AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿಯಲ್ಲಿ ಹೆಚ್ಚಾದ ಅಪ್ರಾಪ್ತ ಬಾಲಕಿಯರ ಮೇಲೆ ಅಪ್ರಾಪ್ತರಿಂದಲೇ ಅತ್ಯಾಚಾರ ಪ್ರಕರಣಗಳು

ಮೊಬೈಲ್​ ಪರಿಣಾಮದಿಂದ ಕಲಬುರಗಿ ಜಿಲ್ಲೆಯಲ್ಲಿ 2022 ರಲ್ಲಿ ಅಪ್ರಾಪ್ತರ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ.

ಕಲಬುರಗಿಯಲ್ಲಿ ಹೆಚ್ಚಾದ ಅಪ್ರಾಪ್ತ ಬಾಲಕಿಯರ ಮೇಲೆ ಅಪ್ರಾಪ್ತರಿಂದಲೇ ಅತ್ಯಾಚಾರ ಪ್ರಕರಣಗಳು
ಸಾಂದರ್ಭಿಕ ಚಿತ್ರ
TV9 Web
| Updated By: ವಿವೇಕ ಬಿರಾದಾರ|

Updated on: Dec 26, 2022 | 6:47 PM

Share

ಕಲಬುರಗಿ: ಜಿಲ್ಲೆ ಇತ್ತೀಚೆಗೆ ಕ್ರೈಂ (Crime) ಪ್ರಕರಣಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊಲೆಗಳು ಜನರ ಆತಂಕವನ್ನು ಹೆಚ್ಚಿಸಿವೆ. ಆದರೆ ಇತ್ತೀಚೆಗೆ ಕಲಬುರಗಿ (Kalaburagi) ಜಿಲ್ಲೆಯಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ (Rape) ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರ ಭಯವನ್ನು ಹೆಚ್ಚಿಸಿವೆ. ಅದರಲ್ಲೂ ಹೆಚ್ಚಿನ ಅತ್ಯಾಚಾರ ಪ್ರಕರಣಗಳ ವರದಿಯಾಗುತ್ತಿರುವದು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ. ಇನ್ನೂ ಆತಂಕಕಾರಿಯಾಗಿದ್ದು ಅಪ್ರಾಪ್ತ ಮಕ್ಕಳ ಮೇಲೆ ಹೆಚ್ಚಿನ ಅತ್ಯಾಚಾರ ಘಟನೆಗಳು ನಡೆದಿರುವ ಅಪ್ರಾಪ್ತ ಮಕ್ಕಳಿಂದಲೇ ಅನ್ನೋದು.

ಹೌದು ಕಲಬುರಗಿ ಜಿಲ್ಲೆಯಲ್ಲಿ 2022 ರಲ್ಲಿ 4 ಅಪ್ರಾಪ್ತರ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ನಾಲ್ಕರಲ್ಲಿ ಒಂದು ಪ್ರಕರಣದಲ್ಲಿ ಹದಿನಾಲ್ಕು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. 4ರಲ್ಲಿ, 3 ಅತ್ಯಾಚಾರ ಪ್ರಕರಣದ ಆರೋಪಿಗಳು 18 ವರ್ಷದೊಳಗಿನ ಬಾಲಕರೇ ಅನ್ನೋದು ದುರ್ದೈವದ ಮತ್ತು ಆತಂಕದ ವಿಚಾರವಾಗಿದೆ. ಇದು ಹೆತ್ತವರ ಆತಂಕವನ್ನು ಹೆಚ್ಚಿಸುತ್ತಿದೆ.

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ

ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗ್ರಾಮವೊಂದರಲ್ಲಿ ಕಳೆದ ನವಂಬರ್ 1 ರಂದು, 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಮಧ್ಯಾಹ್ನ 3 ಗಂಟೆ ಸಮಯದಲ್ಲಿ, ಬಹಿರ್ದೆಸೆಗೆ ಅಂತ ಗ್ರಾಮದ ಹೊರವಲಯದಲ್ಲಿ ಹೋಗಿದ್ದಾಗ, ಬಾಲಕಿಯನ್ನು ಹಿಂಬಾಲಿಸಿ, ನಂತರ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕಲ್ಲಿನಿಂದ ಕುತ್ತಿಗೆ ಕೋಯ್ದು, ವೇಲ್​ನಿಂದ ಬಿಗಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣ ರಾಜ್ಯದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ನಂತರ ಪ್ರಕರಣವನ್ನು ಬೇದಿಸಿ, ವಿಚಾರಣೆ ನಡೆಸಿದಾಗ ಗೊತ್ತಾಗಿದ್ದು, ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ಕೂಡ, 17 ವರ್ಷದ ಬಾಲಕ ಅನ್ನೋದು.

ನಾಲ್ಕು ವರ್ಷದ ಬಾಲಕಿ ಮೇಲೆ ಬಾಲಕನಿಂದ ಅತ್ಯಾಚಾರಕ್ಕೆ ಯತ್ನ

ಇನ್ನು ಇದೇ ಡಿಸೆಂಬರ್ 25 ರಂದು ಕಲಬುರಗಿ ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ವರ್ಷದ ಅಪ್ರಾಪ್ತ ಬಾಲಕಿ ಮೇಲೆ 16 ವರ್ಷದ ಬಾಲಕನಿಂದ ಅತ್ಯಾಚಾರ ಯತ್ನ ನಡೆದಿದೆ. ಮನೆಯ ಹೊರಗಡೆ ಆಡುತ್ತಿದ್ದ ಬಾಲಕಿಗೆ ಚಾಕಲೇಟ್ ಕೊಡಿಸೋದಾಗಿ ಹೇಳಿ ಪುಸಲಾಯಿಸಿದ್ದ ಬಾಲಕ, ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸದ್ಯ 16 ವರ್ಷದ ಬಾಲಕನ್ನು ಪೊಲೀಸರು ಬಂಧಿಸಿ, ಬಾಲಕರ ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ.

ಅಪ್ರಾಪ್ತ ಬಾಲಕಿ ಮೇಲೆ ಬಾಲಕರ ಸಾಮೂಹಿಕ ಅತ್ಯಾಚಾರ

ಕಲಬುರಗಿ ನಗರದ ವಿಶ್ವವಿದ್ಯಾಲಯದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ 5 ಬಾಲಕರು ಅತ್ಯಾಚಾರ ನಡೆಸಿದ್ದ ಘಟನೆ ಕಳೆದ ಜನವರಿ 6ರಂದು ನಡೆದಿತ್ತು. ಬುದ್ದಿಮಾಂದ್ಯ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದ 5 ಬಾಲಕರು, ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ಬಾಲಕಿಯ ಪಾಲಕರು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ, ಪಾಲಕರು ವಿಚಾರಿಸಿದಾಗ ಅತ್ಯಾಚಾರದ ಬಗ್ಗೆ ಹೆತ್ತವರಿಗೆ ಗೊತ್ತಾಗಿತ್ತು. ಆಗ ಕೂಡ ವಿಚಾರಣೆ ನಡೆಸಿದಾಗ ಅಪ್ರಾಪ್ತ ಬಾಲಕರೇ ಅಚ್ಯಾಚಾರವೆಸಗಿದ್ದು ಗೊತ್ತಾಗಿತ್ತು. ಆಗ ಪೊಲೀಸರು 5 ಬಾಲಕರನ್ನು ಬಾಲ ಮಂದಿರಕ್ಕೆ ಕಳಿಸಿದ್ದರು.

ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆಯಾ ಮೊಬೈಲ್

ಹೌದು ಜಿಲ್ಲೆಯಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಅಪ್ರಾಪ್ತ ವಯಸ್ಸಿನ ಬಾಲಕರೇ ಅತ್ಯಾಚಾರ ನಡೆಸುತ್ತಿರುವ ಹೆಚ್ಚಿನ ಘಟನೆಗಳು ವರದಿಯಾಗುತ್ತಿವೆ. ಇದಕ್ಕೆ ಕಾರಣ ಮೊಬೈಲ್ ಅಂತಿದ್ದಾರೆ ಪೊಲೀಸರು. ಹೌದು ಆಳಂದ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅತ್ಯಾಚಾರ ಮತ್ತು ಕೊಲೆ ಮಾಡಿದ್ದ ಬಾಲಕ, ಮೊಬೈಲ್ ನಲ್ಲಿ ಹೆಚ್ಚಾಗಿ ಆಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದದ್ದು ಪೊಲೀಸರ ವಿಚಾರಣೆಯಲ್ಲಿ ಗೊತ್ತಾಗಿತ್ತು. ಇನ್ನು ಬೇರೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮಕ್ಕಳು ಕೂಡ, ಮೊಬೈಲ್​ನಲ್ಲಿ ಹೆಚ್ಚಿನ ಹಸಿಬಿಸಿ ದೃಶ್ಯಗಳನ್ನು ನೋಡುತ್ತಿದ್ದದ್ದು, ಆಕರ್ಷಣೆ, ಸೆಕ್ಸ್ ಬಗ್ಗೆ ಕುತೂಹಲದಿಂದ ಅತ್ಯಾಚಾರ ಮಾಡಿರೋದು ತನಿಖೆಯಲ್ಲಿ ಗೊತ್ತಾಗಿತ್ತು. ಹೀಗಾಗಿ ಮಕ್ಕಳ ಕೈಗೆ ಮೊಬೈಲ್ ನೀಡಬಾರದು, ನೀಡಿದರು ಕೂಡ ಅವರು ಏನು ನೋಡ್ತಿದ್ದಾರೆ ಅನ್ನೋ ಬಗ್ಗೆ ಗಮನ ಹರಿಸಬೇಕು ಅಂತ ಪೊಲೀಸರು ಪಾಲಕರಲ್ಲಿ ಮನವಿ ಮಾಡಿದ್ದರು.

ಕಲಬುರಗಿ ಜಿಲ್ಲಾ ಎಸ್ಪಿ ಇಶಾ ಪಂತ್:-

ಮಕ್ಕಳ ಕೈಗೆ ಹೆತ್ತವರು ಮೊಬೈಲ್ ಕೊಟ್ಟು ಸುಮ್ಮನಾಗಬಾರದು. ಅವರ ಚಲನವಲನಗಳನ್ನು, ಅವರು ಏನು ನೋಡ್ತಿದ್ದಾರೆ ಅನ್ನೋ ಬಗ್ಗೆ ಗಮನಹರಿಸಬೇಕು. ಇಲ್ಲದಿದ್ದರೆ ಮಕ್ಕಳು ಏನೇನೋ ನೋಡಿ, ಮಾಡಬಾರದ ಕೆಲಸ ಮಾಡುತ್ತಾರೆ. ಈ ಬಗ್ಗೆ ಪಾಲಕರೇ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.

ವರದಿ- ಸಂಜಯ್ ಚಿಕ್ಕಮಠ ಟಿವಿ9 ಕಲಬುರಗಿ