
ಕಲಬುರಗಿ, ಜುಲೈ 3: ಕಲಬುರಗಿ (Kalaburagi) ತಾಲೂಕಿನ ಕೆಸರಟಗಿ ಗ್ರಾಮದಲ್ಲಿ ಬಡ ಜನರಿಗೆ ಸೂರಿಲ್ಲದ ಕಾರಣ ಸ್ಲಂ (Slum Board) ಬೋರ್ಡ್ 52 ಮನೆಗಳನ್ನು ಮಂಜೂರು ಮಾಡಿತ್ತು. ಆದರೆ ಸ್ಲಂ ಬೋರ್ಡ್ ಅಧಿಕಾರಿಗಳು ನೈಜ ಫಲಾನುಭವಿಗಳಿಗೆ ಮನೆಗಳನ್ನು ನೀಡುವುದರ ಬದಲು ಹಣ ಪಡೆದು ಉಳ್ಳವರಿಗೆ ಮನೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಸ್ಲಂ ಬೋರ್ಡ್ ಕಚೇರಿ ಮುಂದೆ ಬುಧವಾರ ಫಲಾನುಭವಿಗಳು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಅಂದಹಾಗೆ, ಫಲಾನುಭವಿಗಳಿಗೆ ಮನೆಗಳು ಸಿಗದೇ ಇರುವುದರಿಂದ ಮತ್ತು ಹಕ್ಕು ಪತ್ರ ನೀಡದಿರುವುದರಿಂದ 15 ವರ್ಷಗಳಿಂದ ಕೆಸರಟಗಿ ಬಳಿಯಿರುವ ಸ್ಲಂ ಬೋರ್ಡ್ ಮನೆಗಳಲ್ಲಿ ಅಕ್ರಮವಾಗಿ ವಾಸ ಮಾಡುತ್ತಿದ್ದಾರೆ. ಕಾರಣ ಇಷ್ಟೇ, ಸದ್ಯ ಇರುವ 52 ಮನೆಗಳನ್ನ ಉಳ್ಳವರಿಗೆ ಮಾರಾಟ ಮಾಡಿರುವುದು. ಮನೆ ಹಕ್ಕು ಪತ್ರ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆಂದು ನೈಜ ಫಲಾನುಭವಿಗಳು ಆಕ್ರೋಶ ಹೊರಹಾಕಿದ್ದಾರೆ.
ಕಲಬುರಗಿ ನಗರದ ಹೊರವಲಯದ ಕೆಸರಟಗಿ ಬಳಿಯಿರುವ 52 ಸ್ಲಂ ಬೋರ್ಡ್ ಮನೆಗಳನ್ನು 15-20 ವರ್ಷಗಳ ಹಿಂದೆಯೇ ಕಟ್ಟಲಾಗಿದೆ. ಸದ್ಯ ಆ ಮನೆಗಳು ಸಂಪೂರ್ಣ ಶಿಥಿಲವಸ್ಥೆಗೆ ತಲುಪಿದ್ದು, ಕುಸಿದುಬೀಳುವ ಹಂತದಲ್ಲಿವೆ. ಕೆಸರಟಗಿ ಬಳಿಯಿರುವ 52 ಮನೆಗಳ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿ ಕಳೆದ ಅನೇಕ ವರ್ಷಗಳಿಂದ ನಿವಾಸಿಗಳು ಸ್ಲಂ ಬೋರ್ಡ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಶಾಸಕರು ಸೇರಿದಂತೆ ಸಾಕಷ್ಟು ಕಡೆ ಅಲೆದಾಡಿದ್ದಾರೆ. ಆದರೂ ಇದುವರೆಗೆ ಈ ಬಡ ಜನರಿಗೆ ಹಕ್ಕು ಪತ್ರ ಮಾತ್ರ ಸಿಕ್ಕಿಲ್ಲ.
ಇದನ್ನೂ ಓದಿ: ಕಲಬುರಗಿಯಲ್ಲಿ ಅಸ್ಪಶ್ಯತೆ ಇನ್ನೂ ಜೀವಂತ? ದಲಿತರು ಎನ್ನುವ ಕಾರಣಕ್ಕೆ ಕಟಿಂಗ್ ನಿರಾಕರಣೆ
ದುಡ್ಡು ಕೊಟ್ಟರೆ ಮಾತ್ರ ವಸತಿ ಇಲಾಖೆ ಮನೆ ಕೊಡುತ್ತದೆಯೆಂಬ ಆಳಂದ ಶಾಸಕ ಬಿಆರ್ ಪಾಟೀಲ್ ಆರೋಪಕ್ಕೆ ಜಿಲ್ಲೆಯಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತಿವೆ. ಇದು ವಸತಿ ಇಲಾಖೆಯಲ್ಲಿ ಲೆಕ್ಕವಿಲ್ಲದಷ್ಟು ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದನ್ನು ಪುಷ್ಟೀಕರಿಸಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ನೈಜ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿ, ಶಿಥಿಲಗೊಂಡ ಮನೆಗಳ ದುರಸ್ತಿ ಕಾರ್ಯಕ್ಕೆ ಮುಂದಾಗುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.