AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೂನಿಫಾರ್ಮ್ ನಲ್ಲಿದ್ದ ಮಾತ್ರಕ್ಕೆ ಜನರ ಸ್ವಾತಂತ್ರ್ಯ ಕಸಿಯಲಾಗದು: ಪೊಲೀಸರಿಗೆ ಹೈಕೋರ್ಟ್ ಫುಲ್ ಕ್ಲಾಸ್

ಸ್ಟಾಂಡ್ ಅಪ್ ಕಾಮಿಡಿ ಶೋ ವಿರೋಧಿಸಿ ಟ್ವೀಟ್ ಮಾಡಿದ್ದಕ್ಕೆ ಕೇಸ್ ದಾಖಲಿಸಿದ ಬೆಂಗಳೂರಿನ ವೈಟ್ ಫೀಲ್ಡ್ ಠಾಣೆ ಎಸ್ಐ, ಎಸಿಪಿ, ಡಿಸಿಪಿ ಯನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ವಿನಾಕಾರಣ ಸಾರ್ವಜನಿಕರ ಮೇಲೆ‌ ಕೇಸ್ ದಾಖಲಿಸುವ ಪೊಲೀಸರದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೈಕೋರ್ಟ್ ಎಚ್ಚರಿಸಿದೆ. ಸಾಮಾಜಿಕ ಜಾಲತಾಣಗಳ‌ ಪೋಸ್ಟ್ ಬಗ್ಗೆ ಕ್ರಮ ಕೈಗೊಳ್ಳುವಾಗ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ. ಹೈಕೋರ್ಟ್ ತರಾಟೆಯ ಫುಲ್ ಡಿಟೈಲ್ಸ್ ಇಲ್ಲಿದೆ.

ಯೂನಿಫಾರ್ಮ್ ನಲ್ಲಿದ್ದ ಮಾತ್ರಕ್ಕೆ ಜನರ ಸ್ವಾತಂತ್ರ್ಯ ಕಸಿಯಲಾಗದು: ಪೊಲೀಸರಿಗೆ ಹೈಕೋರ್ಟ್ ಫುಲ್ ಕ್ಲಾಸ್
Karnataka High Court
ರಮೇಶ್​ ಎಮ್​.
| Edited By: |

Updated on: Aug 29, 2026 | 6:26 PM

Share

ಬೆಂಗಳೂರು, (ಆಗಸ್ಟ್ 29): ಸ್ಟ್ಯಾಂಡ್ ಅಪ್ ಕಾಮಿಡಿಯನ್ ಶೋ ವಿರೋಧಿಸಿದ್ದಕ್ಕೆ ಕೇಸ್ ದಾಖಲಿಸಿದ ಬೆಂಗಳೂರಿನ (Bengaluru) ವೈಟ್ ಫೀಲ್ಡ್​ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್​(Karnataka High Court)  ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದೆ. ಕೋರ್ಟ್ ವಿಚಾರಣೆಗೆ ಹಾಜರಾದ ಡಿಸಿಪಿ ಸೈದುಲು ಅಡಾವತ್, ಎಸಿಪಿ ರೀನಾ ಸುವರ್ಣ ಹಾಗೂ ತನಿಖಾಧಿಕಾರಿಗೆ, ನಿಮ್ಮ ವೈಟ್ ಫೀಲ್ಡ್ ಠಾಣೆಯಲ್ಲಿ ಏನಾಗುತ್ತಿದೆ? ವೈಟ್ ಫೀಲ್ಡ್ ಠಾಣೆಯಲ್ಲಿ ಇರುವ ಸಮಸ್ಯೆ ಏನು? ನೀವು ಕಾನೂನಿನ ಆಡಳಿತಕ್ಕೆ ಒಳಪಟ್ಟಿಲ್ಲವೇ? ನೀವು ಪೊಲೀಸ್ ಠಾಣೆಯನ್ನು ಹೀಗಾ ನಿರ್ವಹಿಸುವುದು? ನಿಮ್ಮ ಠಾಣೆಯಲ್ಲಿ ಸಿಸಿ ಟಿವಿಯೂ ಕೆಲಸ ಮಾಡುವುದಿಲ್ಲ. ವೈಟ್ ಫೀಲ್ಡ್ ಠಾಣೆಯಲ್ಲಿ ಎಲ್ಲವೂ ಡಾರ್ಕ್ ಆಗಿದೆ ಎಂದು ನ್ಯಾಯಮೂರ್ತಿ.ಎಂ. ನಾಗಪ್ರಸನ್ನ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿದೆ.

ಬೆಂಗಳೂರಿನಲ್ಲಿ ಸ್ಟಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾನ ಶೋಗೆ ವಿರೋಧಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ದೂರು ನೀಡಿತ್ತು. ಎಲ್ಲೆಡೆ ವಿರೋಧ ಹೆಚ್ಚಾದಾಗ ಶೋ ರದ್ದಾಗಿತ್ತು. ಇದನ್ನೇ ಟ್ವೀಟ್ ಮಾಡಿದ್ದ ಹಿಂದೂ ಪರ ಹೋರಾಟಗಾರ ಮೋಹನ್ ಗೌಡರ ವಿರುದ್ಧ ವೈಟ್ ಫೀಲ್ಡ್ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಬೆಳಗಿನ ಜಾವ ಎಫ್ಐಆರ್ ದಾಖಲಿಸಿದ್ದಲ್ಲದೇ, ಉಡುಪಿಯಿಂದ ಮೋಹನ್ ಗೌಡರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು 3 ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಮೋಹನ್ ಗೌಡ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಬಳಿಕ ವಾದ ಮಂಡಿಸಿದ್ದ ವಕೀಲ ಗಿರೀಶ್ ಭಾರದ್ವಾಜ್ ಪೊಲೀಸರ ಕೃತ್ಯವನ್ನು ಕೋರ್ಟ್ ಗಮನಕ್ಕೆ ತಂದರು. ಹೀಗೆ ವೈಟ್ ಫೀಲ್ಡ್ ಪೊಲೀಸರ ಮೇಲಿನ ಸಾಲು ಸಾಲು ಆರೋಪಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಪೊಲೀಸರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಇಂದು ಖುದ್ದಾಗಿ ಹಾಜರಾಗುವಂತೆ ತನಿಖಾಧಿಕಾರಿ, ಎಸಿಪಿ ಹಾಗೂ ಡಿಸಿಪಿಗೆ ಸೂಚನೆ ನೀಡಿತ್ತು. ಅದರಂತೆ ಇಂದು ಡಿಸಿಪಿ ಸೈದುಲು ಅಡಾವತ್, ಎಸಿಪಿ ರೀನಾ ಸುವರ್ಣ ಹಾಗೂ ತನಿಖಾಧಿಕಾರಿ ಖುದ್ದಾಗಿ ಹಾಜರಾಗಿದ್ದರು. ಈ ವೇಳೆ ಕ್ಲಾಸ್ ತೆಗೆದುಕೊಂಡಿದೆ.

ಇದನ್ನೂ ಓದಿ: ಯಾವುದೇ ಕಾರಣಗಳಿಲ್ಲದಿದ್ದರೂ ಬಂಧಿಸುವ ಚಾಳಿ ಶುರುವಾಗಿದೆ: ಪೊಲೀಸರಿಗೆ ಹೈಕೋರ್ಟ್ ಕ್ಲಾಸ್

ಡಿಸಿಪಿಗೆ ನ್ಯಾ.ನಾಗಪ್ರಸನ್ನ ಪ್ರಶ್ನೆ: ಏನು ಮಿ. ಡಿಸಿಪಿ ನಿಮ್ಮ ವೈಟ್ ಫೀಲ್ಡ್ ಠಾಣೆಯಲ್ಲಿ ಏನಾಗುತ್ತಿದೆ. ನಿಮ್ಮ ಠಾಣೆಯ ಸಮಸ್ಯೆ ಏನು. ನಿಮ್ಮ ಪೊಲೀಸರು ಕಾನೂನಿನ ಆಡಳಿತಕ್ಕೆ ಒಳಪಟ್ಟಿಲ್ಲವೇ. ನೀವು ಪೊಲೀಸ್ ಠಾಣೆಯನ್ನು ಹೀಗಾ ನಿರ್ವಹಿಸುವುದು? ನಿಮ್ಮ ಠಾಣೆಯಲ್ಲಿ ಕರೆಂಟ್ ಇಲ್ಲದೇ? ಸಿಸಿ ಟಿವಿಯೂ ಕೆಲಸ ಮಾಡುವುದಿಲ್ಲ. ನಿಮ್ಮ ಚಟುವಟಿಕೆಗಳೇ ಅಂಧಕಾರದಲ್ಲಿವೆ. ವೈಟ್ ಫೀಲ್ಡ್ ಠಾಣೆಯನ್ನು ಡಾರ್ಕ್ ಫೀಲ್ಡ್ ಎಂದು ಬದಲಿಸುವುದು ಸೂಕ್ತ. ಉಡುಪಿಗೆ ಹೋಗಿ ಮೋಹನ್ ಗೌಡ ವಶಕ್ಕೆ ಪಡೆದಿದ್ದೇಕೆ. ನಿಮ್ಮ ಮೇಲೆ ಇಲಾಖಾ ತನಿಖೆ ನಡೆಸಲು ಆದೇಶಿಸಲಾಗುವುದು. ಬೆಳಗಿನ ಜಾವ 2 ಗಂಟೆಗೆ ಎಫ್ಐಆರ್ ಮಾಡಿ ವಶಕ್ಕೆ ಪಡೆದಿದ್ದೇಕೆ?

ಡಿಸಿಪಿ ಪ್ರತಿಕ್ರಿಯೆ: ಆರೋಪಿ ಹಲವು ಟ್ವೀಟ್ ಗಳನ್ನು ಮಾಡಿದ್ದರು. ನಾವು ಅರೆಸ್ಟ್ ಮಾಡಿರಲಿಲ್ಲ, ಫೋನ್ ಮಾಡಿದರೂ ತೆಗೆಯಲಿಲ್ಲ. ಅವರ ಕಾರಿನಲ್ಲೇ‌ ಬಂದರು. ಹೇಳಿಕೆ ಪಡೆದು ಬಿಟ್ಟಿದ್ದೇವೆ.

ನ್ಯಾ.ನಾಗಪ್ರಸನ್ನ: ನೀವು ಕರೆತಂದಿದ್ದು ಕಾಫಿ ಕುಡಿಯೋಕಾ?‌ ಅವರು ಟ್ವೀಟ್ ಮಾಡಿದರೆ ಏನಾಯ್ತು. ನಿಮಗೆ ಸುಪ್ರೀಂ ಕೋರ್ಟ್ ಆದೇಶ ಗೊತ್ತಿದೆಯಾ ಇಲ್ಲವಾ? ಡಿಜಿ, ಐಜಿ ಮೂಗಿನ ಕೆಳಗೆ ಇಂಥದ್ದೆಲ್ಲಾ ನಡೆಯುತ್ತಿದೆ. ಅವರು ಏನು ಮಾಡುತ್ತಿದ್ದಾರೆ. ತಪ್ಪು ಮಾಡಿಯೂ ಇಂತಹ ಅಧಿಕಾರಿಗಳು ಅದೇ ಜಾಗದಲ್ಲಿದ್ದಾರೆ. ಮಿ.ಡಿಸಿಪಿ ನೀವು ಪೊಲೀಸರಾದರೆ ಏನು ಬೇಕಾದರೂ ಮಾಡಬಹುದಾ. ನೀವು ಯೂನಿಫಾರ್ಮ್ ನಲ್ಲಿದ್ದ ಮಾತ್ರಕ್ಕೆ ಜನರ ಸ್ವಾತಂತ್ರ್ಯ ಕಸಿಯಲಾಗದು. ನೋಟಿಸ್ ಕೊಟ್ಟ ಮೇಲೆ ಸಮಯವೇಕೆ ಕೊಟ್ಟಿಲ್ಲ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದರು.

ಇನ್ನು ಠಾಣೆ ಪವಿತ್ರ ಸ್ಥಳವೆಂದು ಸ್ವ ಇಚ್ಚೆಯಿಂದ ಬರುತ್ತಾರಾ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಪೊಲೀಸರು ಪಾಲಿಸುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಕೇಸ್ ಹಾಕಿದ್ದೀರಾ. ಯಾರೂ ದೂರು ನೀಡದಿದ್ದರೂ ಕಾನ್ಸ್ ಟೇಬಲ್ ದೂರು ದಾಖಲಿಸಿದ್ದಾರೆ. ಕೋಮು ಸಾಮರಸ್ಯಕ್ಕೆ ಧಕ್ಕೆ ಎಂದು ಊಹೆ ಮಾಡಿಕೊಂಡು ಕೇಸ್ ದಾಖಲಿಸಿದ್ದಾರೆ. ಡಿಜಿ ಐಜಿ ಗೆ ಠಾಣೆಗಳಲ್ಲಿ ಏನಾಗುತ್ತಿದೆ ತಿಳಿದಿರಬೇಕು. ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲಿಸಲು ಕ್ರಮ ಕೈಗೊಳ್ಳಬೇಕು. ಸಂವಿಧಾನದ ಅಡಿಯಲ್ಲಿ ಪೊಲೀಸರು ಕೆಲಸ ಮಾಡಬೇಕು. ತಾವೇ ಕಾನೂನಿನೆಂದು ಪೊಲೀಸರು ಭಾವಿಸಬಾರದು. ಬಂಧಿಸುವ ಅಧಿಕಾರವನ್ನು ಇಚ್ಚೆ ಬಂದಂತೆ ಬಳಸಬಾರದು ಎಂದು ಖಡಕ್ ಆಗಿ ಸೂಚಿಸಿದರು.

ಕಾನೂನು ಉಲ್ಲಂಘಿಸಿದವರ ವಿರುದ್ಧ ಇಲಾಖಾ ತನಿಖೆ ನಡೆಸಬೇಕು. ಡಿಜಿಐಜಿ ಈ ಬಗ್ಗೆ ಸುತ್ತೋಲೆ ಹೊರಡಿಸಬೇಕು. ವೈಟ್ ಫೀಲ್ಡ್ ಠಾಣೆಯನ್ನು ಡಾರ್ಕ್ ಫೀಲ್ಡ್ ಠಾಣೆ ಎಂದು ಬದಲಿಸಿ. ಯಾರೋ ಹೇಳಿದರೆಂದು ಪೊಲೀಸರು ಕೇಸ್ ದಾಖಲಿಸುವುದಲ್ಲ. ನೀವು ಪೊಲೀಸರಾದರೂ ಕಾನೂನಿಗಿಂತ ಮಿಗಿಲಲ್ಲ ಎಂದು ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ವಿಚಾರಣೆಯನ್ನು ಸೆ.25 ಕ್ಕೆ ಮುಂದೂಡಿದೆ. ಅಷ್ಟರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪೊಲೀಸ್ ಠಾಣೆಗಳಿಗೆ ಅರಿವು ಮೂಡಿಸುವಂತೆ ಸೂಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್​ ಎಮ್​.
ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More