357 ಬ್ಯಾಂಕ್ ಖಾತೆ ಸೈಬರ್ ವಂಚಕರಿಗೆ ಮಾರಾಟ ಮಾಡಿದ್ದ ಬೆಂಗಳೂರಿನ ಗ್ಯಾಂಗ್ ಪತ್ತೆ
ಕರ್ನಾಟಕ ಸರ್ಕಾರವು ಸೈಬರ್ ಕ್ರೈಂ ಅನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಪಣ ತೊಟ್ಟಿದೆ. ಅದರಲ್ಲಂತು, ಬೆಂಗಳೂರು ಪೊಲೀಸರು ಸೈಬರ್ ವಂಚಕರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಇದೀಗ, ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ಅತಿದೊಡ್ಡ ಸೈಬರ್ ವಂಚರಕ ಗ್ಯಾಂಗ್ ಪತ್ತೆ ಹಚ್ಚಿದ್ದಾರೆ.

ಬೆಂಗಳೂರು, ಜುಲೈ 02: ಸಂಪೂರ್ಣ ಸೈಬರ್ ಕ್ರೈಮ್ (Cyber Crime) ಆಪರೇಟ್ ಆಗುವುದು ದುಬೈ, ಚೈನಾ, ಕಾಂಬೋಡಿಯಾ ಮತ್ತು ಥೈವಾನ್ನಂತಹ ದೇಶದಿಂದ. ಆದರೆ, ವಿದೇಶದಲ್ಲಿ ಕುಳಿತಿರುವ ಸೈಬರ್ ವಂಚಕರು ಭಾರತಿಯ ಬ್ಯಾಂಕ್ ಖಾತೆಗಳ ಮೂಲಕ ವಂಚನೆ ಮಾಡುತ್ತಿದ್ದಾರೆ. ಅದರಲ್ಲೂ ಕೋಟ್ಯಾಂತರ ರೂ. ವಹಿವಾಟು ಮಾಡಬೇಕು ಅಂತ ಕರೆಂಟ್ ಅಕೌಂಟ್ಗಳನ್ನು ಬಳಸುತ್ತಿದ್ದಾರೆ. ಈ ಸೈಬರ್ ವಂಚಕರ ಹಣದ ವಹಿವಾಟಿಗೆ ಬ್ಯಾಂಕ್ ಖಾತೆಗಳನ್ನು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಪತ್ತೆಯಾಗಿದೆ. ಬ್ಯಾಂಕ್ ಖಾತೆಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಸುನಿಲ್, ಪ್ರಕಾಶ್, ಲಕ್ಷ್ಮೀಷ ಮತ್ತು ಪುಟ್ಟಸ್ವಾಮಯ್ಯ ಎಂಬುವರನ್ನು ಸಿಸಿಬಿ ಬಂಧಿಸಿದೆ. ಆರೋಪಿಗಳು ಬೆಂಗಳೂರು (Bengaluru) ಹಾಗೂ ಬೆಂಗಳೂರು ಗ್ರಾಮಾಂತರ ನಿವಾಸಿಗಳು ಎಂದು ತಿಳಿದು ಬಂದಿದೆ.
ಈ ಆರೋಪಿಗಳಿಗೆ, ವಿದೇಶದಲ್ಲಿರುವ ಸೈಬರ್ ವಂಚಕರ ಲಿಂಕ್ ಇದೆ. ಇದೇ ಕಾರಣಕ್ಕೆ ಆರೋಪಿಗಳು ಬೆಂಗಳೂರು, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರದಲ್ಲಿರುವ ಕೂಲಿ ಕಾರ್ಮಿಕರು, ಸ್ಲಂ ನಿವಾಸಿಗಳಿಗೆ 5 ಸಾವಿರ ಹಣ ನೀಡಿ ಅವರ ಆಧಾರ್ ಕಾರ್ಡ್ ಬಳಸಿ ಒಂದು ಸಿಮ್ ಕಾರ್ಡ್ ಮತ್ತು ಸಣ್ಣ ಕೈಗಾರಿಕಾ ಉದ್ಯಮಿಗಳು ಎನ್ನುವ ದಾಖಲಾತಿಗಳನ್ನು ಸೃಷ್ಟಿ ಮಾಡಿಕೊಳ್ಳುತಿದ್ದರು.
ಬಳಿಕ ಈ ದಾಖಲೆಗಳನ್ನು ಬಳಸಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕರೆಂಟ್ ಅಕೌಂಟ್ ತೆರೆಯುತಿದ್ದರು. ನಂತರ ಬ್ಯಾಂಕ್ ಖಾತೆ ಮತ್ತು ಲಿಂಕ್ ಆಗಿರುವ ಸಿಮ್ಕಾರ್ಡ್ಗಳನ್ನು ವಂಚಕರಿಗೆ ಕೊಡುತ್ತಿದ್ದರು. ಒಂದೊಂದು ಖಾತೆಯನ್ನು 50 ಸಾವಿರ ರೂ.ಗೆ ಸೈಬರ್ ವಂಚಕರಿಗೆ ಮಾರಾಟ ಮಾಡುತ್ತಿದ್ದರು. ಈ ಗ್ಯಾಂಗ್ ಇದುವರೆಗೆ 357 ಬ್ಯಾಂಕ್ ಖಾತೆಗಳನ್ನು ಮಾರಾಟ ಮಾಡಿದೆ. ಈ ಬ್ಯಾಂಕ್ ಖಾತೆಗಳಿಂದ ಸೈಬರ್ ವಂಚಕರು 150 ಕೋಟಿ ರೂ. ವಹಿವಾಟು ನಡೆಸಿದ್ದಾರೆ. ಬ್ಯಾಂಕ್ ಖಾತೆ ತೆರೆಯವುದರ ಹಿಂದೆ ಕೆಲವು ಬ್ಯಾಂಕ್ ಸಿಬ್ಬಂದಿ ಮತ್ತು ಮ್ಯಾನೇಜರ್ಗಳ ಕೈವಾಡವೂ ಇದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಟನಲ್ ರಸ್ತೆ, ವಾಹನ ಸವಾರರಿಗೆ ದುಬಾರಿ ಟೋಲ್ ಬರೆ!
ಸೈಬರ್ ವಂಚಕರು ವಂಚನೆ ಮಾಡಿದ್ದ ಹಣದಲ್ಲಿ ಶೇ 30 ರಷ್ಟು ಹಣವನ್ನು ಭಾರತದಲ್ಲಿ ವೆಚ್ಚಮಾಡಿದ್ದಾರೆ. ಉಳಿದ 70 ರಷ್ಟು ಹಣವನ್ನು ಹವಾಲ ಮೂಲಕ ತರಸಿಕೊಳ್ಳುತ್ತಿದ್ದಾರೆ ಎಂಬ ಅಂಶ ತನಿಖೆ ವೇಳೆ ತಿಳಿದುಬಂದಿದೆ. ಸದ್ಯ ಪ್ರಕರಣದ ತನಿಖೆಯನ್ನು ಸಿಸಿಬಿಯ ಸೈಬರ್ ಕ್ರೈಮ್ ಪೊಲೀಸರು ನಡೆಸುತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:08 pm, Wed, 2 July 25







