ಕೊರೊನಾ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಅವ್ಯವಹಾರ: ಬೆಳಗ್ಗೆಯಿಂದ ರಾಜ್ಯದಲ್ಲಿ ಐಟಿ ದಾಳಿ, ತಾಜಾ ಏನು?

ಕೊರೊನಾ ಸಮಯದಲ್ಲಿ ತುಮಕೂರಿನ ಶ್ರೀದೇವಿ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರೋಗಿಗಳನ್ನು ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ರೋಗಿಗಳಿಂದ ಆಸ್ಪತ್ರೆಯವರನ್ನು ಬೇಕಾಬಿಟ್ಟಿ ಹಣ ಪಡೆದಿದ್ದಾರೆ ಎನ್ನಲಾಗಿದೆ.

  • TV9 Web Team
  • Published On - 17:05 PM, 17 Feb 2021
ಕೊರೊನಾ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಅವ್ಯವಹಾರ: ಬೆಳಗ್ಗೆಯಿಂದ ರಾಜ್ಯದಲ್ಲಿ ಐಟಿ ದಾಳಿ, ತಾಜಾ ಏನು?
ಸಂಗ್ರಹ ಚಿತ್ರ

ತುಮಕೂರು: ಕೊರೊನಾ ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಸಾಕಷ್ಟು ಅವ್ಯವಹಾರ ನಡೆಸಿರುವ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಂದು ರಾಜ್ಯದ ವಿವಿಧ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತುಮಕೂರಿನ ಶ್ರೀದೇವಿ ಕಾಲೇಜಿನಲ್ಲೂ ಐಟಿ ರೇಡ್​ ನಡೆದಿದ್ದು,  ಕಾಲೇಜಿನ ಕಚೇರಿಯಲ್ಲಿ ದೊಡ್ಡ ಮೊತ್ತದ ನಗದು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. 

ಆಸ್ಪತ್ರೆಯ ದೈನಂದಿನ ವ್ಯವಹಾರಕ್ಕಾಗಿ ಇಟ್ಟುಕೊಂಡಿದ್ದ ಹತ್ತು ಲಕ್ಷಕ್ಕೂ ಅಧಿಕ ನಗದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಇದೆ. ಇಂದು ಮತ್ತೆ ನಾಳೆ ಐಟಿ ಶೋಧ ಮುಂದುವರಿಯುವ ಸಾಧ್ಯತೆ ಇದೆ.

ಕೊರೊನಾ ಸಂದರ್ಭದಲ್ಲಿ ತುಮಕೂರಿನ ಶ್ರೀದೇವಿ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರೋಗಿಗಳನ್ನು ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ರೋಗಿಗಳಿಂದ ಆಸ್ಪತ್ರೆಯವರನ್ನು ಬೇಕಾಬಿಟ್ಟಿ ಹಣ ಪಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಐಟಿ ಅಧಿಕಾರಿಗಳು ಇಂಚಿಂಚು ಮಾಹಿತಿಯನ್ನು ಆಸ್ಪತ್ರೆಯಿಂದ ಪಡೆಯುತ್ತಿದ್ದಾರೆ.

ಇದನ್ನೂ ಓದಿ: IT Raid: ಖಾಸಗಿ ಆಸ್ಪತ್ರೆ ಮಾಲೀಕರಿಗೆ ಐಟಿ ಶಾಕ್​ ಟ್ರೀಟ್​ಮೆಂಟ್, ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ದಾಳಿ​

ಮಂಗಳೂರಿನಲ್ಲೂ ವೈದ್ಯರ ನಿವಾಸಗಳ ಮೇಲೆ ಐಟಿ ದಾಳಿ ನಡೆದಿದೆ. ನಾಲ್ಕಕ್ಕೂ ಹೆಚ್ಚು ವೈದ್ಯರ ಮನೆಗಳ ಮೇಲೆ ಐಟಿ ದಾಳಿಯಾಗಿದೆ. ಮಂಗಳೂರು ಹೊರವಲಯದ ಮುಲ್ಕಿಯಲ್ಲಿರುವ ಯೆನಪೋಯ ಆಸ್ಪತ್ರೆ ವೈದ್ಯರ ಮನೆಯಲ್ಲಿ ಐಟಿ ಶೋಧಕಾರ್ಯ ನಡೆಸಲಾಗಿದೆ. ಐಟಿ ದಾಳಿಯ ವೇಳೆ ಅಪಾರ ಪ್ರಮಾಣದಲ್ಲಿ ನಗದು ಪತ್ತೆಯಾಗಿದೆ ಎನ್ನುವ ಮಾಹಿತಿ ಇದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಆಕಾಶ್ ಮೆಡಿಕಲ್ ಕಾಲೇಜು ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸತತ 10 ಗಂಟೆಗಳಿಂದಅಧಿಕಾರಿಗಳ ಶೋಧ ಮುಂದುವರಿದೆ. ಊಟಕ್ಕೆ ಹೊರಗಡೆ ಹೋಗದೇ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕಾಲೇಜು, ಶಾಲೆ, ಆಸ್ಪತ್ರೆಯಲ್ಲಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ.

ತುಮಕೂರಿನ ಶ್ರೀದೇವಿ ಕಾಲೇಜಿನಲ್ಲಿ ಐಟಿ ಅಧಿಕಾರಿಗಳು ತನಿಖೆ ಮಾಡಿದ್ದಾರೆ. 8 ಕಾರುಗಳಲ್ಲಿ ಬಂದಿರುವ ಐಟಿ ಇಲಾಖೆಯ ಅಧಿಕಾರಿಗಳು, ಕೆಲ ದಾಖಲೆಗಳನ್ನು ವಶಕ್ಕೆ ಪಡೆದು 5 ಕಾರುಗಳಲ್ಲಿ ವಾಪಸಾಗಿದ್ದಾರೆ.

ಸಪ್ತಗಿರಿ ಆಸ್ಪತ್ರೆಯ ಮಾಲೀಕ ದಯಾನಂದ್ ಮನೆ ಮೇಲೆ ಕೂಡ ಐಟಿ ದಾಳಿ ನಡೆದಿದೆ. ಸತತ 11 ಗಂಟೆಗಳಿಂದ ದಯಾನಂದ್ ಮನೆಯಲ್ಲಿ ಐಟಿ ಅಧಿಕಾರಿಗಳು ಶೋಧಕಾರ್ಯ ನಡೆಸುತ್ತಿದ್ದಾರೆ. ಇಂದು ರಾತ್ರಿವರೆಗೂ ರೈಡ್ ಮುಂದುವರೆಯೋ ಸಾಧ್ಯತೆ ಕಂಡುಬಂದಿದೆ.