ಸಿಡಿ ಪ್ರಕರಣ ರಾಷ್ಟ್ರಮಟ್ಟದಲ್ಲಿ ರಾಜ್ಯದ ನಾಚಿಕೆ ಪಡುವ ಸ್ಥಿತಿ ನಿರ್ಮಿಸಿದೆ; ನೈತಿಕ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸಿದ ಜೆಡಿಎಸ್

ಲೈಂಗಿಕ ಪ್ರಕರಣವೊಂದರ ವರದಿಗಳು ನಿತ್ಯ ಪ್ರಕಟವಾಗುತ್ತಿದ್ದರೆ, ಅದರಿಂದ ಕುಟುಂಬಗಳು ಮತ್ತು ಮಕ್ಕಳ ಮೇಲೆ ಆಗುವ ಪರಿಣಾಮಗಳನ್ನು ನಾವು ಚಿಂತಿಸಬೇಕಿದೆ. ಇದಕ್ಕೆ ಅಂತ್ಯ ಹಾಡಬೇಕಿದ್ದರೆ ಸೂಕ್ತ ತನಿಖೆಯೊಂದೇ ದಾರಿ. ಇಲ್ಲವಾದರೆ, ಈ ಪ್ರಕರಣದ ಬೆಳವಣಿಗೆಗಳು ಮತ್ತಷ್ಟು ವಿಸ್ತಾರವಾಗುತ್ತ ನಾಗರಿಕ ಸಮಾಜ ನಾಚಿಕೆಯಲ್ಲಿ ದಿನ ಕಳೆಯಬೇಕಾಗುತ್ತದೆ; ಜೆಡಿಎಸ್

ಸಿಡಿ ಪ್ರಕರಣ ರಾಷ್ಟ್ರಮಟ್ಟದಲ್ಲಿ ರಾಜ್ಯದ ನಾಚಿಕೆ ಪಡುವ ಸ್ಥಿತಿ ನಿರ್ಮಿಸಿದೆ; ನೈತಿಕ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸಿದ ಜೆಡಿಎಸ್
ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
Follow us
guruganesh bhat
|

Updated on: Mar 27, 2021 | 3:30 PM

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ಕ್ಷಣಕ್ಷಣಕ್ಕೂ ಕುತೂಹಲ ಮತ್ತು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.  ವಿಪಕ್ಷ ಕಾಂಗ್ರೆಸ್​ನ ಪ್ರಭಾವಿ ಮುಖಂಡರ ಹೆಸರೂ ಈ ಪ್ರಕರಣದಲ್ಲಿ ಮುನ್ನೆಲೆಗೆ ಬಂದ ಸಂದರ್ಭದಲ್ಲಿ ಜಾತ್ಯಾತೀತ ಜನತಾದಳ ಸರಣಿ ಟ್ವೀಟ್ ಮಾಡಿದೆ. ಅಲ್ಲದೇ ಈ ಇಡೀ ಪ್ರಕರಣವನ್ನು ಇನ್ನೊಂದು ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸಿರುವ ಜೆಡಿಎಸ್ ಕರ್ನಾಟಕದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ನಾಚಿಕೆ ಪಡುವಂತಹ ಸ್ಥಿತಿಗೆ ತರಲಾಗುತ್ತಿದೆ ಎಂದು ದೂರಿದೆ.

ಜೆಡಿಎಸ್​ ಹೇಳಿರುವುದೇನು?

ಆರಂಭದಲ್ಲಿ ಲೈಂಗಿಕ ಹಗರಣ, ಲೈಂಗಿಕ ಶೋಷಣೆಯಂತೆ ಕಾಣುತ್ತಿದ್ದ ಸಿ.ಡಿ ಹಗರಣ ಈಗ ಷಡ್ಯಂತ್ರದಂತೆ ಕಾಣುತ್ತಿದೆ. ಪ್ರಕರಣದಲ್ಲಿ ಕಾಂಗ್ರಸ್ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಹೆಸರು ಕೇಳಿಬರುವ ಮೂಲಕ ಪ್ರಕರಣ ಈಗ ‘ಹನಿಟ್ರ್ಯಾಪ್‌’ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೆಲ್ಲದರ ನಡುವೆ ರಾಷ್ಟ್ರದ ಎದುರು ನಾಚಿಕೆ ಪಡುವ ಸ್ಥಿತಿಯಲ್ಲಿ ರಾಜ್ಯ ನಿಂತಿದೆ ಎಂದು ಜೆಡಿಎಸ್ ದೂರಿದೆ.

ರಾತ್ರಿ ಒಂದು ಆಡಿಯೊ ಬಿಡುಗಡೆಯಾಗುವುದು, ಬೆಳಗ್ಗೆ ಅದಕ್ಕೊಂದು ಸ್ಪಷ್ಟನೆಯ ವಿಡಿಯೊ ಬಿಡುಗಡೆಯಾಗುವುದು… ಇವೆಲ್ಲವನ್ನೂ ಗಮನಿಸುತ್ತಿದ್ದರೆ ಇದರ ಹಿಂದೆ ದೊಡ್ಡ ಕೂಟವೇ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಸಂತ್ರಸ್ತೆಗೆ ನ್ಯಾಯ ಕೊಡಿಸುವ ನೆಪದಲ್ಲಿ, ಆಕೆಯನ್ನು ಮುಂದಿಟ್ಟುಕೊಂಡು ಯಾರೋ ಆಟವಾಡುತ್ತಿರುವುದು ಸ್ಪಷ್ಟವಾಗುತ್ತಲಿದೆ ಎಂದು ಜಾತ್ಯಾತೀತ ಜನತಾದಳ ಇಡೀ ಪ್ರಕರಣವನ್ನು ಇನ್ನೊಂದು ಬಗೆಯಲ್ಲಿ ವ್ಯಾಖ್ಯಾನಿಸಿದೆ.

ಪ್ರಕರಣವನ್ನು ಅದರಪಾಡಿಗೆ ಬಿಟ್ಟು, ಆಗುವ ಬೆಳವಣಿಗೆಯನ್ನು ರಾಷ್ಟ್ರ ನೋಡಿ ಮನರಂಜನೆ ಪಡೆಯುವಂತೆ ಮಾಡುವುದು ರಾಜ್ಯಕ್ಕೆ, ನಮ್ಮ ಪೊಲೀಸರಿಗೆ ಮಾಡುವ ಅತಿ ದೊಡ್ಡ ಅಪಮಾನವಾಗುತ್ತದೆ. ಈ ಸಂದರ್ಭದಲ್ಲಿ ಪೊಲೀಸರು ದಿಟ್ಟತನ ಮೆರೆಯುವುದು ಅತ್ಯಗತ್ಯ. ಯಾವುದೇ ರಾಜಕೀಯ ಒತ್ತಡಗಳನ್ನೂ ಲೆಕ್ಕಿಸದೇ ತನಿಖೆ ನಡೆಸಿ ಅಸಲಿ ಸತ್ಯ ಬಯಲಿಗೆಳೆಯಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.

ಲೈಂಗಿಕ ಶೋಷಣೆಯೋ, ಷಡ್ಯಂತ್ರವೋ, ಹನಿಟ್ರ್ಯಾಪ್‌ ಆಗಿದೆಯೋ ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ. ಆಡಳಿತ ಪಕ್ಷ, ವಿರೋಧ ಪಕ್ಷ ಎಂಬುದನ್ನು ಲೆಕ್ಕಿಸದೇ ಅಸಲಿ ಸಂಗತಿಯನ್ನು ಪೊಲೀಸರು ಹೊರ ತರಬೇಕು. ರಾಜ್ಯದ ಪೊಲೀಸರ ಕರ್ತವ್ಯ ನಿಷ್ಠೆಗೆ ರಾಷ್ಟ್ರ ಮಟ್ಟದಲ್ಲಿ ಹೆಸರಿದೆ. ಅದರ ಪ್ರದರ್ಶನಕ್ಕೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ ಎಂದು ಟ್ವೀಟ್​ನಲ್ಲಿ ಹೇಳಲಾಗಿದೆ.

ಲೈಂಗಿಕ ಪ್ರಕರಣವೊಂದರ ವರದಿಗಳು ನಿತ್ಯ ಪ್ರಕಟವಾಗುತ್ತಿದ್ದರೆ, ಅದರಿಂದ ಕುಟುಂಬಗಳು ಮತ್ತು ಮಕ್ಕಳ ಮೇಲೆ ಆಗುವ ಪರಿಣಾಮಗಳನ್ನು ನಾವು ಚಿಂತಿಸಬೇಕಿದೆ. ಇದಕ್ಕೆ ಅಂತ್ಯ ಹಾಡಬೇಕಿದ್ದರೆ ಸೂಕ್ತ ತನಿಖೆಯೊಂದೇ ದಾರಿ. ಇಲ್ಲವಾದರೆ, ಈ ಪ್ರಕರಣದ ಬೆಳವಣಿಗೆಗಳು ಮತ್ತಷ್ಟು ವಿಸ್ತಾರವಾಗುತ್ತ ನಾಗರಿಕ ಸಮಾಜ ನಾಚಿಕೆಯಲ್ಲಿ ದಿನ ಕಳೆಯಬೇಕಾಗುತ್ತದೆ ಎಂದು ಸರಣಿ ಟ್ವೀಟ್ ಮಾಡುವ ಮೂಲಕ ಜೆಡಿಎಸ್ ಈ ಪ್ರಕರಣವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನೈತಿಕ ಪ್ರಶ್ನೆಯ ಸ್ವರೂಪವಾಗಿ ಮಾರ್ಪಡಿಸಿದೆ.

ಇದನ್ನೂ ಓದಿ: ಆಡಿಯೋ ಮತ್ತು ವಿಡಿಯೋದಲ್ಲಿ ಇರುವುದು ನಮ್ಮ ಮಗಳೇ ಎಂದ ಪೋಷಕರು ; ರಮೇಶ್​ ಜಾರಕಿಹೊಳಿಗೆ ಕಂಟಕ ಹೆಚ್ಚಾಯ್ತು.

‘ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕೆನಿಸ್ತಿದೆ’; ಬೆಳ್ಳಂಬೆಳಗ್ಗೆ ಬಿಡುಗಡೆಯಾದ ಸಿಡಿ ಲೇಡಿಯ ಇನ್ನೊಂದು ವಿಡಿಯೋದಲ್ಲಿ ಹೇಳಿಕೆ!