ಆಕಾಶ್ ಮೆಡಿಕಲ್ ಕಾಲೇಜು ಮೇಲೆ ಐಟಿ ದಾಳಿ: ಶಿಫ್ಟ್​ಗಳಲ್ಲಿ ಅಧಿಕಾರಗಳಿಂದ ತಪಾಸಣೆ

| Updated By: ಆಯೇಷಾ ಬಾನು

Updated on: Feb 18, 2021 | 12:18 PM

IT Raid on Medical Colleges and Hospitals | ರಾಜ್ಯಾದ್ಯಂತ ಅನೇಕ ನಗರಗಳಲ್ಲಿ ನಿರ್ದಿಷ್ಟವಾಗಿ ಆಸ್ಪತ್ರೆಗಳ ಮೇಲೆಯೇ ಆದಾಯ ತೆರಿಗೆ ಅಧಿಕಾರಿಗಳು ತಂಡೋಪತಂಡವಾಗಿ ಭಾರೀ ದಾಳಿಗಳನ್ನು ನಡೆಸಿದ್ದರು. ಇಂದೂ ಕೂಡ ಆ ದಾಳಿ ಮುಂದುವರೆದಿದೆ.

ಆಕಾಶ್ ಮೆಡಿಕಲ್ ಕಾಲೇಜು ಮೇಲೆ ಐಟಿ ದಾಳಿ: ಶಿಫ್ಟ್​ಗಳಲ್ಲಿ ಅಧಿಕಾರಗಳಿಂದ ತಪಾಸಣೆ
ಆಕಾಶ್ ಆಸ್ಪತ್ರೆ
Follow us on

ದೇವನಹಳ್ಳಿ: ಕೊರೊನಾ ಸೋಂಕು ಅತಿರೇಕಕ್ಕೆ ಹೋದ ಸಮಯದಲ್ಲಿ ಚಿಕಿತ್ಸೆಗೆಂದು ರೋಗಿಗಳಿಂದ ಭಾರೀ ಪ್ರಮಾಣದಲ್ಲಿ ಚಿಕಿತ್ಸಾ ವೆಚ್ಚ ಪಡೆಯುವುದು ಸೇರಿದಂತೆ ಅನೇಕ ಅಕ್ರಮಗಳ ಮೂಲಕ ಭಾರೀ ಹಣ ಗಳಿಕೆ ನಡೆದಿದೆ. ಜೊತೆಗೆ ಆದಾಯದ ಮೇಲಿನ ಹಣಕ್ಕೆ ಆದಾಯ ತೆರಿಗೆ ಕಟ್ಟಿಲ್ಲದಿರುವ ಅನುಮಾನದ ಮೇರೆಗೆ ನಿನ್ನೆ ಬುಧವಾರ ರಾಜ್ಯಾದ್ಯಂತ ಅನೇಕ ನಗರಗಳಲ್ಲಿ ನಿರ್ದಿಷ್ಟವಾಗಿ ಆಸ್ಪತ್ರೆಗಳ ಮೇಲೆಯೇ ಆದಾಯ ತೆರಿಗೆ ಅಧಿಕಾರಿಗಳು ತಂಡೋಪತಂಡವಾಗಿ ಭಾರೀ ದಾಳಿಗಳನ್ನು ನಡೆಸಿದ್ದರು. ಕೆಲ ಆಸ್ಪತ್ರೆಗಳ ಮೇಲೆ ನಡೆದ ದಾಳಿಗಳು ನಿನ್ನೆ ಸಂಜೆ/ ರಾತ್ರಿಯವರೆಗೂ ನಡೆದಿತ್ತು. ಆದರೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಆಕಾಶ್ ಮೆಡಿಕಲ್ ಕಾಲೇಜು ಮೇಲೆಯೂ ಐಟಿ ದಾಳಿ ನಡೆದಿತ್ತು.

ಶಿಫ್ಟ್ ಚೇಂಜ್ ಮಾಡಿಕೊಂಡು ಐಟಿ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹೊರವಲಯದ ಆಕಾಶ್ ವೈದ್ಯಕೀಯ ಕಾಲೇಜು & ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದಾರೆ. ನಿನ್ನೆ ರಾತ್ರಿ ಪಾಳಯವನ್ನ ಮುಗಿಸಿಕೊಂಡು ಎರಡು ಕಾರುಗಳಲ್ಲಿ ತೆರಳಿದ್ದ ಅಧಿಕಾರಿಗಳು ಇಂದು ಬೆಳಗಿನ ಪಾಳಿಗೆ ಮತ್ತೊಂದು ಅಧಿಕಾರಿಗಳ ತಂಡ ಆಗಮಿಸಿದೆ. ನಿನ್ನೆ ಬೆಳಗ್ಗೆ 6 ಗಂಟೆಯಿಂದ ಐಟಿ ತಪಾಸಣೆ ನಡೆಯುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ದಾಖಲೆಗಳು ಸಿಕ್ಕಿರೂ ಹಿನ್ನೆಲೆಯಲ್ಲಿ ಇಂದು ಸಹ ದಾಖಲೆಗಳ ಪರಿಶೀಲನೆ ಮುಂದುವರೆದಿದೆ.

ಆಕಾಶ್ ವೈದ್ಯಕೀಯ ಕಾಲೇಜು & ಆಸ್ಪತ್ರೆ ಮಾಲೀಕ ಮುನಿರಾಜು ಮನೆ ಮೇಲೂ ದಾಳಿ
ಇನ್ನು ಆಕಾಶ್ ವೈದ್ಯಕೀಯ ಕಾಲೇಜು & ಆಸ್ಪತ್ರೆಯಲ್ಲಿ ನಿನ್ನೆ ಬೆಳಗ್ಗೆ 6ರಿಂದ ತನಿಖೆ ನಡೆಸುತ್ತಿರುವ ಐಟಿ ಅಧಿಕಾರಿಗಳು ಮಾಲೀಕ ಮುನಿರಾಜು ಮನೆ ಮೇಲೂ ದಾಳಿ ನಡೆಸಿದ್ದಾರೆ. ಐಟಿ ಅಧಿಕಾರಿಗಳು ಮಧ್ಯರಾತ್ರಿ ಸಾಕಷ್ಟು ದಾಖಲೆಗಳನ್ನು ಹೊತ್ತು ಆಕಾಶ್ ಮೆಡಿಕಲ್ ಕಾಲೇಜಿನಿಂದ ಸಹಕಾರನಗರದ ಮಾಲೀಕನ ಮನೆಗೆ ತೆರಳಿದ್ದು ಅಲ್ಲಿಯೂ ಶೋಧ ನಡೆಸಿದ್ದಾರೆ. ಕೊವಿಡ್ ಸೋಂಕಿತರ ಬಿಲ್, ಶಾಲೆ ಕಾಲೇಜು ಆಸ್ವತ್ರೆಯ ತೆರಿಗೆ ಬಿಲ್ ಸೇರಿದಂತೆ ಒಂದಷ್ಟು ರಿಯಲ್ ಎಸ್ಟೇಟ್ ದಾಖಲೆಗಳು ಸಿಕ್ಕಿವೆ.

ತಡರಾತ್ರಿ ಸಪ್ತಗಿರಿ ಮತ್ತು ಬಿಜಿಎಸ್ ಮೆಡಿಕಲ್ ಕಾಲೇಜು ಮೇಲೂ ಐಟಿ ದಾಳಿ ನಡೆದಿದೆ. ದಾಳಿ ವೇಳೆ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಸಿಕ್ಕಿದ್ದು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿರುವ ದಾಖಲಾತಿಗಳನ್ನು ಮರುಪರಿಶೀಲನೆ ನಡೆಸಲಿದ್ದಾರೆ.

ಶ್ರೀದೇವಿ ಮೆಡಿಕಲ್ ಕಾಲೇಜಿನ ಮೇಲೂ ಮುಂದುವರೆದ ದಾಳಿ
ಬಿಜೆಪಿ ಮುಖಂಡ ಹುಲಿನಾಯ್ಕರ್‌ ಒಡೆತನದ ಶಿಕ್ಷಣ ಸಂಸ್ಥೆ ಶ್ರೀದೇವಿ ಮೆಡಿಕಲ್ ಕಾಲೇಜಿನ ಮೇಲೆ ನಡೆದ ಐಟಿ ದಾಳಿ ಮುಂದುವರೆದಿದೆ. ಎರಡನೇ ದಿನವೂ ಐಟಿ ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತಿದೆ. ಇನೋವಾ ಕಾರಿನಲ್ಲಿ ಆಗಮಿಸಿರುವ ಐಟಿ ಅಧಿಕಾರಿಗಳು ಇಂದೂ ಕೂಡ ದಾಖಲೆಗಳ ಪರಿಶೀಲನೆ ಹಾಗೂ ಆಸ್ತಿ ಬಗ್ಗೆ ವಿವರ ಪಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕೊರೊನಾ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಅವ್ಯವಹಾರ: ಬೆಳಗ್ಗೆಯಿಂದ ರಾಜ್ಯದಲ್ಲಿ ಐಟಿ ದಾಳಿ, ತಾಜಾ ಏನು?

Published On - 12:14 pm, Thu, 18 February 21