ಕಲಬುರಗಿ: ತಾಳಿ ಕಟ್ಟಿದ ಪತ್ನಿ(Wife) ಬೇರೆಯವರ ಜೊತೆ ಅಕ್ರಮ ಸಂಬಂಧ ಬೆಳಸಿದ್ದರೆ ಗಂಡ(Husband) ಆಕೆಯೊಂದಿಗೆ ಸಂಬಂಧ ಕಡಿಗೊಳಿಸಿ ಹಾಗೂ ಪ್ರಾಣ ತೆಗೆದ ಸಾಕಷ್ಟು ಉದಾಹರಣೆಗಳು ಇವೆ. ಅಲ್ಲದೇ ಅಕ್ರಮ ಸಂಬಂಧ ವಿಚಾರವಾಗಿ ಪತಿ ಪತ್ನಿಯ ಸಂಬಂಧಗಳು ಬಿರುಕು ಬಿಟ್ಟಿರುವ ಅನೇಕ ಉದಾಹರಣೆಗಳಿವೆ. ಆದರೆ ಇದು ಅದಕ್ಕೆ ವಿಭಿನ್ನವಾದ ಪ್ರಕರಣ. ಸ್ವತ ಪತಿಯೇ ತನ್ನ ಪತ್ನಿಯನ್ನು ಒತ್ತಾಯ ಪೂರ್ವಕವಾಗಿ ವೇಶ್ಯಾವೃತ್ತಿ(prostitution) ದಂಧೆಗೆ ದೂಡಿದ್ದಾನೆ. ಬಳಿಕ ಸಾಕಷ್ಟು ಮಾಡಿಕೊಂಡು ಇದೀಗ ಪತ್ನಿಯಿಂದ ಮರ್ಯಾದೆ ಹೋಗುತ್ತದೆ ಎಂದು ಆಕೆಯನ್ನು ಮನೆಯಿಂದ ಆಚೆ ಹಾಕಿದ್ದಾನೆ. ಇದೀಗ ಮಹಿಳೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಇದನ್ನೂ ಓದಿ: Viral News: ಪ್ರೀತಿಗಾಗಿ ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ; ಆದರೂ ಕೈ ಕೊಟ್ಟಳು ಗೆಳತಿ!
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದರ ಭಾಗ್ಯಶ್ರೀ ಎನ್ನುವ ಮಹಿಳೆಯ ವಿವಾಹ 2010 ರಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗ್ರಾಮವೊಂದರ ಮಲ್ಲಿನಾಥ್ ಜೊತೆಯಾಗಿತ್ತು. ಮಲ್ಲಿನಾಥ್, ಗ್ರಾಮದಲ್ಲಿ ಪುಟ್ಟ ಕಿರಾಣಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ. ಸಿರಿತನ ಇಲ್ಲದಿದ್ದರು ಕೂಡಾ ತುತ್ತು ಅನ್ನಕ್ಕೆ ಕೊರತೆ ಇರಲಿಲ್ಲ. ಹಾಗಂತ ಭಾಗ್ಯಶ್ರೀ ಕೂಡಾ ಸುಖದ ಜೀವನ ಬಯಸಿರಲಿಲ್ಲ. ದಂಪತಿಗ ಮದುವೆಯಾದ ಎರಡು ವರ್ಷದಲ್ಲಿ ಮಗಳು ಹುಟ್ಟಿದ್ದಳು. ಆದರೆ ಹುಟ್ಟಿದ್ದ ಮಗು, ಬುದ್ದಿಮಾಂದ್ಯವಾಗಿತ್ತು. ಯಾವಾಗ ಬುದ್ದಿಮಾಂದ್ಯ ಮಗಳು ಹುಟ್ಟಿದಳೋ, ಆಗ ಪತಿಯ ವರಸೆ ಕೂಡಾ ಬದಲಾಗಿತ್ತು. ದುಡಿದು ತಿನ್ನೋಣ, ನನ್ನ ಜೊತೆ ನೀನು ಗಟ್ಟಿಯಾಗಿ ಇರು ಅಂತ ಪತಿ ಪತ್ನಿಗೆ ಹೇಳುವ ಬದಲು, ದುಡಿದು ತಿನ್ನೋದು ಬೇಡಾ, ದೇಹ ಮಾರಿಕೋ ಅಂತ ಹೇಳಿದ್ದ.
ಹೌದು…. ಮಲ್ಲಿನಾಥನಿಗೆ ತನ್ನ ಪತ್ನಿಯ ಸಂದೌರ್ಯವನ್ನೇ ತನ್ನ ಬಂಡವಾಳ ಮಾಡಿಕೊಂಡಿದ್ದ. ಹೀಗಾಗಿ ನೀನು ನೋಡಲು ಚೆನ್ನಾಗಿದ್ದೀಯಾ. ಹುಟ್ಟಿದ ಮೇಲೆ ಎಲ್ಲರು ಸಾಯಲೇಬೇಕು. ಹೀಗಾಗಿ ನೀನು ವೇಶ್ಯಾವೃತ್ತಿ ದಂಧೆಯನ್ನು ಮಾಡು ಎಂದು ಹೇಳಿದ್ದ. ಇದಕ್ಕೆ ಪತ್ನಿ ತೀರ್ವವಾಗಿ ವಿರೋಧಿಸಿದ್ದಳು. ಆದರೆ ದುರುಳ ಪತಿ, ನೀನು ನಾನು ಹೇಳಿದಂತೆ ಕೇಳದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದನಂತೆ. ಬುದ್ದಿಮಾಂದ್ಯ ಮಗಳಿದ್ದಾಳೆ. ನಾವು ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಹಣ ಗಳಿಸಬೇಕು. ನಾವು ದುಡಿದರೆ ಹಣ ಗಳಿಸಲು ಆಗಲ್ಲ. ನೀನು ವೇಶ್ಯಾವೃತ್ತಿ ಮಾಡಿದರೆ ಸುಲಭವಾಗಿ ಹಣ ಗಳಿಸಬಹುದು ಎಂದು ಹೇಳಿದ್ದ. ದಿಕ್ಕು ತೋಚದಂತಾದ ಪತ್ನಿ, ಪತಿಯ ಆದೇಶಕ್ಕೆ ಸಮ್ಮತಿ ನೀಡಿದ್ದಳು.
ಇನ್ನು ಒತ್ತಾಯಪೂರ್ವಕವಾಗಿ ಪತ್ನಿಯನ್ನೇ ವೇಶ್ಯಾವೃತ್ತಿ ದಂಧೆಗೆ ದೂಡಿದ್ದ ಪತಿ, ಮುಂದೆ ತಾನೇ ಮನೆಗೆ ಗಿರಾಕಿಗಳನ್ನು ಕರೆದುಕೊಂಡು ಬರಲು ಆರಂಭಿಸಿದೆ. ಅಧಿಕಾರಿಗಳು, ಗುತ್ತಿಗೆದಾರರು ಸೇರಿದಂತೆ ಅನೇಕರನ್ನು ತಾನೇ ಕರೆದುಕೊಂಡು ಬಂದು ಮನೆಯಲ್ಲಿ ಬಿಟ್ಟು, ತಾನು ಹೊರಗಡೆ ಇರ್ತಿದ್ದನಂತೆ. ಅನೇಕರ ಮನೆಗೆ ತಾನೇ ಪತ್ನಿಯನ್ನು ಕಾರ್ ನಲ್ಲಿ ಕಳುಹಿಸುತ್ತಿದ್ದನಂತೆ. ಹೀಗೆ ಅನೇಕ ವರ್ಷಗಳ ಕಾಲ ಪತ್ನಿಯನ್ನು ವೇಶ್ಯಯನ್ನಾಗಿ ಪತಿ ದುಡಿಸಿದ್ದ. ಇದರ ನಡುವೆ ಮತ್ತೆ ಮೂರು ಮಕ್ಕಳು ಕೂಡಾ ಹುಟ್ಟಿದ್ದವು. ಒಟ್ಟು ನಾಲ್ಕು ಮಕ್ಕಳ ತಾಯಿಯನ್ನು ಪತಿ, ತನ್ನ ಹಣದ ಆಮಿಷಕ್ಕೆ ಬಳಿಸಿಕೊಂಡಿದ್ದ. ರುತುಸ್ರಾವವಾದ್ರು ಕೂಡಾ, ಬಿಡದೇ, ಗಿರಾಕಿಗಳನ್ನು ಹುಡುಕಿ, ಪತ್ನಿಯನ್ನು ದಂಧೆಗೆ ಕಳುಹಿಸುತ್ತಿದ್ದನಂತೆ. ಇನ್ನು ತನ್ನ ಸಂಬಂಧಿಯನ್ನು ಕೂಡಾ ಮನೆಯಲ್ಲಿ ತಂದು ಬಿಟ್ಟಿದ್ದನಂತೆ.
ಪತ್ನಿಯನ್ನೇ ಮುಂದೆ ಬಿಟ್ಟು ದಂಧೆ ನಡೆಸಿದ್ದ ಪತಿ, ಸಾಕಷ್ಟು ಹಣ ಸಂಪಾದಿಸಿದ್ದನಂತೆ. ಹಣ ಹೆಚ್ಚಾಗುತ್ತಿದ್ದಂತೆ, ಮರಳು ಗಣಿಗಾರಿಕೆ, ಗುತ್ತಿಗೆದಾರ ಕೆಲಸ ಮಾಡಿ, ಕೋಟ್ಯಂತರ ರೂಪಾಯಿ ಹಣ ಸಂಪಾದಿಸಿದ್ದಾನಂತೆ. ಇತ್ತ ಹಣ ಹೆಚ್ಚಾಗುತ್ತಿದ್ದಂತೆ ಪತಿಯ ಸ್ಥಾನಮಾನ ಕೂಡಾ ಬದಲಾಗಿದ್ದವಂತೆ. ಹೀಗಾಗಿ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದನಂತೆ. ನಿನ್ನಿಂದ ನನ್ನ ಗೌರವ ಹಾಳಾಗುತ್ತಿದೆ. ನೀನು ವೇಶ್ಯಾವೃತ್ತಿ ದಂಧೆ ಮಾಡ್ತಿಯಾ, ಅನೇಕರ ಜೊತೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಹೇಳಿ ಮನೆಯಿಂದ ಹೊರಹಾಕಿದ್ದಾನಂತೆ.
ಒಂದು ಬುದ್ದಿಮಾಂದ್ಯ ಮಗಳು ಸೇರಿ ನಾಲ್ವರು ಮಕ್ಕಳನ್ನು ಕರೆದುಕೊಂಡು ಇದೀಗ ಮಹಿಳೆ, ಜೀವನ ನಡೆಸಲು ಪರದಾಡುತ್ತಿದ್ದಾಳೆ. ಕೋಟಿ ಕೋಟಿ ಸಂಪಾದಿಸಿರುವ ಪತಿ, ಬಿಡಿಗಾಸು ನೀಡದೆ ಹೊರಗೆ ಹಾಕಿದ್ದರಿಂದ ಜೀವನ ನಡೆಸಲು ಕೂಡಾ ಪರಾಡುತ್ತಿದ್ದಾಳೆ. ಈ ಬಗ್ಗೆ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ದ ದೂರು ಕೂಡಾ ದಾಖಲಿಸಿದ್ದಾಳೆ. ಆದರೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದಾನೆ. ಆತ ಎಲ್ಲಿದ್ದಾನೆ ಅಂತ ಹುಡುಕುವ ಕೆಲಸವನ್ನು ಕೂಡಾ ಪೊಲೀಸರು ಸರಿಯಾಗಿ ಮಾಡ್ತಿಲ್ಲವಂತೆ. ಹೀಗಾಗಿ ಮಹಿಳೆ ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ.
ತನ್ನನ್ನು ಒತ್ತಾಯಪೂರ್ಕವಾಗಿ ವೇಶ್ಯಾವೃತ್ತಿ ದಂಧೆಗೆ ದೂಡಿದ ಪತಿ, ತಾನೇ ಗಿರಾಕಿಗಳನ್ನು ಕರೆದುಕೊಂಡು ಬಂದು ಹಣ ಸಂಪಾದಿಸಿದ್ದಾನೆ. ನನಗೆ ಬಿಡಿಗಾಸು ನೀಡಿಲ್ಲ. ಇದೀಗ ಪತ್ನಿ ಮಕ್ಕಳನ್ನು ಕೂಡಾ ಕೈ ಬಿಟ್ಟಿದ್ದಾನೆ. ಕೋಟಿ ಕೋಟಿ ಹಣವಿದ್ರು, ನಮ್ಮನ್ನು ನಡು ನೀರಲ್ಲಿ ಕೈ ಬಿಟ್ಟಿದ್ದಾನೆ. ದಯವಿಟ್ಟು ನನಗೆ ನ್ಯಾಯ ದೊರಕಿಸಿ ಕೊಡಬೇಕು. ನಾನು ಮತ್ತು ಮಕ್ಕಳು ಜೀವನ ನಡೆಸಲು ಪರದಾಡುತ್ತಿದ್ದೇವೆ ಅಂತಿದ್ದಾಳೆ ನೊಂದ ಮಹಿಳೆ ಭಾಗ್ಯಶ್ರೀ.
ವರದಿ: ಸಂಜಯ್ ಚಿಕ್ಕಮಠ, ಟಿವಿ9 ಕಲಬುರಗಿ.