ಕಲಬುರಗಿ: ಡಿಜೆ ಸಾಂಗ್ಗೆ ಡ್ಯಾನ್ಸ್ ಮಾಡಿದ ವಿಚಾರದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ, ಹಲವರಿಗೆ ಗಾಯ
ಕೋಲಾರದಲ್ಲಿ ಕೆಂಪೇಗೌಡ ಜಯಂತಿ ವೇಳೆ ಪಲ್ಲಕ್ಕಿ ತಡೆದು ಅನ್ಯ ಕೋಮಿನವರು ಗಲಾಟೆ ನಡೆಸಿದ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಕೆಲವು ದಿನಗಳ ಹಿಂದೆ ಮಂಗಳೂರಿನ ಬೋಳಿಯಾರ್ ಎಂಬಲ್ಲಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದವರ ಮೇಲೆ ಚೂರಿಯಿಂದ ಇರಿಯಲಾಗಿತ್ತು. ಇದೀಗ ಕಲಬುರಗಿಯ ಸರದಿ. ಮದುವೆಯೊಂದರ ಮೆರವಣಿಗೆಯಲ್ಲಿ ರಾಮ ಮಂದಿರ ಕುರಿತ ಹಾಡು ಹಾಕಿ ಕುಣಿದಿದ್ದು ಸಂಘರ್ಷಕ್ಕೆ ಕಾರಣವಾಗಿದೆ.
ಕಲಬುರಗಿ, ಜುಲೈ 2: ಡಿಜೆ ಸಾಂಗ್ಗೆ ಡ್ಯಾನ್ಸ್ ಮಾಡಿದ ವಿಚಾರವಾಗಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆದು ಹಲವು ಮಂದಿ ಗಾಯಗೊಂಡ ಘಟನೆ ಕಲಬುರಗಿ ತಾಲೂಕಿನ ಇಟಗಾ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಯುವಕರ ತಂಡವೊಂದು ಸ್ನೇಹಿತನ ಮದುವೆ ಮೆರವಣಿಗೆ ವೇಳೆ ಡಿಜೆ ಹಾಡಿಗೆ ಡ್ಯಾನ್ಸ್ ಮಾಡುತ್ತಿತ್ತು. ರಾಮಮಂದಿರ ಕುರಿತ ಹಾಡಿಗೆ ಡ್ಯಾನ್ಸ್ ಮಾಡಿದ್ದಕ್ಕೆ ಇನ್ನೊಂದು ಕೋಮಿನವರು ಆಕ್ಷೇಪ ತೆಗೆದಿದ್ದಾರೆ. ಸಂಘರ್ಷ ವಿಕೋಪಕ್ಕೆ ಹೋಗಿದ್ದು, ಭೀಮಾಶಂಕರ್ ಎಂಬವರ ಮೇಲೆ ಅನ್ಯಕೋಮಿನ ಯುವಕರ ಗುಂಪು ಹಲ್ಲೆ ನಡೆಸಿದೆ.
ಇದೀಗ, ಘಟನೆ ಬಗ್ಗೆ ಭೀಮಾಶಂಕರ್ ತಾಯಿ ಮಾತನಾಡಿದ್ದು, ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘರ್ಷಣೆ ನಡೆದಿದೆ.
ಕೆಲವೇ ಕೆಲವು ದಿನಗಳ ಹಿಂದೆ ಕೋಲಾರ ನಗರದ ಅರಹಳ್ಳಿ ಗೇಟಿ ಬಳಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತ್ತು. ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಪ್ರಯುಕ್ತ ಮೆರವಣಿಗೆ ನಡೆಯುತ್ತಿದ್ದಾಗ ಮಸೀದಿ ಎದುರು ಡಿಜೆ ಸೌಂಡ್ ಹಾಕಿಕೊಂಡು ಹೋಗಿದ್ದಕ್ಕೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಇದನ್ನೂ ಓದಿ: ಕೋಲಾರ: ಮಸೀದಿ ಎದುರು ಡಿಜೆ ಸೌಂಡ್ ಹಾಕಿದ್ದಕ್ಕೆ ಕೆಂಪೇಗೌಡರ ಪಲ್ಲಕ್ಕಿ ತಡೆದು ಗಲಾಟೆ
ಅದಕ್ಕೂ ಕೆಲವು ದಿನಗಳ ಮುನ್ನ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಬೋಳಿಯಾರ್ ಎಂಬಲ್ಲಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತಾ ದ್ವಿಚಕ್ರ ವಾಹನದಲ್ಲಿ ತೆರಳಿದವರ ಬೆನ್ನಟ್ಟಿ ಚೂರಿಯಿಂದ ಇರಿಯಲಾಗಿತ್ತು. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ವಾಪಸಾಗುತ್ತಿದ್ದವರ ಮೇಲೆ ಚೂರಿಯಿಂದ ಇರಿಯಲಾಗಿತ್ತು.
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಅಲ್ಲಲ್ಲಿ ಇಂಥ ಘಟನೆಗಳು ನಡೆಯುತ್ತಿರುವುದು ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:14 pm, Tue, 2 July 24