
ಬೆಂಗಳೂರು, (ಸೆಪ್ಟೆಂಬರ್ 02):ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿರುವ ಹೈಕೋರ್ಟ್ ಪೀಠ ಇಂದು (ಸೆಪ್ಟೆಂಬರ್ 02) ರಾತ್ರಿ 8.5 ಗಂಟೆವರೆಗೂ ಅರ್ಜಿ ವಿಚಾರಣೆಗಳನ್ನು ನಡೆಸಿ ಗಮನಸೆಳೆದಿದ್ದು, ಇಂದು
ಒಂದೇ ದಿನದಲ್ಲಿ ಬರೋಬ್ಬರಿ ಬರೋಬ್ಬರಿ 555 ಪ್ರಕಣಗಳನ್ನು ವಿಚಾರಣೆ ಮಾಡಿದೆ. ಅಲ್ಲದೇ ತುರ್ತು ವಿಚಾರಣೆಗೆ ಕೋರಿದ್ದ 250 ಅರ್ಜಿಗಳನ್ನು ಕೇವಲ 2.5 ಗಂಟೆಗಳ ಅವಧಿಯಲ್ಲಿ ವಿಚಾರಣೆ ನಡೆಸಿದೆ. ಈ ಮೂಲಕ ನಾಗಪ್ರಸನ್ನ ಅವರು ಹೈಕೋರ್ಟ್ ಕಲಾಪದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.
ಬೆಳಗ್ಗೆ ಇಂದಿನ ಕಲಾಪದಲ್ಲಿ ತುರ್ತು ವಿಚಾರಣೆಗೆ ಕೋಲಾರದ 240ಕ್ಕೂ ಹೆಚ್ಚು ಮೆಮೊ ಸ್ವೀಕರಿಸಿ ಅವುಗಳನ್ನು ಮಧ್ಯಾಹ್ನದ ಕಲಾಪದ ಪಟ್ಟಿಗೆ ಸೇರಿಸಲು ಆದೇಶಿಸಿದ್ದರು. ಬೆಳಗಿನ ಕಲಾಪದಲ್ಲಿ ಎಂದಿನಿಂತೆ ನಿಗದಿಯಾಗಿದ್ದ 318 ಅರ್ಜಿಗಳ ವಿಚಾರಣೆ ಪೂರೈಸಿದರು. ಭೋಜನ ಸಮಯದ ನಂತರ 2.30ಕ್ಕೆ ಆರಂಭಿಸಿದ ಕಲಾಪವನ್ನು ರಾತ್ರಿ 8.5ಕ್ಕೆ ಮುಗಿಸಿದ್ದಾರೆ. ಇನ್ನು ಒಂದು ದಿನ ಕಲಾಪದ ಅವಧಿಯಲ್ಲಿ ಒಟ್ಟು 555 ರಿಟ್ ಮತ್ತು ಕ್ರಿಮಿನಲ್ ಅರ್ಜಿಗಳನ ವಿಚಾರಣೆ ಪೂರೈಸಿ ಅವುಗಳಲ್ಲಿ ಒಟ್ಟು 85 ಅರ್ಜಿಗಳನ್ನು ವಿಲೇವಾರಿ ಮಾಡಿದರು.
ನ್ಯಾಯಮೂರ್ತಿ ನಾಗಪ್ರಸನ್ನ ಅವರು ಕ್ರಿಮಿನಲ್ ಪ್ರಕರಣಗಳು, ಜಾಮೀನು ಅರ್ಜಿಗಳು, ಸೇವಾ ವಿಷಯಗಳು ಮತ್ತು ವಿವಿಧ ಸಾಂವಿಧಾನಿಕ/ಕಾನೂನು ವಿಚಾರಗಳಲ್ಲಿ ತೀರ್ಪುಗಳನ್ನು ನೀಡಿದ್ದಾರೆ. ಅವರ ಹೆಸರಿನಲ್ಲಿ ಸಾವಿರಾರು ತೀರ್ಪುಗಳು ದಾಖಲಾಗಿವೆ. ಅವರ ಕಾರ್ಯನಿರ್ವಹಣೆಯ ವೇಗವೂ ಗಮನಾರ್ಹವಾಗಿದೆ. 2024ರ ನವೆಂಬರ್ ವೇಳೆಗೆ ಅವರು ಹೈಕೋರ್ಟ್‌ನಲ್ಲಿ ಐದು ವರ್ಷ ಪೂರೈಸುವ ಸಂದರ್ಭದಲ್ಲಿ 16,500ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದರು. 2025ರ ನವೆಂಬರ್ ವೇಳೆಗೆ ಆ ಸಂಖ್ಯೆ 21,924 ಪ್ರಕರಣಗಳಿಗೆ ತಲುಪಿತ್ತು ಎಂದು ವರದಿಯಾಗಿದೆ. ಅವುಗಳಲ್ಲಿ ಸುಮಾರು 985 ತೀರ್ಪುಗಳು reported judgments ಆಗಿವೆ.
2023ರ ಡಿಸೆಂಬರ್‌ನಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಒಂದೇ ದಿನ 50 ತೀರ್ಪುಗಳನ್ನು ಪ್ರಕಟಿಸಿ ಗಮನ ಸೆಳೆದಿದ್ದರು. ಅವುಗಳಲ್ಲಿ ಬೆಂಗಳೂರು ಮತ್ತು ಧಾರವಾಡ ಪೀಠಗಳಲ್ಲಿ ವಿಚಾರಣೆ ನಡೆಸಿದ್ದ ಪ್ರಕರಣಗಳ ತೀರ್ಪುಗಳೂ ಸೇರಿದ್ದವು. ಅವರ ಹಲವು ತೀರ್ಪುಗಳಲ್ಲಿ ಕಾನೂನು ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ನಾಗರಿಕರ ಹಕ್ಕುಗಳು ಮತ್ತು ತನಿಖಾ ಸಂಸ್ಥೆಗಳ ಜವಾಬ್ದಾರಿತನದ ಬಗ್ಗೆ ಮಹತ್ವದ ವಿಚಾರಗಳನ್ನು ಚರ್ಚಿಸಲಾಗಿದೆ. ಉದಾಹರಣೆಗೆ, ಕಾನೂನುಬಾಹಿರ ಬಂಧನ/ಪೊಲೀಸ್ ಕ್ರಮಗಳ ಬಗ್ಗೆ ಅವರು ನ್ಯಾಯಾಲಯದಲ್ಲಿ ಕಠಿಣ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಸಂದರ್ಭಗಳಿವೆ.
ಒಟ್ಟಾರೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಕರ್ನಾಟಕ ಹೈಕೋರ್ಟ್‌ನ ಪ್ರಮುಖ ಹಾಗೂ ಹೆಚ್ಚಿನ ಪ್ರಕರಣಗಳನ್ನು ವಿಲೇವಾರಿ ಮಾಡಿದ ನ್ಯಾಯಮೂರ್ತಿಗಳಲ್ಲಿ ಒಬ್ಬರು. ಅವರ ವಿಚಾರಣೆಯ ವೇಗ, ತೀರ್ಪುಗಳ ಸಂಖ್ಯೆ ಮತ್ತು ವಿವಿಧ ಕಾನೂನು ಕ್ಷೇತ್ರಗಳಲ್ಲಿ ನೀಡಿರುವ ತೀರ್ಪುಗಳು ಗಮನಸೆಳೆದಿವೆ. ಇನ್ನು ಅವರ ಕೆಲ ಪ್ರಕರಣ ವಿಚಾರಣೆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.