ಮಂಡ್ಯ, ಡಿಸೆಂಬರ್ 6: ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ಮಾಡಿದ ಬೆನ್ನಲ್ಲೇ, ಅದೇ ರೀತಿಯಲ್ಲಿ ಆಡಳಿತ ಪಕ್ಷಕ್ಕೆ ಕೌಂಟರ್ ಕೊಡಲು ಜೆಡಿಎಸ್ ಮುಂದಾಗಿದೆ. ಕಾಂಗ್ರೆಸ್ ಸಮಾವೇಶದ ಬೆನ್ನಲ್ಲೇ ಎಚ್ಚೆತ್ತ ದಳಪತಿಗಳು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅಭಿನಂದನಾ ಕಾರ್ಯಕ್ರಮದ ಹೆಸರಿನಲ್ಲಿ ಡಿಸೆಂಬರ್ 15ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶ ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಡಿಸೆಂಬರ್ 16ರಂದು ಕೇಂದ್ರ ಸಚಿವ ಹೆಚ್‌ಡಿಕೆ ಹುಟ್ಟುಹಬ್ಬ. ಈ ಹಿನ್ನೆಲೆ ಡಿಸೆಂಬರ್ 15ರಂದು ಮಂಡ್ಯದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಿ ಸಮಾವೇಶ ನಡೆಸಲು ಜೆಡಿಎಸ್ ನಾಯಕರು ಚಿಂತನೆ ನಡೆಸಿದ್ದಾರೆ.
ಬೃಹತ್ ಸಮಾವೇಶದ ಮೂಲಕ ಚನ್ನಪಟ್ಟಣ ಸೋಲಿನ ಹತಾಶೆಯಲ್ಲಿರುವ ಕಾರ್ಯಕರ್ತರನ್ನು ಹುರಿದುಂಬಿಸುವ ಉದ್ದೇಶ ಜೆಡಿಎಸ್ನದ್ದು ಎನ್ನಲಾಗಿದೆ. ಬಿಜೆಪಿಯ ನಾಯಕರು, ಕಾರ್ಯಕರ್ತರನ್ನೂ ಒಳಗೊಂಡಂತೆ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆ ಮೂಲಕ ಹಳೇ ಮೈಸೂರು ಭಾಗದಲ್ಲಿ ಮೈತ್ರಿ ಪ್ರಾಬಲ್ಯ ಕುಗ್ಗದಂತೆ ನೋಡಿಕೊಳ್ಳುವುದು ಜೆಡಿಎಸ್ ಉದ್ದೇಶ ಎನ್ನಲಾಗಿದೆ.
ಮಾಜಿ ಸಚಿವ ಸಿಎಸ್ ಪುಟ್ಟರಾಜು ಈಗಾಗಲೇ ಕಾರ್ಯಕ್ರಮದ ಸ್ಥಳ ಪರಿಶೀಲಿಸಿದ್ದಾರೆ. ಮಾಜಿ ಶಾಸಕ ಅನ್ನದಾನಿ, ಜಿಲ್ಲಾಧ್ಯಕ್ಷ ಡಿ.ರಮೇಶ್ ಹಾಗೂ ಸ್ಥಳೀಯ ಜೆಡಿಎಸ್ ನಾಯಕರು ಪುಟ್ಟರಾಜುಗೆ ಸಾಥ್ ನೀಡಿದ್ದಾರೆ.
ಶಾಸಕ ಜಿಟಿ ದೇವೇಗೌಡ ಮುನಿಸಿಕೊಂಡಿರುವ ಬಗ್ಗೆ ದೆಹಲಿಯಲ್ಲಿ ದೇವೇಗೌಡರ ಮನೆಯಲ್ಲಿ ಜೆಡಿಎಸ್ ನಾಯಕರು ಸಭೆ ಸೇರಿರುವುದಾಗಿ ‘ಟಿವಿ9’ಗೆ ಮೂಲಗಳಿಂದ ಮಾಹಿತಿ ದೊರೆತಿದೆ. ಹೆಚ್ಡಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವರಾದ ಹೆಚ್ಡಿ ರೇವಣ್ಣ, ಸಾರಾ ಮಹೇಶ್, ಸಿ ಎಸ್ ಪುಟ್ಟರಾಜು, ಬಂಡೆಪ್ಪ ಕಾಶೆಂಪೂರ್, ನಿಖಿಲ್ ಕುಮಾರಸ್ವಾಮಿ ಸಭೆಯಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಜಿಟಿ ದೇವೇಗೌಡರ ಜೊತೆ ಮಾತನಾಡುವ ಬಗ್ಗೆ ಸಾರಾ ಮಹೇಶ್ ಪ್ರಸ್ತಾಪ ಮಾಡಿದ್ದಾರೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಮನವೊಲಿಕೆಗೆ ಸಾರಾ ಮಹೇಶ್ ಹಾಗೂ ಸಿಎಸ್ ಪುಟ್ಟರಾಜು ಯತ್ನಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಒಂದು ಅವಕಾಶ ಕೊಡಿ, ನಾವು ಜಿಟಿ ದೇವೇಗೌಡರ ಜೊತೆ ಮಾತನಾಡುತ್ತೇವೆ ಎಂದು ಉಭಯ ನಾಯಕರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಕೆಲವೇ ದಿನದಲ್ಲಿ ರಾಜಕೀಯ ಭೂಕಂಪ ಸಂಭವಿಸಲಿದೆ. ಕಾಂಗ್ರೆಸ್ ಸರ್ಕಾರವೇ ಬದಲಾದ್ರೂ ಅಚ್ಚರಿ ಇಲ್ಲ ಎಂದು ಮಂಡ್ಯದಲ್ಲಿ ಮಾಜಿ ಸಚಿವ ಸಿಎಸ್ ಪುಟ್ಟರಾಜು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ನಾಯಕರು ಯಾವ ಒಪ್ಪಂದ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಆದರೆ, ನೂರಕ್ಕೆ ನೂರರಷ್ಟು ಕಾಂಗ್ರೆಸ್ ಬಣ್ಣ ಬಯಲಾಗುತ್ತದೆ. ರಾಜ್ಯದಲ್ಲಿ ಯಾವುದೇ ಬದಲಾವಣೆ ಆದರೂ ಅಚ್ಚರಿ ಇಲ್ಲ. ಸರ್ಕಾರವೂ ಬದಲಾಗಬಹುದು ಎಂದು ಅವರು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ನಲ್ಲಿ ದೊಡ್ಡ ರಾಜಕೀಯ ಭೂಕಂಪ ಆಗಲಿದೆ. ಒಡಂಬಡಿಕೆ ವಿಚಾರದಲ್ಲೆ ಭೂಕಂಪ ಆಗಲಿದೆ. ಅದನ್ನ ನಾವು-ನೀವು ಕಾದು ನೋಡೋಣ. ಭೂಕಂಪ ಆದಾಗ ಏನ್ ಇರುತ್ತದೆ, ಏನ್ ಇರುವುದಿಲ್ಲ ಎಂದು ಹೇಳಲಾಗದು ಎಂದ ಅವರು, ಪರೋಕ್ಷವಾಗಿ ಕಾಂಗ್ರೆಸ್ ಪಕ್ಷ ಛಿದ್ರ ಛಿದ್ರವಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ದೇವೇಗೌಡರ ಬಗ್ಗೆ ಕೃಷ್ಣಪ್ಪ ನುಡಿದಿದ್ದ ಭವಿಷ್ಯ ವಾಣಿಯನ್ನು ಹಾಸನ ಸಮಾವೇಶದಲ್ಲಿ ಪ್ರಸ್ತಾಪಿಸಿದ ಸಿಎಂ
ಮತ್ತೊಂದೆಡೆ, ಜೆಡಿಎಸ್ ಮಾಜಿ ಶಾಸಕ ಅನ್ನದಾನಿ ಕೂಡ ರಾಜ್ಯ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂದಿದ್ದಾರೆ. ಒಡಂಬಡಿಕೆಯಾಗಿದೆ ಎಂದು ಡಿಸಿಎಂ ಹೇಳ್ತಾರೆ. ಯಾವ ಒಡಂಬಡಿಕೆಯೂ ಆಗಿಲ್ಲ ಎಂದು ಸಿಎಂ ಹೇಳ್ತಾರೆ. ಸಿಎಂ ಹೇಳಿಕೆಗೆ ನಗುತ್ತಾ ಡಿಸಿಎಂ ವ್ಯಂಗ್ಯವಾಡಿದ್ದಾರೆ. ನಮಗೂ ಭಾಷೆ ಬರುತ್ತದೆ, ಕನ್ನಡ ಅರ್ಥವಾಗುತ್ತದೆ. ಯಾವ ಟೈಂನಲ್ಲಿ ಯಾವ ಪದ ಉಚ್ಛಾರಣೆ ಮಾಡುತ್ತಾರೆ ಎಂಬುದು ಗೊತ್ತಿದೆ. ಅದೆಲ್ಲವನ್ನೂ ನೋಡಿದರೆ ಸಾಮರಸ್ಯ ಇಲ್ಲ ಎನ್ನುವುದು ಗೊತ್ತಾಗುತ್ತದೆ ಎಂದು ಅನ್ನದಾನಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ