ಅಂಕ ನನ್ನದಾಗಿರುತ್ತಿತ್ತು. ಚಿಕ್ಕವಳಿದ್ದಾಗ ಕೋಲು ಹಿಡಿದು ಯಾರು ಜಾಸ್ತಿ ಮುಂದೆ ಹಾರುತ್ತಾರೆಂದು ನಮ್ಮ ಸ್ನೇಹಿತರೊಡನೆ ಸ್ಪರ್ಧೆ ಏರ್ಪಡುತ್ತಿತ್ತು. ನಾನು 7ನೇ ತರಗತಿಯಲ್ಲಿರುವಾಗ ಕ್ರೀಡಾ ಗುರುಗಳು ನನಗೆ ಪ್ರೋತ್ಸಾಹ ಕೊಟ್ಟರು.‌ 8 ನೇ ತರಗತಿಯಲ್ಲಿರುವಾಗ ಶಾಲಾ ಮಟ್ಟದ ಹೈಜಂಪ್ ಸ್ಪರ್ಧೆಯಲ್ಲಿ ನನಗೆ ಪದಕ ಬಂತು.‌ ಅಲ್ಲಿಂದ ನನ್ನ ಕ್ರೀಡೆ ಹೈಜಂಪ್​ನಲ್ಲಿ ಮುಂದುವರೆಯುತ್ತಾ ಸಾಗಿದೆ.

ತಂದೆಯೂ ಕ್ರೀಡಾ ಆಟಗಾರರು. ಹಾಗಾಗಿ ಮನೆಯಿಂದ ನನಗೆ ತುಂಬಾ ಪ್ರೋತ್ಸಾಹ ಇತ್ತು. ನನ್ನ ಅಜ್ಜಿ, ಅಮ್ಮ ಯಾವತ್ತೂ ನನಗೆ  ಆಟವಾಡುವುದು ಬೇಡ ಎನ್ನಲಿಲ್ಲ.. ನಿರಾಸೆ ಮಾಡಲಿಲ್ಲ. ಮನೆಯವರ ಬೆಂಬಲವೇ ನನ್ನನ್ನು ಈ ಮಟ್ಟಕ್ಕೆ ಕರೆತರಲು ಸಾಧ್ಯವಾದದ್ದು. ನಾನು ಎಲ್ಲಿ ಕ್ರೀಡಾ ಸ್ಪರ್ಧೆಗೆ ಹೋದರೂ ಕೂಡಾ ನನ್ನ ಜೊತೆ ನನ್ನ ತಾಯಿ ಬರುತ್ತಿದ್ದರು. ಆ ಸಮಯದಲ್ಲಿ ನನಗೆ ಕ್ರೀಡೆಯ ಕುರಿತಾಗಿ ಅಷ್ಟೊಂದು ಜ್ಞಾನ ಇರಲಿಲ್ಲ. ಕ್ರೀಡೆ ಅಂದಾಕ್ಷಣ ಇದೊಂದು ಮಾಮೂಲಿ ಆಟ ಎಂಬುದಷ್ಟೇ ಮನಸ್ಸಿನಲ್ಲಿದ್ದಿದ್ದು. ಜೀವನದಲ್ಲಿ ಸಾಗುತ್ತಾ ಕ್ರೀಡೆಯ ಕುರಿತ ಮಹತ್ವ ಗೊತ್ತಾದದ್ದು ಎನ್ನುತ್ತಾರೆ ಈ ಸಾಧಕಿ.

ಪಾಲಕರೊಡನೆ ಸಹನಾ ಕುಮಾರಿ

ಮಾನಸಿಕವಾಗಿ- ದೈಹಿಕವಾಗಿ ದೃಢವಾಗಿರಿ
ಹೆಣ್ಣು ಅಂದಾಕ್ಷಣ ತಿಂಗಳ‌ ಸಮಸ್ಯೆ ಇದ್ದೇ ಇರುತ್ತದೆ. ಆದರೆ ಅದನ್ನು ನಾವು ಸಮಸ್ಯೆ ಅಂದುಕೊಳ್ಳಲೇಬಾರದು. ಅದು ನೈಸರ್ಗಿಕ ಕ್ರಿಯೆ. ಅದರಲ್ಲೂ ಕ್ರೀಡಾ ವಲಯದಲ್ಲಿ ಸಮಸ್ಯೆ ಅಂದುಕೊಂಡರೆ ಸಾಧನೆಯ ಗುರಿ ತಲುಪಲು ಮುಳ್ಳು ಅಡ್ಡವಾದಂತೆ ಸಮಸ್ಯೆಯೆ ದೊಡ್ಡದಾಗುತ್ತದೆ. ಅಂತಹ ಸಮಯದಲ್ಲಿ, ತರಬೇತಿಯಲ್ಲಿರುವಾಗ ನಾನು ವಿಶ್ರಾಂತಿ ಪಡೆಯುತ್ತಿದ್ದೆ. ಆದರೆ ಆ ಸಮಯದಲ್ಲಿ ಮನಸ್ಸಿನಲ್ಲಿ ದೃಢತೆ ತಂದು ಕೊಳ್ಳುತ್ತಿದ್ದೆ. ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ಕೇಳಿಯೇ ಇರುತ್ತೀರಿ. ಹಾಗೆಯೇ ಮನಸ್ಸನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದೆ. ಹೆಣ್ಣು ಮಕ್ಕಳು ಅಂತಾ ತುಂಬಾ ಟೀಕೆ ಮಾಡುತ್ತಿದ್ದರು. ನನ್ನ ತಾಯಿಯ ಬಳಿ ಬಂದು ಎಷ್ಟೋ ಮಂದಿ ಹೇಳಿದ್ದಾರೆ. ಹೆಣ್ಣು ಮಗುವಾಗಿ ಕ್ರೀಡೆಗೆ ಬೇಡ.‌ ಎಲ್ಲ ತರಹದ ಜನರಿರ್ತಾರೆ ಎಂದೆಲ್ಲಾ ಹೇಳಿದ್ದಾರೆ. ನನ್ನ ತಾಯಿಯೂ ಇಂತಹ ಮಾತುಗಳಿಗೆ ಗಮನ ಕೊಟ್ಟಿಲ್ಲ. ನಾನು ಅಂತಹ ಮಾತಿಗೆ ಕಿವಿಕೊಡುತ್ತಿರಲಿಲ್ಲ ಎಂಬುದು ಸಹನಾ ಅವರ ಆತ್ಮವಿಶ್ವಾಸದ ಮಾತುಗಳು.

ಮಾರ್ಗದರ್ಶಕರೂ ಬದಲಾಗುತ್ತಿದ್ದರು
ಮಾರ್ಗದಶರ್ನ ಮಾಡಿದ, ಬೆಂಬಲ ನೀಡಿದ ಗುರುಗಳಿಗೆ ಧನ್ಯವಾದ ಸಲ್ಲಿಸಿದ ಸಹನಾ ಕುಮಾರಿ,  ನಾನು ಮಂಗಳೂರಿನಲ್ಲಿ ಓದುತ್ತಿರುವಾಗ, ಶ್ರೀಧರ ರೈ ಎಂಬುವವರು ನನ್ನ ಗುರುಗಳಾಗಿದ್ದರು. ಅವರಲ್ಲಿ ಒಂದಿಷ್ಟು ಮಾರ್ಗದರ್ಶನ ಪಡೆದುಕೊಂಡೆ. ಹಲವಾರು ಸ್ಪರ್ಧೆಯಲ್ಲಿ ಭಾಗವಹಿಸುತ್ತ  ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದ್ದೆ. ನಂತರದಲ್ಲಿ ಜಿ.ವಿ ಗಾಂವ್ಕರ್ ಗುರುಗಳು ಸಿಕ್ಕರು. ನಿನ್ನಲ್ಲಿ  ದೃಢತೆ ಇದೆ ಎಂದು ಹುರಿದುಂಬಿಸಿದ್ದೇ ಅವರು. ಅವರ ಪ್ರೋತ್ಸಾಹದಿಂದ ನನಗೆ ದೆಹಲಿಯಲ್ಲಿ ನಾಷನಲ್ ಅವಾರ್ಡ್​ ಸಿಕ್ಕಿತು. ಆ ಕಾರ್ಯಕ್ರಮದಲ್ಲಿ ನನ್ನ ಮಗು ನನ್ನ ಜೊತೆಗಿತ್ತು.

ಕೂದಲೆಳೆಯಲ್ಲಿ ಒಲಿಂಪಿಕ್ ಕ್ವಾಲಿಫೈ ನನ್ನ ತಪ್ಪಿ ಹೋಗುತ್ತಿತ್ತು 
ಅಂದು ಒಲಂಪಿಕ್ ಕ್ವಾಲಿಫೈ ದಿನ. ಅದಂತೂ ನನ್ನ ಪಾಲಿಗೆ ಭಯಂಕರ ಸನ್ನಿವೇಶ ಎಂದೇ ಹೇಳಬಹುದು.  ನೆನಪಿಸಿಕೊಂಡರೆ ಈಗಲೂ ಮೈ ಜುಮ್ಮೆನಿಸುತ್ತದೆ. 2 ಸೆಂಟಿಮೀಟರ್​​ ಅಳತೆಯಲ್ಲಿ ನನಗೆ  ಒಲಿಂಪಿಕ್​​ಗೆ ಕ್ವಾಲಿಫೈ ಆಗುವ ಅವಕಾಶ ತಪ್ಪುತ್ತಿತ್ತು. ಒಂದೆಡೆ ಈ ದುಃಖ. ಇನ್ನೊಂದೆಡೆ ಮನಸಲ್ಲಿ ಆತಂಕ, ಹೆದರಿಕೆ, ಗೊಂದಲ ಎಲ್ಲವೂ ಒಮ್ಮೆಲೆ ಆವರಿಸಿತ್ತು. ಮನಸ್ಸು ಗಟ್ಟಿ ಮಾಡಿಕೊಳ್ಳದೇ ವಿಧಿಯಿಲ್ಲ.

ಇನ್ನು ಕೊನೇ ಬಾರಿಗೆ ಒಂದು ಅವಕಾಶ ಇತ್ತು. ಅಂದು ರಾತ್ರಿ 9.15 ಗಂಟೆಯ ಸಮಯ. ನನ್ನ ಅಕ್ಕ ಪಕ್ಕ ಯಾರೂ ಇಲ್ಲ.. ನಾನೊಬ್ವಳೇ ಇದ್ದೇನೆ, ಇದ್ದ ಅವಕಾಶವನ್ನು ಕಳೆದು ಕೊಳ್ಳಬಾರದು ಎಂದು ಮನಸ್ಸು ಗಟ್ಟಿ ಮಾಡಿಕೊಂಡೆ. ಒಂದಾದ ಮೇಲೊಂದು ಹಂತವನ್ನು ಹಾರುತ್ತಲೇ ಹೋದೆ. ಇನ್ನೇನು ಕೊನೆಯ ಅವಕಾಶದ ಕೊನೆಯ ಹಂತ.  ಆತ್ಮವಿಶ್ವಾಸವನ್ನು ಮನಸಲ್ಲಿ ತುಂಬಿಕೊಂಡು, ದೃಢಚಿತ್ತದಿಂದ, ದೂರದಿಂದ ಓಡಿ ಬಂದು ಜಿಗಿದು ಒಲಂಪಿಕ್ ಕ್ವಾಲಿಫೈ ಆದಾಗ ತಡೆಯಲಾರದಷ್ಟು ಸಂತೋಷ ಮನಸ್ಸಿನಲ್ಲಿತ್ತು. ಆ ಕ್ಷಣವನ್ನು ಮಾತ್ರ ಮರೆಯಲು ಸಾಧ್ಯವೇ ಇಲ್ಲ ಎಂದು ಅಂದಿನ ಕ್ಷಣಗಳನ್ನು ನೆನಪಿಸಿಕೊಂಡು ಫುಲ್ ಖುಷಿಯಾದರು.

ಸಹನಾ ಕುಮಾರಿ ಪತಿ ಅಥ್ಲೀಟ್​ ಬಿ.ಜಿ. ನಾಗರಾಜ್​ ಮತ್ತು ಪುತ್ರಿ ಪವನಾ ಜೊತೆಗಿದ್ದ ದೃಶ್ಯ

ತರಬೇತಿ  ವೇಳೆ ಎದುರಾಗುವ ತೊಂದರೆಯನ್ನು ಗಟ್ಟಿ ಮನಸಿಂದ ಎದುರಿಸಿದೆ
ತರಬೇತಿ ಸಮಯದಲ್ಲಿ ಅದೆಷ್ಟೋ ಸವಾಲುಗಳನ್ನು ಎದುರಿಸಿದ್ದೇನೆ. ಅದೆಷ್ಟೋ ಪ್ರಪೋಸಲ್​ಗಳು ಬರುತ್ತಿದದವು. ಅವುಗಳನ್ನು ಹೇಗೆ ನಿಭಾಯಿಸ ಬೇಕು ಎಂಬ ಗೊಂದಲ ಸೃಷ್ಟಿಯಾಗುತ್ತಿತ್ತು. ಭಯವೂ ಆಗುತ್ತಿತ್ತು. ಆದರೆ, ನಾನು ನನ್ನ ಸಾಧನೆಯತ್ತ ಮಾತ್ರ ಗಮನ ನೀಡುತ್ತಿದ್ದೆ. ಹಾಗಂತ ಅವರನ್ನು ದ್ವೇಷಿಸುವುದು ಅಂತಲ್ಲ. ಅವರಿಗೆ ನನ್ನ ಸಾಧನೆಯನ್ನು ಹೇಳುತ್ತಿದ್ದೆ. ಅತಿರೇಕ ತೋರಿದರೆ ನನ್ನ ಮನೆಯವರೊಡನೆ ಮಾತನಾಡಿ ಅಂತ ಹೇಳಿ ಹೊರಟು ಹೋಗುತ್ತಿದ್ದೆ. ಆ ಸಮಯವನ್ನು ನಿಭಾಯಿಸುವ ಶಕ್ತಿಯನ್ನು ಪ್ರತಿ ಹೆಣ್ಣುಮಗಳೂ ರೂಢಿಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಇನ್ನೊಂದು ಮಹತ್ವದ ಸಲಹೆಯನ್ನೂ ಕೊಟ್ಟಿದ್ದಾರೆ.  ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದವರೆಗೆ ಆಟ ಆಡಲು ಹೋಗಬೇಕಾದ ಪರಿಸ್ಥಿತಿ ಎದುರಾಗತ್ತದೆ. ಆಗ ನಿಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರನ್ನಾದರೂ ನಿಮ್ಮ ಜೊತೆಗೆ ಕರೆದುಕೊಂಡು ಹೋಗಿ. ಹೆಣ್ಣುಮಕ್ಕಳಾದ್ದರಿಂದ ಅದೆಷ್ಟೋ ದೂರ ಕ್ರಮಿಸಬೇಕಾಗಿರುತ್ತದೆ ಎಂಬುದನ್ನು ಒತ್ತಿ ಹೇಳಿದ್ದಾರೆ.

ಕ್ರಿಡೆಯೂ ಬೇಕು.. ಓದಿನಲ್ಲೂ ಮುಂದಿರಬೇಕು
ಕ್ರೀಡೆಯ ಬಗೆಗೆ ಪ್ರೀತಿ, ಗೌರವ ಸಾಧನೆ ಇರಬೇಕು. ಹಾಗಂತ ವಿದ್ಯಾಭ್ಯಾಸವನ್ನು ಬಿಟ್ಟು ಕ್ರೀಡೆಯೊಂದೆ ಎಂಬ ನಿರ್ಧಾರ ಕೈಗೊಳ್ಳಬೇಡಿ. ಕ್ರೀಡಾ ತರಬೇತಿದಾರನಾಗಲೂ ಕನಿಷ್ಠ ಪದವಿ ಶಿಕ್ಷಣವನ್ನು ಮುಗಿಸಿರಬೇಕು. ಈಗಿನ ಕಾಲ ಬದಲಾಗಿದೆ. ಸಾಧನೆ ಗುರಿಯತ್ತ ಕ್ರೀಡೆ ಇರಲಿ ಆದರೆ ವಿದ್ಯಾಭ್ಯಾಸ ಜೊತೆಗಿರಲಿ ಎಂಬುದೇ ಸಣ್ಣ ಕಿವಿಮಾತು.

ದೇಶಕ್ಕಾಗಿ ಆಡ್ತೀವಿ ಅನ್ನುವುದರ ಒಳಾರ್ಥ ಹೇಳಿದ ಸಹನಾ ಕುಮಾರಿ
ನಮ್ಮ ದೇಶ ಮುಂದಿರಬೇಕು ಎಂಬ ಭಾವ ಎಲ್ಲಾ ಕ್ರೀಡಾಪಟುಗಳಿಗೂ ಇರುತ್ತೆ. ದೇಶ ಸೇವೆ ಮಾಡುತ್ತೇವೆ.. ದೇಶಕ್ಕಾಗಿ ಆಡುತ್ತೇವೆ ಅಂತ ಹೇಳುತ್ತಾರೆ. ಬೇರೆ ಬೇರೆ ದೇಶಗಳಿಗೆ ಹೋಗಿ ಆಟದಲ್ಲಿ ಗೆದ್ದಾಗ ಮೊದಲು ಹೇಳುವುದು ಭಾರತದ ಸಹನಾ ಕುಮಾರಿ ಎಂಬ ಹೆಸರು. ಭಾರತ ಎಂಬ ಹೆಸರು ಆದ ನಂತರ ನಮ್ಮ ಹೆಸರನ್ನು ಕೂಗಿದಾಗ, ಕೇಳುವ ಹಿತ ಮತ್ತೊಂದಿಲ್ಲ. ಅಷ್ಟು ಖುಷಿಯನ್ನು ಬೇರೆ ಯಾವುದೂ ತಂದು ಕೊಡುವುದಿಲ್ಲ.. ಈ ಭಾವವನ್ನು ಅನುಭವಿಸಿದ ಪ್ರತಿಯೊಬ್ಬ ಕ್ರೀಡಾಪಟುವೂ ನಾವು ದೇಶಕ್ಕಾಗಿ ಆಡ್ತೀವಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎನ್ನುತ್ತಾರೆ ಸಹನಾಕುಮಾರಿ.

ಸೋಷಿಯಲ್ ಮೀಡಿಯಾ ಅಷ್ಟೊಂದು ಪ್ರಚಾರದಲ್ಲಿರಲಿಲ್ಲ
ಮೊದಲು ಪತ್ರಿಕೆಗಳಲ್ಲಿ ಮಾತ್ರ ಕ್ರಿಡೆಯ ಸಾಧನೆ ಕುರಿತಾಗಿ ತಿಳಿದು ಕೊಳ್ಳಬಹುದಾಗಿತ್ತು. ನಂತರ ಕಾಲಮಾನ ಬದಲಾಗುತ್ತಾ ಸಾಗಿದಂತೆ ಸಾಮಾಜಿಕ ಜಾಲತಾಣ ಕ್ರೀಡೆಯ ಕುರಿತಾಗಿ ಪ್ರಚಾರಕ್ಕೆ ಮುಂದಾಯಿತು. ಸಾಮಾಜಿಕ ಜಾಲತಾಣಕ್ಕೆ ಜನರು ಒಗ್ಗಿಕೊಂಡರು. ಹೀಗೆ ಕ್ರೀಡೆಯ ಕುರಿತಾಗಿ ಜನರಿಗೆ ಅರಿವು ಮೂಡಲು ಪ್ರಾರಂಭಿಸಿತು.

ಉಪ್ಪು ಖಾರವಿಲ್ಲದ ಊಟ
ಕ್ರೀಡೆಯ ತರಬೇತಿ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ನಿಷ್ಠೆ ಬೇಕು. ಮನಸ್ಸು ಸದೃಢವಾಗಿರಬೇಕು ಜೊತೆಗೆ ದೇಹವನ್ನು ಸದೃಢಗೊಳಿಸಬೇಕು. ನಿಯಮಿತ ಆಹಾರ ಸೇವಿಸಬೇಕು. ಜೊತೆಗೆ ಉಪ್ಪು ಖಾರವಿಲ್ಲದ ಊಟ ಸೇವಿಸಬೇಕು. ಇವುಗಳಿಗೆ ತಪಸ್ಸೇ ಮಾಡಬೇಕಾಗುತ್ತದೆ ಎನ್ನುತ್ತ, ಕ್ರೀಡಾ ಸಾಧನೆ ಸುಮ್ಮನೆ ಒಲಿಯುವುದಿಲ್ಲ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿಕೊಡುತ್ತಾರೆ.

ಸಹನಾ ಕುಮಾರಿ

ಪ್ರಸ್ತುತದಲ್ಲಿ ಜಿವನ ಹೇಗಿದೆ?
ಪ್ರತಿ ದಿನ ಬೆಳಿಗ್ಗೆ ಬೇಗ ಎದ್ದು ಯೋಗ ಮಾಡುತ್ತೇನೆ. ನಂತರ ಮತ್ತೆ ತರಬೇತಿ ಹೇಳಿ ಕೊಡಲು ಪ್ರಾರಂಭಿಸುತ್ತೇನೆ. ಮಧ್ಯಂತರದಲ್ಲಿ ನನ್ನ ಒಂದಿಷ್ಟು ಕೆಲಸಗಳು. ಮನೆಯಲ್ಲಿ ಮಕ್ಕಳಿದ್ದಾರೆ. ಅವರಿಗಾಗಿ ಒಂದುಷ್ಟು ಸಮಯ ಮೀಸಲಿಡುತ್ತೇನೆ. ಪುನಃ ಸಂಜೆ ತರಬೇತಿ ಪ್ರಾರಂಭವಾಗುತ್ತದೆ. ಕೊರೊನಾ ಇರುವುದರಿಂದ ಸದ್ಯದಲ್ಲಿ ಯಾರಿಗೂ ತರಬೇತಿ ನೀಡುತ್ತಿಲ್ಲ. ನನ್ನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ತಂದಿದ್ದಾರೆ. ಇವರ ಈ ಸಾಧನೆ ನನಗೆ ತುಂಬಾ ಖುಷಿ ಕೊಡುತ್ತದೆ.

ಸಾಧನೆ ಸುಲಭವಲ್ಲ, ತಪಸ್ಸು ಬೇಕು
ಕ್ರೀಡೆಯಲ್ಲಿ ಭಾಗವಹಿಸಲು ಪ್ರಾರಂಭಿಸಿದ 1 ವರ್ಷದವರೆಗೆ ಅಷ್ಟು ಸುಲಭವಾಗಿ ಪ್ರಶಸ್ತಿ ದೊರೆಯುವುದಿಲ್ಲ. ತುಂಬಾ ತಪಸ್ಸು ಮಾಡಬೇಕು, ಹರಸಾಹಸ ಪಡೆಯಬೇಕು. ನೇರ ಮಸ್ಸಿನನೊಡನೆ ಇಟ್ಟ ಹೆಜ್ಜೆಯನ್ನು ಹಿಂದಿಡದೇ ಗುರಿಯತ್ತ ಸಾಗುತ್ತಲೇ ಇರಬೇಕು. ಗದ್ದೆಯಲ್ಲಿ ಸಸಿ ನೆಟ್ಟಾಗ, ಎಷ್ಟು ಪೋಷಕಾಂಶ ಕೊಟ್ಟು ಬೆಳೆಸುತ್ತೇವೋ ಅದೇ ರೀತಿ ಫಲ ಕೊಡುತ್ತೆ. ಹಾಗೆಯೇ ಶ್ರಮವಹಿಸಿ ಸಾಧನೆಯತ್ತ ಹೊರಟರೆ ಗುರಿ ತಲುಪಬಹುದು. ಕ್ರೀಡೆಯಲ್ಲಿ ವೈಯಕ್ತಿಕ ದೃಷ್ಟಿಕೋನದ ಜೊತೆ ವೈಯ್ಯಕ್ತಿಕ ನಿರ್ಧಾರ ಮುಖ್ಯ. ಏಕೆಂದರೆ, ನೀನು ಗುರಿಯತ್ತ ಸಾಗಲು ನಿನ್ನನ್ನು ನೀನು ಎಷ್ಟು ತೊಡಗಿಸಿ ಕೊಳ್ಳಬಹುದು ಎಂಬ ನಿರ್ಧಾರ ನಿನ್ನದು ಎಂಬುದು ಕ್ರೀಡಾ ಸಾಧಕಿಯ ಅನುಭವ ಮಾತು.

ಕರ್ನಾಟಕ ಸರ್ಕಾರ ಗಮನ ಹರಿಸಬೇಕಾಗಿದೆ
ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಅಥವಾ ಭಾಗವಹಿಸಿದವರಿಗೆ ಪ್ರತಿ ಜಿಲ್ಲೆಯಲ್ಲಿ ಗ್ರೇಸ್ ಮಾರ್ಕ್ಸ್ ಕೊಡುವಂತೆ ಸರ್ಕಾರ ಚಿಂತಿಸಿದರೆ, ಮಕ್ಕಳಿಗೆ ಕ್ರಿಡೆಯ ಕುರಿತಂತೆ ಆಸಕ್ತಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಅದೆಷ್ಟೋ ಮಂದಿ ಬುದ್ಧಿವಂತರಿದ್ದಾರೆ. ಅವರಿಗೆ ಅವಕಾಶದ ಜೊತೆ ಅವರ ಪ್ರತಿಭೆ ಹೊರಬರುತ್ತದೆ. ಈ ಯೋಜನೆ ಕೇರಳದಲ್ಲಿ ಇದೆ. ಕರ್ನಾಟಕದಲ್ಲೂ ಬರಬೇಕೆಂಬ ಆಸೆ ಇದೆ. ಇದು ಪ್ರತಿಭೆಗಳನ್ನು ಗುರುತಿಸಲು ಸಹಾಯವಾಗುತ್ತದೆ. ಪ್ರತಿಭೆಗಳಿಗೆ ಅವಕಾಶವೂ ಆದಂತಾಗುತ್ತದೆ ಎಂದು ಹೇಳಿದ್ದಾರೆ ಸಹನಾ ಕುಮಾರಿ

ಇದನ್ನೂ ಓದಿ: Women’s Day Special: ಕೊರೊನಾ ಸೋಂಕಿತ ಗರ್ಭಿಣಿಯರ ಪಾಲಿಗೆ ಆಪದ್ಬಾಂಧವರಾಗಿದ್ದರು ವೈದ್ಯೆ ಶಾರದಾ; 220ಕ್ಕೂ ಹೆಚ್ಚು ಸುಸೂತ್ರ ಹೆರಿಗೆ

ಇದನ್ನೂ ಓದಿ: Women’s Day 2021: ಕೊರೊನಾ ಸೋಂಕು ವಿಜಯಪುರಕ್ಕೆ ಕಾಲಿಡುವುದಕ್ಕೂ ಮೊದಲೇ ಹೋರಾಟಕ್ಕೆ ಸಜ್ಜಾಗಿದ್ದರು ಡಾ.ಚೆನ್ನಮ್ಮಾ ಕಟ್ಟಿ..

Published On - 12:25 pm, Mon, 8 March 21