ಕಲಬುರಗಿ: ಸಾಮ್ರಾಟ ಅಶೋಕ ತನ್ನ ಕುಟುಂಬದ ಜೊತೆ ಕುಳಿತಿರುವ ಏಕೈಕ ಶಿಲ್ಪ ಇರುವುದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿ ಬಳಿಯಿರುವ ಕನಗನಹಳ್ಳಿಯಲ್ಲಿ. ಸನ್ನತ್ತಿ ಸರಿಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಪ್ರದೇಶ. ಭೀಮಾ ನದಿಯ ದಡದಲ್ಲಿರುವ ಸನ್ನತಿ, ಐತಿಹಾಸಿಕ ಮಹತ್ವವನ್ನು ಹೊಂದಿರುವ ಪ್ರದೇಶವಾಗಿದೆ. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ಸನ್ನತಿ ಅಭಿವೃದ್ಧಿಯಿಂದ ವಂಚಿತವಾಗಿತ್ತು. ಆದರೆ ಇದೀಗ ಪುರಾತತ್ವ ಇಲಾಖೆಯ ಅಧಿಕಾರಿಗಳು ಸನ್ನತಿಗೆ ಭೇಟಿ ನೀಡಿ ಅಭಿವೃದ್ಧಿ ಮಾಡಿಸುವುದಾಗಿ ಹೇಳಿದ್ದಾರೆ. ಜೊತೆಗೆ ಸನ್ನತಿಯನ್ನು ಯುನೆಸ್ಕೋ ಪಟ್ಟಿಗೆ ಸೇರಿಸುವ ನಿರ್ಧಾರ ಕೈಗೊಂಡಿದ್ದಾರೆ.
ಸನ್ನತಿಗೆ ಪುರಾತತ್ವ ಇಲಾಖೆಯ ಅಧಿಕಾರಿಗಳ ಭೇಟಿ
ಸನ್ನತಿಯ ಕನಗನಹಳ್ಳಿ ಬಳಿ ಅನೇಕ ಬೌದ್ಧ ಸ್ತೂಪಗಳು, ಸಾಮ್ರಾಟ ಅಶೋಕನ ಶಾಸನಗಳು, ದಶಕಗಳ ಹಿಂದೆ ಉತ್ಖನನ ವೇಳೆ ಪತ್ತೆಯಾಗಿದ್ದವು. ಆದರೆ ಅವುಗಳ ರಕ್ಷಣೆ ಮಾತ್ರ ಸರಿಯಾಗಿ ಆಗಿರಲಿಲ್ಲ. ಬೌದ್ಧ ಧರ್ಮದ ಪ್ರಮುಖ ಕೇಂದ್ರವಾಗಿದ್ದ ಸನ್ನತಿಯನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕು. ಅಲ್ಲಿನ ಶಿಲ್ಪಕಲೆಗಳನ್ನು ರಕ್ಷಿಸಬೇಕು ಎನ್ನುವ ಆಗ್ರಹ ಹೆಚ್ಚಾಗಿತ್ತು. ಹೀಗಾಗಿ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್, ಸನ್ನತ್ತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸನ್ನತಿಯಲ್ಲಿನ ಸ್ಥಿತಿಗತಿ ಬಗ್ಗೆ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಹೀಗಾಗಿ ನಿನ್ನೆ ಸನ್ನತಿಗೆ ಭಾರತೀಯ ಪುರಾತತ್ವ ಇಲಾಖೆಯ ಅನೇಕ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನೆಡೆಸಿತು.
ಯುನೆಸ್ಕೋ ಪಟ್ಟಿಗೆ ಸೇರಿಸಲು ಪ್ರಸ್ತಾವ
ನಿರ್ಲಕ್ಷ್ಯಕ್ಕೊಳಗಾಗಿರುವ ಸನ್ನತಿಯನ್ನು ಸಮಗ್ರ ಅಭಿವೃದ್ಧಿ ಪಡಿಸುವ ಮಾತುಗಳನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಬರುವ ಏಪ್ರೀಲ್ನಿಂದಲೇ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಜೊತೆಗೆ ಅಶೋಕನ ಅಪರೂಪದ ಶಾಸನ ದೊರೆತಿರುವುದಿಂದ ಈ ಪ್ರದೇಶವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಸೂಕ್ತ ಪ್ರಸ್ತಾವ ಸಲ್ಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಜಾನವಿಜ್ ಶರ್ಮಾ ಅವರು ಹಂಪಿ ವೃತ್ತದ ಅಧೀಕ್ಷಕ ನಿಖಿಲ್ ದಾಸ್ ಅವರಿಗೆ ಸೂಚಿಸಿದ್ದಾರೆ. ಜೊತೆಗೆ ಸನ್ನತಿಯ ಸಮಗ್ರ ಅಭಿವೃದ್ಧಿಗೆ ಕೂಡಾ ಪ್ರಸ್ತಾವ ಸಲ್ಲಿಸಲು ಸೂಚಿಸಿದ್ದಾರೆ.
ಸದ್ಯ ಅಶೋಕನ ಶಿಲ್ಪವನ್ನು ಗಾಜಿನಲ್ಲಿಟ್ಟು ಸಂರಕ್ಷಿಸಲಾಗಿದೆ. ಆದರೆ ಇನ್ನು ಅನೇಕ ಶಿಲ್ಪಗಳಿದ್ದು, ಅವುಗಳಿಗೆ ಸೂಕ್ತ ಸಂರಕ್ಷಣೆ ಇಲ್ಲದೆ ಹಾಳಾಗುತ್ತಿವೆ. ಜೊತೆಗೆ ಭೀಮಾ ನದಿಯ ದಡದಲ್ಲಿ ಇನ್ನು ಅನೇಕ ಕುರುಹುಗಳಿದ್ದು, ಅವುಗಳ ಬಗ್ಗೆ ಉತ್ಖನನನದ ಅವಶ್ಯಕತೆ ಇದೆ.
ಸನ್ನತಿಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ಇನ್ನು ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ಖನನ ನಡೆಸುವ ಅವಶ್ಯಕತೆ ಇದೆ. ಜೊತೆಗೆ ಸನ್ನತಿಯನ್ನು ಯುನೆಸ್ಕೋ ಪಟ್ಟಿಯಲ್ಲಿ ಸೇರಿಸಲು ಪ್ರಸ್ತಾವ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹೆಚ್ಚುವರಿ ಮಹಾ ನಿರ್ದೇಶಕ ಜಾನವಿಜ್ ಶರ್ಮಾ ಹೇಳಿದ್ದಾರೆ.
ಐತಿಹಾಸಿಕ ಹಿನ್ನೆಲೆಯುಳ್ಳ ಸನ್ನತ್ತಿಯ ಸ್ಥಿತಿಗತಿ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಸನ್ನತ್ತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸನ್ನತ್ತಿಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ, ಪ್ರವಾಸಿ ಕೇಂದ್ರವನ್ನಾಗಿ ಮಾಡಲು ಎಲ್ಲಾ ಯೋಜನೆ ಮಾಡಲಾಗಿದೆ ಎಂದು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ.
ವರದಿ: ಸಂಜಯ್ ಚಿಕ್ಕಮಠ
ಇದನ್ನೂ ಓದಿ:
ಐತಿಹಾಸಿಕ ದೇವಾಲಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಾಥ; ಪುರಾತತ್ವ ಇಲಾಖೆಯ ವಿರುದ್ಧ ಜನರ ಆಕ್ರೋಶ
150 ವರ್ಷಗಳ ಪುರಾತನ ಹಳ್ಳಿಯ ಜನ ಇನ್ನೂ ಬಸ್ಸನ್ನೇ ನೋಡಿಲ್ಲ; ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು
Published On - 11:55 am, Wed, 29 December 21