ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇದೆ ಎಂದಿದ್ಯಾರು: ವಿಜಯೇಂದ್ರ ಪ್ರಶ್ನೆ, ವಿರೋಧಿ ಬಣಕ್ಕೆ ಸಂದೇಶ
ಕರ್ನಾಟಕ ಬಿಜೆಪಿಯಲ್ಲಿ ಆಂತರಿಕ ಕಲಹ ತಾರಕ್ಕೇರಿದ್ದು, ಬಿಕ್ಕಟ್ಟು ಶಮನಕ್ಕೆ ಆರ್ಎಸ್ಎಸ್ ಕೂಡ ಎಂಟ್ರಿ ಕೊಟ್ಟಿದೆ. ಇದೇ ಸಂದರ್ಭದಲ್ಲಿ, ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸಬಾರದು ಎಂದು ಒಂದು ಬಣ ಪಟ್ಟುಹಿಡಿದಿದ್ದರೆ, ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇದೆ ಎಂದಿದ್ಯಾರು ಎಂದು ಪ್ರಶ್ನಿಸುವ ಮೂಲಕ ವಿರೋಧಿಗಳಿಗೆ ವಿಜಯೇಂದ್ರ ಸಂದೇಶ ಕಳುಹಿಸಿದ್ದಾರೆ.

ಬೆಂಗಳೂರು, ಜುಲೈ 3: ಒಂದೆಡೆ ಬಿಜೆಪಿ (BJP) ರಾಜ್ಯಾಧ್ಯಕ್ಷರ ಘೋಷಣೆ ಪ್ರಕ್ರಿಯೆಯನ್ನು ಹೈಕಮಾಂಡ್ ನಡೆಸುತ್ತಿದೆ. ಮತ್ತೊಂದೆಡೆ, ಕರ್ನಾಟಕದಲ್ಲಿ ರಾಜ್ಯಾಧ್ಯಕ್ಷರನ್ನಾಗಿ ಬಿವೈ ವಿಜಯೇಂದ್ರರನ್ನು (BY Vijayendra) ಮುಂದುವರಿಸಬಾರದು ಎಂದು ವಿರೋಧಿ ಬಣ ಪಟ್ಟು ಹಿಡಿದಿದೆ. ಅತ್ತ, ಬಿಜೆಪಿ ಆಂತರಿಕ ಕಲಹ ಸರಿಪಡಿಸಲು ಆರ್ಎಸ್ಎಸ್ ಕೂಡ ಎಂಟ್ರಿ ಕೊಟ್ಟಿದೆ. ಈ ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇದೆ ಎಂದಿದ್ಯಾರು ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ. ಈ ಮೂಲಕ ಪಕ್ಷದಲ್ಲಿರುವ ತಮ್ಮ ವಿರೋಧಿ ಬಣಕ್ಕೆ ಸಂದೇಶ ರವಾನಿಸಿದ್ದಾರೆ.
ರಾಜ್ಯಾಧ್ಯಕ್ಷ ಬದಲಾವಣೆ ವಿಚಾರವಾಗಿ ಬಿಜೆಪಿ ಒಳಗೊಳಗೆ ಕುದಿಯುತ್ತಿದೆ. ಅಸಮಾಧಾನಿತರನ್ನು ಸಮಾಧಾನ ಪಡಿಸಲು ನಾನಾ ಕಸರತ್ತು ನಡೆಯುತ್ತಿದೆ. ರಾಜ್ಯ ನಾಯಕರನ್ನು ಕರೆದು ಬುದ್ಧಿವಾದ ಹೇಳಿದ್ದ ಆರ್ಎಸ್ಎಸ್ ನಾಯಕರು, ರಾಜ್ಯ ನಾಯಕತ್ವದ ವಿರುದ್ಧ ಮುನಿಸಿಕೊಂಡವರನ್ನೂ ಕರೆಸಿಕೊಂಡು ಕಿವಿಮಾತು ಹೇಳಿದ್ದಾರೆ. ಕಳೆದ ವಾರ ಅಸಮಾಧಾನಿತ ತಂಡದ ಪೈಕಿ ಕೆಲವರನ್ನು ಕರೆಸಿಕೊಂಡಿದ್ದ ಆರ್ಎಸ್ಎಸ್ ನಾಯಕರು, ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುವಂತೆ ಬುದ್ಧಿ ಮಾತು ಹೇಳಿದ್ದರು. ಆ ಸಂದರ್ಭದಲ್ಲಿ ಎರಡು ಮೂರು ಮಾದರಿಯ ಸಲಹೆಗಳನ್ನು ಅಸಮಾಧಾನಿತ ಸದಸ್ಯರು ನೀಡಿದ್ದರು ಎನ್ನಲಾಗಿದೆ.
ಯತ್ನಾಳ್ ಜೊತೆ ರಾಜಕೀಯ ಚರ್ಚೆ ಬೇಡವೆಂದ ಪ್ರತ್ಯೇಕ ತಂಡ!
ಈ ನಡುವೆ ಅಸಮಾಧಾನಿತರ ಮುನಿಸು ತಣಿಸಲೆಂದೇ ಕುಮಾರ ಬಂಗಾರಪ್ಪ ಸೇರಿ ಯತ್ನಾಳ್ ಮಿತ್ರಮಂಡಳಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನವೊಲಿಸುವ ಪ್ರಯತ್ನ ಮಾಡಿತ್ತು. ಅದಾಗ್ಯೂ ಯತ್ನಾಳ್ ಮತ್ತೆ ಬಹಿರಂಗ ಹೇಳಿಕೆ ನೀಡಿದ್ದಾರೆ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಿದರೆ ಹೊಸ ಪಕ್ಷ ಕಟ್ಟುತ್ತೇವೆಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಇದು ಸಹಜವಾಗಿಯೇ ಅವರ ಮಿತ್ರಮಂಡಳಿಯ ಬೇಸರಕ್ಕೆ ಕಾರಣವಾಗಿದೆ.
ಸಲಹೆ ಕೊಟ್ಟರೂ, ಬಹಿರಂಗ ಹೇಳಿಕೆ ನೀಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪ್ರತ್ಯೇಕ ತಂಡ, ಯತ್ನಾಳ್ ಜೊತೆ ಇನ್ಮುಂದೆ ರಾಜಕೀಯ ಚರ್ಚೆಯೇ ಬೇಡ ಎಂಬ ನಿರ್ಧಾರಕ್ಕೆ ಬಂದಿದೆ. ಮತ್ತೊಂದೆಡೆ, ವಾಲ್ಮೀಕಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದರ ಬಗ್ಗೆಯೂ ಬಿಜೆಪಿ ಬಣಗಳಲ್ಲೇ ಕ್ರೆಡಿಟ್ ವಾರ್ ಶುರುವಾಗಿದೆ.
ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತಕ್ಕೆ ಬಂದ ಬಿಜೆಪಿ ರಾಜ್ಯಾಧ್ಯಕ್ಷ ಘೋಷಣೆ: ವಿಜಯೇಂದ್ರ ಮುಂದುವರಿಯದಂತೆ ಭಿನ್ನರ ಪಡೆ ವ್ಯೂಹ
ಒಟ್ಟಾರೆಯಾಗಿ, ಸರಿಪಡಿಸಲಾಗದ ಹಂತಕ್ಕೆ ಹೋಗಿರುವ ರಾಜ್ಯ ಬಿಜೆಪಿಯ ಆಂತರಿಕ ಕಲಹಕ್ಕೆ ಮದ್ದರೆಯಲು ಆರ್ಎಸ್ಎಸ್ ಎಂಟ್ರಿ ಕೊಟ್ಟಿದೆ. ಇದರಿಂದ ಅಸಮಾಧಾನಿತರ ಮುನಿಸು ಶಮನಾವಾಗುತ್ತದೆಯೇ? ರಾಜ್ಯಾಧ್ಯಕ್ಷ ಹೆಸರು ಘೋಷಣೆಯಾದಮೇಲೆ ಅಸಮಾಧಾನದ ಜ್ವಾಲೆ ಮತ್ತಷ್ಟು ಸ್ಫೋಟವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.







