ಕಲಬುರಗಿ: ಮದುವೆ (Marriage) ಮೆರವಣಿಗೆಯಲ್ಲಿ ನೃತ್ಯ (Dance) ಮಾಡುತ್ತಿದ್ದವರ ಮೇಲೆ ಡಿಜೆ ಇದ್ದ ಮಿನಿಲಾರಿ ಹರಿದು ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಗಡಿ ಭಾಗದಲ್ಲಿ ನಡೆದಿದೆ. ಘಟನೆಯಲ್ಲಿ ಹತ್ತಕ್ಕೂ ಅಧಿಕ ಜನರು ಗಾಯಗೊಂಡಿದ್ದು, ನಾಲ್ಕು ದಿನದ ಹಿಂದೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತೆಲಂಗಾಣ- ಕರ್ನಾಟಕ ಗಡಿಭಾಗ ಸೇಡಂ ತಾಲೂಕಿನ ಕಡತಾಲ ತಾಂಡಾದಲ್ಲಿ ಕಳೆದ ಬುಧವಾರ ರಾತ್ರಿ ಇಂತಹದೊಂದು ದುರಂತ ನಡೆದಿದೆ.
ಮದನಾ ತಾಂಡದ ವಧು ಹಾಗೂ ಕಡತಾಲ ತಾಂಡಾದ ವರನ ಮದುವೆ ಗುರುವಾರ ಕಡತಾಲ ತಾಂಡಾದಲ್ಲಿ ನಡೆಯಬೇಕಾಗಿತ್ತು. ಮದುವೆಯ ಹಿಂದಿನ ದಿನ ಮದುಮಗಳನ್ನ ಕಡತಾಲ ತಾಂಡಾಕ್ಕೆ ಕರೆದುಕೊಂಡು ಬರಲಾಗಿತ್ತು. ಮದುಮಗಳನ್ನ ಸ್ವಾಗತಿಸಲು ತೆಲಂಗಾಣದಿಂದ ತರಿಸಲಾಗಿದ್ದ ಡಿಜೆ ಜೊತೆ ರಾತ್ರಿ ಮೆರವಣಿಗೆ ಮಾಡಲಾಗುತ್ತಿತ್ತು. ಬೇರೆ ಊರುಗಳಿಂದ ಆಗಮಿಸಿದ್ದ ಸಂಬಂಧಿಕರು ಕುಣಿದು ಸಂಭ್ರಮಿಸುವಾಗ ಡಿಜೆಯಿದ್ದ ಮಿನಿಲಾರಿ ಏಕಾಏಕಿ ಜನರ ಮೇಲೆ ಹರಿದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಹತ್ತಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸೇಡಂ ತಾಲೂಕಿನ ಮೇದಕ ತಾಂಡಾದ ಸುಗಣಾಬಾಯಿ ಚೌವ್ಹಾಣ (40), ತೆಲಂಗಾಣದ ದುಂಕುಡನಾಯಕ ತಾಂಡಾದ ವಿಜ್ಜಿಬಾಯಿ ರಾಥೋಡ್ (30), ಕುಮಾರನಾಯಕ ರಾಥೋಡ್ (35) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಮುದೋಳ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಡಿಜೆ ಹಾಗೂ ಜನರೇಟರ್ ಇಡಲಾಗಿದ್ದ ಮಿನಿಲಾರಿಯನ್ನ ವಶಕ್ಕೆ ಪಡೆದಿದ್ದಾರೆ.
ಅಪಘಾತ ತಪ್ಪಿಸಲು ಹೋಗಿ 2 ವಾಹನಗಳಿಗೆ ಡಿಕ್ಕಿ ಹೊಡೆದ ಬೈಕ್:
ಬೆಳಗಾವಿ: ಅಪಘಾತ ತಪ್ಪಿಸಲು ಹೋಗಿ ಬೈಕ್ 2 ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ಘಟನೆ ಬೆಳಗಾವಿ ತಾಲೂಕಿನ ಸುತಗಟ್ಟಿ ಗ್ರಾಮದ ಬಳಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಮೂವರಿಗೆ ಗಂಭೀರ ಗಾಯವಾಗಿದೆ. ಮೂವರು ಗಾಯಾಳುಗಳಿಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ
ಮೈಸೂರಿನಲ್ಲಿ ಭಾರಿ ಮಳೆ; ಸೂರಿಲ್ಲದೆ ನಿವಾಸಿಗಳ ಪರದಾಟ, ಅಪಾರ ಪ್ರಮಾಣದ ಹಾನಿ
Published On - 9:17 am, Sun, 8 May 22