ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಶಾಕ್ ಕೊಟ್ಟ ಐಟಿ: ಬೆಳ್ಳಂಬೆಳಗ್ಗೆ ಹಲವು ಕಾಲೇಜುಗಳ ಮೇಲೆ ದಾಳಿ
ಪ್ರತಿಷ್ಠಿತ ಶಿಕ್ಷಣ ಸಂಸ್ಥೆ PES ಮೇಲೆ ಬೆಳ್ಳಂ ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ವಿವಿಧೆಡೆ ಇರುವ ಕಾಲೇಜುಗಳು ಸೇರಿ, ಆಂಧ್ರದ ಕುಪ್ಪಂನಲ್ಲಿರುವ ಕಾಲೇಜಿನ ಮೇಲೂ ರೇಡ್ ನಡೆದಿದೆ. ಬೆಂಗಳೂರಿನಲ್ಲಿರುವ ದಿವಂಗತ ದೊರೆಸ್ವಾಮಿ ನಾಯ್ಡು ಅವರ ಮನೆ ಸೇರಿ ಅವರ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ. ಏಕಕಾಲಕ್ಕೆ ಸುಮಾರು 200 ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 24: ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಪಿಇಎಸ್ (PES) ಮೇಲೆ ಬೆಳ್ಳಂ ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ (IT Raid) ನಡೆಸಿದ್ದಾರೆ. ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಆದಾಯಕ್ಕೂ ಮೀರಿದ ಆಸ್ತಿಗಳಿಕೆ ಆರೋಪ ಹಿನ್ನೆಲೆ ದಾಳಿ ನಡೆದಿದೆ ಎನ್ನಲಾಗಿದೆ.
ಎಲ್ಲೆಲ್ಲಿ ಐಟಿ ದಾಳಿ?
ದಿವಂಗತ ದೊರೆಸ್ವಾಮಿ ನಾಯ್ಡು ಸ್ಥಾಪಿಸಿದ್ದ ಪಿಇಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು, ಎಲೆಕ್ಟ್ರಾನಿಕ್ ಸಿಟಿ ಕಾಲೇಜು, ಹನುಮಂತನಗರ ಕಾಲೇಜು, ಆಂಧ್ರದ ಕುಪ್ಪಂ ಕಾಲೇಜು ಸೇರಿದಂತೆ ಹಲವೆಡೆ ಐಟಿ ದಾಳಿ ನಡೆದಿದೆ. ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿಯ ದೊರೆಸ್ವಾಮಿ ನಾಯ್ಡು ಮನೆಯಲ್ಲೂ ಅಧಿಕಾರಿಗಳು ಶೋಧ ನಡೆಸಿದ್ದು, ದೊರೆಸ್ವಾಮಿ ಸಂಬಂಧಿಕರ ಮನೆಗಳ ಮೇಲೂ ರೇಡ್ ನಡೆದಿದೆ.
ಇದನ್ನೂ ಓದಿ: ಬೆಂಗಳೂರಿನ ಸುತ್ತಮುತ್ತಲಿನ ಜನರಿಗೆ ಬಿಎಂಟಿಸಿ ಗುಡ್ ನ್ಯೂಸ್: ಇನ್ಮುಂದೆ ಅಕ್ಕಪಕ್ಕದ ಜಿಲ್ಲೆಗಳಿಗೂ ಬಸ್ ಸಂಚಾರ
ಚೆನ್ನೈ , ಮಂಗಳೂರು, ಆಂಧ್ರದಿಂದ ಬಂದಿರುವ ಸುಮಾರು 200ಕ್ಕೂ ಹೆಚ್ಚು ಅಧಿಕಾರಿಗಳಿಂದ ಏಕಕಾಲಕ್ಕೆ ಎಲ್ಲಾ ಕಡೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಇದೇ ವರ್ಷ ಮಾರ್ಚ್ 25ರಂದು ದೊರೆಸ್ವಾಮಿ ನಾಯ್ಡು ಮೃತ ಪಟ್ಟಿದ್ದು, ಸದ್ಯ ಅವರ ಪುತ್ರ ಜವಹರ್ ದೊರೆಸ್ವಾಮಿ ಪಿಇಎಸ್ ಶಿಕ್ಷಣ ಸಂಸ್ಥೆ ನೋಡಿಕೊಳ್ಳುತ್ತಿದ್ದಾರೆ.
ಪೋಥಿಸ್ ಬಟ್ಟೆ ಶೋ ರೂಮ್ ಮೇಲೂ ನಡೆದಿತ್ತು ಐಟಿ ದಾಳಿ
ಬೆಂಗಳೂರಿನಲ್ಲಿರುವ ಪೋಥಿಸ್ ಬಟ್ಟೆ ಶೋ ರೂಮ್ ಮೇಲೂ ಸೆಪ್ಟೆಂಬರ್ 12ರಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಮೈಸೂರು ರಸ್ತೆಯ ಟೆಂಬರ್ ಲೇಔಟ್ನಲ್ಲಿರುವ ಪೋಥಿಸ್ ಶೋ ರೂಮ್ಗೆ 25ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು. ಗಾಂಧಿನಗರದಲ್ಲಿರುವ ಪೋಥಿಸ್ ಶೋ ರೂಮ್ ಮೇಲೂ ರೇಡ್ ಮಾಡಲಾಗಿತ್ತು. ಪೋಥಿಸ್ ಮಳಿಗೆ ತಮಿಳುನಾಡು ಮೂಲದ ಉದ್ಯಮಿಗೆ ಸೇರಿದ್ದಾಗಿದ್ದು, ಹೀಗಾಗಿ ಚೆನ್ನೈಯಿಂದಲೇ ಐಟಿ ಅಧಿಕಾರಿಗಳು ಬಂದ ಅಧಿಕಾರಿಗಳು ದಾಳಿ ನಡೆಸಿದ್ದರು.
ಬೆಂಗಳೂರಿನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.