ಬೈಕ್ ಟ್ಯಾಕ್ಸಿಯಿಂದ ಮಹಿಳಾ ಪ್ರಯಾಣಿಕರಿಗೆ ಅನುಕೂಲ: ಕೋರ್ಟ್ನಲ್ಲಿ ಏನೇನಾಯ್ತು?
ಕರ್ನಾಟಕದಲ್ಲಿ ಓಲಾ, ಉಬರ್ ಮತ್ತು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧದ ವಿರುದ್ಧ ಮಹಿಳಾ ಪ್ರಯಾಣಿಕರು ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಬೈಕ್ ಟ್ಯಾಕ್ಸಿ ಸುರಕ್ಷಿತ ಮತ್ತು ಅನುಕೂಲಕರ ಎಂದು ವಾದಿಸಲಾಗಿದೆ. ಹೈಕೋರ್ಟ್ ಜುಲೈ ೪ಕ್ಕೆ ವಿಚಾರಣೆ ಮುಂದೂಡಿದೆ. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಲಾಗಿದೆ.

ಬೆಂಗಳೂರು, ಜುಲೈ 02: ರಾಜ್ಯದಲ್ಲಿ ಓಲಾ (Ola), ಉಬರ್ (Ubar) ಮತ್ತು ರ‍್ಯಾಪಿಡೋ (Rapido) ಬೈಕ್ ಟ್ಯಾಕ್ಸಿ (Bike Taxi) ನಿಷೇಧಿಸಿರುವುದರಿಂದ ಹೈಕೋರ್ಟ್‌ಗೆ ಮಹಿಳಾ ಪ್ರಯಾಣಿಕರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಕ್ಕೆ ನಿರ್ದೇಶನ ಕೋರಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಬುಧವಾರ (ಜು.02) ನಡೆಯಿತು. ಊಬರ್ ಪರ ಹಿರಿಯ ವಕೀಲ ಉದಯ್ ಹೊಳ್ಳ, “ಬೈಕ್ ಟ್ಯಾಕ್ಸಿಯಿಂದ ಮಹಿಳಾ ಪ್ರಯಾಣಿಕರಿಗೆ ಅನುಕೂಲವೇ ಹೆಚ್ಚಿದೆ ಎಂದು ವಾದ ಮಂಡಿಸಿದರು.
“ಅಗ್ಗ, ಸುಲಭ ಹಾಗೂ ಸುರಕ್ಷತೆಯೂ ಇದೆ. ಕೇರಳ, ತಮಿಳುನಾಡಿನಲ್ಲಿ ಕೂಡ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಪರ್ಕವೂ ಸೀಮಿತವಾಗಿದೆ. ಒಂದೆಡೆಯಿಂದ, ಮತ್ತೊಂದೆಡೆಗೆ ಕಾರಿನಲ್ಲಿ ಸಂಚರಿಸಲು ಗಂಟೆಗಳೇ ಬೇಕು ಎಂದು ವಾದ ಮಂಡಿಸಿದರು. ವಾದ ಆಲಿಸಿದ, ನ್ಯಾ. ವಿ ಕಾಮೇಶ್ವರ್ ರಾವ್ ಮತ್ತು ಸಿಎಮ್ ಜೋಶಿ ಅವರಿದ್ದ ವಿಭಾಗೀಯ ಪೀಠ ಜುಲೈ 4ಕ್ಕೆ ವಿಚಾರಣೆ ಮುಂದೂಡಿದೆ.
ಬೈಕ್ ಟ್ಯಾಕ್ಸಿ ಸೇವೆ ನಿಷೇಧ
ಕಳೆದ ತಿಂಗಳು ಜೂನ್ 16 ರಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ನಿಷೇಧ ಅಧಿಕೃತವಾಗಿ ಜಾರಿಯಾಗಿದೆ. ಬೈಕ್ ಟ್ಯಾಕ್ಸಿ ಸೇವೆ ನೀಡಲು ಗೈಡ್ ಲೈನ್ಸ್ ಜಾರಿಯಾಗುವವರೆಗೂ ಸೇವೆಗಳನ್ನು ಸ್ಥಗಿತಗೊಳಿಸುವ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಡಿದಿತ್ತು. ಆದ್ದರಿಂದ ರ‍್ಯಾಪಿಡೋ, ಊಬರ್ ಮತ್ತಿತರ ಕಂಪನಿಗಳು ತಮ್ಮ ಆ್ಯಪ್ನಲ್ಲಿ ಬೈಕ್ ಟ್ಯಾಕ್ಸಿ ಸೇವೆಯ ಆಯ್ಕೆಯನ್ನು ತೆಗೆದು ಹಾಕಿವೆ.
ಇದನ್ನೂ ಓದಿ: ಬೈಕ್ ಟ್ಯಾಕ್ಸಿ ಸೇವೆಗೆ ಕೇಂದ್ರದ ಅನುಮತಿ, ಕರ್ನಾಟಕ ಸರ್ಕಾರದ ನಿಲುವೇನು?
ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಕಾರಣವೇನು?
ಬೈಕ್ ಟ್ಯಾಕ್ಸಿ ಸೇವೆಗಳ ನಿಯಂತ್ರಣಕ್ಕೆ ಸರ್ಕಾರ ಇದುವರೆಗೂ ಯಾವುದೇ ಗೈಡ್ ಲೈನ್ಸ್ ಹೊಂದಿಲ್ಲ. ಪ್ರಯಾಣಿಸುವವರ ಸುರಕ್ಷತೆ, ಹೆಲ್ಮೆಟ್ ಬಳಕೆ ಹಾಗೂ ಅವುಗಳ ಗುಣಮಟ್ಟ, ಚಾಲಕನ ಪರವಾನಗಿ, ಅಪಘಾತ, ಇನ್ಶುರೆನ್ಸ್ ಕುರಿತು ಬೈಕ್ ಟ್ಯಾಕ್ಸಿ ವಿರುದ್ಧ ಆರೋಪ ಕೇಳಿಬಂದಿದ್ದವು. ಅಲ್ಲದೆ, ಬೈಕ್ ಟ್ಯಾಕ್ಸಿ ಸೇವೆಗಳಿಗೆ ಆರಂಭದಿಂದಲೂ ಆಟೋ, ಟ್ಯಾಕ್ಸಿ ಚಾಲಕರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:26 pm, Wed, 2 July 25



